ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ 2012 : ಶೇ.57.03ರಷ್ಟು ಫಲಿತಾಂಶ

By Prasad
|
Google Oneindia Kannada News

2nd PUC results 2012 declared
Karnataka 2nd PUC results 2012, Now online

ಬೆಂಗಳೂರು, ಮೇ. 23 : 2011-12ನೇ ಸಾಲಿನ ಶೇಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮೇ 23ರಂದು ಘೋಷಿಸಲಾಗಿದ್ದು, ಶೇ. 57.03ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದು, ಕಳೆದ ವರ್ಷ(ಶೇ.48.93)ಕ್ಕಿಂತ ಶೇ.8.1ರಷ್ಟು ಹೆಚ್ಚು ಫಲಿತಾಂಶ ಪ್ರಸಕ್ತ ವರ್ಷ ಬಂದಿದೆ.

ಈ ಫಲಿತಾಂಶ ಮತ್ತು ಸಂಪೂರ್ಣ ಅಂಕಪಟ್ಟಿ ಒನ್ಇಂಡಿಯಾದ ಶೈಕ್ಷಣಿಕ ತಾಣದಲ್ಲಿ ಮಧ್ಯಾಹ್ನ 1 ಗಂಟೆಗೆ ಲಭ್ಯವಾಗಲಿದ್ದು, ಮೇ 24ರಂದು ಕಾಲೇಜುಗಳಲ್ಲಿ ಪ್ರಕಟವಾಗಲಿದೆ. ಈ ಫಲಿತಾಂಶಗಳನ್ನು ಎಸ್ಎಮ್ಎಸ್ ಮುಖಾಂತರ ಕೂಡ ತಿಳಿಯಬಹುದಾಗಿದೆ.

ಎರಡನೇ ಪಿಯುಸಿ ಫಲಿತಾಂಶವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಭವನದಲ್ಲಿ ಘೋಷಿಸಿದ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಬಾಲಕರನ್ನು ಈ ವರ್ಷವೂ ಹಿಂದೆ ಹಾಕಿರುವ ಬಾಲಕಿಯರು ಮತ್ತು ನಗರ ವಿದ್ಯಾರ್ಥಿಗಳನ್ನು ಸೈಡ್ ಹೊಡೆದಿರುವ ಗ್ರಾಮೀಣ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಗ್ರಾಮೀಣ ವಿದ್ಯಾರ್ಥಿಗಳು ಶೇ.8.7ರಷ್ಟು ಹೆಚ್ಚಿಗೆ ಪಾಸಾಗಿದ್ದಾರೆ.

ಈ ಬಾರಿ ಒಟ್ಟು 5,95,197 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ 3,39,421ರಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಹಂತ ದಾಟಿದ್ದಾರೆ. ವಿದ್ಯಾರ್ಥಿನಿಯರು ಶೇ.65.19ರಷ್ಟು ತೇರ್ಗಡೆಯಾಗಿದ್ದರೆ, ವಿದ್ಯಾರ್ಥಿಗಳು ಶೇ.49.96ರಷ್ಟು ಪಾಸಾಗಿದ್ದಾರೆ. ಸರಕಾರಿ ಕಾಲೇಜು ವಿದ್ಯಾರ್ಥಿಗಳು ಶೇ.49.62ರಷ್ಟು ಪಾಸಾಗಿದ್ದಾರೆ.

ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ (ಶೇ.85.32) ಜಿಲ್ಲೆ ಈ ಬಾರಿ ಮೊದಲ ಸ್ಥಾನ ಪಡೆದಿದೆ. ಅದರ ಹಿಂದೆ ಉಡುಪಿ ಮತ್ತು ಮೂರನೇ ಸ್ಥಾನಕ್ಕೆ ಕೊಡಗು ಜಿಲ್ಲೆ ಲಗ್ಗೆ ಹಾಕಿದೆ. ನಾಲ್ಕನೇ ಸ್ಥಾನವನ್ನು ಚಿಕ್ಕಮಗಳೂರು ಜಿಲ್ಲೆ ಅಲಂಕರಿಸಿದ್ದರೆ, ಐದನೇ ಸ್ಥಾನವನ್ನು ಉತ್ತರ ಕನ್ನಡ ಜಿಲ್ಲೆ ಪಡೆದುಕೊಂಡಿದೆ. ಪ್ರತಿ ವರ್ಷದಂತೆ ಶೈಕ್ಷಣಿಕವಾಗಿ ಹಿಂದುಳಿದಿರುವ ಬೀದರ್, ಗುಲಬರ್ಗ ಮತ್ತು ಯಾದಗಿರಿ(ಶೇ.32.21) ಜಿಲ್ಲೆಗಳು ಕೊನೆಯ ಮೂರು ಸ್ಥಾನದಲ್ಲಿ ಗಟ್ಟಿಯಾಗಿ ಕುಳಿತುಕೊಂಡಿವೆ.

ಈ ಬಾರಿ 32 ಜ್ಯೂನಿಯರ್ ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದರೆ, 27 ಕಾಲೇಜುಗಳಲ್ಲಿ ಸೊನ್ನೆ ಫಲಿತಾಂಶ ಬಂದಿದೆ. 2 ಸರಕಾರಿ ಜ್ಯೂನಿಯರ್ ಕಾಲೇಜು, 26 ಅನುದಾನರಹಿತ ಮತ್ತು 4 ಅನುದಾನಿತ ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಸೊನ್ನೆ ಫಲಿತಾಂಶ ಪಡೆದ ಸರಕಾರಿ ಕಾಲೇಜುಗಳಲ್ಲಿ ಖಾನಾಪುರದ ಕಾಲೇಜು ಮೊದಲ ಮತ್ತು ಕೊನೆಯ ಸ್ಥಾನದಲ್ಲಿದೆ.

ಈ ವರ್ಷ ಕಲಾ(ಶೇ.50.60), ವಿಜ್ಞಾನ(ಶೇ.58.24) ಮತ್ತು ವಾಣಿಜ್ಯ(ಶೇ.65.68) ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದರಿಂದ ಕಳೆದ ವರ್ಷಕ್ಕಿಂತ ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತು ಎಂದು ಕಾಗೇರಿಯವರು ಹೆಮ್ಮೆ ವ್ಯಕ್ತಪಡಿಸಿದರು. ಇದಕ್ಕೆ ಕಾರಣ ಶಿಕ್ಷಣ ಇಲಾಖೆ ನಡೆಸಿದ ನಾನಾ ಕಾರ್ಯಕ್ರಮಗಳು ಎಂದ ಅವರು ಶಿಕ್ಷಣ ಇಲಾಖೆ ನಿರ್ದೇಶಕಿ ವಿ. ರಶ್ಮಿ ಅವರನ್ನು ಸ್ಮರಿಸಲು ಮರೆಯಲಿಲ್ಲ.

English summary
Karnataka 2nd PUC examination results 2012 announced by education minister Vishweshwar Hegde Kageri in Bangalore on May 23, 2012. The results will be available on Oneindia Kannada at 2 pm. Totally 57.03% students have passed the examination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X