ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ತರೂ ಚಿಂತೆ, ಹುಟ್ಟಿದರೂ ಚಿಂತೆ : ಇದು ಕೆಂಭಾವಿ

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Yadgir govt hospital needs urgent treatment
ಯಾದಗಿರಿ, ಮೇ 12 : ಮೇ 13 ಅಮ್ಮಂದಿರ ದಿನ. ಜಗತ್ತಿನ ಎಲ್ಲೆಡೆಯಲ್ಲಿಯೂ ಅಮ್ಮನ ಬಗ್ಗೆಯೇ ಮಾತು. ಆದರೆ, ಅಮ್ಮಂದಿರನ್ನು (ಬಾಣಂತಿಯರನ್ನು) ನಮ್ಮ ಗ್ರಾಮದ ಆಸ್ಪತ್ರೆಗಳಲ್ಲಿ ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ನಾವು ಇನ್ನೂ ಯಾವ ಕಾಲದಲ್ಲಿದ್ದೇವೆ ಎಂದು ಚಿಂತಿಸಬೇಕಾಗುತ್ತದೆ.

ಬೇರೆ ಗ್ರಾಮಗಳಲ್ಲಿ, ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರಿಗೆ ಹೇಗೆ ಚಿಕಿತ್ಸೆ ಕೊಡುತ್ತಾರೋ ಗೊತ್ತಿಲ್ಲ. ಆದರೆ, ಯಾದಗಿರಿಯಲ್ಲಿ ಮಾತ್ರ ಬಾಣಂತಿಯರನ್ನು ಆಸ್ಪತ್ರೆಯ ಕಾರಿಡಾರಿನಲ್ಲಿ ಚಿಕಿತ್ಸೆ ಕೊಡುತ್ತಿರುವ ಅಥವಾ ಪರೀಕ್ಷಿಸುವ ದೃಶ್ಯ ನಿಜಕ್ಕೂ ಹಸಿ ಬಾಣಂತಿಯರ ಬಗ್ಗೆ, ಆ ಪುಟ್ಟ ಮಕ್ಕಳ ಅಮ್ಮಂದರ ಬಗ್ಗೆ ನಿಜಕ್ಕೂ ಕನಿಕರ ಮೂಡಿಸುತ್ತದೆ.

ಹೀಗೆ ಆಸ್ಪತ್ರೆಯ ಆವರಣದಲ್ಲಿ ಬಾಣಂತಿಯರಿಗೆ ಚಿಕಿತ್ಸೆ ಕೊಡುತ್ತಿರುವ ಕೆಂಭಾವಿ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಬಾಣಂತಿಯರಿಗೆ ಸರಿಯಾದ ವ್ಯವಸ್ಥೆಯಿಲ್ಲದೇ ಆಸ್ಪತ್ರೆಯ ಆವರಣದಲ್ಲಿಯೇ ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಹಾಪುರ ಹಾಗೂ ಗುಲ್ಬರ್ಗಾ ಜಿಲ್ಲೆಗೆ ಕಳುಹಿಸಿಕೊಡಲಾಗುತ್ತದೆ. ಹೀಗೆ ಕಳುಹಿಸಿಕೊಡುವಾಗ ಮಾರ್ಗ ಮಧ್ಯೆ ಅನೇಕ ತಾಯಂದಿರೂ ಮೃತಪಟ್ಟಿರುವ ಘಟನೆಗಳು ಜರುಗಿವೆ.

ಪಡಬಾರದ ಕಷ್ಟ ಪಡುತ್ತಿರುವ ಮಹಿಳೆಯರು : ಆಸ್ಪತ್ರೆಗೆ ಶವಗಳನ್ನು ತಂದರೆ ಇತರ ಸಾಮಾನ್ಯ ರೋಗಿಗಳ ಜೊತೆಗೆ ಶವವನ್ನು ಇಡುತ್ತಾರೆ. ಕಿತ್ತು ಹೋಗಿರುವ ಕಟ್ಟಡದ ಛಾವಣಿಗಳು, ಬೆಡ್‌ಗಳು ಅಲ್ಪ ಸ್ವಲ್ಪ ಇದ್ದರೂ ಕೂಡ ಅವು ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಅನ್ನುವ ಹಾಗಾಗಿವೆ. ಶೌಚಾಲಯ ಕೂಡ ಇಲ್ಲಾ. ಇದರಿಂದ ಬಾಣಂತಿಯರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಮಹಿಳೆಯರು ಸ್ನಾನ ಮಾಡಿದರೆ ಆಸ್ಪತ್ರೆಯ ಆವರಣದಲ್ಲಿಯೇ ಬಟ್ಟೆ ಬದಲಾಯಿಸುತ್ತಾರೆಂದರೆ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂದು ಊಹಿಸಿ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

1965ರಲ್ಲಿ ಪ್ರಾರಂಭವಾದ ಈ ಪ್ರಾಥಮಿಕ ಆರೋಗ್ಯ ಕೇಂದ್ರವು, ರಾಜ್ಯದಲ್ಲಿಯೇ ದಾಖಲೆ ಪ್ರಮಾಣದಲ್ಲಿ ಹೆರಿಗೆ ಮಾಡಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹಿಂದಿಕ್ಕಿದೆ. ಅದು ಮಹಿಳಾ ವೈದ್ಯರಿಲ್ಲದೇ ಇರುವ ಸಿಬ್ಬಂದಿಗಳೇ ಹೆರಿಗೆ ಮಾಡಿಸುತ್ತಾರೆ. ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಆಸ್ಪತ್ರೆಯ ಸಮವಸ್ತ್ರಗಳನ್ನು ಸಹ ಧರಿಸುವುದಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ಯಾರು ನರ್ಸ್‌ಗಳು ಯಾರು ರೋಗಿಗಳು ಅನ್ನುವುದೇ ತಿಳಿಯುವುದಿಲ್ಲ. ಸುರಪುರ ತಾಲ್ಲೂಕ-ಶಹಾಪುರ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೆಂಭಾವಿ ಹೋಬಳಿ ಗ್ರಾಮವು, ಸುಮಾರು 20,000 ಜನಸಂಖ್ಯೆ ಹೊಂದಿದೆ. ಜನಸಂಖ್ಯೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಸಮುದಾಯ ಆರೋಗ್ಯ ಕೇಂದ್ರ ಮಾಡಬೇಕು. ಆದರೆ ರಾಜಕೀಯದ ಕರಿನೆರಳಿನಿಂದ, ಸಿಬ್ಬಂದಿಗಳ ಕೊರತೆಯಿಂದ ಹಾಗೂ ಸರ್ಕಾರದ ನಿಷ್ಕಾಳಜಿಯಿಂದ ಆಸ್ಪತ್ರೆಯು ರೋಗಗ್ರಸ್ಥವಾಗಿ ಮಾರ್ಪಟ್ಟಿದೆ.

ಅದೇನೇ ಇರ‍್ಲಿ. ಸರ್ಕಾರಗಳು ಜನರಿಗೆ ಆ ಸೌಲಭ್ಯ ಕೊಡುತ್ತೇವೆ, ಈ ಸೌಲಭ್ಯ ಕೊಡುತ್ತೇವೆ ಅಂತ ಬರೀ ದೊಡ್ಡ ದೊಡ್ಡ ಜಾಹೀರಾತುಗಳನ್ನು ಹಾಕಿಕೊಳ್ಳುತ್ತವೆ, ಆದರೆ ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಂದಿಗೂ ಸಹ ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಸರ್ಕಾರ ಇನ್ಮುಂದಾದರೂ ಸಹ ಇತ್ತ ಕಡೆ ಗಮನ ಹರಿಸಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಕ್ರಮ ಕೈಗೊಳ್ಳಬೇಕು.

English summary
Yadgir govt hospital needs urgent treatment. Here pregnant woman are being treated or attended in the corridor. There are no woman doctors, no toilets, no changing room. Woman are facing maximum hardship and embarrassment in Kembhavi govt hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X