ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿಯತ್ತ ಮತ್ತೆ ಭದ್ರಾ ನೀರು ಹರಿಸಿದ ದತ್ತಾ

By Srinath
|
Google Oneindia Kannada News

bhadra-project-datta-objects-lokayukta-police-b-report
ಬೆಂಗಳೂರು, ಮೇ 4: ಭದ್ರಾ ಮೇಲ್ದಂಡೆ ಯೋಜನೆ ಅಕ್ರಮ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೆಂಗಳೂರು ಲೋಕಾಯುಕ್ತ ಪೊಲೀಸರು ತಿಪ್ಪೆ ಸಾರಿಸಿದ್ದಾರೆ ಎಂದು ಕಿಡಿಕಾರಿದ್ದ ದೂರುದಾರ ವೈಎಸ್ ವಿ ದತ್ತಾ ಪ್ರಕರಣಕ್ಕೆ ಮತ್ತೆ ಜೀವ ತುಂಬಿದ್ದಾರೆ. ಕುತೂಹಹಲದ ಸಂಗತಿಯೆಂದರೆ ಈ ಬಾರಿ ಬಿವಿ ಅಚಾರ್ಯ ಅವರನ್ನೂ ಪ್ರಕರಣದಲ್ಲಿ ಎಳೆದುತರಲಾಗಿದೆ.

ಭದ್ರಾ ಮೇಲ್ದಂಡೆ ಮೇಲೆ ಕುಳಿತು ಪ್ರಕರಣವನ್ನು ಕೆದಕಿರುವ ಜೆಡಿಎಸ್ ಪಕ್ಷದ ಹಿರಿಯ ನಾಯಕ ದತ್ತಾ, ಪ್ರಕರಣದಲ್ಲಿ ಯಡಿಯೂರಪ್ಪಗೆ ಮುಳುಗುನೀರು ತರಲು ಜ. 30ರಂದು ಕೋರ್ಟಿಗೆ ಸಲ್ಲಿಸಲಾಗಿದ್ದ ಬಿ ರಿಪೋರ್ಟ್ ವಿರುದ್ಧ ಆಕ್ಷೇಪ ಸಲ್ಲಿಸಿದ್ದಾರೆ. ನಾಳೆ ಶನಿವಾರ ಲೋಕಾಯುಕ್ತ ಕೋರ್ಟ್ ಪ್ರಕರಣವನ್ನು ಮತ್ತೆ ಆಲಿಸಲಿದೆ. ರಾಜಕೀಯವಾಗಿ ಮೇಲೇಳಲು ಶತಪ್ರಯತ್ನ ನಡೆಸುತ್ತಿರುವ ಯಡಿಯೂರಪ್ಪ ಅವರಿಗೆ ಇದರಿಂದ ಭಾರಿ ತೊಡಕಾಗಲಿದೆ.

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ RNS Infrastructure ಕಂಪನಿಗೆ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಿತ್ತು. ಆ ಹಣದಲ್ಲಿ 16 ಕೋಟಿ ರುಪಾಯಿ ಮೊತ್ತವನ್ನುಯಡಿಯೂರಪ್ಪ ಅವರ ಆಪ್ತ ಸಂಬಂಧಿಗಳ ಒಡೆತನದಲ್ಲಿರುವ Sahyadri Healthcare Diagnostics Pvt Ltd ಮತ್ತು Dhavalagiri Properties ಸಂಸ್ಥೆಗಳಿಗೆ ವಿತರಿಸಲಾಗಿದೆ ಎಂದು ದತ್ತಾ ಪರ ವಕೀಲರು ಲೋಕಾಯುಕ್ತ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ದತ್ತಾ ಪರ ವಕೀಲ ಪಿ ಎನ್ ಹೆಗಡೆ ಅವರು ಸಲ್ಲಿಸಿರುವ ದೂರಿನಲ್ಲಿನ ವಾದ ಸರಣಿ ಹೀಗಿದೆ:
ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟಿನಲ್ಲಿ ಸೇರಿಸಿರುವ ಚಾರ್ಟರ್ಡ್ ಅಕೌಂಟೆಂಟ್ ವರದಿಯನ್ನೇ ಆಧಾರವಾಗಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಬಹುದು. ಕಿರ್ಲೋಸ್ಕರ್ ಕಂಪನಿಯೇ ಗುತ್ತಿಗೆ ಪಡೆಯಬೇಕಿತ್ತು ಎಂಬುದು ನಮ್ಮ ದೂರುದಾರ ದತ್ತಾ ಅವರ ವಾದವಲ್ಲ. ಬದಲಿಗೆ RNS-Jyothi ಜಂಟಿ ಕಂಪನಿಗೆ ಗುತ್ತಿಗೆ ದಯಪಾಲಿಸುವಾಗ ಸಂದಾಯವಾಗಿರುವ ಲಂಚದ ಬಾಬತ್ತು ಬಗ್ಗೆ ನಾವು ದೂರು ಎತ್ತಿರುವುದು.

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಲು ಅಂದಿನ ರಾಜ್ಯ ಅಡ್ವೊಕೇಟ್ ಜನರಲ್ ಬಿವಿ ಅಚಾರ್ಯ ಅವರಿಂದ ಕಾನೂನು ಸಲಹೆ ಪಡೆದಿದ್ದಾರೆ. ಆದರೆ ಆಚಾರ್ಯರು ಅಡ್ವೊಕೇಟ್ ಜನರಲ್ ಆಗಿ ನೇಮಕಗೊಳ್ಳುವ ಮುನ್ನ ಭದ್ರಾ ಮೇಲ್ದಂಡೆ ಯೋಜನೆ ಟೆಂಡರ್ ಪ್ರಕ್ರಿಯೆ ವೇಳೆ RNS Infrastructure ಸಂಸ್ಥೆಗೆ ಕಾನೂನು ಸಲಹೆ ನೀಡಿದ್ದಾರೆ. ಸುಪ್ರೀಂಕೋರ್ಟಿನ ಪ್ರಕಾರ ಯಾವುದೇ ಕೋರ್ಟ್ ವಿಚಾರಣೆಯಲ್ಲಿ ಸರಕಾರ ನೇಮಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ ಅಡ್ವೊಕೇಟ್ ಜನರಲ್ ಅವರಿಂದ ಕಾನೂನು ಸಲಹೆ ಪಡೆಯಬಾರದು.

ಕಡತ ಹಳೆಯದ್ದು: ಇನ್ನೂ ಹಿಂದಕ್ಕೆ ಹೋಗಿ ಪ್ರಕರಣವನ್ನು ಕೆದಕಿರುವ ದತ್ತಾ ವಕೀಲರು ಅಸಲಿಗೆ ಯೋಜನೆ ಮಂಜೂರು ಮಾಡುವಾಗ ಕರ್ನಾಟಕ ನೀರಾವರಿ ನಿಗಮ (KNN) ದೊಡ್ಡ ಲೋಪವನ್ನು ಮಾಡಿದೆ. ಹೈಕೋರ್ಟಿಗೇ ಚಳ್ಳೆ ಹಣ್ಣು ತಿನ್ನಿಸಿದೆ ಎಂದಿದ್ದಾರೆ.

ಯೋಜನೆ ಗುತ್ತಿಗೆ ಮಂಜೂರು ಮಾಡುವ ಸಂಬಂಧ KNN ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯಲ್ಲಿದ್ದ ಮೂವರ ಪೈಕಿ ಇಬ್ಬರು ಕಿರ್ಲೋಸ್ಕರ್ ಕಂಪನಿಗೆ ಗುತ್ತಿಗೆ ನೀಡಬಹುದು ಎಂದು ಷರಾ ಬರೆದಿದ್ದರೆ ಒಬ್ಬರು RNS ಪರ ಒಲವು ತೋರಿದ್ದರು. ಇಂತಿಪ್ಪ ಸಮಿತಿ ವರದಿ ಸಲ್ಲಿಸಿದ ನಾಲ್ಕೇ ದಿನದಲ್ಲಿ ಯೋಜನೆಯನ್ನು RNSಗೇ ಮಂಜೂರು ಮಾಡಲಾಯಿತು. ಕಿರ್ಲೋಸ್ಕರ್ ಕಂಪನಿ ತಕ್ಷಣ ಹೈಕೋರ್ಟಿಗೆ ಮೊರೆಹೋಯಿತು. ಆಗ ತಪ್ಪಾಯ್ತು ತಿದ್ಕೋತೀವಿ ಎಂದು ಕೋರ್ಟ್ ಕಣ್ಣಿಗೆ ಮಣ್ಣೆರಚಿದ KNN ಮತ್ತೆ ಅದರತ್ತ ತಿರುಗಿಯೂ ನೋಡಲಿಲ್ಲ. ಯೋಜನೆ ಮಾತ್ರ RNSಗೇ ನಿಗದಿಯಾಯ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

English summary
JDS leader Y.S.V. Datta has filed objections to the B-report filed by the Lokayukta police in the Upper Bhadra case involving former chief minister B.S. Yeddyurappa. The Lokayukta special court has posted the case for final hearing on Saturday, May 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X