ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮೈಸೂರು ಹೈವೇ ಗ್ರೀಸ್ ಬಾಯ್ಸ್

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Bangalore-Mysore highway grease boys
ರಾಮನಗರ, ಏ. 14 : ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕೆಂಗೇರಿ ದಾಟಿದ ಬಳಿಕ ರಸ್ತೆ ಬದಿಯಲ್ಲಿ ಒಮ್ಮೆ ಕಣ್ಣು ಹಾಯಿಸಿ ನೋಡಿ. ಅಲ್ಲಿ ನಿಮಗೆ 6ರಿಂದ 14 ವರ್ಷದೊಳಗಿನ 'ಗ್ರೀಸ್ ಬಾಯ್'ಗಳು ಕಣ್ಣಿಗೆ ಬೀಳುತ್ತಾರೆ. ಹಗಲು ರಾತ್ರಿ ಎನ್ನದೆ ಬಿಸಿಲು ಚಳಿ ಮಳೆಯನ್ನದೆ, ಜೀವಕ್ಕೆ ಯಾವುದೇ ರಕ್ಷಣೆ ಇಲ್ಲದೆ ಚಿಕ್ಕವಯಸ್ಸಿನಲ್ಲೇ ದುಡಿಮೆಗೆ ಬಿದ್ದಿದ್ದಾರೆ.

ಪ್ರತಿನಿತ್ಯ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಾವಿರಾರು ಅಧಿಕಾರಿಗಳು ಮತ್ತು ಮಂತ್ರಿ ಮಹೋದಯರು ಸಂಚರಿಸುತ್ತಲೇ ಇರುತ್ತಾರೆ. ಆದರೂ ಇವಾರ‍್ಯಾರ ಕಣ್ಣಿಗೆ ಈ ಹೈವೇ ಗ್ರೀಸ್ ಬಾಯ್ಸ್ ಬೀಳಲಿಲ್ಲವೇ? ಈ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ? ಯಾರಿಗಾದರೂ ಆಗಲಿ ಈ ಪ್ರಶ್ನೆಗಳು ಕಾಡದೆ ಇರದು.

ಬದುಕಿನ ಬಂಡಿ ತಳ್ಳಲು ಅಪ್ಪ ಅಮ್ಮನಿಗೆ ಹೊರೆಯಾಗದಿರಲು ವರ್ಷದ 365 ದಿನವೂ ಆಟೋ, ಟೆಂಪೋ, ಲಾರಿ, ಬಸ್‌ಗಳ ಕೆಳಗೆ ನುಗ್ಗಿ ಗ್ರೀಸ್ ಹೊಡೆಯುವುದನ್ನೇ ಬದುಕಾಗಿಸಿಕೊಂಡಿರುವ ಈ ಹೈವೇ ಗ್ರೀಸ್ ಬಾಯ್ಸ್ ಜೀವಕ್ಕೆ ಗ್ಯಾರಂಟಿಯೇ ಇಲ್ಲ. ದಿನವೊಂದಕ್ಕೆ 80ರಿಂದ 100 ರುಪಾಯಿ ಸಂಪಾದಿಸುವ ಈ ಬಾಲಕಾರ್ಮಿಕರು ಪಡುವ ಕಷ್ಟ ಅಷ್ಟಿಷ್ಟಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಾಲಕಾರ್ಮಿಕ ವಿರೋಧಿ ನೀತಿಯನ್ನು ಜಾರಿಗೊಳಿಸಿವೆ. ಜತೆಗೆ ಕಡ್ಡಾಯ ಶಿಕ್ಷಣ ಪದ್ಧತಿಯನ್ನು ಕೂಡ ಜಾರಿಗೊಳಿಸಿವೆ. ಆದರೂ ಈ 'ಹೈವೇ ಗ್ರೀಸ್ ಬಾಯ್ಸ್'ಗಳು ರಾಜಕಾರಣಿಗಳ ಕಣ್ಣಿಗೆ ಬೀಳಲಿಲ್ಲವೇ ಎಂಬ ಪ್ರಶ್ನೆ ಮಾತ್ರ ಕಾಡುತ್ತಲೇ ಇರುತ್ತದೆ. ಇವರು ಬಾಲಕಾರ್ಮಿಕರ ಶೋಷಣೆಯನ್ನು ತಪ್ಪಿಸಲು ಏಕೆ ಮನಸ್ಸು ಮಾಡಿಲ್ಲವೆಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.

ಪ್ರತಿನಿತ್ಯ ಧೂಳು ಕುಡಿದು, ಗ್ರೀಸ್ ವಾಸನೆಯನ್ನು ಹೀರಿ ಅವರ ಆರೋಗ್ಯ ಕೆಡುತ್ತಿದ್ದರೂ ಅವರನ್ನು ಕೇಳುವವರಿಲ್ಲ. ಹೊಟ್ಟೆ ತುಂಬಬೇಕಿದ್ದರೆ ಇದನ್ನೆಲ್ಲ ಸಹಿಸಿಕೊಳ್ಳಲೇಬೇಕು. ಇವರಿಗೆ ಬೇರೆ ಪ್ರಪಂಚ ಗೊತ್ತಿಲ್ಲ. ಬೆಳಗಾದ್ರೆ ಸಾಕು ಗ್ರೀಸ್, ಪಂಕ್ಚರ್ ಹಾಕುವುದರಲ್ಲೇ ದಿನ ತಳ್ಳುತ್ತಾರೆ. ಅಕ್ಷರದ ಜ್ಞಾನ ಇಲ್ಲ. ಬದುಕಿನ ಬಂಡಿ ತಳ್ಳಲು ಬಾಲ್ಯದಲ್ಲೇ ದುಡಿಮೆಯ ಹಾದಿ ಹಿಡಿದಿರುವ ಈ ಮಕ್ಕಳ ಬದುಕಿನಲ್ಲಿ ಬೆಳಕು ಮೂಡುವುದು ಯಾವಾಗ?

ಜವಾಬ್ಧಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು 'ಹೈವೇ ಗ್ರೀಸ್‌ಬಾಯ್ಸ್'ಗಳ ಕಡೆಗೆ ಗಮನ ಹರಿಸಿ, ಬಾಲ ಕಾರ್ಮಿಕ ಪದ್ಧತಿಗೆ ಮುಕ್ತಿ ಕೊಡದಿದ್ದಲ್ಲಿ, ಮೊಗ್ಗಾಗಿರುವ ಇವರ ಬದುಕು ಅರಳುವ ಮೊದಲೇ ಬಾಡಿಹೋಗುವುದರಲ್ಲಿ ಸಂದೇಹವೇ ಇಲ್ಲ.

English summary
When you go from Bangalore to Mysore, after you cross Kengeri, you can see children between 6-14 will be seen greasing the vehicles on either side of the road. Though govt has banned child labour, no one has even bothered to why these boys are working instead of going to school. A special report by Poornachandra Magadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X