ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಕತ್ತಿದ್ರೆ ಹಿಡೀರಿ : ಅಮೆರಿಕಕ್ಕೆ ಹಫೀಜ್ ಉಗ್ರ ಸವಾಲ್

By Prasad
|
Google Oneindia Kannada News

Hafiz Mohammad Saeed
ಇಸ್ಲಾಮಾಬಾದ್, ಏ. 3 : "ಬಹುಮಾನದ ಆಸೆ ತೋರಿಸಿ ನನ್ನನ್ನು ಹುಡುಕಲು ಹೊರಟಿಸುವ ಅಮೆರಿಕ ತೀವ್ರವಾಗಿ ಹತಾಶೆಗೊಂಡಿದೆ. ನಾನೇನು ಹೇಡಿಯಂತೆ ಯಾವುದೇ ಗುಹೆಯಲ್ಲಿ ಅಡಗಿಕೊಂಡಿಲ್ಲ. ತಾಕತ್ತಿದ್ದರೆ ನನ್ನನ್ನು ಅಮೆರಿಕ ಹಿಡಿಯಲಿ" ಎಂದು ಲಷ್ಕರ್-ಇ-ತೊಯ್ಬಾದ ನಾಯಕ ಹಫೀಜ್ ಮೊಹಮ್ಮದ್ ಸಯೀದ್ ಅಮೆರಿಕಾಗೆ ಸೆಡ್ಡುಹೊಡೆದಿದ್ದಾನೆ.

ಅಲ್-ಜಜೀರಾ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ, ತನ್ನನ್ನು ಹಿಡಿದುಕೊಟ್ಟವರಿಗೆ 10 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಇಟ್ಟಿರುವುದು ಹಾಸ್ಯಾಸ್ಪದ ಎಂದು ಹಫೀಜ್ ಲೇವಡಿ ಮಾಡಿದ್ದಾನೆ. ಆಹಾರ, ಇಂಧನ ಮತ್ತಿತರ ವಸ್ತುಗಳನ್ನು ನ್ಯಾಟೋ ಪೂರೈಸುವುದನ್ನು ಮತ್ತು ಡ್ರೋನ್ ದಾಳಿಯನ್ನು ವಿರೋಧಿಸಿ ಚಳವಳಿ ಮಾಡುತ್ತಿರುವುದನ್ನು ಸಹಿಸಲು ಅಮೆರಿಕಕ್ಕೆ ಆಗುತ್ತಿಲ್ಲ ಎಂದು ಆತ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಅಮೆರಿಕಕ್ಕೆ ನನ್ನ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಭಾರತ ನೀಡುತ್ತಿರುವ ತಪ್ಪು ಮಾಹಿತಿಯ ಆಧಾರದ ಮೇಲೆ ಅಮೆರಿಕ ಕ್ರಮ ತೆಗೆದುಕೊಳ್ಳುತ್ತಿದೆ. ಅಲ್ಲದೆ, ಅಮೆರಿಕದ ವಿರುದ್ಧ ರಾಷ್ಟ್ರವ್ಯಾಪಿ ನಡೆಸುತ್ತಿರುವ ಚಳವಳಿಯಿಂದಾಗಿ ಜಗತ್ತಿನ ದೊಡ್ಡಣ್ಣ ತೀವ್ರ ಹತಾಶೆಗೊಂಡಿದ್ದಾನೆ ಎಂದು ಆತ ಸಂದರ್ಶನದಲ್ಲಿ ತಿಳಿಸಿದ್ದಾನೆ.

ಭಾರತದ ಸ್ವಾಗತ : 2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ರೂವಾರಿ, ಜಮಾತ್-ಉದ್-ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಹಿಡಿದುಕೊಟ್ಟವರಿಗೆ 10 ಮಿಲಿಯನ್ ಡಾಲರ್ ಇನಾಮು ನೀಡುವುದಾಗಿ ಅಮೆರಿಕ ಘೋಷಿಸಿದೆ. ಈ ಘೋಷಣೆಯನ್ನು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಒಗ್ಗಟ್ಟಾಗಿದೆ ಎಂಬ ದಿಟ್ಟ ಸಂದೇಶವನ್ನು ಲಷ್ಕರ್-ಎ-ತೊಯ್ಬಾಗೆ ಅಮೆರಿಕದ ನಿರ್ಧಾರ ತಿಳಿಸಿದೆ ಎಂದು ಕೃಷ್ಣ ದೆಹಲಿಯಿಂದ ಹೇಳಿಕೆ ನೀಡಿದ್ದಾರೆ. ಅಮೆರಿಕದ ಕ್ರಮಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಅವರು, ಹಫೀಜ್ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿರುವುದು ಇದರಿಂದ ಸಾಬೀತಾಗಿದೆ. ಆದರೆ, ಪಾಕಿಸ್ತಾನ ತನ್ನ ಕರ್ತವ್ಯವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ನುಡಿದಿದ್ದಾರೆ.

ಹಫೀಜ್ ಸಯೀದ್‌ನ ಸೋದರಳಿಯ ಅಬುಲ್ ರೆಹಮಾನ್ ಮಕ್ಕಿ ಬಗ್ಗೆ ಸುಳಿವುಕೊಟ್ಟವರಿಗೆ 2 ಮಿಲಿಯನ್ ಡಾಲರ್ ಬಹುಮಾನವನ್ನು ಅಮೆರಿಕ ಘೋಷಿಸಿದೆ. ಬಹುಮಾನ ಘೋಷಿಸಿರುವ ಬಗ್ಗೆ ಅಮೆರಿಕದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ ಎಂದಿರುವ ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲ್ಲಿಕ್ ಅವರು, ಹಫೀಜ್‌ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದಿದ್ದಾರೆ.

ಈ ಬಹುಮಾನವನ್ನು ಅಮೆರಿಕ ಘೋಷಿಸುವ ಬದಲು ಭಯೋತ್ಪಾದಕ ದಾಳಿಗೊಳಗಾಗಿರುವ ಭಾರತ ಏಕೆ ಈ ಘೋಷಣೆ ಮಾಡಿಲ್ಲ, ಏಕೆ ತಣ್ಣಗೆ ಕುಳಿತಿತ್ತು ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಅಮೆರಿಕದ ಈ ಕ್ರಮದಿಂದಲಾದರೂ ಭಾರತ ಎಚ್ಚೆತ್ತು ಅಂತಾರಾಷ್ಟ್ರೀಯ ಭಯೋತ್ಪಾದಕರಾದ ದಾವೂದ್ ಇಬ್ರಾಹಿಂ, ಮಸೂದ್ ಅಜರ್, ಜೈಕುರ್ ರೆಹಮಾನ್ ಲಕ್ವಿ ತಲೆಗೆ ಬಹುಮಾನದ ಇಡುಗಂಟು ಇಡಲಿ ಎಂಬ ಮಾತುಗಳು ಟ್ವಿಟ್ಟರ್‌ನಲ್ಲಿ ಕೇಳಿಬರುತ್ತಿವೆ.

English summary
Lashkar-e-taiba founder and Jamaat-ud-dawa leader has challenged USA by saying he is not hiding in any cave in Pakistan for bounties to be set for finding him. He says USA is frustrated and acting on wrong information provided by India. External Affairs minister of India SM Krishna has welcomed US action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X