ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾ ಕಂಡಂತೆ ಉಡುಪಿ ಮಣ್ಣಿನಮಗ ಆಚಾರ್ಯ

By * ಬಾಲರಾಜ್ ತಂತ್ರಿ
|
Google Oneindia Kannada News

ಮಂಗಳವಾರ ಮಧ್ಯಾನ್ಹ ನಮ್ಮನ್ನು ಹಠಾತ್ ಅಗಲಿದ ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ. ಆಚಾರ್ಯರ ಕುಟುಂಬವನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ಅವರ ಎರಡನೆ ಮಗ ಕಿರಣ್ ಮತ್ತು ನಾನು ಉಡುಪಿ ಕಡಿಯಾಳಿಯಲ್ಲಿರುವ ಕಮಲಾಬಾಯಿ ಪ್ರೌಢಶಾಲೆಯಲ್ಲಿ ಒಟ್ಟಾಗಿ ಓದುತ್ತಿದ್ದೆವು.

ಆಚಾರ್ಯರು ಸಜ್ಜನ, ಮೃದುಭಾಷಿ. ಹೆಚ್ಚು ಕೆಲಸ, ಕಡಿಮೆ ಗದ್ದಲ ಅವರ ಸ್ವಭಾವ. ಅವರ ಉಡುಪಿಯಲ್ಲಿನ ಮನೆ ನನ್ನ ಮನೆಗಿಂತ ಕೂಗಳೆತೆಯ ದೂರದಲ್ಲಿದೆ. ಅದೆಷ್ಟೋ ಬಾರಿ ನಾನು ಅವರ ಮನೆಗೆ ಹೋಗಿದ್ದೆ. ಅವರು ಯಾರೇ ಮನೆಗೆ ಬರಲಿ ತೋರಿಸುತ್ತಿದ್ದ ಪ್ರೀತಿ ನನ್ನ ಮನಸಿನಲ್ಲಿ ಅಚ್ಚಳಿಯದಂತೆ ಮನೆಮಾಡಿದೆ.

ನನ್ನ ತಂದೆ ಮತ್ತು ಅಜ್ಜನ ಜೊತೆ ಉತ್ತಮ ಸಂಬಂಧ ಹೊಂದಿದ್ದ ಆಚಾರ್ಯ ಕೆಲಸ ಇಲ್ಲದೆ ಮನೆಯಲ್ಲಿ ಚಿಂತಿಸಿಕೊಂಡು ಕೂತಿದ್ದ ನನ್ನ ಮೊದಲ ಸಹೋದರನಿಗೆ ಕರ್ನಾಟಕ ಬ್ಯಾಂಕ್ ನಲ್ಲಿ ಕೆಲಸ ಕೊಡಿಸಿದ್ದರು. ಉಡುಪಿ ಜಿಲ್ಲೆಯಲ್ಲಿ ಅದೆಷ್ಟೋ ಕುಟುಂಬಗಳಿಗೆ ಆಚಾರ್ಯ ಅವರು ಮಾಡಿದ ಸಹಾಯಹಸ್ತ ಬೆಲೆಕಟ್ಟದಷ್ಟು. ನಮ್ಮ ಮತ್ತು ಆಚಾರ್ಯ ಕುಟುಂಬದಲ್ಲಿ ಯಾವುದೇ ಸಮಾರಂಭಗಳು ನಡೆದರೂ ಎರಡೂ ಕುಟುಂಬದ ಸದಸ್ಯರು ತಪ್ಪದೆ ಹಾಜರಾಗುತ್ತಿದ್ದೆವು.

ಯಾವುದೇ ಕಳಂಕವಿಲ್ಲದೆ, ಎಲ್ಲರ ಜೊತೆ ಹೊಂದಿಕೊಂಡು ಬಾಳುತ್ತಿದ್ದ ಆಚಾರ್ಯ ಅವರ ಬಗ್ಗೆ ಬರೆಯಲು ಶುರು ಮಾಡಿದರೆ ಪುಟಗಳೇ ಸಾಲದು. ಉಡುಪಿ ಜಿಲ್ಲೆಯ ಹೆಚ್ಚಿನ ದೇವಾಲಯಗಳಿಗೆ ಗೌರವ ಅಧ್ಯಕ್ಷರಾಗಿರುವ ಆಚಾರ್ಯ ದೇವಾಲಯದ ಅಭಿವೃದ್ದಿಗೆ ಬಹಳಷ್ಟು ಶ್ರಮಿಸಿದ್ದರು. ಸ್ವಾಮೀಜಿಗಳು ಕೂಡ ಇವರ ಮಾತಿಗೆ ಬೆಲೆ ನೀಡುತ್ತಿದ್ದರು.

ತಾವು ನಂಬಿದ್ದ ಸಿದ್ದಾಂತವನ್ನು ಎಂದೂ ಬಿಟ್ಟು ಕೊಡದ ಆಚಾರ್ಯ ಮಲ್ಪೆ ಸಮುದ್ರಕ್ಕೆ ಹೋಗುವ ದಾರಿಯಲ್ಲಿರುವ ಕಲ್ಮಾಡಿ ಎನ್ನುವ ಸ್ಥಳದಲ್ಲಿ ಕ್ಲಿನಿಕ್ ಸ್ಥಾಪಿಸಿ ಬಡ ಜನತೆಗೆ ವೈದ್ಯಕೀಯ ಸೇವೆಯನ್ನೂ ನೀಡುತ್ತಿದ್ದರು. ಬಡ ಕುಟುಂಬಗಳಿಗೆ ಆಸ್ಪತ್ರೆಯ ಬಿಲ್ ನೀಡಲು ಕೈಲಾದಷ್ಟು ಸಹಾಯ ಮಾಡುತ್ತಿದ್ದನ್ನು ನಾನು ಬಲ್ಲೆ.

ಈ ರಾಜ್ಯ ಕಂಡ ಒಬ್ಬ ಸಜ್ಜನ ರಾಜಕಾರಿಣಿ, ಅದಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೆಯ ಮನುಷ್ಯನನ್ನು ಈ ರಾಜ್ಯ ಕಳೆದುಕೊಂಡಿದೆ. ಅಗಲಿದ ಆಚಾರ್ಯ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕೊಡಲಿ ಮತ್ತು ಅವರ ಪತ್ನಿ ಶಾಂತಾ ಮತ್ತು ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ಕೊಡಲಿ ಎನ್ನುವುದು ನನ್ನ ಪ್ರಾರ್ಥನೆ.

English summary
Cleanest Karnataka BJP MLA, Son of Udupi Soil VS Acharya : A Tribute by Balaraj Tantry in Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X