ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರು ಅತ್ಯಂತ ಸುಖಿಗಳು, ಯಾಕೆ ಗೊತ್ತಾ?

By Prasad
|
Google Oneindia Kannada News

Indians are the happiest people
ನವದೆಹಲಿ, ಫೆ. 11 : ಸುಖ, ಸಂತೋಷ, ಸಂತೃಪ್ತಿ, ನೆಮ್ಮದಿಯ ಗುಟ್ಟು ಎಲ್ಲಿ ಅಡಗಿದೆ? ಶ್ರೀಮಂತಿಕೆಯಲ್ಲಿದೆಯಾ ಅಥವಾ ಬಡತನದಲ್ಲಿಯೇ ಸುಖದ ಸುಪ್ಪತ್ತಿಗೆ ಅವಿತುಕೊಂಡಿದೆಯಾ? ಅಥವಾ ಶಾಂತಿ, ಸಹನೆ, ಸಹಬಾಳ್ವೆಯಲ್ಲಿ ಸಂತಸ ಮನೆ ಮಾಡಿಕೊಂಡಿದೆಯಾ? ಬಲ್ಲವರು ಯಾರು?

ಸುಖ, ನೆಮ್ಮದಿಯ ಗುಟ್ಟು ಏನೇ ಇರಲಿ. ಎಷ್ಟೇ ಭಯೋತ್ಪಾದಕ ದಾಳಿಗಳಾಗಿ ನೆಮ್ಮದಿಯ ತಿಳಿನೀರು ಕದಡಿದ್ದರೂ, ಎಷ್ಟೇ ಕಷ್ಟಗಳ ಸಂಕೋಲೆ ಸುತ್ತಿಕೊಂಡಿದ್ದರೂ, ಎಷ್ಟೇ ಬಡತನ ಕಿತ್ತು ತಿನ್ನುತ್ತಿದ್ದರೂ, ರುಪಾಯಿ ಮೌಲ್ಯ ಎಷ್ಟೇ ಕುಸಿಯುತ್ತಿದ್ದರೂ ಭಾರತೀಯರು ಮಾತ್ರ ಎಲ್ಲರಿಗಿಂತ ಸುಖಿಗಳು, ಸಂತೃಪ್ತಿ ಹೊಂದಿದವರು ಎಂಬ ಅಂಶ ಬಹಿರಂಗವಾಗಿದೆ.

ಕಳೆದ ನಾಲ್ಕು ವರ್ಷಗಳಿಗಿಂತ ಇಂದು ಭಾರತ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಹೆಚ್ಚಿನ ಸಂತೋಷ ನೆಲೆಸಿದೆ ಎಂದು ಇಪ್ಸೋಸ್ ಗ್ಲೋಬಲ್ (Ipsos Global) ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ. ಉಳಿದೆಲ್ಲ ರಾಷ್ಟ್ರಗಳಿಗಿಂತ ಭಾರತ, ಇಂಡೋನೇಷಿಯಾ, ಮೆಕ್ಸಿಕೋ ದೇಶಗಳಲ್ಲಿನ ಸಂತೃಪ್ತಿಯ ಪ್ರಮಾಣ ಅಧಿಕವಾಗಿದೆ ಎನ್ನುತ್ತದೆ ಸಮೀಕ್ಷೆ.

ನಾಲ್ಕು ವರ್ಷಗಳಲ್ಲಿ 24 ರಾಷ್ಟ್ರಗಳಲ್ಲಿ 18 ಸಾವಿರ ಜನರನ್ನು ಮಾತನಾಡಿಸಿ, ಅವರಿಂದ ಅಭಿಪ್ರಾಯ ಸಂಗ್ರಹಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಇಸ್ಪೋಸ್ ಗ್ಲೋಬಲ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಜಾನ್ ರೈಟ್ ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕ ಸ್ಥಿತಿ, ಉತ್ತಮ ಜೀವನಮಟ್ಟ ಮಾತ್ರ ಸುಖಕ್ಕೆ ಕಾರಣವಲ್ಲ, ಇನ್ನೂ ಅನೇಕ ಅಂಶಗಳು ಸಂತೃಪ್ತಿಗೆ ಕಾರಣವಾಗುತ್ತವೆ ಎಂಬುದು ಈ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.

ಹಣದಿಂದ ಸುಖ, ನೆಮ್ಮದಿಯನ್ನು ಕೊಳ್ಳಲು ಸಾಧ್ಯವಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಅಮೆರಿಕಾ, ಬ್ರಿಟನ್, ಕೆನಡಾದಂಥ ಸಂಪದ್ಭರಿತ ರಾಷ್ಟ್ರಗಳಲ್ಲಿ ಜನರಿಗೆ ನೆಮ್ಮದಿ ಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಅತ್ತ ಸುಖವೂ ಇಲ್ಲ, ಇತ್ತ ದುಃಖವೂ ಇಲ್ಲ ಎಂಬಂತಹ ಸ್ಥಿತಿಯಲ್ಲಿ ಈ ರಾಷ್ಟ್ರಗಳು ತೇಲಾಡುತ್ತಿವೆ.

ಕೆಲವರಿಗೆ ಉತ್ತಮ ಆಹಾರ ಸಂತೃಪ್ತಿ ತಂದಿದ್ದರೆ, ಕೆಲವರಿಗೆ ತಲೆಯ ಮೇಲೊಂದು ಸೂರು ಮಾತ್ರ ಸುಖಕ್ಕೆ ಕಾರಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಸಂಬಂಧಗಳು, ಕೌಟುಂಬಿಕ ಮೌಲ್ಯಗಳು, ಆಲಂಗಿಸಿಕೊಂಡಿರುವ ಸಂಸ್ಕೃತಿಗಳು ನೆಮ್ಮದಿಯನ್ನು ದಕ್ಕಿಸಿಕೊಟ್ಟಿವೆ. ಮದುವೆ ಕೂಡ ಸುಖ ತರಲು ತನ್ನ ಪಾಲನ್ನು ನೀಡಿದೆ. ಎಷ್ಟೇ ಕೊರತೆಗಳಿದ್ದರೂ ಭಾರತ ಯಾಕೆ ಸುಖದಿಂದಿದೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕಿಲ್ಲ.

English summary
Despite terrorist attacks, poverty, unemployment, conflicts the World is more happier that 4 years before. Indian are the most happiest people. A survey conducted by Ipsos Global organization has revealed the secret of happiness. Good food, shelter, united family, marriages are the main reasons which have made people more happy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X