ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮಾನ ಹುಬ್ಬಳ್ಳಿಯಲ್ಲಿ ಬಹಿರಂಗ ಹರಾಜು

By Srinath
|
Google Oneindia Kannada News

bsy-rss-face-anti-corruption-heat-in-hubli
ಹುಬ್ಬಳ್ಳಿ, ಜ.31: ಸದಾ ಭ್ರಷ್ಟಾಚಾರದ ವಿರುದ್ಧ ಮತ್ತು ಮೌಲ್ಯಗಳ ಬಗ್ಗೆ ಮಾತನಾಡುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಳೆದ ವಾರ ಇಲ್ಲಿ ತೀವ್ರ ಮುಜುಗರಕ್ಕೀಡಾದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ. ಇದಕ್ಕೆ ಕಾರಣೀಭೂತರಾದವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ. ಬಿಎಸ್ ವೈ ವಿರುದ್ಧದ ಭ್ರಷ್ಟಾಚಾರ ಆರೋಪದ ವಿಚಾರದಲ್ಲಿ ಗಣ್ಯರೊಬ್ಬರು ವೇದಿಕೆಯತ್ತ ಪ್ರಶ್ನೆ ಎಸೆದಾಗ ಈ ಪ್ರಸಂಗ ನಡೆದಿದೆ. ಅಷ್ಟಕ್ಕೂ ಇದು ನಡೆದದ್ದು ಯಡಿಯೂರಪ್ಪ ಸಮ್ಮುಖದಲ್ಲೇ!

ಹಿಂದು ಶಕ್ತಿ ಸಂಗಮ ಮಹಾಶಿಬಿರದ ಅಂಗವಾಗಿ ಭಾನುವಾರ ನಡೆದ ಗಣ್ಯರ ಸಂವಾದದ ಪ್ರಶ್ನೋತ್ತರ ವೇಳೆಯಲ್ಲಿ ಗಣ್ಯರೊಬ್ಬರು ಎದ್ದು ನಿಂತು 'ಕ್ಷಮಿಸಿ, ನನ್ನ ಪ್ರಶ್ನೆಯಿಂದ ಯಡಿಯೂರಪ್ಪ ಅವರಿಗೆ ನೋವು ಇಲ್ಲವೆ ಮುಜುಗರ ಆಗಬಹುದು' ಎಂದೇ ಮಾತು ಆರಂಭಿಸಿ, ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಪ್ರಬಲ ಆರೋಪ ಕೇಳಿ ಬಂದಾಗ ಆರ್‌ಎಸ್‌ಎಸ್‌ ಮೌನ ವಹಿಸಿದ್ದು ಏಕೆ. ದೇಶದ ಭ್ರಷ್ಟಾಚಾರ ವಿರುದ್ಧ, ಮೌಲ್ಯಗಳ ವಿಚಾರದಲ್ಲಿ ಮಾತನಾಡುವ ನಿಮಗೆ ಕರ್ನಾಟಕದ್ದು ಕಾಣಲಿಲ್ಲವೆ' ಎಂದು ಪ್ರಶ್ನಿಸಿದರು.

ಲೋಕಾಯಕ್ತರ ವರದಿ ಹಾಗೂ ಕಾನೂನು ಕ್ರಮ ಜಾರಿವರೆಗೆ ಸಂಘ ಏನು ಮಾಡುತ್ತಿತ್ತು ಎಂಬ ಪ್ರಶ್ನೆಗೆ ವೇದಿಕೆಯಲ್ಲಿದ್ದ ಆರ್‌ಎಸ್‌ಎಸ್‌ ಸರಕಾರ್ಯವಾಹಕ ಸುರೇಶ ಜೋಶಿ, ಅದು ಕಾನೂನು ವಿಚಾರ. ಕಾನೂನು ತನ್ನ ಕಾರ್ಯ ಕೈಗೊಳ್ಳುತ್ತದೆ ಎಂದರು.

ಇದಕ್ಕೆ ತೃಪ್ತರಾಗದೆ, ಪ್ರಶ್ನೆ ಕೇಳಿದ ಗಣ್ಯರು ಕಾನೂನು ವಿಚಾರವನ್ನು ಕಾನೂನು ರೂಪದಲ್ಲಿ ಕೇಳುತ್ತೇವೆ. ನನ್ನ ಪ್ರಶ್ನೆ ಸಂಘದ ವಿಚಾರ, ನೈತಿಕತೆ ವಿಚಾರ. ತಪ್ಪು ದಾರಿ ಹಿಡಿದವರನ್ನು ಕಿವಿ ಹಿಂಡಿ ಬುದ್ಧಿವಾದ ಹೇಳುತ್ತೇವೆಂಬ ಹೇಳಿಕೆ ಮಾಧ್ಯಮದಲ್ಲಿ ಬರುತ್ತಿದೆ. ಕಿವಿ ಹಿಂಡುವವರು ಇಷ್ಟು ದಿನ ಕಾದಿದ್ದು ಯಾಕೆ? ಆರಂಭದಲ್ಲಿಯೇ ಅದನ್ನು ಮಾಡಲಿಲ್ಲ ಏಕೆ? ಎಂದು ಮರುಪ್ರಶ್ನಿಸಿದರು. ಇದಕ್ಕೆ ಸಂಘದ ಸರಕಾರ್ಯವಾಹಕ ನಿರುತ್ತರರಾದರು ಎಂದು ಹೇಳಲಾಗಿದೆ.

ಅತಿರಥ ಮಹಾರಥ ಗಣವೇಶಧಾರಿಗಳ ಸಮ್ಮುಖದಲ್ಲೇ ... ಇಷ್ಟೆಲ್ಲಾ ನಡೆಯುತ್ತಿದ್ದಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಭೆಯ ಗಣ್ಯರ ಮೊದಲ ಸಾಲಿನಲ್ಲಿಯೇ ಗಣವೇಷಧಾರಿಗಳಾಗಿ ಆಸೀನರಾಗಿದ್ದರು. ಮೌನಕ್ಕೆ ಶರಣಾಗಿ ಎಲ್ಲವನ್ನೂ ಆಲಿಸಿದರು ಎಂದು ಹೇಳಲಾಗಿದೆ. ಅರವಿಂದರಾವ್‌ ದೇಶಪಾಂಡೆ, ಖಗೇಶನ್‌ ಪಟ್ಟಣಶೆಟ್ಟಿ ವೇದಿಕೆಯಲ್ಲಿದ್ದರು.

ಮುಖಂಡರಾದ ಅನಂತಕುಮಾರ, ಕೆ.ಎಸ್‌. ಈಶ್ವರಪ್ಪ, ರಾಮದಾಸ, ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ ಶೆಟ್ಟರ, ಸಿದ್ದು ಸವದಿ, ಅಪ್ಪು ಪಟ್ಟಣಶೆಟ್ಟಿ ಇನ್ನಿತರ ಆಸೀನರಾಗಿದ್ದರೆ, ಸಚಿವೆ ಶೋಭಾ ಕರಂದ್ಲಾಜೆ ಕೊನೆ ಸಾಲಿನಲ್ಲಿ ಕುಳಿತು ಸಂವಾದ ವೀಕ್ಷಿಸಿದರು.

English summary
RSS face anti-corruption heat in Hubli on Jan 29 thanks to corruption charges against Karnataka ex Chief Minister BS Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X