ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ : ಒಂದು ವರದಿ

By * ಪ್ರವೀಣ್ ಚಂದ್ರ
|
Google Oneindia Kannada News

ಈ ವಾರ ಲಾಲ್ ಬಾಗ್ ಎಂದಿನಂತಿಲ್ಲ. ಸಸ್ಯಕಾಶಿಯ ಹೂದೋಟದ ಹೂವುಗಳು ಪುಳಕಗೊಂಡಿವೆ. ದೇವದಾರು, ತೇಗ, ಸಾಗುವಾನಿ, ಮಾವು, ನೀಲಗಿರಿ ಮರಗಳು ಗಾಜಿನ ಮನೆಯತ್ತ ಕಣ್ಣು ನೆಟ್ಟಿವೆ. ಈಗಷ್ಟೇ ಚಿಗುರಿದ ಎಲೆಚಿಗುರುಗಳು ಅಚ್ಚರಿಯ ನೋಟ ಬೀರುತ್ತಿವೆ. ಲಾಲ್ ಬಾಗ್ ಗಣರಾಜ್ಯದ ಸಂಭ್ರಮದಲ್ಲಿದೆ. ಗಾಜಿನ ಮನೆ ಫಲಪುಷ್ಪ ಅಲಂಕಾರ, ಆವಿಷ್ಕಾರಗಳಿಂದ ಮದುವಣಗಿತ್ತಿಯಂತೆ ಪೋಸ್ ನೀಡುತ್ತಿದೆ. ಲಾಲ್ ಬಾಗ್ ನೊಳಗೆ ಜಾತ್ರೆಯ ಗೌಜುಗದ್ದಲ ಕೇಳಿಬರುತ್ತಿದೆ.

ಭಾನುವಾರ (ಜ.22) ಡಬಲ್ ರೋಡ್, ಜಯನಗರ ಬಳಿ ದಿನನಿತ್ಯ ನೋಡುತ್ತಿದ್ದ ಟ್ರಾಫಿಕ್ ಪೊಲೀಸರು ಲಾಲ್ ಬಾಗ್ ಒಳಗಡೆ ವಾಹನ ಪಾರ್ಕಿಂಗ್ ಮಾಡಿಸುವಲ್ಲಿ ಬ್ಯುಸಿಯಾಗಿದ್ದರು. ಹೆಚ್ಚಿನ ಬೆಂಗಳೂರಿಗರೂ ಎಲ್ಲಾ ಕೆಲಸ ಕಾರ್ಯಕ್ರಮವನ್ನು ಬಿಟ್ಟು ಲಾಲ್ ಬಾಗ್ ಫಲಪುಷ್ಪ ಸೊಬಗು ನೋಡಲು ಆಗಮಿಸಿದ್ದರು. ಗಾಜಿನ ಮನೆಯ ಹೊರಭಾಗದಲ್ಲಿ ಚೆಂಡು ಹೂವುಗಳು, ಬಣ್ಣ ಬಣ್ಣದ ಬಗೆಬಗೆ ಜಾತಿ ಹೂವುಗಳು ನಗೆ ಬೀರುತ್ತಿದ್ದವು.

ಸಸ್ಯಕಾಶಿಯ ಗಾಜಿನ ಮನೆಯೊಳಗೆ ರಾಶಿರಾಶಿ ಜನರು ಸಾಲು ಸಾಲಾಗಿ ಹೋಗುತ್ತಿದ್ದರು. ಕ್ಯಾಮರಾ, ಪರ್ಸ್, ಮೊಬೈಲ್ ಹುಷಾರಾಗಿ ನೋಡಿಕೊಳ್ಳಿ ಅಂತ ಅನೌನ್ಸ್ ಕೇಳಿಬರುತ್ತಿತ್ತು. ಪೊಲೀಸರಂತೂ ಹೂವುಗಳನ್ನು ಕಾಯುವುದರಲ್ಲಿ ಸುಸ್ತಾಗಿದ್ದರು. ಪಕ್ಕಕ್ಕೆ ಬರ್ರಿ, ಹೂಹಾಸಿಗೆ ತುಳಿಯಬೇಡ್ರಿ, ಫೋಟೊ ತೆಗಿತಾ ನಿಲ್ ಬ್ಯಾಡ್ರಿ.. ಮುಂದೆ ಹೋಗ್ರಿ" ಅಂತ ಬೊಬ್ಬೆಗಳು ಕೇಳಿಬರುತ್ತಿದ್ದವು. ದುಂಬಿಗಳಂತೆ ಹೂವಿನ ಮನೆಯ ಸುತ್ತ ಜನಸಾಗರ ಮುತ್ತಿತ್ತು.

"ಬುದ್ಧನ ಪ್ರತಿಮೆ ಮತ್ತು ಗುಹೆಯಿಂದ ನೀರು ಬೀಳುವಂತೆ ಹೂ ನದಿ ವಿನ್ಯಾಸ ಮಾಡಿದ್ದು ತುಂಬಾ ಇಷ್ಟವಾಯಿತು" ಎಂದು ಮುನೇಶ್ವರ ಬ್ಲಾಕಿನ ಕೃಷ್ಣಕುಮಾರಿ ಹೇಳಿದಾಗ ಅವರ ಪಕ್ಕದಲ್ಲಿದ್ದ 15 ವರ್ಷದ ನೇತ್ರ "ಕಳೆದ ವರ್ಷದ ಪ್ರದರ್ಶನಕ್ಕಿಂತಲೂ ಸೂಪರ್" ಎಂಬ ಕಾಂಪ್ಲಿಮೆಂಟ್ ಕೊಟ್ಟಳು. "ರಷ್ ನಲ್ಲಿ ಒಮ್ಮೆ ಹಾಗೆ ಹೋಗಿ ಬಂದೆ. ಈಗ ಎರಡನೇ ಸಾರಿ ಗಾಜಿನ ಮನೆಗೆ ಪ್ರವೇಶಿಸುತ್ತಿದ್ದೇನೆ" ಎಂದು ಕಾಕ್ಸ್ ಟೌನ್ ನಿವಾಸಿ ನಬಿಹಾ ಹೇಳಿದ್ದು ಸುಳ್ಳಲ್ಲ. ಅಲ್ಲಿನ ರಷ್, ತಳ್ಳಾಟ ನೋಡಿ ಶಾಂತಮೂರ್ತಿ ಹೂವಿನ ಬುದ್ಧನಿಗೂ ಕಸಿವಿಸಿಯಾಗಿದ್ದಿರಬಹುದು.

ಹೆಚ್ಚು ಗಮನ ಸೆಳೆಯುತ್ತಿದ್ದದ್ದು ದಕ್ಷಿಣ ಕೊರಿಯಾ ಮಾದರಿಯ 30 ಅಡಿ ಎತ್ತರದ ಬುದ್ಧ ಸ್ತೂಪ ಮತ್ತು ಹೂನದಿ. 50 ಲಕ್ಷ ಗುಲಾಬಿ, 1.50 ಲಕ್ಷ ಕಾರ್ನೇಷನ್, 25 ಸಾವಿರ ಆರ್ಕಿಡ್ಸ್ ಹೂವು ಗೊಂಚಲು, ಡ್ರಸಿನಾ, ಲೆದರ್ ಲೀಫ್, ಮೈಸೂರು ಮಲ್ಲಿಗೆ, ಸುಗಂಧ ರಾಜ ಹೀಗೆ ನಾನಾ ಬಗೆಯ ಹೂವುಗಳಿಂದ ನಿರ್ಮಿಸಲಾಗಿದೆ. ಹೂ ನದಿ ಕೂಡ ಪ್ರಮುಖ ಆಕರ್ಷಣೆ. ಗುಹೆ ಆಕಾರದ ಹೂವಿನ ವಿನ್ಯಾಸದಿಂದ ನೀರು ಹರಿದು ಬರುವಂತೆ ವಿನ್ಯಾಸ ಮಾಡಿದ್ದು ಎಲ್ಲರ ಗಮನಸೆಳೆಯಿತು. ಉಳಿದಂತೆ ಗಾಜಿನ ಮನೆಯ ಮೂಲೆ ಮೂಲೆ ಬಿಡದಂತೆ ಹೂವಿನ ನವಿಲು, ಪಕ್ಷಿಗಳು, ಹೂಗೊಂಚಲುಗಳು, ಚಿತ್ತಾರಗಳು ಆವರಿಸಿದ್ದವು. [ಫ್ಲವರ್ ಶೋ ಗ್ಯಾಲರಿ]

ಗಾಜಿನ ಮನೆ ಮಾತ್ರವಲ್ಲದೇ ಹೊರಭಾಗದಲ್ಲಿದ್ದ ಸಾಲು ಸಾಲು ಮಳಿಗೆಗಳಲ್ಲೂ ವ್ಯವಹಾರ ಜೋರಾಗಿತ್ತು. ಚಟ್ನಿಪುಡಿಯಿಂದ ಹಿಡಿದು ಕರಕುಶಲ ವಸ್ತುಗಳು ಲಭಿಸುತ್ತಿದ್ದವು. ಲಾಲ್ ಬಾಗ್ ಕೆರೆಯಲ್ಲಿದ್ದ ಹೂವಿನ ತೆಪ್ಪ ಕೂಡ ಆಕರ್ಷಕ. ನಮಗೆ ಸಿಕ್ಕ ಮಾಹಿತಿ ಪ್ರಕಾರ ಭಾನುವಾರ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರು ಲಾಲ್ ಬಾಗ್ ಗೆ ಭೇಟಿ ನೀಡಿದ್ದರು. ಆರಂಭದ ಎರಡು ದಿನಗಳಲ್ಲಿ ಸುಮಾರು 50 ಸಾವಿರ ಜನರು ಭೇಟಿ ನೀಡಿದ್ದಾರಂತೆ.

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದ ಟಿಕೇಟ್ ದರ ಒಬ್ಬರಿಗೆ 50 ರುಪಾಯಿ. ತಲಾ ಇಬ್ಬರಿಗೆ 90 ರುಪಾಯಿ. ಈ ಪ್ರದರ್ಶನ ಜನವರಿ 29ಕ್ಕೆ ಕೊನೆಗೊಳ್ಳಲಿದೆ. ಗಣರಾಜ್ಯದಂದು ಮತ್ತು ಕೊನೆಯ ದಿನ ಲಕ್ಷಕ್ಕಿಂತ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಹೂವಿನಲ್ಲಿ ಹುಳಗಳಿರುವಂತೆ ಫಲಪುಷ್ಪ ಪ್ರದರ್ಶನಕ್ಕೆ ಕಿಸೆ ಕಳ್ಳರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರಂತೆ. ಸೇಫ್ ಆಗಿ ಹೋಗಿಬನ್ನಿ. ನೂರು ವರ್ಷದ ಇತಿಹಾಸ ಹೊಂದಿರುವ ಹೂವಿನ ಪ್ರದರ್ಶನ ಮಿಸ್ ಮಾಡಿಕೊಳ್ಳಬೇಡಿ. ಅಲ್ಲಿಗೆ ಹೋಗುವ ಮುನ್ನ ಈ ಗ್ಯಾಲರಿ ಲೋಕಕ್ಕೆ ಭೇಟಿ ನೀಡಿ ಕಣ್ಮನ ತಂಪಾಗಿಸಿಕೊಳ್ಳಿ. [ಒನ್ಇಂಡಿಯಾ ಕನ್ನಡ]

English summary
Lalbagh Flower Show 2012: Around 1 lakh visitors visited Lalbagh Botanical Gardens on 22 January 2012. Main attraction of the flower show 30-ft Buddhist stupa made of 400,000 flowers, including 150,000 roses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X