ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರಪ್ಪ ಚಿತೆಗೆ ಕಿರಿಮಗ ಮಧು ಅಗ್ನಿಸ್ಪರ್ಶ

By Mahesh
|
Google Oneindia Kannada News

S Bangarappa cremated with state respect
ಶಿವಮೊಗ್ಗ, ಡಿ.27 : 'ಬಂಗಾರಪ್ಪಗೆ ಜೈ' ಎಂಬ ಮುಗಿಲುಮುಟ್ಟುವ ಘೋಷಣೆಯೊಂದಿಗೆ ವರ್ಣಮಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರಿಗೆ ಸಕಲ ಸರ್ಕಾರಿ ಮರ್ಯಾದೆ, ವೇದ ಘೋಷಗಳೊಂದಿಗೆ ಡಿ.27ರ ಸಂಜೆ 7 ಗಂಟೆ 8 ನಿಮಿಷಕ್ಕೆ ಅಂತಿಮ ವಿದಾಯ ಕೋರಲಾಯಿತು. ದುಃಖತಪ್ತ ಸಾವಿರಾರು ಜನ ಸಮೂಹದ ನಡುವೆ ಚಿತೆಗೆ ಕಿರಿಯ ಮಗ ಮಧು ಬಂಗಾರಪ್ಪ ಅವರು ಅಗ್ನಿಸ್ಪರ್ಶ ಮಾಡಿದರು.

ಈ ನಡುವೆ ಬಂಗಾರಪ್ಪ ಅವರ ಅಂತಿಮ ಸಂಸ್ಕಾರ ಯಾರು ಮಾಡಬೇಕು ಎಂಬ ಅಂಶ ಚರ್ಚೆಗೀಡಾಗಿತ್ತು. ಹಿರಿಯ ಮಗ ಕುಮಾರ್ ಬಂಗಾರಪ್ಪ ಇರುವಾಗಲೇ ಕಿರಿಯ ಮಗ ಮಧು ಬಂಗಾರಪ್ಪ ಅವರು ತಮ್ಮ ತಂದೆಯ ಅಂತಿಮ ಸಂಸ್ಕಾರ ವಿಧಿ ವಿಧಾನ ನೆರವೇರಿಸುವುದು ಶಾಸ್ತ್ರದ ಪ್ರಕಾರ ಒಮ್ಮತವಲ್ಲ ಎಂದು ಕೂಗು ಎದ್ದಿತ್ತು.

ಆದರೆ, ಬಂಗಾರಪ್ಪ ಅವರ ಧರ್ಮಪತ್ನಿ ಶಕುಂತಲಾ ಅವರು ಕುಮಾರ್ ಬದಲಿಗೆ ಮಧು ತನ್ನ ತಂದೆ ಅಂತಿಮ ಕಾರ್ಯವನ್ನು ಪೂರೈಸಲಿ ಎಂದು ಇಚ್ಛಿಸಿದರು. ಇದಕ್ಕೆ ಕುಟುಂಬ ವರ್ಗದಿಂದಲೂ ಸಮ್ಮತಿ ಸಿಕ್ಕಿತ್ತು. ಬಂಗಾರಪ್ಪ ಅವರ ಅಳಿಯಂದಿರಾದ ತಿಲಕ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರು ಕೂಡಾ ಒಪ್ಪಿಗೆ ಸೂಚಿಸಿದ್ದರು. ಮಧು ಬಂಗಾರಪ್ಪ ಅಂತಿಮ ಕ್ರಿಯೆ ನಡೆಸಲು ಎಲ್ಲರ ಒಪ್ಪಿಗೆ ಪಡೆಯಲಾಗಿದೆ ಎಂದು ಕುಟುಂಬ ಮೂಲಗಳು ಹೇಳಿದೆ.

ಶಿವಮೊಗ್ಗದ ಜೂನಿಯರ್ ಕಾಲೇಜು ಮೈದಾನದಲ್ಲಿ ಬಂಗಾರಪ್ಪ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು. ಇದಕ್ಕೂ ಮುನ್ನ ಬೆಂಗಳೂರಿನಿಂದ ಹೊರಟ ಅಂತಿಮ ಯಾತ್ರೆ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು ಮಾರ್ಗವಾಗಿ ಶಿವಮೊಗ್ಗ ತಲುಪಿತ್ತು.

ಪುನಃ ಶಿವಮೊಗ್ಗದಿಂದ ಹೊರಟು ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಮೂಲಕ ಬಂಗಾರಪ್ಪ ಅವರ ಹುಟ್ಟೂರು ಕಬಟೂರಿಗೆ ಪಾರ್ಥೀವ ಶರೀರದ ಅಂತಿಮ ಯಾತ್ರೆ ಸಾಗಿ ಬಂದಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಸೇರಿದಂತೆ ಜಿಲ್ಲಾ ಪ್ರಮುಖರು ಅಂತಿಮಯಾತ್ರೆಯಲ್ಲಿ ಪಾಲ್ಗೊಂಡು ಅಗಲಿದ ಜನನಾಯಕನಿಗೆ ನಮನ ಸಲ್ಲಿಸಿದರು.

ರಾಜಕೀಯವಾಗಿ ದ್ವೇಷ ಕಟ್ಟಿಕೊಂಡಿದ್ದ ಬಂಗಾರಪ್ಪ ಹಾಗೂ ಕುಮಾರ್ ಅವರ ನಡುವಿನ ವೈಮನಸ್ಯ ಈಗಲಾದರೂ ಅಂತ್ಯಗೊಳ್ಳುತ್ತದೆ ಎಂದು ನಂಬಿದ್ದ ಜಿಲ್ಲಾ ಜನತೆಗೆ ಬಂಗಾರಪ್ಪ ಕುಟುಂಬದ ನಿಲುವು ಹಲವರಿಗೆ ಆಶ್ಚರ್ಯ ತಂದಿದೆ. ಬಂಗಾರಪ್ಪ ಅವರ ಚಿತೆಗೆ ಕಿರಿಯ ಪುತ್ರ ಮಧು ಬಂಗಾರಪ್ಪ ಅಗ್ನಿಸ್ಪರ್ಶ ಮಾಡುವ ಮೂಲಕ ಅಣ್ಣ ತಮ್ಮಂದಿರ ನಡುವಿನ ಕಂದರ ಹೆಚ್ಚಲಿದೆ ಎಂದೇ ಎಲ್ಲರೂ ಭಾವಿಸಿದ್ದಾರೆ.

English summary
Who enjoys the right to perform last rites of the deceased father? Smt. Shakuntala Bangarappa have chosen younger son Madhu Bangarappa over elder son Kumar Bangarappa which is not a practice in Hindu Families. The conflict between father and son (Kumar Bangarappa) continued even after the death of Father, ex-CM of Karnataka S Bangarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X