ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಂಗಾರಪ್ಪ ಯಾರಿಗೂ ಹೆದರೋನಲ್ಲ

By * ಶಾಮ್
|
Google Oneindia Kannada News

Bangarappa, the Party hopper and a marathon runner
ಸೋಮವಾರ ಬೆಳ್ಳಂಬೆಳಗ್ಗೆ ಇಹಲೋಕದ ವ್ಯಾಪಾರ ಮುಗಿಸಿದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರದು ರಂಗ್ ಬಿರಂಗಿ ವ್ಯಕ್ತಿತ್ವ. ನಲವತ್ತೈದು ವರ್ಷದ ರಾಜಕೀಯ ಜೀವನದಲ್ಲಿ ಕೆಲವು ಏರಿಳಿತಗಳನ್ನು ಕಂಡ ಜಗಜಟ್ಟಿ. ದಟ್ಟ ಮಲೆನಾಡಿನ ಸೊಗಡನ್ನು ಮೈತುಂಬ ಮೆತ್ತಿಕೊಂಡು ಬಿಚ್ಚುಮಾತಿಗೆ-ಚುಚ್ಚುಮಾತಿಗೆ ಹೆಸರಾಗಿದ್ದ ಹಿಂದುಳಿದ ವರ್ಗಗಳ ದೊಡ್ಡ ನೇತಾರ. ನಮಗೆ ನಿಮಗೆ ಅವರು ಬಂಗಾರಪ್ಪನವರಾದರೆ ಆಪ್ತ ಮಿತ್ರರಿಗೆ ಅವರು ಕೂಲಿಂಗ್ ಗ್ಲಾಸ್ ಬಂಗಾರಿ.

67ರಿಂದ ಸೊರಬ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಂಗಾರಪ್ಪ ಯಾವ ಪಕ್ಷದ ವತಿಯಿಂದ ಸ್ಪರ್ಧಿಸಿದರೂ ಮತ್ತು ಎದುರಾಳಿ ಎಷ್ಟೇ ಸಮರ್ಥರಾಗಿದ್ದರೂ ವಿಧಾನಸಭಾ ಚುನಾವಣೆಗಳಲ್ಲಿ ಇವರಿಗೇ ಜಯ ಕಟ್ಟಿಟ್ಟಬುತ್ತಿಯಾಗಿ 'ಸೋಲಿಲ್ಲದ ಸರದಾರ' ಬಿರುದು ಪಡೆದಿದ್ದರು. ಆದರೆ ಎಲ್ಲದಕ್ಕೂ ಒಂದು ಅಪವಾದ ಇರುತ್ತದೆ ಎನ್ನುವಂತೆ ಅವರು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದೂ ಉಂಟು. ಆಡುಮುಟ್ಟದ ಸೊಪ್ಪಿಲ್ಲ ನಮ್ಮ ಬಂಗಾರಪ್ಪ ಸೇರದ ಪಕ್ಷವಿಲ್ಲ ಎನ್ನುವ ಹಾಗೆ ಬಂಗಾರಪ್ಪ ಹೆಚ್ಚುಕಮ್ಮಿ ಎಲ್ಲಾ ಪಕ್ಷದ ರುಚಿ ಕಂಡವರೇ.

ವಿವಿಧ ಚುನಾವಣಾ ಚಿಹ್ನೆಗಳಿಂದ ಗೆದ್ದು ದೆಹಲಿಗೆ ಹೋದರೂ ಅವರಿಗೆ ದಿಲ್ಲಿ ಹವಾ ಒಗ್ಗುತ್ತಿರಲಿಲ್ಲ. ಹಾಗೆ ನೋಡಿದರೆ ತಮ್ಮನ್ನು ಸೋಲಿಸಿದ ಆಯನೂರು ಮಂಜುನಾಥ್ ಮತ್ತು ಬಿ ವೈ ರಾಘವೇಂದ್ರ ಅವರಿಗೆ ಬಂಗಾರಿ ಒಂದು ಥ್ಯಾಂಕ್ಸ್ ಹೇಳಬೇಕು. ದೆಹಲಿ ಬಿಜಿನೆಸ್ಸಿಗೆ ಒಗ್ಗಿಕೊಳ್ಳಲಾರದ ಅನೇಕ ಎಂಪಿಗಳು ಕರ್ನಾಟಕದಿಂದ ಹೋಗಿದ್ದಾರೆ. ಕಾಲಾನುಕ್ರಮದಲ್ಲಿ ಅವರ ಬಗ್ಗೆಯೂ ಬರೆಯಲಾಗತ್ತೆ.

ಸಮಾಜವಾದಿ ಪಕ್ಷದಿಂದ ಹಿಡಿದು ಜಾತ್ಯತೀತ ಜನತಾದಳದವರೆಗೆ ಹಲವು ಪಕ್ಷಗಳಿಗೆ ಹೋಗಿಬಂದು ಮಾಡಿದ ಬಂಗಾರಪ್ಪ ಎಲ್ಲೂ ಒಂದ್ಕಡೆ ಸರಿಯಾಗಿ ನೆಲೆಯೂರುವಲ್ಲಿ ವಿಫಲರಾದರು ಎನ್ನುವುದು ಅವರ ರಾಜಕೀಯ ಜೀವನದ ಗಮನಾರ್ಹ ಅಂಶ. ಜಗಮೊಂಡ ಬಂಗಾರಪ್ಪ. ಅಥವಾ ಅದೇ ಅವರ ಹೆಗ್ಗಳಿಕೆಯೋ ಏನೋ. ಕ್ರಾಂತಿರಂಗ ಪಕ್ಷ ಹುಟ್ಟುಹಾಕಿ ಅಷ್ಟೇ ಬೇಗ ಪಕ್ಷವನ್ನು ವಿಸರ್ಜಿಸಿದರೂ ಕೂಡ. ಮೊದಲು ಕಾಂಗ್ರೆಸ್ ಆನಂತರ ಸಮಾಜವಾದಿ ಆನಂತರ ಬಿಜೆಪಿ ಪುನಃ ಕಾಂಗ್ರೆಸ್ ಅಂತಿಮವಾಗಿ ದಳ.. ಹೀಗೆ ಪಕ್ಷದಿಂದ ಪಕ್ಷಕ್ಕೆ ಜಿಗಿಜಿಗಿಯುತ್ತ "ಈ ಬಂಗಾರಪ್ಪ ಯಾರಿಗೂ ಹೆದರೋನಲ್ಲ" ಎಂದು ಹೇಳಹೇಳುತ್ತಲೇ ಶಿವನ ಪಕ್ಷ ಸೇರಿಕೊಂಡದ್ದು ಕಠೋರ ಸತ್ಯ.

ಬಂಗಾರಪ್ಪ ಕಾಂಗ್ರೆಸ್ ಪಕ್ಷದಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ದೇವೇಗೌಡರ ಪಕ್ಷ ಸೇರಿದುದು ನಿಮಗೆ ಗೊತ್ತು. ಇಬ್ಬರೂ ಸಮಾನ ವಯಸ್ಕರು. ಜೆಡಿಎಸ್ ಸಮಾವೇಶಗಳಲ್ಲಿ ಕೆಲವು ಬಾರಿ ಕಾಣಿಸಿಕೊಂಡಿದ್ದ ಬಂಗಾರಪ್ಪ ಆನಂತರ ಅಲ್ಲೂ ಸರಿಯಾಗಿ ತಮ್ಮನ್ನು ತೊಡಗಿಸಿಕೊಳ್ಳಲಾಗಲಿಲ್ಲ. ಒಟ್ಟಿನಲ್ಲಿ ಬಂಗಾರಪ್ಪ ಅವರ ವರ್ಣರಂಜಿತ ರಾಜಕೀಯ ರೈಲು ಕೊನೆಗೆ ಜಾತ್ಯತೀತ ಮೆಟ್ರೊ ನಿಲ್ದಾಣ ತಲಪುವುದರೊಂದಿಗೆ ಪ್ರಯಾಣ ಅಂತ್ಯವಾಯಿತು. ಚಂದ್ರಗುತ್ತಿಯ ದೇವಿ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಬಂಧು ಬಂಧುಮಿತ್ರರಿಗೆ ಶೋಕ ಭರಿಸುವ ಶಕ್ತಿ ನೀಡಲಿ.

ಬಂಗಾರಪ್ಪನವರು ಮುಖ್ಯಮಂತ್ರಿ, ಲೋಕಸಭಾ ಸದಸ್ಯ ಅಧಿಕಾರ ಸ್ಥಾನಗಳಲ್ಲಿ ಕುಳಿತರೂ ತವರೂರು ಸೊರಬದ 'ನಾಗರಿಕ' ಏಳಿಗೆಗೆ ದುಡಿಯಲಿಲ್ಲ ಎಂಬ ಅಪವಾದ ಹೊತ್ತುಕೊಂಡು ಇವತ್ತು ಸ್ವರ್ಗಸ್ಥರಾಗಿದ್ದಾರೆ. ಕರ್ನಾಟಕದ ಅತ್ಯಂತ ಹಿಂದುಳಿದ ಸೊರಬ ತಾಲೂಕಿನ ಬವಣೆಗಳನ್ನು ನೀಗಲು ಅಲ್ಲಿ ಒಬ್ಬ ಹುಟ್ಟಿಬರಲಿ.

English summary
For quite some time to come, Karnataka will remember ex-CM and former Loksabha Member S Bangarappa as a seasoned party hopper and a bold leader. He is also much acclaimed as mass leader of the backward classes. But, sad his very own home town Soraba remains one of the most backward taluks in the State. Is there anyone, in the absence of Bangarappa who can take lead to nourish this under privileged area?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X