ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಮೂರ್ತಿ ಆನಂದೂರು ಪುಸ್ತಕದ ಬಗ್ಗೆ ಯು.ಆರ್.ಅನಂತಮೂರ್ತಿ

By Srinath
|
Google Oneindia Kannada News

ura-on-satyamurthy-anandur-leh-jayenge
ಬೆಂಗಳೂರು, ಡಿ.14: ಸತ್ಯಮೂರ್ತಿ ಆನಂದೂರು ಬರೆದಿರುವ 'ಲೇಹ್ ಜಾಯೇಂಗೆ" ಪುಸ್ತಕದ ಬಿಡುಗಡೆಗೆ ನನಗೆ ಬರಲು ಸಾಧ್ಯವಾಗಿಲ್ಲ, ಕಾರಣ ನನ್ನ ಅನಾರೋಗ್ಯ. ಆದರೆ ನಾನು ತುಂಬಾ ಮೆಚ್ಚಿದ ಪುಸ್ತಕಗಳಲ್ಲಿ ಇದೂ ಒಂದು. ಮೊದಲಿನಿಂದ ಕೊನೆಯ ತನಕ ಸುಸ್ತಾಗದಂತೆ ಓದಿದ್ದೇನೆ. ಪುಸ್ತಕದ ಬಗ್ಗೆ ಜೋಗಿ ಬರೆದ ಮಾತುಗಳನ್ನು ಸಂಪೂರ್ಣ ಒಪ್ಪುತ್ತೇನೆ. ತೇಜಸ್ವೀ ಬರಹದ ಹಾಸ್ಯ, ಹಗುರ ಜೊತೆಗೆ ದಟ್ಟತೆ ಈ ಪ್ರವಾಸ ಕಥನದಲ್ಲಿದೆ.

ಅತ್ಯುತ್ತಮ ಪ್ರವಾಸ ಕಥನದ ಹಿಂದಿರುವ ಗುಣ ಲೇಖಕನ ಕುತೂಹಲದ ಶಕ್ತಿ. ಕುತೂಹಲ ತನ್ನಷ್ಟಕ್ಕೇ ಮೌಲ್ಯಯುತವಾದದ್ದೇನೂ ಅಲ್ಲ. ಯಾವ ಬಗೆಯ ಕೂತೂಹಲ ಎಂಬುದು ಮುಖ್ಯ. ಇದು information ಗಳನ್ನು ಒದಗಿಸುವ ಯುಗ ಆಗಿಹೋಗಿದೆ. ಓದುಗನ ಕುತೂಹಲವನ್ನು ತಣಿಸುವುದಕ್ಕಾಗಿಯೇ ಉದ್ದೇಶಪೂರಕವಾಗಿ ಹುಡುಕಿ ಹುಡುಕಿ ವಿವರಗಳನ್ನು ನೋಟ್ ಬುಕ್ ನಲ್ಲಿ ಬರೆದಿಟ್ಟು, ಆಮೇಲೆ ಆಕರ್ಷಕವಾಗಿ ಬರೆದಿರುವ ಎಷ್ಟೋ ಪ್ರವಾಸ ಕಥನಗಳಿವೆ. ಅವುಗಳನ್ನೆಲ್ಲಾ ನಾವು ಮರೆತುಬಿಡುತ್ತೇವೆ.

ನಾನು ಕಂಡಿದ್ದನ್ನು ನಾನು ಬರೆಯಲಿದ್ದೇನೆ ಎಂಬ ಪೂರ್ವ ನಿಶ್ಚಯದಿಂದ ಅನುಭವಿಸಿದ ಪ್ರವಾಸ ಕಥನ ಇದಲ್ಲ. ಎಲ್ಲ ಅನುಭವಗಳಿಗೂ ಮೈಯೊಡ್ಡಿಕೊಂಡು ತನ್ನೊಳಗೆ ತನ್ನಿಂದ ತಾನೇ ಧಾಕಲಾಗುವ ವಿವರಗಳನ್ನು ನಮಗೆ ಕಾಣುವಂತೆ ಮಾಡುವ ಈ ಬರವಣಿಗೆಗೆ ಸದ್ಯತನದ ಒಂದು ಗುಣವಿದೆ. ಸತ್ಯಮೂರ್ತಿ ಏನನ್ನಾದರೂ ಹೇಳುವುದರಲ್ಲೇ ಒಂದು ಸೊಗಸಿದೆ. ಇಲ್ಲಿ ನೋಡಿ, ನಮಗೆಲ್ಲರಿಗೂ ಚಳಿಯ ಅನುಭವವಾಗಿರುತ್ತದೆ. ಆದರೆ ಅವರು ಕೊಡುವ ಈ ವಿವರದಲ್ಲಿ ಆಗುವ ಚಳಿ ನೀವೇ ಪಡುವ ಚಳಿಯಾಗಿಬಿಡುತ್ತದೆ.

''ಹೊದ್ದಿದ್ದ ಎರಡು ಶಾಲುಗಳು ಕಾಲಿಗೆ ಬಂದರೆ ಎದೆಯಿಂದ ಮೇಲೆರದೇ, ಮೇಲೆಳೆದುಕೊಂಡರೆ ಕಾಲಿಗೆ ಸಿಗದೆ ಪಜೀತಿ ಮಾಡಿದ್ದವು''. ತೇಜಸ್ವಿ ನೆನಪಾಗುವುದು ಅಥವಾ ಕಡಿದಾಳ್ ಶಾಮಣ್ಣ ನೆನಪಾಗುವುದು ಈ ಬಗೆಯ ವಿವರಗಳಲ್ಲಿ.

ದಿಲ್ಲಿ ಬಿಟ್ಟು ಹರಿಯಾಣದ ದಾರಿಯಲ್ಲಿ ಬಸ್ ಸಾಗತೊಡಗಿದಾಗ ಒಂದು ಬೆಳಗಿನ ಜಾವ ಆದ ಅನುಭವ ನಮ್ಮ ತೀರ್ಥಹಳ್ಳಿ ಕಡೆಯಿಂದ ಹುಟ್ಟಿ ಬಂದ ಸತ್ಯಮೂರ್ತಿಗೆ ಆದದ್ದು ಹೀಗೆ. 'ಬೆಳಗಿನ ಜಾವದ ಆ ಬೆಳಕು ಬೆಳದಿಂಗಳಂತೆ ಎಲ್ಲೆಲ್ಲೂ ಹರಡತೊಡಗಿತು. ಗಾಜಿನ ಕಿಟಕಿಯನ್ನು ಪೋರ್ತಿ ಸರಿಸಿ ಗಾಳಿಗೆ ಮುಖ ಇಟ್ಟು ಅನಂತ ದೂರದವರೆಗೆ ಕಣ್ಣು ಹಾಯಿಸತೊಡಗಿದೆ. ಬಸ್ಸಿನೊಳಗೆ ಗದ್ದೆಯ ವಾಸನೆ ತುಂಬಿ ತುಂಬಿ ಬರುತ್ತಿತ್ತು. ನಾಟಿಯಾಗಿ ಎರಡು ತಿಂಗಳಾದಾಗ ಭತ್ತದ ಸಸಿ ಹೊಡೆ ಒಡೆಯುತ್ತದೆ. ಅಂದರೆ ಸಸಿ ದೊಡ್ಡದಾಗಿ, ಪುಷ್ಠಿಯಾಗಿ ಬೆಳೆದು ಒಂದೆರಡು ಗೆಣ್ಣುಗಳು ಹೊರಬಂದು ನೆಡುವಾಗ ಇದ್ದ ನಾಲ್ಕು ಎಸಳಿನ ಸಸಿ ಹತ್ತು ಹನ್ನೆರಡು ಎಸಳಿನ ಗಟ್ಟಿ ಬುಡವಾಗಿ ಯವ್ವನ ತುಂಬಿ ಬೆಳೆದಿರುತ್ತದೆ. ಇನ್ನೇನು ಅದು ಭತ್ತದ ಹಸಿರು ತೆನೆಯೆ ಗರ್ಭ ಧರಿಸಲು ಸಿದ್ದವಾಗಿದೆ ಎಂದರ್ಥ. ಆಗ ಇಡೀ ಗದ್ದೆಯ ಕೋಗು ಕಪ್ಪು ಹಸಿರಿನಿಂದ ತುಂಬಿಕೊಳ್ಳುತ್ತದೆ. ಇಡೀ ಪರಿಸರವೆಲ್ಲಾ ಹರೆಯ ತುಂಬಿದ ಬತ್ತದ ಸಸಿಯಿಂದ ಹೊಮ್ಮುವ ಪರಿಮಳದಿಂದ ಘಂ ಎನ್ನುತ್ತಿರುತ್ತದೆ".

ಇನ್ನೊಂದು ಮರೆಯಲಾರದ ಹಡಿಂಬಾ ಟೆಂಪಲ್ ಎಂಬ ಬೋರ್ಡನ್ನು ಪಡೆದಿದ್ದ ಮನಾಲಿಯಲ್ಲಿ ಆದ ಅನುಭವ. ಮನಾಲಿಗಿರುವ ಹೆಸರುಗಳು 'ದೇವತೆಗಳ ಕಣಿವೆ' ಮತ್ತು 'ಗಂಧರ್ವರ ಸೀಮೆ'. ಆದರೆ ಸತ್ಯಮೂರ್ತಿಗೆ ಬಿಯಾಸ್ ನದಿ ಅನುಸರಿಸಿಯೇ ಮನಾಲಿ ಸೇರಿದಾಗ ಅವಳೊಬ್ಬ ಸಾಮಾನ್ಯ ಸುಂದರಿಯಂತೆ ಮಾತ್ರ ಕಂಡಿದ್ದಳು. ಅವರು ಇಳಿದುಕೊಂಡ ಹೋಟೆಲ್ ನ ಕೋಣೆಯಲ್ಲಿ ಇಡೀ ಛಾವಣಿಗೇ ಕನ್ನಡಿಯನ್ನು ಹಾಕಲಾಗಿತ್ತು. ಇದೇನು ಉತ್ತರ ಭಾರತದಲ್ಲಿ ಎಲ್ಲಾ ಉಲ್ಟಾ ಆಗಿದೆ ಎಂದು ಇವರು ಮಾತನಾಡಿಕೊಳ್ಳುತ್ತಿದ್ದಂತೆ, ಒಬ್ಬ ಗೂರ್ಖಾ ಹುಡುಗ- ಪರಿಚಾರಕ ಇವರಿಗೆ ಹೇಳುತ್ತಾನೆ. 'ಮಂಚದ ಮೇಲೆ ಮಲಗಿದವರಿಗೆ ತಾವು ಮಲಗಿದ ಆಸನದಲ್ಲಿ ವಿವಿಧ ಬಂಗಿಗಳು ತಮ್ಮ ಕಣ್ಣ ಮುಂದೆಯೇ ಗೋಚರವಾಗಲು, ಹನಿಮೂನ್ ಆಚರಿಸಲು ಬಂದ ಗಂಡು ಹೆಣ್ಣುಗಳಿಗೆ ತಮ್ಮೆಲ್ಲ ರಾಸಲೀಲೆಗಳು ಅಧ್ಬುತ ವೀಡಿಯೋ ಚಿತ್ರಗಳಂತೆ ಕಾಣಲು ಈ ವ್ಯವಸ್ಥೆ ಮಾಡಲಾಗಿರುವುದು ಎಂಬುದು ಅರಿವಾಗುತ್ತದೆ.

English summary
U R Ananthamurthy on Satyamurthy Anandur's book Leh Jayenge. A Traveller's Story by Senior journalist Satyamurthy Anandur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X