ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ತಂತ್ರಾಂಶ ಹಿಂದುಳಿದಿದೆ, ತಂತ್ರಜ್ಞರು ಮುಂದಿದ್ದಾರೆ

By Mahesh
|
Google Oneindia Kannada News

OmShivaraPrakash
ಬಹಳಷ್ಟು ಪ್ರಶ್ನೆಗಳು ನಮ್ಮನ್ನು ಮತ್ತೆ ಮತ್ತೆ ಕಾಡುತ್ತವೆ. ಅದರ ಮಧ್ಯದಲ್ಲೇ ನಮ್ಮ ಕನ್ನಡ ತಂತ್ರಜ್ಞಾನದ ಹಾದಿಯಲ್ಲಿ ಮುನ್ನೆಡೆಯಲು ಹತ್ತಾರು ದಾರಿಗಳೂ ತೆರೆದುಕೊಳ್ಳುತ್ತಿವೆ. ಉತ್ತರಗಳೂ ಇವೆ. ಅದರ ಒಂದು ಉತ್ತರ ಸ್ವತ: ಕನ್ನಡಿಗರೇ ಆಗಿದ್ದಾರೆ.

ಉದಾಹರಣೆಗೆ : ಕನ್ನಡದಲ್ಲಿ ಇಂಟರ್ನೆಟ್ ಪುಟಗಳನ್ನು ಆಲಿಸಲಿಕ್ಕೆ ಸಾಧ್ಯವಾದದ್ದು ಶಿವಮೊಗ್ಗದ ತಜ್ಞ ಶ್ರೀಧರ್ ಅವರಿಂದ. ತಮ್ಮ ಅಂಧತ್ವಕ್ಕೆ ಉತ್ತರ ಹುಡುಕಿಕೊಳ್ಳಲು ಹೊರಟು, ಸಫಲರಾಗಿ ತಮ್ಮ ಫಲಶ್ರುತಿಯನ್ನು GPL ಲೈಸೆನ್ಸಿನಡಿ ಬಿಡುಗಡೆ ಮಾಡಿರುವುದು ಇತ್ತೀಚಿನವಿಶ್ವ ಕನ್ನಡ ಸಮ್ಮೇಳನದ ಸಮಯದಲ್ಲಿ ಬೆಳಕಿಗೆ ಬಂತು.

ಅದನ್ನೇ ಈಗ ಕರ್ನಾಟಕ ಸರ್ಕಾರದ ಕಣಜ ಯೋಜನೆಯಲ್ಲಿ ಬಳಸಿಕೊಂಡಿರುವುದು. ಇಂತದ್ದೊಂದು ತಂತ್ರಜ್ಞಾನದ ಸಂಶೋಧನೆ ಕನ್ನಡಕ್ಕಾಗಿ 2002ರಆಸುಪಾಸಿನಲ್ಲೇ ನೆಡೆದರೂ, ಅದರ ಫಲಶ್ರುತಿಯನ್ನು ಇದುವರೆಗೂ ನಾವು ಪಡೆಯದಿದ್ದದ್ದು ಕನ್ನಡದ ದುರಾದೃಷ್ಟವೇ ಸರಿ.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ಜನರ ಬೇಡಿಕೆಗೆ ಅನುಗುಣವಾಗಿ, ಜನರಿಂದಲೇ ಜನರಿಗಾಗಿ ಅಭಿವೃದ್ಧಿ ಪಡಿಸಲಾದಂತಹವು. ಪರಿಣಿತರ ತಂಡಗಳು ತಂಡೋಪತಂಡವಾಗಿ, ಸಮುದಾಯದ ಮುಖೇನ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ.

ಇಂತಹ ಯೋಜನೆಗಳ ಫಲಿತಾಂಶಗಳು ಸಮುದಾಯಕ್ಕೆ ಯಾವಾಗಲೂ ದೊರೆಯಲಿ ಎಂಬ ಉದ್ದೇಶದಿಂದ ಅವುಗಳನ್ನು ಜನರಲ್ ಪಬ್ಲಿಕ್ ಲೈಸೆನ್ಸ್ (GPL) ಪರವಾನಗಿಯಡಿ ಬಿಡುಗಡೆ ಮಾಡಲಾಗುತ್ತದೆ. ಈ ತಂತ್ರಾಂಶಗಳನ್ನು ಉಚಿತವಾಗಿ ಪಡೆಯಬಹುದಾದ್ದರಿಂದ ನಮಗೆ ತಂತ್ರಾಂಶ ಪೈರಸಿಯ ಭೂತದಿಂದ ದೂರ ಇರಲು ಸಾಧ್ಯವಾಗುತ್ತದೆ.

ಇಲ್ಲವಾದಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಈ ಕತೆ ಕೇಳಿ.

ಡಿಟಿಪಿ ಸಮಸ್ಯೆಗೆ ಪರಿಹಾರ ಇದೆಯೇ?: ಮೊನ್ನೆ ಮೈಸೂರಿನ ಕೆಲವು ಡಿ.ಟಿ.ಪಿ ಕೇಂದ್ರಗಳ ಮೇಲೆ ಐ.ಟಿ ಕಂಪೆನಿಗಳ ದಾಳಿ ನೆಡೆಯಿತು. ಪುಸ್ತಕ, ಛಾಯಾಚಿತ್ರಗಳ ಸಂಸ್ಕರಣೆ ಮತ್ತು ಪರಿಷ್ಕರಣೆಗೆ ಬೇಕಾದ ತಂತ್ರಾಂಶಗಳನ್ನು ಪರವಾನಗಿ ಪಡೆಯದೆ ಬಳಸುತ್ತಿದ್ದುದ್ದು ಈ ದಾಳಿಗೆ ಮುಖ್ಯ ಕಾರಣ.

ಡಿ.ಟಿ.ಪಿ/ಮುದ್ರಣ ವ್ಯವಸ್ಥೆಗೆ ಬೇಕಾದ ತಂತ್ರಜ್ಞಾನ ಕೆಲವೊಮ್ಮೆ ಲಕ್ಷಾಂತರ ರೂಪಾಯಿ ಬಂಡವಾಳವನ್ನು ಬಯಸುತ್ತದೆ. ಕೇವಲ ಸಾವಿರಗಳಲ್ಲಿ ದೊರೆಯುವ ಆಪರೇಟಿಂಗ್ ಸಿಸ್ಟಂಗಳನ್ನೇ ಕೊಳ್ಳಲು ಹಿಂಜರಿದು ಪೈರಸಿಯ ಮೊರೆ ಹೋಗುವ ನಾವುಗಳು, ಲಕ್ಷಾಂತರ ರೂಪಾಯಿ ಕೊಟ್ಟು ಫೋಟೊಶಾಪ್, ಕೋರಲ್ ಡ್ರಾ ನಂತಹ ತಂತ್ರಾಂಶಗಳನ್ನು ಕೊಳ್ಳುತ್ತಿದ್ದೇವೆಯೇ? ಇಲ್ಲ.

ಹಾಗಿದ್ದಲ್ಲಿ ಇವುಗಳಿಗೆ ಪರ್ಯಾಯ ತಂತ್ರಾಂಶಗಳು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು. ಅವುಗಳ ಸ್ಥಿತಿಯೂ ಆಷ್ಟೇನೂ ಚೆನ್ನಾಗಿಲ್ಲ. ಗಿಂಪ್, ಇಂಕ್‌ಸ್ಪೇಸ್ , ಲಿಬ್ರೆ ಅಥವಾ ಓಪನ್ ಆಫೀಸ್‌ಗಳಲ್ಲಿ ಕನ್ನಡವನ್ನು ಬಳಸಬಹುದಾದರೂ ಡಿ.ಟಿ.ಪಿಗೆ ಬೇಕಾದ ಸ್ಕ್ರೈಬಸ್ ಎಂಬ ತಂತ್ರಾಂಶದಲ್ಲಿ ಕನ್ನಡ ಬಳಸಲಿಕ್ಕೆ ಸಾಧ್ಯವಿಲ್ಲ. ಹೀಗೆ ಪಟ್ಟಿ

ಮಾಡುತ್ತಾ ಹೋದಲ್ಲಿ ಕನ್ನಡಿಗ ತನ್ನ ದಿನನಿತ್ಯದ ಕೆಲಸಗಳಿಗೆ ಬಳಸಲು ಬೇಕಿರುವ ತಂತ್ರಜ್ಞಾನದ ಮತ್ತು ತಂತ್ರಾಂಶಗಳ ದೊಡ್ಡ ಪಟ್ಟಿಯೇ ನಮ್ಮ ಮುಂದೆ ಬರುತ್ತದೆ.

ಕನ್ನಡ ಡಿಕ್ಷನರಿ - ಸ್ಪೆಲ್‌ಚೆಕ್ - ಗ್ರಾಮರ್ ಚೆಕ್ - ಟೆಕ್ಸ್ ಟು ಸ್ಪೀಚ್ - ಸ್ಪೀಚ್ ಟು ಟೆಕ್ಸ್ಟ್ (ವ್ಯಾಕರಣ ಸಂಸ್ಕರಣೆಗೆ ಸಂಬಂಧಪಟ್ಟ ತಂತ್ರಾಂಶಗಳು) - ಭಾಷೆಗೆ ಇವು ಬಹುಮುಖ್ಯ. ಲಕ್ಷಾಂತರ ಪದಗಳ ಭಂಡಾರ ನಮ್ಮ ಕನ್ನಡ. ಅವುಗಳ ಉಪಯೋಗವಾಗಬೇಕಾದ್ದು ದೈನಂದಿನ ಬದುಕಿನಲ್ಲಿ. ಕನ್ನಡಿಗ ಟೈಪಿಸುವಾಗ.

ಇಂದಿನ ದಿನದಲ್ಲಿ ಕಂಪ್ಯೂಟರ್ ನಲ್ಲಿ ವ್ಯವಹರಿಸುವ ಕನ್ನಡಿಗ, ಕನ್ನಡವನ್ನು ಮರೆಯದಿರುವಂತೆ ಮಾಡಲು ಕನ್ನಡ ನಿಘಂಟು, ಪದಗಳು ಮತ್ತು ವಾಕ್ಯಗಳನ್ನು ಪರೀಕ್ಷಿಸುವ ತಂತ್ರಜ್ಞಾನ, ಸುಲಭವಾಗಿ ಯಾರು ಬೇಕಾದರೂ ಕನ್ನಡ ಓದಲು ಮತ್ತು ಬರೆಯಲು - ಸಾಧ್ಯವಾಗಿಸುವ ತಂತ್ರಾಂಶಗಳು ಕಂಪ್ಯೂಟರಿನಲ್ಲಿ ಇರಬೇಕಿದೆ. ಇವುಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಮ್ಮಿಂದ ಸಾಧ್ಯ.

ಕನ್ನಡಿಗರ ಸಮುದಾಯ ಅನೇಕ ಗುಂಪುಗಳು, ಬಣಗಳು ಇತ್ಯಾದಿಯಾಗಿ ಒಡೆದಿದೆ. ಎಲ್ಲರಿಗೂ ಕನ್ನಡದ ಮೇಲೆ ಪ್ರೀತಿಯೇ. ಆದರೆ ತಂತ್ರಜ್ಞಾನದ ಮಟ್ಟಿಗೆ ಕನ್ನಡ ಬೆಳೆಯದಿದ್ದರೆ, ಮುಂದೊಂದು ದಿನ ಕನ್ನಡವನ್ನು ಮರೆಯ ಬೇಕಾದೀತು.

ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಸಿಂಗ್ - ಅಂದರೆ ಸಹಜ ಭಾಷಾ ಪರಿಷರಣೆಯ ತಂತ್ರಜ್ಞಾನ ಅಭಿವೃದ್ಧಿಗೊಂಡಲ್ಲಿ ಮೇಲೆ ಹೇಳಿದ ಓ.ಸಿ.ಆರ್, ಕೈ ಲಿಪಿ ಪರಿಶೋಧಕ, ವ್ಯಾಕರಣದ ತಂತ್ರಾಂಶಗಳು ಇತ್ಯಾದಿಗಳು ನಮ್ಮೆದುರಿಗೆ ಬರುತ್ತವೆ.

ಕನ್ನಡಿಗರು ಮನಸ್ಸು ಮಾಡಿದರೆ ಸಾಧ್ಯ: ನಮ್ಮಲ್ಲಿ ಅದೆಷ್ಟೋ ಸಾಫ್ಟ್ವೇರ್ ಕಂಪೆನಿಗಳಿವೆ. ಅದರಲ್ಲಿ ಅದೆಷ್ಟೋ ಕಂಪೆನಿಗಳು ಕನ್ನಡಿಗರದ್ದೇ. ಅಲ್ಲಿ ಕೆಲಸ ಮಾಡುವ ಕನ್ನಡಿಗರ ಸಂಖ್ಯೆಯೂ ಬಹಳವಿದೆ. ಜೊತೆಗೆ, ಎಂಜಿನಿಯರಿಂಗ್, ಸ್ನಾತಕೋತ್ತರ ಪದವಿ, ಕಲೆ, ಸಾಹಿತ್ಯ, ಭಾಷೆ, ಇತಿಹಾಸ ಹೀಗೆ ವೈವಿಧ್ಯಮಯ ವಿಷಯಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿದ್ದಾರೆ.

ಎಲ್ಲರೂ ತಿಂಗಳಿಗೊಮ್ಮೆ ಒಂದೆರಡು ತಾಸು ಕನ್ನಡಕ್ಕೆ ಸಮಯ ನೀಡಬಹುದಲ್ಲವೇ? ನೀಡಿದಲ್ಲಿ ವಿಶ್ವದಲ್ಲೇ ಅತಿದೊಡ್ಡ ಸಮುದಾಯದ ಶಕ್ತಿ ಕನ್ನಡ ಭಾಷೆಯ ತಾಂತ್ರಿಕ ಬೆಳವಣಿಗೆಗೆ ನಿಂತತಾಗುತ್ತದೆ.

ನಮ್ಮೆಲ್ಲರ ಹೆಮ್ಮೆಯ ಸಾಹಿತಿಗಳು, ಲೇಖಕರು, ಭಾಷಾ ತಂತ್ರಜ್ಞರು, ಅಧ್ಯಾಪಕರು ಮತ್ತು ಪುಸ್ತಕ ಪ್ರೇಮಿಗಳ ಸಮುದಾಯ ಕಂಪ್ಯೂಟರೀಕೃತ ಡಿಕ್ಷನರಿ ಇತ್ಯಾದಿಗಳಲ್ಲಿ ತಮ್ಮನ್ನು ತಾವೇ ಸ್ವಇಚ್ಚೆಯಿಂದ, ನಿಸ್ವಾರ್ಥಸೇವೆಗೆ ತೊಡಗಿರುವ ಕನ್ನಡಿಗರಿಗೆ 1.50 ಲಕ್ಷ ಪದಗಳ ದೊಡ್ಡ ಕೋಶವನ್ನೇ ಹೊಂದಿರುವ

ವಿಕ್ಷನರಿ ಮಾದರಿ: ವಿಕ್ಷನರಿ(ವಿಕಿಪೀಡಿಯಾದ ಮತ್ತೊಂದು ಯೋಜನೆ ), ವ್ಯಾಕರಣ ಸಂಬಂಧಿತ ತಂತ್ರಾಂಶ ಯೋಜನೆಗಳಲ್ಲಿ ತಂತ್ರಜ್ಞಾನ ತಿಳಿದ ಯುವಜನಾಂಗದ ಜೊತೆಗೆ ಬೆರೆತು ಸಹಕರಿಸಬಹುದು.

ಇತ್ತೀಚೆಗೆ ಗೂಗಲ್ ತನ್ನ ವೆಬ್‌ಸೈಟ್ ನಲ್ಲಿ ಬಿಡುಗಡೆಗೊಳಿಸಿದ ಕನ್ನಡ ಟ್ರಾನ್ಸ್ಲೇಷನ್ ‌ನಲ್ಲಿ ಕಂಡುಬರುತ್ತಿದ್ದ ತೊಂದರೆಗಳನ್ನು ತಪ್ಪಿಸಲು, ನಾವೆಲ್ಲ ಒಟ್ಟಿಗೆ ಕೂತು ಅಭಿವೃದ್ಧಿ ಪಡಿಸಬಹುದಾದ ತಂತ್ರಾಂಶ, ಪದಗುಚ್ಛಗಳು ಇತ್ಯಾದಿಗಳನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಒಂದೆಡೆ ಅಧಿಕೃತವಾಗಿ ಸಿಗುವಂತೆ ಮಾಡುವ ಮೂಲಕ ಎಲ್ಲರೂ ಮತ್ತೆ ಮತ್ತೆ ಅದೇ ಅಭಿವೃದ್ಧಿಕಾರ್ಯಗಳನ್ನು ಮಾಡುವುದನ್ನು ತಡೆದು ಮುಂದೆ ಹೆಜ್ಜೆ ಇಡುವಂತೆ ಮಾಡಲು ಸಹಕಾರಿಯಾಗುತ್ತದೆ.

ಕನ್ನಡ ನಾಡಿನ ಸರ್ಕಾರಿ, ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಕನ್ನಡ ಬಳಕೆ - ತಂತ್ರಜ್ಞಾನದ ಅವಶ್ಯಕತೆ ಎಲ್ಲರಿಗೂ ಇದ್ದದ್ದೇ. ಕರ್ನಾಟಕದ ಸಂಘ ಸಂಸ್ಥೆಗಳು ತಮಗೆ ಬೇಕಿರುವ ತಂತ್ರಜ್ಞಾನ ಮತ್ತು

ತಂತ್ರಾಂಶಗಳ ಬೇಡಿಕೆಯನ್ನು ಪೂರೈಸುವ ಕಂಪೆನಿಗಳಿಗೆ ಆಡಳಿತ ಭಾಷೆ ಕನ್ನಡದಲ್ಲೇ ಅವು ಕೆಲಸ ಮಾಡಬೇಕು ಎಂದು ಆಗ್ರಹಿಸಬಹುದು.

ಅಥವಾ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ, ಕನ್ನಡ ಭಾಷೆಗೆ ಬೇಕಿರುವ ತಂತ್ರಜ್ಞಾನ ಮತ್ತು ತಂತ್ರಾಂಶಗಳ ಅಭಿವೃದ್ಧಿಗೆ ಸ್ಪರ್ಧೆಗಳನ್ನು ಆಯೋಜಿಸಿ ಎಂ. ಐ.ಟಿ , ಹಾರ್ವರ್ಡ್ , ಸ್ಟಾಂಡ್‌ಫೋರ್ಡ್ ಇತ್ಯಾದಿ ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿರುವ
ವಿದ್ಯಾರ್ಥಿಗಳಿಗಿರುವ ಸ್ಪರ್ಧಾಥ್ಮಕ ಜಗತ್ತನ್ನು ಸೃಷ್ಟಿಸಬಹುದು.

ಇದರಿಂದ ಉಪಯೋಗ ಕನ್ನಡಿಗರಿಗೇ. ನಮ್ಮ ನೆಲದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಸೃಷ್ಟಿಗೆ ನಾವುಗಳೇ ಕಾರಣರಾಗುತ್ತೇವೆ. ನಮ್ಮಲ್ಲೂ ಗೂಗಲ್, ಆಪಲ್, ಮೈಕ್ರೋಸಾಫ್ಟ್ ನಂತಹ ಧೈತ್ಯ ಕಂಪೆನಿಗಳು ಮಾಡುತ್ತಿರುವ 'ಇನೋವೇಷನ್'ಗಳನ್ನೂ ನಾಚಿಸುವ ಆವಿಷ್ಕಾರಗಳನ್ನು ಹುಟ್ಟುಹಾಕುವ ಉದ್ಯಮಿಗಳು ಮುಂದೆಬರಬಹುದು. ಕರ್ನಾಟಕದ ಕನ್ನಡ ಜನತೆಗೆ ಹೆಚ್ಚಿನ ಉದ್ಯೋಗಾವಕಾಶ, ಕನ್ನಡದ ನೆಲದಲ್ಲಿ ಸಾಫ್ಟ್ವೇರ್ ತಂತ್ರಜ್ಞಾನ ಅಭಿವೃದ್ಧಿಗೆ ಇಳಿಯುವ ಕಂಪೆನಿಗಳಿಗೆ ಇಲ್ಲಿನ ನೆಲ ಜಲದ ಜೊತೆಗೆ ಭಾಷೆಯ ಬಗೆಗೂ ಸ್ವಲ್ಪ ಅಭಿಮಾನ ಬೆಳೆಸಿಕೊಳ್ಳುವ ವಾತಾವರಣ ಇದರಿಂದ ಸೃಷ್ಟಿಯಾಗಲಿದೆ.

ಯಾವುದೇ ಸರ್ಕಾರಿ ಹಾಗೂ ಸರ್ಕಾರೇತರ ಸಂಘಸಂಸ್ಥೆಗಳು, ಶಾಲಾ ಕಾಲೇಜುಗಳು,
ವಿಶ್ವವಿದ್ಯಾನಿಲಯಗಳು ತಮಗೆ ಬೇಕಿರುವ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸ್ವಾವಲಂಬನೆಯನ್ನು ಕೂಡಾ ಹೊಂದಬಹುದು.

English summary
78th Kannada Sahitya Sammelna, Gangavathi: Seminar speech by Software techie OmShivaprakash on Information and technology with Kannada software future. Speech copy highlights on the day to day basis use of Kannada softwares and developments. Role of Wikipedia Kannada and making social network sites like facebook and orkut in local languages is important.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X