ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿಯಲ್ಲಿಯೂ ಕನ್ನಡದ ಬುಡ ಅಲ್ಲಾಡುತ್ತಿದೆ : ಸಿಪಿಕೆ

By Prasad
|
Google Oneindia Kannada News

Dr. CP Krishnakumar
ಗಂಗಾವತಿ, ಡಿ. 9 : 'ಹಳ್ಳಿಗಳಲ್ಲಿಯೂ ಕನ್ನಡದ ಬುಡ ಅಲ್ಲಾಡುತ್ತಿದೆ. ಕನ್ನಡ ಮಮ್ಮಿ ಸ್ಥಿತಿ ತಲುಪಿದೆ. ಕನ್ನಡವನ್ನು ನಾವು ಉಳಿಸಿದರೆ, ಕನ್ನಡ ನಮ್ಮನ್ನು ಉಳಿಸುತ್ತದೆ. ಎಲ್ಲ ಕನ್ನಡಿಗರೂ ನಿತ್ಯ ಕನ್ನಡಿಗರಾಗಬೇಕು. ಕನ್ನಡ ಉಳಿಸಿ ಬೆಳೆಸಲು ಕಂಕಣಬದ್ಧರಾಗಬೇಕು' ಎಂದು ಕರೆ ನೀಡಿರುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಿಪಿ ಕೃಷ್ಣಕುಮಾರ್ ಅವರು ಕರ್ನಾಟಕದ ಅಕ್ಕಿಯ ಕಣಜದಲ್ಲಿ ಕನ್ನಡ ಡಿಂಡಿಮ ಬಾರಿಸಿದ್ದಾರೆ.

ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಅದ್ಧೂರಿಯಾಗಿ ಆರಂಭಗೊಂಡರೂ ಕನ್ನಡ ಶಾಲೆ ಮುಚ್ಚಬಾರದೆಂದು ಆಗ್ರಹಿಸಿದ ಕನ್ನಡಿಗರ ಮೇಲೆ ನಡೆದ ಲಾಠಿ ಪ್ರಹಾರ, ಪುಸ್ತಕ ಮಳಿಗೆಗಳಲ್ಲಿ ಕಂಡ ಅವ್ಯವಸ್ಥೆ ಸಾಹಿತ್ಯ ಸಮ್ಮೇಳನಕ್ಕೆ ಮೊದಲ ದಿನವೇ ಕಪ್ಪುಚುಕ್ಕೆಯನ್ನಿಟ್ಟಿವೆ. ಪುಂಖಾನುಪುಂಖವಾಗಿ ಬರುತ್ತಿರುವ ದೂರುಗಳು ಗಂಗಾವತಿಯಲ್ಲಿ ವಿವಾದದ ಧೂಳೆಬ್ಬಿಸಿವೆ.

ಕನ್ನಡ ಶಾಲೆ ಮುಚ್ಚಬೇಡಿ : ಶಾಲೆಯಲ್ಲಿ ಒಬ್ಬೇ ಒಬ್ಬ ವಿದ್ಯಾರ್ಥಿಯಿದ್ದರೂ ಸರಕಾರ ಕನ್ನಡ ಶಾಲೆ ನಡೆಸಬೇಕು, ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಷೋಷಿಸಿದ ಮೈಸೂರು ಮೂಲದ ಸಾಹಿತಿ, ವಿಮರ್ಷಕ ಸಿಪಿ ಕೃಷ್ಣಕುಮಾರ್ ಅವರು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಲಾಠಿ ಏಟು ತಿಂದ ಕನ್ನಡ ಹೋರಾಟಗಾರರ ಗಾಯಕ್ಕೆ ಮುಲಾಮು ಹಚ್ಚಿದರು ಮತ್ತು ನೆರೆದಿದ್ದ ಸಾವಿರಾರು ಕನ್ನಡಿಗರ ಚಪ್ಪಾಳೆ ಗಿಟ್ಟಿಸಿದರು.

ಇಂಗ್ಲಿಷ್ ಗುಲಾಮಗಿರಿಯ ಸಂಕೇತ : ಕನ್ನಡ ಒಂದು ಭಾಷೆಯಷ್ಟೇ ಅಲ್ಲ, ಅದು ಒಂದು ಸಂಸ್ಕೃತಿ. ಇಂಗ್ಲಿಷ್ ಭಾಷೆ ಗೊತ್ತಿಲ್ಲ ಅಂತ ಕನ್ನಡಿಗರು ಕೀಳರಿಮೆ ಅನುಭವಿಸಬಾರದು. ಗುಲಾಮಗಿರಿಯ ಸಂಕೇತವಾಗಿರುವ ಇಂಗ್ಲಿಷನ್ನು ತ್ಯಜಿಸಿ ಕನ್ನಡವನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಅವರು ಸರಕಾರಕ್ಕೆ ಕಿವಿಮಾತು ಹೇಳಿದರು. ಹಾಗೆಯೆ, ಕನ್ನಡವನ್ನು ಅವಮಾನಿಸುತ್ತಿರುವ ಮರಾಠಿಗರ ಪುಂಡಾಟಿಗೆ ಕೊನೆ ಹಾಡಬೇಕು ಎಂದು ಅವರು ಕರೆ ನೀಡಿದರು.

ಅವ್ಯವಸ್ಥೆಯ ಆಗರ : ಅಚ್ಚುಕಟ್ಟಾಗಿ ಮಾಡಿದ ವ್ಯವಸ್ಥೆ ಏರುಪೇರಾಗದಿದ್ದರೆ ಕನ್ನಡ ಸಮ್ಮೇಳನವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಸಮ್ಮೇಳನಗಳಲ್ಲಿ ಅವ್ಯವಸ್ಥೆಗಳು ಹಾಸುಹೊಕ್ಕಾಗಿರುತ್ತವೆ. ಪ್ರತಿಬಾರಿ ಹದಗೆಡುವ ಊಟದ ವ್ಯವಸ್ಥೆ ಇಲ್ಲಿ ಉತ್ತಮವಾಗಿದ್ದರೆ, ಪುಸ್ತಕ ಮಳಿಗೆಗಳಲ್ಲಿ ಮಾಡಿರುವ ಅವ್ಯವಸ್ಥೆ ವಿವಾದದ ಧೂಳೆಬ್ಬಿಸಿದೆ. ಪುಸ್ತಕ ಕೊಳ್ಳಲೆಂದು ಹೋದ ಕನ್ನಡಿಗರಿಗೆ ದಕ್ಕಿದ್ದು ಧೂಳಿನ ಉಡುಗೊರೆ.

ನೆಲಹಾಸು ಹಾಸಿರದ ಕಾರಣ ಮಳಿಗೆಯೆಲ್ಲ ಧೂಳುಮಯವಾಗಿತ್ತು. ಪೆಂಡಾಲು ಸರಿಯಾಗಿ ಹಾಕಿಲ್ಲ, ಕುರ್ಚಿ ಟೇಬಲ್ಲಿನ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ನಿಗದಿಪಡಿಸಿದಷ್ಟು ದುಡ್ಡು ಕೊಟ್ಟರೂ ವ್ಯವಸ್ಥೆ ಏನೂ ಚೆನ್ನಾಗಿಲ್ಲ ಎಂದು ಪುಸ್ತಕ ಮಳಿಗೆಯಿಟ್ಟ ಹೆಸರಾಂತ ಲೇಖಕರೊಬ್ಬರು ದೂರಿದ್ದಾರೆ. ಮತ್ತೊಬ್ಬ ಹಿರಿಯರು, ಸುಮಾರು 20 ಸಮ್ಮೇಳನಗಳನ್ನು ನೋಡಿದ್ದೇನೆ. ಇಂಥ ಅವ್ಯವಸ್ಥೆ ಎಲ್ಲೂ ನೋಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
78th All India Kannada literary conference president laureate Dr. CP Krishnakumar has called Kannadigas to save Kannada language in Karnataka, which has reached the state of mummy. He said, even in rural place also root of Kannada is uprooted. If we save Kannada, Kannada will save us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X