ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೇನಿಯಂ ಭೂಮಿಯಲ್ಲಿನ ಬ್ರಹ್ಮರಾಕ್ಷಸ: ನಾಗೇಶ್ ಹೆಗಡೆ

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Nagesh Hegde addressing people in Gogi, Yadgir
ಯಾದಗಿರಿ, ಡಿ. 6 : ಜೀವಸಂಕುಲಕ್ಕೆ ಮತ್ತು ಪರಿಸರಕ್ಕೆ ವಿರೋಧಿಯಾದ ಯುರೇನಿಯಂ ಭೂಮಿಯಲ್ಲಿರುವ ಬ್ರಹ್ಮರಾಕ್ಷಸ ಎಂದು ಪತ್ರಕರ್ತ, ಪರಿಸರ ಹೋರಾಟಗಾರ ನಾಗೇಶ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಗೋಗಿಯಲ್ಲಿ ನಡೆಯುತ್ತಿರುವ ಅಕ್ರಮ ಯುರೇನಿಯಂ ಗಣಿಗಾರಿಕೆಯಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅವರು ಜನರಿಗೆ ಎಚ್ಚರಿಕೆ ನೀಡಿದರು.

ಗಣಿಗಾರಿಕೆಯ ವಿಕೃತ ರೂಪವೇ ಯುರೇನಿಯಂ. ದೇಶದಲ್ಲಿ ಪರಮಾಣು ಶಕ್ತಿಯಿಂದ ವಿದ್ಯುತ್ ಉತ್ಪಾದಿಸಬೇಕು ಎಂಬ ಹೋಮಿ ಜಹಾಂಗಿರ್ ಬಾಬಾ ಅವರ ಚಿಂತನೆಯಿಂದಾಗಿ ಮುಂಬೈ ಸಮೀಪ ಟ್ರಾಂಬೆಯಲ್ಲಿ ಏಷ್ಯದ ಮೊದಲ ಅಣುಸ್ಥಾವರ ಅಪ್ಸರಾ ಆರಂಭವಾಯಿತು. ಆಗ ಯುರೇನಿಯಂ ಅದಿರನ್ನು ಜಾದುಗುಡದಿಂದ ತರಲಾಗುತ್ತಿತ್ತು. ಆಗ ಮಹಿಳೆಯರ ಗರ್ಭದಲ್ಲಿ ವಿಕೃತ ಶಿಶುಗಳು ಜನಿಸತೊಡಗಿದವು. ಇದಕ್ಕೆ ಕಾರಣ ಯುರೇನಿಯಂ ಗಣಿಗಾರಿಕೆ ಎಂದು ಅವರು ಯುರೇನಿಯಂ ಬಳಕೆಯ ವಿಕೃತರೂಪವನ್ನು ತೆರೆದಿಟ್ಟರು.

ಗಣಿಗಾರಿಕೆಯ ಮೂಲಕ ಒಂದು ಕ್ವಿಂಟಾಲ್ ಕಲ್ಲಿನ ಕಚ್ಚಾಸಾಮಗ್ರಿಯಲ್ಲಿ ಕೇವಲ 170 ಗ್ರಾಂ ಮಾತ್ರ ಯುರೇನಿಯಂ ದೊರೆಯುತ್ತದೆ. ಇದರಲ್ಲಿ ರೆಡಾನ್ ಎನ್ನುವ ಗ್ಯಾಸ್ ಉತ್ಪತ್ತಿಯಾಗಿ ಗಾಳಿ, ನೀರಿನಲ್ಲಿ ಸಂಗ್ರಹವಾಗಿ ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಇಂತಹ ಗ್ಯಾಸ್‌ನಿಂದಾಗಿ ಅಮೆರಿಕಾ ದೇಶದಲ್ಲಿ ಪ್ರತಿ ವರ್ಷ 21 ಸಾವಿರ ಜನ ಸಾವಿಗೀಡಾಗುತ್ತಿದ್ದಾರೆ. ಇದು ಗೋಗಿಯಲ್ಲಿಯೂ ಸಂಭವಿಸಬಹುದು ಎಂಬ ಎಚ್ಚರಿಕೆಯ ಮಾತನ್ನು ಹೆಗಡೆ ಹೇಳಿದರು.

ಗಣಿಗಾರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶೇ.70ರಷ್ಟು ಕಾರ್ಮಿಕರು ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಯುರೇನಿಯಂ ಗಣಿಗಾರಿಕೆಯಿಂದ ಬದುಕಿನ ಹಕ್ಕು ಕಸಿದುಕೊಳ್ಳುವ ಅಪಾಯವಂತೂ ಗ್ಯಾರಂಟಿ. ಜಿಲ್ಲೆಯ ಗೋಗಿಯಲ್ಲಿ ಸದ್ದುಗದ್ದಲವಿಲ್ಲದೆ ಎಂಟು ವರ್ಷಗಳಿಂದ ಗಣಿಗಾರಿಕೆಯ ಪರೀಕ್ಷೆ ನಡೆಯುತ್ತಿದ್ದು ಈಗಾಗಲೇ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ಕಂಪನಿಯ ಪರ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಾದುಗುಡದಲ್ಲಿ ಆದಂತಹ ಅನಾಹುತಗಳು ಇಲ್ಲಿ ಸಂಭವಿಸಬಾರದು ಎಂದಾದರೆ ಎಲ್ಲರೂ ಒಂದಾಗಿ, ಗೋಗಿಯಲ್ಲಿ ನಡೆಯುವ ಯುರೇನಿಯಂ ಗಣಿಗಾರಿಕೆಯನ್ನು ಕಾನೂನಿನ ಚೌಕಟ್ಟಿನಲ್ಲಿ ತಡೆಯಲು ಪಣತೊಡಬೇಕೆಂದು ನಾಗೇಶ್ ಹೆಗಡೆ ಜನತೆಗೆ ಕರೆ ನೀಡಿದರು. ಇಂತಹ ಅಕ್ರಮ ಗಣಿಗಾರಿಕೆ ತಡೆದರೆ ರಾಷ್ಟ್ರ ರಕ್ಷಿಸಿದಂತೆ ಎಂದು ಅವರು ಹೇಳಿದರು. ಇವರ ಜೋತೆ ಡಾ.ಗುರುರಾಜ ಅರಿಕೇರಿ, ಡಾ.ಬಸವರಾಜ ಇಜೇರಿ, ಭಾಸ್ಕರರಾವ್ ಮೂಡಬೂಳ ಇದ್ದರು.

English summary
Journalist and environmentalist Nagesh Hegde was in Gogi village in Yadgir district to make people aware of ill effects of uranium. He said, the illegal uranium mining going on in Gogi might ruin the life of villagers, if action to curb is not taken immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X