ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಚಾರ ಅಂತ್ಯ, ಮತದಾನಕ್ಕೆ ಬಳ್ಳಾರಿ ಸನ್ನದ್ಧ

By Prasad
|
Google Oneindia Kannada News

B Sriramulu, Gadi Lingappa, B Ramprasad
ಬಳ್ಳಾರಿ, ನ. 28 : ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ನ.30ರಂದು ನಡೆಯಲಿರುವ ಮತದಾನಕ್ಕೆ ಇಂದು, ನ.28ರಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ. ಅತ್ಯಂತ ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಎಲ್ಲ ಅಭ್ಯರ್ಥಿಗಳಿಂದ ಭರ್ಜರಿ ಪ್ರಚಾರ.

ಪ್ರಮುಖ ಸ್ಪರ್ಧಾಳುಗಳಾಗಿರುವ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಮತ್ತು ಕಾಂಗ್ರೆಸ್ ಅಭ್ಯರ್ಥಿ ಬಿ. ರಾಮಪ್ರಸಾದ್ ಅವರಿಗೆ ಬಿಜೆಪಿ ಹೇಮಾಮಾಲಿನಿ ಹೊಳಪನ್ನು ಝಳಪಿಸಿದರೆ, ಕಾಂಗ್ರೆಸ್ಸಿನಿಂದ ಮುಸ್ಲಿಂ ಮತದಾರರ ಓಟುಗಳನ್ನು ಕಸಿದುಕೊಳ್ಳಲು ಶ್ರೀರಾಮುಲು ಜಮೀರ್ ಅಹ್ಮದ್ ರನ್ನು ಛೂಬಿಟ್ಟಿದ್ದರು.

ಹೆಚ್ಚಾಗಿ ಮುಸ್ಲಿಂ ಬಾಂಧವರೇ ಇರುವ ಕೌಲ್ ಬಜಾರ್ ಪ್ರದೇಶದಲ್ಲಿ ಶ್ರೀರಾಮುಲು ಪರವಾಗಿ ಉರ್ದುವಿನಲ್ಲೇ ಭಾಷಣ ಬಿಗಿದು ಮತ ಯಾಚಿಸಿದ ಜೆಡಿಎಸ್ ಧುರೀಣ ಜಮೀರ್ ಅಹ್ಮದ್, ರಾಮುಲುವನ್ನು ಗೆಲ್ಲಿಸಬೇಕೆಂದು ಅಂಗಲಾಚಿದರು. ಈ ನಡುವೆ, ಭಾಷಣದಲ್ಲಿ ಕಾಂಗ್ರೆಸ್ ನಾಯಕರನ್ನು ಏಕವಚನದಲ್ಲಿ ಹೀಗಳಿಸಿದರೆಂದು ಕಾರ್ಯಕರ್ತರು ಗದ್ದಲವೆಬ್ಬಿಸಿದ್ದರು.

ಇನ್ನು ಶ್ರೀರಾಮುಲುವಂತೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರನ್ನು ತಮ್ಮ ನೆಚ್ಚಿನ ನಾಯಕರೆಂದೇ ಕರೆದು, ತಮ್ಮ ಮುಂದಿನ ರಾಜಕೀಯ ನಡೆಗಳ ಬಗ್ಗೆ ಮುನ್ಸೂಚನೆ ನೀಡಿದರು. ಗೌಡರ ಆಶೀರ್ವಾದ ತಮ್ಮ ಮೇಲಿದ್ದು ಗೆದ್ದೇಗೆಲ್ಲುವುದಾಗಿ ವಿಶ್ವಾಸದಿಂದ ನುಡಿದರು.

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 195 ಮತದಾನ ಕೇಂದ್ರಗಳಿದ್ದು, ಮತದಾನ ಸುಸೂತ್ರವಾಗಿ ನೆರವೇರಲೆಂದು ರಾಜ್ಯ ಚುನಾವಣಾ ಆಯೋಗ 38 ವೀಕ್ಷಕರನ್ನು ನೇಮಿಸಿದೆ. ಈಗಾಗಲೆ ಅರೆಮಿಲಿಟರೆ ಪಡೆಯನ್ನು ಕೂಡ ಕರೆಸಲಾಗಿದ್ದು ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ.

ಹಣಮಂತರಾವ್ ಮನೆಯಲ್ಲಿ ಹಣ ಪತ್ತೆ : ಎಲ್ಲ ಪ್ರಚಾರದ ನಡುವೆ ಹಣದ ಪ್ರಭಾವವೂ ಈ ವಿಭಾಗದಲ್ಲಿ ಸಾಕಷ್ಟು ಕಂಡುಬಂದಿದೆ. ಇಂದು ಹಣಮಂತರಾವ್ ಎಂಬುವವರ ಮನೆಯಲ್ಲಿ 3 ಲಕ್ಷ 52 ಸಾವಿರ ರು. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಫ್ಯಾನ್ ಗಾಳಿಗೆ ಸಿಕ್ಕ ನೋಟುಗಳಂತೆ ಹಣಮಂತರಾವ್ ಸೇರಿದಂತೆ ಐವರು ಹಾರಿಹೋಗಿದ್ದಾರೆ.

ಈ ಹಣ ಸಿಕ್ಕಿರುವವರ ಪರ ಶ್ರೀರಾಮುಲು ಅವರಿಗೆ ಸೇರಿದ ಭಿತ್ತಿಚಿತ್ರಗಳು ದೊರೆತಿರುವುದು ನಾನಾ ಕುತೂಹಲಗಳಿಗೆ ಕಾರಣವಾಗಿದೆ. ಈ ಹಣ ತಮಗೆ ಸೇರಿಲ್ಲ, ಇದು ತಮಗೆ ಕೆಟ್ಟ ಹೆಸರು ತರುವ ವಿರೋಧಿಗಳ ಕುತಂತ್ರ ಎಂದು ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಕೂಡ ಪ್ರಚಾರದಿಂದ ಹಿಂದೆ ಬಿದ್ದಿಲ್ಲ. ಕಳೆದ ಬಾರಿ ಬಿಜೆಪಿಯಿಂದ ನಿಂತಿದ್ದ ಶ್ರೀರಾಮುಲುಗೆ ಸೋತಿದ್ದ ಬಿ ರಾಮ್ ಪ್ರಸಾದ್ ಈ ಬಾರಿ, ಬಿಜೆಪಿ ಮತ್ತು ಶ್ರೀರಾಮುಲು ನಡುವಿನ ಜಟಾಪಟಿಯ ಲಾಭ ಪಡೆಯಲು ಕಾತುರರಾಗಿದ್ದಾರೆ. ಅವರ ಪರವಾಗಿ ಇಡೀ ಕಾಂಗ್ರೆಸ್ ಪಕ್ಷವೇ ಇಲ್ಲಿ ಬಂದು ನಿಂತಿದೆ.

English summary
Public campaigning for the Bellary Rural constituency ended on Nov 28 at 5 in the evening. Independent candidate Sriramulu, Gadi Lingappa of BJP and B Ramprasad of Congress will test their luck on Nov 30. Their fate will be decided on Dec 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X