ಕಠೋಪನಿಷತ್ತಿನ ಓದಿನಿಂದ ಭೈರಪ್ಪಗೆ ತಿಳಿದಿದ್ದೇನು?
ಹೀಗೆ ನಾನು ತತ್ತ್ವಶಾಸ್ತ್ರದಲ್ಲೇ ಬಿ.ಎ. ಮತ್ತು ಎಂ.ಎ.ಗಳನ್ನು ಮಾಡಿದೆ. ಹೀಗೆ ಒಟ್ಟು ಹನ್ನೆರಡು ವರ್ಷ, ವಿದ್ಯಾರ್ಥಿಯಾಗಿ ನಾಲ್ಕು ವರ್ಷ, ಅಧ್ಯಾಪಕ ಮತ್ತು ಸಂಶೋಧಕನಾಗಿ ಎಂಟು ವರ್ಷ, ತತ್ತ್ವ ಶಾಸ್ತ್ರದಲ್ಲೇ ಮುಳುಗಿದ್ದೆ.
ಅಷ್ಟರಲ್ಲಿ ನನಗೆ ಪ್ರಿಯವಾಗಿದ್ದ, ತತ್ತ್ವಶಾಸ್ತ್ರದ ಒಂದು ಶಾಖೆಯಾದ ಸೌಂದರ್ಯ ಮೀಮಾಂಸೆಯಲ್ಲಿ ಆಸಕ್ತಿ ಬೆಳೆದು ಸತ್ಯ ಮತ್ತು ಸೌಂದರ್ಯವನ್ನು ಕುರಿತು ಸಂಶೋಧನೆ ಮಾಡಿ ಅನಂತರ ಸೌಂದರ್ಯ ಮತ್ತು ನೀತಿಯ ಅಧ್ಯಯನದಲ್ಲಿ ತೊಡಗಿದೆ.
ಅಷ್ಟರಲ್ಲಿ ಎರಡು ವಿಷಯಗಳು ನನಗೆ ಅರಿವಾದವು.
(1) ಭಾರತ ಮತ್ತು ಪ್ರಾಚೀನ ಗ್ರೀಸ್ಗಳೆರಡರಲ್ಲೂ ವಿಶ್ವ ಅಥವಾ ಬ್ರಹ್ಮಾಂಡ ಮೀಮಾಂಸೆ, ಜ್ಞಾನಮೀಮಾಂಸೆ, ಮನಶ್ಶಾಸ್ತ್ರ ಮತ್ತು ನೀತಿ ಶಾಸ್ತ್ರಗಳನ್ನು ಒಳಗೊಂಡಿದ್ದ ತತ್ತ ಶಾಸ್ತ್ರವು ಆಧುನಿಕ ಕಾಲದಲ್ಲಿ ಅವುಗಳೆಲ್ಲವನ್ನೂ ಕಳಚಿಕೊಂಡಿವೆ.
ಖಭೌತ ವಿಜ್ಞಾನ, ಆಧುನಿಕ ಮನೋವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮಾನವ ಜನಾಂಗ ಶಾಸ್ತ್ರ, ನ್ಯಾಯಶಾಸ್ತ್ರ, ವೈದ್ಯ ವಿಜ್ಞಾನ, ತೌಲನಿಕ ಮತ ಧರ್ಮ ಶಾಸ್ತ್ರ ಮೊದಲಾದ ಜ್ಞಾನದ ಶಾಖೋಪಶಾಖೆಗಳ ಬೆಳವಣಿಗೆಯಿಂದ ತತ್ತ ಶಾಸ್ತ್ರವು ತನ್ನ ವ್ಯಾಪ್ತಿಯನ್ನು ಕಳೆದುಕೊಂಡು ಮೌಲ್ಯ ಮೀಮಾಂಸೆಗೆ ಅಡಕಗೊಂಡಿದೆ.
(2) ವೇದ ಮತ್ತು ಉಪನಿಷತ್ತುಗಳು ಭಾರತದ ತತ್ತ ಶಾಸ್ತ್ರಕ್ಕೆ ಆಧಾರವಾಗಿದ್ದರೂ ನಮ್ಮ ರಾಷ್ಟ್ರದ ಜೀವನಾದರ್ಶಗಳನ್ನು ಜಿಜ್ಞಾಸೆಗೆ ಒಳಪಡಿಸಿ ಅವುಗಳಿಗೆ ಮೂರ್ತಸ್ವರೂಪ ಕೊಟ್ಟದ್ದು ರಾಮಾಯಣ ಮಹಾಭಾರತಗಳು.
ವೇದಪಾರಮ್ಯವನ್ನು ತಿರಸ್ಕರಿಸುವ ಜೈನ ಬೌದ್ಧ ಧರ್ಮಗಳು ಕೂಡ ಉಪನಿಷತ್ತು ಯುಗಧರ್ಮದ ಜಿಜ್ಞಾಸೆಯಿಂದ ಹುಟ್ಟಿದವೇ. ಅವುಗಳು ಕೂಡ ತಮ್ಮವೇ ದೃಷ್ಟಿಯಲ್ಲಿ ರಾಮಾಯಣ ಮಹಾಭಾರತಗಳಿಂದ ಮೂರ್ತಗೊಂಡ ಮೌಲ್ಯಗಳನ್ನು ವಿನ್ಯಾಸಗೊಳಿಸಿಕೊಂಡವು.
ಇವುಗಳನ್ನು ಅರ್ಥಮಾಡಿಕೊಳ್ಳುವ ವೇಳೆಗೆ ನಾನು ನನ್ನ ಪ್ರಥಮ ಮಹತ್ತ ದ ಕೃತಿ 'ವಂಶವೃಕ್ಷ'ವನ್ನು ಬರೆದಿದ್ದೆ. ಈ ಸಾಹಿತ್ಯ ಸೃಷ್ಟಿಯ ಅನುಭವವು, ನಮ್ಮ ರಾಷ್ಟ್ರದ ಜೀವನಾದರ್ಶಗಳಿಗೆ ಮೂರ್ತ ಸ್ವರೂಪ ಕೊಟ್ಟದ್ದು ಸಾಹಿತ್ಯಕೃತಿಗಳಾದ ರಾಮಾಯಣ ಮಹಾಭಾರತಗಳು ಎಂಬ ಅರಿವಿನಲ್ಲಿ ಬೆರೆತು ಜೀವನದ ಅರ್ಥವನ್ನು ಹುಡುಕಲು ನನಗೆ ಸಾಹಿತ್ಯವೇ ತಕ್ಕ ಮಾಧ್ಯಮ.
ತರಗತಿಯಲ್ಲಿ ನಾನು ಪಾಠ ಮಾಡುತ್ತಿದ್ದ ಶುಷ್ಕ ಪಾಂಡಿತ್ಯದ ತತ್ತ್ವಶಾಸ್ತ್ರವಲ್ಲ ಎಂಬ ದಾರಿಯನ್ನು ತೋರಿಸಿತು.
ನಾನು ಬರೆಯಲು ಆರಂಭಿಸಿದಾಗಿನಿಂದ ಇದುವರೆಗೂ ಸಾಹಿತ್ಯ ನಿರ್ಮಿತಿಯು ಬದಲಾವಣೆ, ಆಧುನಿಕತೆ ಮತ್ತು ಹಿಂದುಳಿದವರನ್ನು ಮೇಲೆತ್ತುವ ಪ್ರಯತ್ನದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು, ಹಾಗೆ ತೊಡಗಿಸಿಕೊಳ್ಳದ ಬರೆಹವು ಕೇವಲ ಬೂಸಾ ಎಂಬ ಒತ್ತಡವನ್ನು ಹಲವು ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳು ಹಾಕುತ್ತಿವೆ.