• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೈರಪ್ಪ ಅವರ ದೃಷ್ಟಿಯಲ್ಲಿ ಸಾಹಿತ್ಯ ಎಂದರೆ ಏನು...?

By Mahesh
|

ತತ್ತ್ವ ಶಾಸ್ತ್ರದ, ಅದರಲ್ಲೂ ಮೌಲ್ಯ ಮೀಮಾಂಸೆಯ ಹಿನ್ನೆಲೆಯುಳ್ಳ ನನಗೆ ಬದಲಾವಣೆ, ಆಧುನಿಕತೆ ಮತ್ತು ಹಿಂದುಳಿದವರನ್ನು ಮೇಲೆತ್ತುವ ಮೌಲ್ಯಗಳಲ್ಲಿ ನಂಬಿಕೆ ಇದೆ,

ಬದ್ಧತೆಯೂ ಇದೆ. ಆದರೆ ಸಾಹಿತ್ಯವೆಂಬ ಮೌಲ್ಯವನ್ನು ಈ ಬೇರೆ ಮೌಲ್ಯಗಳಿಗೆ ಅಡಿಯಾಳು ಮಾಡಿ ದುಡಿಸಹೊರಟರೆ ಸಾಹಿತ್ಯವು ಸಾಹಿತ್ಯವಾಗಿ ಉಳಿಯುವುದಿಲ್ಲ,

ಅಲ್ಲದೆ ಅದು ಪ್ರಚಾರಸಾಹಿತ್ಯವಾಗಿ ತೀರ ಅಲ್ಪಾಯುಷಿಯಾಗುತ್ತದೆ, ಎಂಬುದು ನನ್ನ ವಿಮರ್ಶಿತ ಶ್ರದ್ಧೆಯಾಗಿದೆ. ಸಾಹಿತ್ಯವೆಂಬುದೇ ಮೌಲ್ಯಾನ್ವೇಷಣಕ್ಕೆ ಅತ್ಯಂತ ವಿಶಾಲವಾದ ಸಾಧ್ಯತೆಗಳ ಕ್ಷೇತ್ರ.

ಅದು ರಾಜಕೀಯ ಪಕ್ಷಗಳು ಮತ್ತು ಸಕ್ರಿಯವಾದಿಗಳು ಒತ್ತಾಯಿಸುವ ಮೌಲ್ಯಗಳನ್ನು ಅವುಗಳಿಗಿಂತ ಎತ್ತರವಾದ ಹಂತದಲ್ಲಿ ನಿಂತು ಜೀವನದ ಇತರ ಮೌಲ್ಯಗಳೊಡನೆ ಅವುಗಳ ಸಂಬಂಧವನ್ನು ಪರಿಶೀಲಿಸಿ ಬೆಳಕು ಚೆಲ್ಲಬೇಕು.

ಸಾಹಿತ್ಯ ನಿರ್ಮಿತಿಯೊಂದರಿಂದಲೇ ಜೀವನದ ಅಶನವಸನಗಳ ನ್ಯಾಯ ಅನ್ಯಾಯಗಳ ವಾಸ್ತವ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ. ಸಾಹಿತಿಯು ಸಕ್ರಿಯನಾಗಬಾರದೆಂಬ ನಿಷೇಧವಿಲ್ಲ.

ಆದರೆ ಸಕ್ರಿಯನಾಗದವನು, ಸಕ್ರಿಯತೆಗೆ ಸಾಹಿತ್ಯ ನಿರ್ಮಿತಿಯನ್ನು ಅಡಿಯಾಳಾಗಿಸದವನು ನಿರ್ಮಿಸುವುದು ಸಾಹಿತ್ಯವೇ ಅಲ್ಲವೆಂಬ ಅಂಥ ಪ್ರಣಾಲಿಯಲ್ಲಿ ನನಗೆ ನಂಬಿಕೆ ಇಲ್ಲ. ತಮ್ಮ ಪ್ರಣಾಳಿಗೆ ಒಳಪಡದವರನ್ನು ಸಕ್ರಿಯವಾದಿಗಳು ಬೂರ್ಜ್ವಾ, ಬಲಪಂಥೀಯ ಎಂಬ ಹೆಸರುಗಳಿಂದ ಹಳಿಯುತ್ತಾರೆ;

ಸಾಮಾಜಿಕ ಸಮಸ್ಯೆಗಳು ಒಂದೆರಡು ದಶಕಗಳಲ್ಲಿ ಬದಲಾಗಿ, ಅವುಗಳಿಗೆ ಪರಿಹಾರವೆಂಬಂತೆ ಬರೆಯುವ ಸಾಹಿತ್ಯವು ಅನಂತರ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆಂಬುದನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ.

ಉದ್ದಕ್ಕೂ ನಾನು ಗಟ್ಟಿಯಾಗಿ ನಿಂತು ನನ್ನ ಬೌದ್ಧಿಕ ಮತ್ತು ಸೃಷ್ಟಿಶೀಲತೆಯ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದೇನೆ.

ಸರಸ್ವತೀ ಸಮ್ಮಾನವು ನನ್ನ ಇತ್ತೀಚಿನ ಕೃತಿಗಳಲ್ಲಿ ಮಂದ್ರವನ್ನು ಆರಿಸಿರುವುದು ನನಗೆ ಸಂತೋಷವನ್ನುಂಟು ಮಾಡಿದೆ. ಒಬ್ಬ ಸಂಗೀತಗಾರ, ಅವನ ಸುತ್ತಮುತ್ತಣ ಘಟನೆ ಹಾಗು ಪಾತ್ರಗಳ ಮೂಲಕ ಕಲೆಗೂ ಜೀವನದ ಇತರ ಮೌಲ್ಯಗಳಿಗೂ ಇರುವ ಸಂಬಂಧವನ್ನು ನಾನು ಈ ಕಾದಂಬರಿಯಲ್ಲಿ ಅನ್ವೇಷಿಸಿದ್ದೇನೆ.

ಇಡೀ ಕಾದಂಬರಿಯಲ್ಲಿ ಸಂಗೀತವೇ ಒಂದು ಮುಖ್ಯ ಪಾತ್ರವಾಗಿದೆ. ಸಂಗೀತವೇ ಅತ್ಯಂತ ಶುದ್ಧವಾದದ್ದು. ಇತರ ಕಲೆಗಳಾದ ಚಿತ್ರ, ಶಿಲ್ಪ, ಸಾಹಿತ್ಯ ಮೊದಲಾದವುಗಳ ತುಲನೆಯಲ್ಲಿ ಭಾವ ಮತ್ತು ರಸಗಳನ್ನು ಪರಿಶುದ್ಧ ಅಂದರೆ ಹಸಿಯಾದ, ಆದ್ದರಿಂದ ಅತ್ಯಂತ ಶಕ್ತವಾದ ಸ್ವರೂಪದಲ್ಲಿ ವ್ಯಕ್ತಪಡಿಸುವಂಥದು. ಅದು ಎಲ್ಲ ಮೂಲ ಮತ್ತು ಮಿಶ್ರ ರಸಗಳನ್ನು ಸೃಷ್ಟಿಸಿಕೊಂಡು ಮಂದ್ರದ ಆಳದಿಂದ ತಾರತಾರದ ಎತ್ತರಕ್ಕೆ ಸಂಚರಿಸುತ್ತದೆ.

ಮಂದ್ರವು ಸಮಗ್ರ ಅಂತರ್ಮುಖತೆಯ ಸ್ಥಿತಿ; ಎಂದರೆ ಧ್ಯಾನ.

-ನಮಸ್ಕಾರ

ಎಸ್.ಎಲ್ ಭೈರಪ್ಪ

ಕೃಪೆ: ಎಸ್ಎಲ್ ಭೈರಪ್ಪ.ಕಾಂ

English summary
Eminent Kannada author SL Bhyrappa was on Wednesday honoured with the Saraswati Samman in literature for his epic novel 'Mandra'. The Saraswati Samman is given away by the KK Birla Foundation. Here is Writer Bhyrappa speech after receiving the award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X