ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಹರೇ ಕೃಷ್ಣ ಚಳವಳಿಯ ಸ್ವಾಮಿ ಭಕ್ತಿಪಾದ ನಿಧನ

By Srinath
|
Google Oneindia Kannada News

swami-bhaktipada-us-harekrishna-died-mumbai
ಥಾಣೆ (ಮುಂಬೈ), ಅ. 26 : ಅಮೆರಿಕದಲ್ಲಿ ಅನೇಕ ಕ್ರಿಮಿನಲ್‌ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಹರೇ ಕೃಷ್ಣ ಚಳವಳಿಯ ವಿವಾದಗ್ರಸ್ತ ನಾಯಕ ಸ್ವಾಮಿ ಭಕ್ತಿಪಾದ ಅವರು ಅನಾರೋಗ್ಯದಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು.

74ರ ಹರೆಯದ ಭಕ್ತಿಪಾದ ಅವರು ಇಲ್ಲಿನ ಜ್ಯುಪಿಟರ್ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದರು. ಕ್ಯಾನ್ಸರ್ ಮತ್ತು ಕಿಡ್ನಿ ವೈಫಲ್ಯಕ್ಕಾಗಿ ಕಳೆದ ಜುಲೈಯಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರ ಮೃತದೇಹವನ್ನು ಭಕ್ತರೊಬ್ಬರಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕೀರ್ತನಾನಂದ ಸ್ವಾಮಿ ಎಂದೂ ಕರೆಯಲ್ಪಡುವ ಸ್ವಾಮಿ ಭಕ್ತಿಪಾದ ಅವರು 1937ರಲ್ಲಿ ನ್ಯೂಯಾರ್ಕ್‌ನ ಪೀಕ್‌ಸ್ಕಿಲ್‌ನಲ್ಲಿ ಜನಿಸಿದ್ದರು. ಬ್ಯಾಪ್ಟಿಸ್ಟ್‌ ಪಾದ್ರಿಯೊಬ್ಬರ ಮಗನಾದ ಅವರ ಮೂಲ ಹೆಸರು ಕೀಥ್‌ ಹ್ಯಾಮ್‌. ಎಸಿ ಭಕ್ತಿ ವೇದಾಂತ ಸ್ವಾಮೀ ಪ್ರಭುಪಾದ ಅವರು ಸ್ಥಾಪಿಸಿದ ಹರೇ ಕೃಷ್ಣ ಚಳವಳಿಯ ಶಿಷ್ಯತ್ವ ಪಡೆದ ಮೊದಲ ಅಮೆರಿಕನ್‌ ಪ್ರಜೆಯಾಗಿದ್ದಾರೆ.

1968ರಲ್ಲಿ ಅವರು ಅಮೆರಿಕದಲ್ಲಿ ನ್ಯೂ ವೃಂದಾವನ ಎಂಬ ಹೆಸರಿನ ಅತಿದೊಡ್ಡ ಹರೇ ಕೃಷ್ಣ ಸಮುದಾಯ ಸ್ಥಾಪಿಸಿದ್ದರು. ಭಕ್ತಿಪಾದ ಅವರಿಗೆ ಸೇರಿದ ವೆಸ್ ವರ್ಜೀನಿಯಾದ 'ಸ್ಪಿರಿಚುಯಲ್ ಡಿಸ್ನಿಲ್ಯಾಂಡ್' ಎಂಬ ಸುವಿಶಾಲ 4,000 ಎಕರೆ ಪ್ರದೇಶದಲ್ಲಿರುವ ಧಾರ್ಮಿಕ ಕೇಂದ್ರದಲ್ಲಿ 'ಬಂಗಾರದ ಅರಮನೆ'ಯೂ ಇದೆ.

ಆದರೆ 1980ರ ಮಧ್ಯದಲ್ಲಿ ಸಮುದಾಯದ ಶಾಲೆಯಲ್ಲಿ ಸಿಬ್ಬಂದಿಗಳು, ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸುತ್ತಿರುವ ಮತ್ತು ಇಬ್ಬರು ಭಕ್ತರ ಕೊಲೆ ಪ್ರಕರಣದಲ್ಲಿ ತನಿಖೆ ನಡೆಯತೊಡಗಿದಾಗ ನ್ಯೂವೃಂದಾವನ ವಿವಾದದ ಕೇಂದ್ರಬಿಂದು ಆಯಿತು. ನಾಲ್ಕು ವರ್ಷಗಳಲ್ಲಿ ಭಕ್ತಿಪಾದ ಅವರು 10.5 ಮಿಲಿಯನ್‌ ಅಮೆರಿಕನ್‌ ಡಾಲರ್ ಸಂಪತ್ತು ಸಂಪಾದಿಸಿದ್ದಾರೆ ಎಂದು ಎಫ್ ಬಿಐ ಅಂದಾಜಿಸಿತ್ತು.

1990ರಲ್ಲಿ ಲೈಂಗಿಕ ಜಾಲ ಪ್ರಕರಣದಲ್ಲಿ ಸ್ವಾಮೀ ಭಕ್ತಿಪಾದ ಅವರು ಜೈಲು ಶಿಕ್ಷೆಗೊಳಗಾಗಿದ್ದರು. ಇದರ ವಿರುದ್ಧ 1991ರಲ್ಲಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಎರಡನೇ ಬಾರಿ ಎಫ್ ಬಿಐ ವಿಚಾರಣೆಯಲ್ಲಿ ಅವರು ತಪ್ಪೊಪ್ಪಿಕೊಂಡ ಬಳಿಕ 20 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅನಂತರ 1997ರಲ್ಲಿ ಈ ಶಿಕ್ಷೆಯನ್ನು ಅವರ ಅನಾರೋಗ್ಯವನ್ನು ಪರಿಗಣಿಸಿ 12 ವರ್ಷಕ್ಕೆ ಇಳಿಸಲಾಗಿತ್ತು.

2004ರಲ್ಲಿ 4 ವರ್ಷ ಮುಂಚಿತವಾಗಿ ಭಕ್ತಿಪಾದ ಅವರು ಜೈಲಿನಿಂದ ಬಿಡುಗಡೆಗೊಂಡಿದ್ದರು. ಆದರೆ ನ್ಯೂ ವೃಂದಾವನಕ್ಕೆ ಮರಳಲು ಅವರ ನಿರ್ಬಂಧ ಹೇರಲಾಗಿತ್ತು. 2008ರಲ್ಲಿ ಅವರು ಭಾರತಕ್ಕೆ ಆಗಮಿಸಿದ್ದರು.

English summary
A former leader of the U.S. Hare Krishna movement - Swami Bhaktipada, forced to flee to India in disgrace after being convicted of racketeering and his implication in the killing of two devotees - has died aged 74 on Monday in a hospital near Mumbai, India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X