• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೊ ನಿರಂಜನ ವಾನಳ್ಳಿಗೆ ಕಾಮತ್ ಪ್ರಶಸ್ತಿ ಪ್ರದಾನ

By Shami
|
ಹೊನ್ನಾವರ, ಸೆ. 25 : ಎರಡೂ ಜಿಲ್ಲೆಗಳು ಒಂದೇ ಸಮುದ್ರದ ಬದಿಯಲ್ಲೇ ಇದ್ದರೂ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂತಃಸತ್ವ ಮತ್ತು ವ್ಯಕ್ತಿತ್ವ ಬೇರೆಬೇರೆ ತೆರನಾದದ್ದು. ಕರಾವಳಿ ತೀರದ ಜಿಲ್ಲೆಗಳೆಂಬ ಮಾತ್ರಕ್ಕೆ ಎರಡನ್ನೂ ಒಂದೇ ಕನ್ನಡಕದಲ್ಲಿ ನೋಡುವ ದೃಷ್ಟಿದೋಷ ಹಲವರಲ್ಲಿದೆ ಎಂದು "ಮುಂಗಾರು ಮಳೆ" ಕವಿ ಜಯಂತ ಕಾಯ್ಕಿಣಿ ಇಂದು ಇಲ್ಲಿ ವಿಷಾದ ವ್ಯಕ್ತಪಡಿಸಿದರು.

ವೃತ್ತಿ ಕೌಶಲ್ಯಕ್ಕೆ, ವ್ಯಾಪಾರಕ್ಕೆ, ಸೃಜನಶೀಲತೆಯನ್ನು ಬಿಜಿನೆಸ್ಸಿಗೆ ಕನೆಕ್ಟ್ ಮಾಡುವುದಕ್ಕೆ, ವಿಸಿಟಿಂಗ್ ಕಾರ್ಡ್ ಮತ್ತು ಲೆಟರ್ ಹೆಡ್ ಹಾಗೂ ಬಯೋಡೇಟಾ ಸಂಸ್ಕೃತಿಯಿಂದ ಹೊರತಾದ ಉತ್ತರ ಕನ್ನಡ ಮಣ್ಣಿನ ಫಲಾಪೇಕ್ಷೆರಹಿತ ಗುಣ ಕುರಿತಂತೆ ಅವರು ಸಾದ್ಯಂತ ಮಾತನಾಡಿದರು. ವ್ಯಕ್ತಿ, ಬದುಕು, ಸಾಹಿತ್ಯದ ಧೋರಣೆಗಳನ್ನು ಉದಾಹರಣೆ ಸಮೇತ ಹೆಣೆಯುತ್ತ ಕಾಯ್ಕಿಣಿ ಸ್ವಾರಸ್ಯಪೂರ್ಣ ಭಾಷಣಕ್ಕೆ ಧುಮುಕಿದರು.

ಬರವಣಿಗೆ, ಸಾಹಿತ್ಯ ಸೃಷ್ಟಿಯ ಉದ್ದೇಶಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಕಾಯ್ಕಿಣಿಯವರ ಭಾನುವಾರ ಮಧ್ಯಾನ್ಹದ ಉಪನ್ಯಾಸದ ವೇಳೆ, ದಿನಕರ ದೇಸಾಯಿ, ಗೌರೀಶ ಕಾಯ್ಕಿಣಿ, ತೇಜಸ್ವಿ, ಬಿಜಿ ಎಲ್ ಸ್ವಾಮಿ, ಶಿವರಾಮ ಕಾರಂತ, ಪಾಂಡೇಶ್ವರ ಮತ್ತಿತರರು ಇಣುಕಿ ನಡೆದರು. ಇವರೆಲ್ಲ ಒಂದೇ ಶಾಲೆಯ ವಿದ್ಯಾರ್ಥಿಗಳು ಎಂದು ಬಣ್ಣಿಸಿದ ಜಯಂತ, ಸಾಹಿತ್ಯ, ಸಂಗೀತ ಮತ್ತು ಕಲೆಯ ಉದ್ದೇಶ ಅಂತಿಮ ನೆಲೆಯಲ್ಲಿ ನಿರಸನವೇ ಆಗಿರುತ್ತದೆ ಎಂಬ ವಾದ ಮಂಡಿಸಿದರು.

ಲೇಖಕ, ಪರಿಸರಪ್ರಿಯ, ಛಾಯಾಚಿತ್ರಗ್ರಾಹಕ ಮತ್ತಿನ್ನೇನೇನೋ ಆಗಿದ್ದು ಉತ್ತರ ಕನ್ನಡ ಜಿಲ್ಲೆಯ ಆಗಿಹೋದ ಮಹಾನುಭಾವರ ಸಾಲಿಗೆ ಸೇರ್ಪಡೆಯಾದವರು ದಿವಂಗತ ಡಾ. ಕೃಷ್ಣಾನಂದ ಕಾಮತ್. ಅವರ ಹುಟ್ಟು ಹಬ್ಬ (ಸೆ. 29) ನಿಮಿತ್ತ ಭಾನುವಾರ ಇಲ್ಲಿ ಒಂದು ಭರಪೂರ ಸಾಂಸ್ಕೃತಿಕ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು.

ಕೃಷ್ಣಾನಂದ ಕಾಮತ್ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ, ದತ್ತಿ ಉಪನ್ಯಾಸ, ಸನ್ಮಾನ ಹಾಗೂ ಕಾಮತರ ಸ್ಮರಣೆ ಇತ್ತು. ಪ್ರತಿಷ್ಠಾನದ ಆಧಾರ ಸ್ತಂಭಗಳಾಗಿರುವ ಕಾಮತರ ಪತ್ನಿ, ಬೆಂಗಳೂರು ನಿವಾಸಿ ಜ್ಯೋತ್ಸ್ನಾ ಕಾಮತ್ ; ಮಗ ಅಲಬಾಮಾ ನಿವಾಸಿ ವಿಕಾಸ್ ಕಾಮತ್ ಮತ್ತು ಕೃಷ್ಣಾನಂದರ ತಮ್ಮ ಹೊನ್ನಾವರ ನಿವಾಸಿ ತುಳಸಿದಾಸ್ ಕಾಮತ್ ಕಾರ್ಯಕ್ರಮ ರೂಪಿಸಿದ್ದರು. ಕಾರ್ಯಕ್ರಮ ಲಕ್ಷ್ಮೀನಾರಾಯಣ ನಗರದ ಕೃಷ್ಣಕಲ್ಪ ಸಭಾಂಗಣದಲ್ಲಿ ವ್ಯವಸ್ಥೆಯಾಗಿತ್ತು.

ಕೃಷ್ಣಾನಂದ ಕಾಮತ್ ದತ್ತಿ ಉಪನ್ಯಾಸ (ವಿಷಯ ; ವಿಜ್ಞಾನ ತಂತ್ರಜ್ಞಾನ ಮತ್ತು ಪರಿಸರ ) ನೀಡಿದವರು ಕಾಮತರನ್ನು ಭಾಳ ಹಚ್ಚಿಕೊಂಡಿದ್ದ ಲೇಖಕಿ ಮತ್ತು ವಿಜ್ಞಾನಿ ನೇಮಿಚಂದ್ರ. HAL ಕಾರ್ಖಾನೆಯಲ್ಲಿ ಅವರು ವಿಜ್ಞಾನಿ. ಕಾರ್ಯಭಾರ ನಿಮಿತ್ತ ಅವರು ಇಸ್ರೇಲಿಗೆ ಪ್ರಯಾಣ ಬೆಳೆಸಿದುದರಿಂದ ಅವರ ಪರವಾಗಿ ಹೃದ್ಗತ ಉಪನ್ಯಾಸ ವಾಚಿಸಿದವರು ಡಾ. ಎಚ್ ಎಸ್ ಅನುಪಮ. ನಂತರ ಲೇಖನಗಳ ಸಂಗ್ರಹ (ಪರಿಸರ ಮತ್ತು ಅಭಿವೃದ್ಧಿ) ಕೃತಿ ಬಿಡುಗಡೆ ಮಾಡಿದವರು ಮನೋಹರ ಗ್ರಂಥಮಾಲಾದ ಜ್ಯೂನಿಯರ್ ಜಡಭರತ ಡಾ. ರಮಾಕಾಂತ ಜೋಷಿ.

ಅತ್ಯುತ್ತಮ ಪ್ರವಾಸ ಕಥನ ಕೃತಿ ಪ್ರಶಸ್ತಿಗೆ ಭಾಜನರಾದವರು ಪತ್ರಕರ್ತ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಪಾಠಮಾಡುವ ಪ್ರೊ. ನಿರಂಜನ ವಾನಳ್ಳಿ. ಇವರೂ ಉತ್ತರ ಕನ್ನಡ ಜಿಲ್ಲೆಯವರೇ. ನಿರಂಜನ ಅವರು 28 ತಿಂಗಳ ಕಾಲ ಒಮಾನ್ ಪ್ರವಾಸ ಮಾಡಿ ಹೊರತಂದ "ಒಮಾನ್ ಎಂಬ ಒಗಟು" ಕೃತಿಗೆ ಕಾಮತ್ ಪ್ರತಿಷ್ಠಾನ 25 ಸಾವಿರ ರೂ. ನಗದು ಬಹುಮಾನ ಸಂದಿತು. ವಾನಳ್ಳಿ ಅವರನ್ನು ಅವರ ತಂದೆ ತಾಯಿ ಸಮ್ಮುಖದಲ್ಲಿ ಶಾಲುಹೊದಿಸಿ ಸನ್ಮಾನಿಸಿದ್ದು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿತು. ಬಹುಮಾನಿತ ಕೃತಿ ಆಯ್ಕೆ ಮಾಡಿದವರು ಪ್ರತಿಷ್ಠಾನ ನೇಮಿಸಿದ್ದ ಪ್ರಶಸ್ತಿ ಸಮಿತಿ. ಸಮಿತಿಯ ಮುಖ್ಯಸ್ಥರು ಕಥೆಗಾರ ಶ್ರೀಧರ ಬಳಗಾರ.

ಪ್ರತಿಷ್ಠಾನದ ಧ್ಯೇಯೋದ್ದೇಶ ಕುರಿತು ಸವಿಸ್ತಾರವಾಗಿ ಮಾತನಾಡಿದವರು ಜ್ಯೋತ್ಸ್ನಾ ಕಾಮತ್. ತಮ್ಮ ಪತಿ ಪ್ರಣೀತ ಆದರ್ಶಗಳನ್ನು ಜನಮನಕ್ಕೆ ತಲುಪಿಸುವ ಪ್ರೀತಿ ಮತ್ತು ಶ್ರಮ ವ್ಯರ್ಥವಾಗುವುದಿಲ್ಲ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಕೃಷ್ಣಾನಂದ ಕಾಮತರಿಗೆ ಇದ್ದ ಒಲವುಗಳು ಎರಡು. ಒಂದು ಮನುಷ್ಯ ಪ್ರೀತಿ ಇನ್ನೊಂದು ಪರಿಸರ ಪ್ರೇಮ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dr. Krishnananda Kamat award 2011 presentation ceremony Honnavara, Uttara Kannada. Award presented to Dr. Niranjana Vanalli, prof of journalism, University of Mysore. Dr KLK memorial endowment lecture by Dr. Nemichandra, science writer, Scientist in HAL Bangalore. Poet Jayanth Kaikini delivered the key-note address. Dr. Jyothsna Kamat and her son Vikas Kamat ( http://www.kamat.com/ ) presided over the function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more