ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಲಿತ್ ಮಹಲ್ ರಸ್ತೆಬದಿ ಮರಹನನಕ್ಕೆ ವಿರೋಧ

By * ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

Save Tree
ಮೈಸೂರು, ಸೆ 10: ಮೈಸೂರಿನ ಲಲಿತಮಹಲ್ ರಸ್ತೆ ಬಹಳಷ್ಟು ವರ್ಷಗಳಿಂದ ಸುದ್ದಿಯಲ್ಲಿದೆ. ಈ ರಸ್ತೆ ಲಲಿತಮಹಲಿಗೆ ಮಾತ್ರವಲ್ಲದೆ, ಪ್ರತಿಷ್ಟಿತ ಬಡಾವಣೆ, ಚಾಮುಂಡಿಬೆಟ್ಟ ಹಾಗೂ ತಿ.ನರಸೀಪುರಕ್ಕೂ ಸಂಪರ್ಕ ಕಲ್ಪಿಸುವುದರಿಂದ ಸದಾ ವಾಹನದಟ್ಟಣಿ ಇದ್ದೇ ಇರುತ್ತದೆ.

ಆದರೆ ಈ ರಸ್ತೆ ಕಿರಿದಾಗಿದ್ದು, ಎರಡು ಬದಿಯಲ್ಲೂ ಮಹಾರಾಜರ ಕಾಲದಲ್ಲಿ ನೆಡಲಾದ ಗಿಡಗಳು ಈಗ ಬೆಳೆದು ಬೃಹತ್ ಮರಗಳಾಗಿವೆ. ಇವು ರಸ್ತೆ ಬದಿಯಲ್ಲಿರುವುದರಿಂದ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದೆ ಆದ್ದರಿಂದ ಮರಗಳನ್ನು ಕಡಿಯಲೇ ಬೇಕೆಂದು ಶ್ರೀಮಂತ ವರ್ಗವೊಂದು ಒತ್ತಾಯಿಸುತ್ತಲೇ ಬಂದಿದೆ.

ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಳು ಲಾರಿಗಳು ಸಂಚರಿಸುತ್ತವೆ. ಇದರಿಂದ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಈ ಅಪಘಾತಗಳಿಗೆ ರಸ್ತೆ ಕಿರಿದಾಗಿರುವುದೇ ಕಾರಣವಾಗಿದೆ. ಹಾಗೆಂದು ರಸ್ತೆ ಅಭಿವೃದ್ಧಿ ಮಾಡೋಣ ಎಂದರೆ ಮರಕಡಿಯುವುದು ಅನಿವಾರ್ಯವಾಗುತ್ತದೆ. ಹಿಂದೆ ಮರಕಡಿದು ರಸ್ತೆ ಅಗಲೀಕರಣಕ್ಕೆ ಮುಂದಾದಾಗ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದ್ದರಿಂದ ಅದನ್ನು ಕೈಬಿಡಲಾಗಿತ್ತು.

ಆದರೆ ಕೆಲವು ಶ್ರೀಮಂತ ವ್ಯಕ್ತಿಗಳಿಗೆ ತಮ್ಮ ಮನೆಗಳಿಗೆ ಕಾರಿನಲ್ಲಿ ತೆರಳಲು ವಾಹನದಟ್ಟಣಿಯಿಂದ ತೊಂದರೆಯಾಗುತ್ತಿದೆಯಂತೆ. ಹಾಗಾಗಿ ಇಲ್ಲಿರುವ ಮರಗಳನ್ನು ಕಡಿದು ರಸ್ತೆ ಮಾಡಿ ಈ ಮರಗಳಿಗೆ ಪರ್ಯಾಯವಾಗಿ ಮೈಸೂರು ಸುತ್ತಮುತ್ತ ಸಸಿಗಳನ್ನು ನೆಟ್ಟರಾಯಿತು ಎಂಬುವುದು ಅವರ ಸಮಜಾಯಿಷಿ. ಹಾಗೊಂದು ವೇಳೆ ಮರ ಕಡಿಯಲು ಹೊರಟರೆ ಸುಮಾರು 140ಕ್ಕೂ ಹೆಚ್ಚು ಮರಗಳು ನಾಶವಾಗುತ್ತವೆ.

ಮರವನ್ನು ಕಡಿದು ರಸ್ತೆಯನ್ನು ಅಗಲೀಕರಣ ಮಾಡಲೇ ಬೇಕೆಂದು ಪಟ್ಟು ಹಿಡಿದಿರುವ ಕೆಲವರು ಈ ಸಂಬಂಧ ಹಲವರ ಮೇಲೆ ಒತ್ತಡ ತಂದಿದ್ದರಿಂದ ಇದೀಗ ರಸ್ತೆ ಅಗಲೀಕರಣಕ್ಕೆ ಅನುಮತಿ ದೊರೆತಿದೆ. ಮತ್ತೊಂದು ಆತಂಕದ ವಿಚಾರವೆಂದರೆ ನಗರದಲ್ಲಿ ಮರಗಳ ರಕ್ಷಣೆಗೆಂದೇ ಇರುವ ಟ್ರೀಕೋಟರ್ ಕೂಡ ಮರಕಡಿಯಲು ಅನುಮತಿ ನೀಡಿದೆಯಂತೆ.

ಈ ವಿಷಯ ತಿಳಿದ ನಗರದ ಎಸಿಐಸಿಎಂ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಮೈಸೂರು ನಗರಪಾಲಿಕೆ ಎದುರು ಪ್ರತಿಭಟನೆ ನಡೆಸಿ ಮರಗಳನ್ನು ಕಡಿಯದಂತೆ ಮೇಯರ್ ಮೇಲೆ ಒತ್ತಡ ತಂದಿದ್ದಾರೆ.

ಈ ರಸ್ತೆಯಲ್ಲಿ ಬೃಹತ್ ಶಾಪಿಂಗ್ ಮಾಲ್ ಕಾಂಪ್ಲೆಕ್ಸ್ ನಿರ್ಮಾಣವಾಗುತ್ತಿದ್ದು, ಇದಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮರಗಳನ್ನು ಕಡಿದು ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದಾರೆ ಎನ್ನುವುದು ಪ್ರತಿಭಟನಾಕಾರರ ಆರೋಪವಾಗಿದೆ.

English summary
Save Lalitha Mahal Road trees from road widening. Mysore Residents protest against Tree cutting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X