ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಷ್ಟಮಂಗಲದ ರೂವಾರಿ ಶೋಭಾ ಕರಂದ್ಲಾಜೆ

By * ರಾಜಕುಮಾರ್ ಭಾವಸಾರ್, ಚಾಮರಾಜನಗರ
|
Google Oneindia Kannada News

Shobha Karandlaje
ಮುಖ್ಯಮಂತ್ರಿಗಳ ಚಾಮರಾಜನಗರ ಭೇಟಿ ವಿಚಾರ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ಅರಿತ ಶೋಭಾ ಕರಂದ್ಲಾಜೆ ಹೇಗಾದರೂ ಸರಿ ಜಿಲ್ಲೆಗೆ ಅಂಟಿರುವ ಕಳಂಕವನ್ನು ದೂರ ಮಾಡಲು ತೀರ್ಮಾನಿಸಿದರು. ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು. ಉಳಿದ ಒಂದೂವರೆ ವರ್ಷದ ಬಿಜೆಪಿ ಆಡಳಿತ ಅವಧಿಯಲ್ಲಿ ಮುಖ್ಯಮಂತ್ರಿಯನ್ನು ಚಾಮರಾಜನಗರಕ್ಕೆ ಕರೆದೊಯ್ಯಬೇಕು. ಜಿಲ್ಲೆಯ ಅಭಿವೃದ್ಧಿ ಮಾಡಲೇಬೇಕು ಎಂದು ನಿರ್ಧರಿಸಿದರು. ಇದಕ್ಕೆಂದೇ ಕಳೆದ ಕೆಲ ತಿಂಗಳ ಹಿಂದಷ್ಟೆ ಕೇರಳದ ಜ್ಯೋತಿಷಿಗಳ ತಂಡ ಚಾಮರಾಜನಗರಕ್ಕೆ ಕರೆಸಿ ಕವಡೆಗಳನ್ನು ಬಿಟ್ಟು ಅಷ್ಟಮಂಗಲ ಪ್ರಶ್ನೆಗಳನ್ನು ಹಾಕಿದ್ದರು.

ಚಾಮರಾಜನಗರಕ್ಕೆ ಶಾಪ ಅಂಟಿದೆ. ಚಾಮರಾಜೇಶ್ವರ ದೇವಸ್ಥಾನದಲ್ಲಿ ಹೋಮ-ಹವನಾದಿಗಳನ್ನು ನಡೆಸಬೇಕು. ದೇವಸ್ಥಾನದ ಮುಂದಿರುವ ಕಲ್ಯಾಣಿಯನ್ನು ಉತ್ಖನನ ಮಾಡಿಸಬೇಕು. ಹಾಗಾದರೆ ಮಾತ್ರ ಚಾಮರಾಜನಗರದ ಅಭಿವೃದ್ಧಿ ಸಾಧ್ಯ ಎಂಬ ಸಲಹೆ-ಸೂಚನೆಗಳನ್ನು ಕೇರಳದ ಜ್ಯೋತಿಷಿಗಳು ನೀಡಿದರು. ಅಂತೆಯೇ ಚಾ.ನಗಕ್ಕೆ ಅಂಟಿರುವ ಶಾಪ ವಿಮೋಚನೆಗಾಗಿ ಶೋಭಾ ಕರಂದ್ಲಾಜೆ ಕೈಗೊಂಡಿರುವ 3 ದಿನಗಳ ಅಷ್ಟಮಂಗಲ ಮಹಾಹೋಮ, ಹವನ ಕಾರ್ಯಕ್ಕೆ ಕೇರಳದ ಕಾಸರಗೋಡಿನ 35 ಜನರ ವಿಶೇಷ ಜ್ಯೋತಿಷಿಗಳ ತಂಡ ಚಾಮರಾಜನಗರಕ್ಕೆ ಆಗಮಿಸಿ ಭಾನುವಾರ (ಸೆ.4) ಸಂಜೆ ಮಹಾಹೋಮ ಆರಂಭಿಸಿದ್ದಾರೆ.

ಅಷ್ಟಮಂಗಲದಲ್ಲಿ ಕಂಡು ಬಂದ ಪ್ರಶ್ನೆಗಳಿಗೆ ಪರಿಹಾರವಾಗಿ ಹೋಮ ಆರಂಭಗೊಂಡಿದೆ. ಹೋಮದಲ್ಲಿ ಸಾವಿರಾರು ಕೆಜಿಯಷ್ಟು ತುಪ್ಪವನ್ನು ಯಜ್ಞ ಕುಂಡದಲ್ಲಿ ಅಗ್ನಿಗೆ ಆಹುತಿ ನೀಡಿ ಅದರ ಹವಿಸ್ಸು ದೇವ ದೇವತೆಗಳಿಗೆ ಅರ್ಪಿತವಾದರೆ ಚಾಮರಾಜನಗರಕ್ಕೆ ಅಂಟಿರುವ ಶಾಪ ವಿಮೋಚನೆ ಆಗಲಿದೆ ಎಂಬುದು ಮಹಾಹೋಮದ ನಂಬಿಕೆ.

ಚಾಮರಾಜನಗರದ ಶಾಪ ವಿಮೋಚನೆಗಾಗಿ ಕೇರಳದ ಜೋತಿಷಿಗಳ ತಂಡ ಕೈಗೊಂಡಿರುವ ಹೋಮ ಇದೀಗ ಚಾಮರಾಜನಗರದಲ್ಲಿ ಪರ ವಿರೋಧ ಪ್ರತಿಭಟನೆಗೂ ಕಾರಣವಾಗಿದೆ. ಹೋಮ ನಡೆಸುವುದನ್ನು ವಿರೋಧಿಸಿರುವ ಪ್ರಗತಿಪರ ಸಂಘಟನೆಗಳ ಕೆಲ ಮುಖಂಡರು ಭಾನುವಾರ ಕಪ್ಪು ಪಟ್ಟಿ ಧರಿಸಿ ಚಾಮರಾಜೇಶ್ವರ ಉದ್ಯಾನದಿಂದ ಭುವನೇಶ್ವರಿ ವೃತ್ತಕ್ಕೆ ಮೆರವಣಿಗೆಯಲ್ಲಿ ತೆರಳಿ ಹೋಮ ನಡೆಯುವುದನ್ನು ವಿರೋಧಿಸಿದರು. ಸರ್ಕಾರವೇ ಮೂಢನಂಬಿಕೆಯನ್ನು ಪೋಷಿಸುತ್ತಿದೆ ಎಂದು ಆಪಾದಿಸಿದರು. ಜಿಲ್ಲಾ ಸಚಿವ ರೇಣುಕಾಚಾರ್ಯ ಮತ್ತು ಶೋಭಾ ಕರಂದ್ಲಾಜೆ ಅವರ ಭೂತದಹನ ಮಾಡಿದರು. ದೇವಸ್ಥಾನದ ಅಭಿವೃದ್ಧಿಗೆ ಹಣ ನೀಡುವ ಬದಲು ಹೋಮ ನಡೆಸುವ ಮೂಲಕ ನಗರದ ಜನರನ್ನು ಅವಮಾನ ಮಾಡಲಾಗುತ್ತಿದೆ ಎಂದು ಘೋಷಣೆ ಕೂಗಿದರು.

ಮತ್ತೊಂದು ಕಡೆ ಚಾಮರಾಜೇಶ್ವರಸ್ವಾಮಿಯ ನೂರಾರು ಭಕ್ತಾದಿಗಳ ಗುಂಪು ಹಿಂದುಳಿದ ಚಾಮರಾಜನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಂಡಿರುವ ಹೋಮವನ್ನು ಸ್ವಾಗತಿಸಿದರು. ಹೋಮವನ್ನು ವಿರೋಧಿಸುವ ಮೂಲಕ ಭಕ್ತಾದಿಗಳ ಧಾರ್ಮಿಕ ಭಾವನೆಗಳನ್ನು ಕೆಣಕುತ್ತಿರುವ ಧರ್ಮವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನದ ಮುಂದೆ ಧರಣಿ ಕುಳಿತರು. ಬಳಿಕ ಯಾವುದೇ ಅಡ್ಡಿ ಇಲ್ಲದಂತೆ ಹೋಮ ನಡೆಯಲು ಬಂದೋಬಸ್ತು ಮಾಡುವುದಾಗಿ ಪೊಲೀಸರು ನೀಡಿದ ಭರವಸೆ ಮೇರೆಗೆ ಪ್ರತಿಭಟನೆಯಿಂದ ಹಿಂದೆ ಸರಿದರು.

English summary
3 days Ashtamangala homa has been commensed in Chamrajnagar to wash the stigma attached to the district. Chief ministers think that if they visit Chamrajnagar they will lose the job very soon. Shobha Karandlaje is supervising the big spiritual event. 35 astrologers have come from Kerala to perform the homa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X