ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

260 ರು.ಯಲ್ಲಿ ಚಡ್ಡಿ ಹಾಕುವ ಮಕ್ಕಳ ಗಣೇಶೋತ್ಸವ

By Prasad
|
Google Oneindia Kannada News

Ganeshotsava in just Rs 260
ಬೆಂಗಳೂರು, ಸೆ. 02 : ಎಂಟರಿಂದ ಹತ್ತು ವರ್ಷ ವಯಸ್ಸಿನ ಚಡ್ಡಿ ಹಾಕುವ ಮಕ್ಕಳು, ಅವರಿವರನ್ನು ಕೇಳಿ, ಪೀಡಿಸಿ ಸಂಗ್ರಹಿಸಿದ್ದು ಕೇವಲ ರು.260. ಆದರೆ, ಗಣೇಶೋತ್ಸವ ಆಚರಿಸಿದ್ದು ಮಾತ್ರ ಯಾರಿಗೂ ಕಡಿಮೆಯಿಲ್ಲದಂತೆ. ಪುಟಾಣಿ ಗಣೇಶ, ಪೆಂಡಾಲು, ಹಾಡು ಧೂಮ್ ಧಮಾಕಾ, ಪಟ್ ಪಟ್ ಪಟಾಕಿ... ಇವರ ಮೋಜು ಮಸ್ತಿಗೆ ಎಲ್ಲೆಯೇ ಇರಲಿಲ್ಲ.

ಈ ರೀತಿ ಪುಡಿಗಾಸಿನಲ್ಲಿ ಬೊಂಬಾಟ್ ಗಣೇಶೋತ್ಸವ ಆಚರಿಸಿದ್ದು ಬಸವೇಶ್ವರ ನಗರದ ಬಳಿಯಿರುವ ಕಾಮಾಕ್ಷಿಪಾಳ್ಯದ ವೃಷಭಾವತಿನಗರದ ಪುಟಾಣಿ ಪಡ್ಡೆಗಳು. ಡಬ್ಬಿ ಹಿಡಿದುಕೊಂಡು ಹೊರಟ ಮಕ್ಕಳಿಗೆ ಸಿಕ್ಕಿದ್ದು ಬರೀ 260 ರು. ಮಾತ್ರ. ಇದು ಅವರ ಉತ್ಸಾಹಕ್ಕೇನು ಕುಂದು ತರಲಿಲ್ಲ.

ಗೃಹಪ್ರವೇಶಕ್ಕೆಂದು ಹಾಕಿದ್ದ ಚಪ್ಪರವನ್ನೇ ಇಸಿದುಕೊಂಡು ಖಾಲಿ ಜಾಗವೊಂದರಲ್ಲಿ ಪೆಂಡಾಲು ಸೃಷ್ಟಿಸಿದರು. ಗಣೇಶ ಹಬ್ಬದಂದು ಪುಟ್ಟ ಗಣಪನನ್ನು ತಂದರು. ಕಾಸು ಸಾಲದಾದಾಗ, ತಮ್ಮತಮ್ಮಲ್ಲೇ ಮಾತನಾಡಿಕೊಂಡು ಒಬ್ಬರು ಮ್ಯೂಸಿಕ್ ಸಿಸ್ಟಂ ತಂದರೆ, ಇನ್ನೊಬ್ಬರು ಗಣೇಶನ ಪೂಜೆಗೆ ಬೇಕಾದ ಪೂಜಾ ಸಾಮಗ್ರಿಗಳನ್ನು ತಂದರು. ಕೆಲವರು ಮನೆಯಿಂದಲೇ ನೈವೇದ್ಯಕ್ಕೆ ಕಡುಬು ಮಾಡಿಸಿಕೊಂಡು ಬಂದರು.

ಇದ್ದಬದ್ದ ಪುಡಿಗಾಸಿನಲ್ಲೇ ಒಂದಿಷ್ಟು ಪಟಾಕಿಯನ್ನೂ ತರುವಲ್ಲಿ ಯಶಸ್ವಿಯಾದರು. ಇಷ್ಟೆಲ್ಲಾ ಆದ ಮೇಲೆ ಕೇಳೋದೇನಿದೆ? ಏರಿಯಾದ ಹಿರಿಯರೊಬ್ಬರನ್ನು ಕರೆದುಕೊಂಡು ಬಂದು ಗಣೇಶನಿಗೆ ಪೂಜೆ ಮಾಡಿಸಿ ಬಂದವರಿಗೆಲ್ಲ ಕಳ್ಳೆಪುರಿ, ಬಾಳೆಹಣ್ಣು ಹಂಚಿ ಸಂತಸಪಟ್ಟರು. ಪೂಜೆ ಮುಗಿದ ಮೇಲೆ 'ತಗಲಾಕ್ಕೊಂಡೆ ನಾನು..' ಹಾಡು ಹಾಕಿಸಿ ಡಂಕಣಕ್ಕ ಡಂಕಣಕ್ಕ ಕುಣಿದದ್ದೇ ಕುಣಿದದ್ದು.

ಪಟಾಕಿಯನ್ನೂ ಹಾರಿಸಿ ಮಜಾ ಉಡಾಯಿಸಿದ ನಂತರ ಪುಟಾಣಿ ಗಣಪನನ್ನು ಕಾಲ್ನಡಿಗೆ ಮೆರವಣಿಗೆಯಲ್ಲಿ ತೆರಳಿ ವಿಸರ್ಜನೆಯನ್ನೂ ಮಾಡಿಬಂದರು. ಆ ಮಕ್ಕಳಿಗೆಲ್ಲ ಗಣೇಶ ವಿದ್ಯಾಬುದ್ಧಿ ಕೊಟ್ಟು ಹರಸಲಿ. ಲಕ್ಷಾಂತರ ದುಡ್ಡು ಸುರಿದು ಮಜಾ ಮಾಡುವವರಿಗೆ ಗಣೇಶ ಬುದ್ಧಿಯನ್ನೂ ಹೇಳಲಿ.

English summary
Children of 8-10 years of age celebrate Ganesha festival in Vrishabhavati nagar in Kamakshipalya in Bangalore in just Rs. 260. Put up a pendal themselves using leftover materials, bought a small Ganesha and had gala Ganeshotsava. May Lord Ganesha bless those kids for their enthusiasm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X