ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಸೆಸ್ ಸುಷ್ಮಾರನ್ನು ಮಿಸ್ ಮಾಡಿಕೊಳ್ಳುತಿದೆ ಬಳ್ಳಾರಿ

By * ರೋಹಿಣಿ ಬಳ್ಳಾರಿ
|
Google Oneindia Kannada News

Bellary misses Sushma Swaraj
ಬಳ್ಳಾರಿ, ಆ. 12 : ಗಣಿ ಹಗರಣದ ಕರಾಳಛಾಯೆ ವರಮಹಾಲಕ್ಷ್ಮಿ ಪೂಜೆಯ ಮೇಲೆ ಸ್ಪಷ್ಟವಾಗಿ ಆವರಿಸಿದೆ. ಮನೆಮಗಳು ಸುಷ್ಮಾ ಸ್ವರಾಜ್ ತವರಿಗೆ ಬರಲು ರಾಜ್ಯ ರಾಜಕೀಯದಲ್ಲಿ ವಿವಾದ ಸೃಷ್ಟಿಸಿರುವ ಗಣಿಯ ಗದ್ದಲ ಅಡ್ಡಿಪಡಿಸುತ್ತಿದೆ. 'ತವರು ಮನೆಗೆ ಕೊಟ್ಟ ಮಾತನ್ನು ತಪ್ಪಿ ನಡೆಯುವುದಿಲ್ಲ" ಎನ್ನುತ್ತಿದ್ದ ಮನೆ ಮಗಳೇ ಬಳ್ಳಾರಿಯತ್ತ ಹೆಜ್ಜೆ ಹಾಕಲು ಸಾವಿರ ಲೆಕ್ಕಾಚಾರ ಹಾಕುತ್ತಿದ್ದಾಳೆ.

1999ರ ಲೋಕಸಭಾ ಚುನಾವಣೆಯಲ್ಲಿ 'ನಾನು ನಿಮ್ಮ ಮನೆಯ ಮಗಳು. ನೀವು ನನಗೆ ಓಟು ಕೊಡಿ - ಬಿಡಿ. ನಾನು ಮನೆ ಮಗಳಾಗಿ ಪ್ರತಿವರ್ಷ ಶ್ರೀವರಮಹಾಲಕ್ಷ್ಮಿ ಪೂಜೆಗೆ ತಪ್ಪದೇ ಬರುತ್ತೇನೆ. ಆಶೀರ್ವದಿಸಿ" ಎಂದಿದ್ದರು. ಜಿಲ್ಲೆಯ ಮತದಾರರು ಸುಷ್ಮಾ ಸ್ವರಾಜ್ ಅವರನ್ನು ಹೃದಯಪೂರ್ವಕವಾಗಿ ಬೆಂಬಲಿಸಿದ್ದರು. ಸುಷ್ಮಾ ಈ ಚುನಾವಣೆಯಲ್ಲಿ ಸೋಲನುಭವಿಸಿದಾಗ ಜಿಲ್ಲೆಯಲ್ಲಿ ಅನಾಥಪ್ರಜ್ಞೆ ಮೂಡಿತ್ತು. ಸುಷ್ಮಾ ಅವರ ಸೋಲನ್ನು ಅರಗಿಸಿಕೊಳ್ಳಲಾಗದ ಅನೇಕರು ಅನ್ನನೀರು ಬಿಟ್ಟರು.

ಜನಾರ್ದನ ರೆಡ್ಡಿ ಅವರು ಪಕ್ಷವನ್ನು ಬೇರುಮಟ್ಟದಲ್ಲಿ ಕಟ್ಟಲು ಸುಷ್ಮಾ ಅವರ ಸೋಲಿನ ಭಾವನಾತ್ಮಕ ಅನುಕಂಪವನ್ನೇ ಬಂಡವಾಳ ಮಾಡಿಕೊಂಡು ಯಶಸ್ಸು ಸಾಧಿಸಿದರು. ಸುಷ್ಮಾ ಅವರ ಸೋಲು ಬಳ್ಳಾರಿಯಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಲು ಪ್ರೇರಣೆ ನೀಡಿತು. ಬಳ್ಳಾರಿ ನಗರಸಭೆ, ಪಾಲಿಕೆ, ಗ್ರಾಮ, ತಾಲೂಕು - ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭೆ, ಲೋಕಸಭೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿತು. ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ನುಚ್ಚುನೂರು ಮಾಡಿ ಇಡೀ ದೇಶದ ರಾಜಕೀಯವೇ ಬಳ್ಳಾರಿಯನ್ನು ನೋಡುವಂತೆ ಆಯಿತು.

ಪ್ರತಿವರ್ಷದ ವರಮಹಾಲಕ್ಷ್ಮಿ ಪೂಜೆಗೆ ಆಗಮಿಸಿ, ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿ ಪೂಜೆ ಸಲ್ಲಿಸಿ ಜಿಲ್ಲಾ ಬಿಜೆಪಿ, ಬಿ. ಶ್ರೀರಾಮುಲು ನೇತೃತ್ವದಲ್ಲಿ ಏರ್ಪಡಿಸುತ್ತಿದ್ದ ಸಾಮೂಹಿಕ ವಿವಾಹಗಳಲ್ಲಿ ಪಾಲ್ಗೊಂಡು ನವದಂಪತಿಗಳಿಗೆ ಆಶೀರ್ವದಿಸುತ್ತಿದ್ದರು. ಸುಷ್ಮಾ ಸ್ವರಾಜ್ ಅವರು ವರ್ಷಕ್ಕೊಮ್ಮೆ ಬಳ್ಳಾರಿಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಶಕ್ತಿ, ಸ್ಪೂರ್ತಿ ತುಂಬುತ್ತಿದ್ದರು. ಕೊಟ್ಟ ಮಾತಿಗೆ ತಪ್ಪದೇ ನಡೆಯುತ್ತಿದ್ದರು.

ಸಾಮೂಹಿಕ ವಿವಾಹ : ಗಣಿ ಹಗರಣ ಕುರಿತು ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಸುಷ್ಮಾ ಸ್ವರಾಜ್ ಬಳ್ಳಾರಿಯ ಯಾವ ವಿಚಾರಗಳತ್ತವೂ ಗಮನ ನೀಡುತ್ತಿಲ್ಲ. ಜನಾರ್ದನ ರೆಡ್ಡಿ ಮತ್ತು ಸಹೋದರರ ಪರವಾಗಿ ರಾಜ್ಯ - ರಾಷ್ಟ್ರ ಬಿಜೆಪಿಯಲ್ಲಿ ವಕಾಲತ್ತು ಮಾಡುತ್ತಿದ್ದ ರೆಡ್ಡಿಗಳ 'ಗಾಡ್ ಮದರ್" ಸುಷ್ಮಾ ಅವರು ಶುಕ್ರವಾರ ನಡೆಯಲಿರುವ ಸಾಮೂಹಿತ ವಿವಾಹ ಮಹೋತ್ಸವಕ್ಕೆ ಗೈರಾಗುತ್ತಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತರನ್ನು ಪ್ರೋತ್ಸಾಹಿಸಲು ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ.

ಬಳ್ಳಾರಿಯ ಬಿಡಿಎಎ ಮೈದಾನದಲ್ಲಿ 300X300 ಅಡಿ ವೇದಿಕೆಯನ್ನು ನಿರ್ಮಿಸಲಾಗಿದೆ. 5000ಕ್ಕೂ ಹೆಚ್ಚಿನ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. 250ಕ್ಕೂ ಹೆಚ್ಚಿನ ಜೋಡಿಗಳು ವಿವಾಹವಾಗಲು ಇಚ್ಛಿಸಿ ಹೆಸರು ನೋಂದಾಯಿಸಿದ್ದಾರೆ. ಬಿಡಿಎಎ ಮೈದಾನವನ್ನು ಅದ್ಧೂರಿಯಾಗಿ ಅಲಂಕರಿಸಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಆಹ್ವಾನಿತರ ಆಳೆತ್ತರ ಕಟೌಟುಗಳನ್ನು ನಿಲ್ಲಿಸಲಾಗಿದೆ. ಬಿಜೆಪಿಯ ಬಾವುಟಗಳು, ಶ್ರೀರಾಮುಲು ಮತ್ತು ರೆಡ್ಡಿ ಸಹೋದರರು, ಸಂಸದೆ ಜೆ. ಶಾಂತ ಸೇರಿ ಅನೇಕ ಮುಖಂಡರ ಕಟೌಟುಗಳು, ಬ್ಯಾನರ್‌ಗಳು ಅಲಂಕಾರಗೊಂಡಿವೆ. ರಾಜಕೀಯ ಏರುಪೇರುಗಳು ಏನೇ ಆಗಲಿ ನಗರದಲ್ಲಿ ಹಬ್ಬದ ಸಂಭ್ರಮವಿದೆ.

English summary
This year Sushma Swaraj will not be present for Varamahalakshmi festival in Bellary. Sushma has distanced herself from Bellary and in particular Reddy Brothers after the illegal mining report was submitted by Lokayukta. But, mass marriage organized in Bellary will be attended by Nitin Gadkari and other leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X