ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಗರ ಪಂಚಮಿಯೂ ಲಿಂಬಾವಳಿ ವ್ಯಾಖ್ಯಾನವೂ
ಬೆಂಗಳೂರು, ಆ. 4 : ನಾಗರ ಪಂಚಮಿಗೂ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಎತ್ತಣಿಂದೆತ್ತಣ ಸಂಬಂಧ? ಇಂದು ನಾಗರ ಪಂಚಮಿ ಇದ್ದ ಕಾರಣ ಪ್ರಮಾಣವಚನ ಸಮಾರಂಭವದಲ್ಲಿ ಭಾಗವಹಿಸಿಲ್ಲ. ಅನ್ಯಥಾ ಭಾವಿಸಬೇಕಿಲ್ಲ ಎಂದು ಶೆಟ್ಟರ ಬಳಗದಿಂದ ನುಡಿಮುತ್ತು ಉದುರಿದೆ!
ಯಡಿಯೂರಪ್ಪ ಬೆಂಬಲಿತ ಡಿವಿಎಸ್ ಬಣ ಮತ್ತು ಜಗದೀಶ್ ಶೆಟ್ಟರ್ ಬಣದ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾಗರ ಪಂಚಮಿ ಪ್ರಯುಕ್ತ ಪ್ರತಿಜ್ಞಾವಿಧಿ ಸಮಾರಂಭಕ್ಕೆ ಬಂದಿಲ್ಲ ಎಂದು ರೆಬೆಲ್ ಗುಂಪಿನ ಅರವಿಂದ ಲಿಂಬಾವಳಿ ತಮ್ಮ ಗೈರು ಹಾಜರಿಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ.
ಗಪ್ ಚಿಪ್ ಕುಳಿತಿರುವ ಜಗದೀಶ್ ಶೆಟ್ಟರ್ ಹೊರತುಪಡಿಸಿದರೆ ರೆಬೆಲ್ ಗುಂಪಿನ ಉಳಿದವರು ತಮಗೆ ತಿಳಿದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮ್ಮನ್ನು ಕರೆದೇ ಇಲ್ಲ ಎಂದು ಅಶೋಕ್ ಹೇಳುತ್ತಿದ್ದರೆ, ಮಹಾದೇವಪುರ ಶಾಸಕ ಅರವಿಂದ ಲಿಂಬಾವಳಿ ಮೇಲಿನಂತೆ ಹೇಳಿಕೆ ನೀಡಿದ್ದಾರೆ.
ಆದರೆ, ಡಿವಿಎಸ್ ಅವರು ಇಂದು ಮಧ್ಯಾಹ್ನ ಸ್ವತಃ ಶೆಟ್ಟರ್ ಮನೆಗೆ ತೆರಳಿ ಆಹ್ವಾನ ನೀಡಿ ಬಂದಿದ್ದರು. ಹೀಗಿದ್ದಾಗ, ಆಹ್ವಾನ ನೀಡಿಲ್ಲವೆಂದು ಅಶೋಕ್ ಹೇಳಿದ್ದೇಕೆ? ನಾಗರ ಪಂಚಮಿಯಂದು ಶುಭ ಸಮಾರಂಭದಲ್ಲಿ ಭಾಗವಹಿಸಬಾರದೆಂದು ಎಲ್ಲಿಯಾದರೂ ಹೇಳಿದೆಯಾ? ಲಿಂಬಾವಳಿ ಉತ್ತರಿಸಬೇಕು.