ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಯಲ್ಲಿ ಕೃಷಿಯನ್ನೇ ನುಂಗಿಹಾಕಿದ ಗಣಿಗಾರಿಕೆ

By Rohini Bellary
|
Google Oneindia Kannada News

ಬಳ್ಳಾರಿ, ಜು. 29 : ಗಣಿ ರಾಜಕಾರಣ ರಾಜ್ಯ ರಾಜಕೀಯದ ಮೇಲೆ ತೀವ್ರವಾದ ಅನಿಶ್ಚಿತತೆ ಮೂಡಿಸಿರುವಾಗಲೇ ಸುಪ್ರೀಂ ಕೋರ್ಟ್‌ನ ಗ್ರೀನ್‌ಬೆಂಚ್ ಶುಕ್ರವಾರ ನೀಡಿರುವ ಜಿಲ್ಲೆಯ ಎಲ್ಲಾ 'ಗಣಿಗಳ ಬಂದ್" ಆದೇಶ ಅನೇಕರ ಬದುಕಿನಲ್ಲಿ ಆಘಾತ ಮೂಡಿಸಿದೆ. ಉದ್ಯಮದಲ್ಲಿ ತಲ್ಲಣ ಮನೆ ಮಾಡಿದೆ. ಮುಂದೇನು? ಎಂದು ಕಾರ್ಮಿಕರು, ನೌಕರರು ಪರಸ್ಪರ ಪ್ರಶ್ನಿಸಿಕೊಳ್ಳುವಂತಾಗಿದೆ.

ಜಿಲ್ಲೆಯ ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ತಾಲೂಕಿನಲ್ಲಿ ಮಾತ್ರ ಗಣಿಗಾರಿಕೆ ನಡೆಯುತ್ತಿದೆ. 1999ರ ಪೂರ್ವದಲ್ಲಿ ಜಿಲ್ಲೆಯ ಮೂಲ ಕಸುಬು ಕೃಷಿ. ಕೃಷಿ ಪೂರಕ ಚಟುವಟಿಕೆಗಳು. 2000ದ ನಂತರ ಗಣಿಗಾರಿಕೆ ವ್ಯಾಪಕವಾಗಿ ನಡೆದು ಕೃಷಿ ಜಿಲ್ಲೆಯಲ್ಲಿ ಕ್ರಮೇಣ ಕಾಣೆ ಆಗುತ್ತಿತ್ತು. ಕೃಷಿ ಕೂಲಿಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳ್ಳಾರಿ ಜಿಲ್ಲೆಯ ಜೀವನಾಡಿ ತುಂಗಭದ್ರೆ ಕೂಡ ಗಣಿಗಾರಿಕೆಯ ಆಘಾತಕ್ಕೆ ಸಿಲುಕಿ ಸದಾ ಕೆಂಪಾಗಿಯೇ ಹರಿಯುತ್ತಿದ್ದಳು. ತುಂಗಭದ್ರೆಯ ಒಡಲಲ್ಲಿ 35 ಟಿಎಂಸಿಯಷ್ಟು ಹೂಳು ತುಂಬಿದ್ದು ಈ ಹೂಳಿನ ಬಹುಪಾಲು ಗಣಿಯದ್ದೇ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ವ್ಯಾಪಕವಾಗಿ ನಡೆದಿದೆ.

ತುಂಗಭದ್ರ ಜಲಾಶಯದ ನಂತರ ಹೊಸಪೇಟೆ ತಾಲೂಕಿನಲ್ಲಿ ಕಬ್ಬು, ಭತ್ತವನ್ನು ವ್ಯಾಪಕವಾಗಿ ಬೆಳೆಯಲಾಯಿತು. ಅಲ್ಲಲ್ಲಿ ಬಾಳೆ, ಇನ್ನಿತರೆ ತೋಟಗಾರಿಕೆ ಬೆಳೆಗಳು ಇದ್ದವು. ಸಂಡೂರು ತಾಲೂಕಿನಲ್ಲಿ ಈರುಳ್ಳಿ, ಶೇಂಗಾ, ಕಾಯಿಪಲ್ಲೆ ಸೇರಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಬಳ್ಳಾರಿ ತಾಲೂಕಿನಲ್ಲಿ ಭತ್ತ, ಕಾಯಿಪಲ್ಲೆ ಸೇರಿ ಇನ್ನಿತರೆ ಬೆಳೆಗಳನ್ನು ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿತ್ತು. ಮಳೆಯಾಶ್ರಿತ ಕೃಷಿಯಲ್ಲಿ ನವಣೆ, ಜೋಳ, ತೊಗರಿ, ಇನ್ನಿತರೆ ಬೆಳೆಗಳನ್ನು ಬೆಳೆಯಲಾಗುತ್ತಿತ್ತು.

ಸಂಡೂರು ತಾಲೂಕಿನಲ್ಲಿ ಕೃಷಿಯೋಗ್ಯ ಭೂಮಿಯಲ್ಲಿ ಆಳಕ್ಕೆ ಕಂದಕ ತೋಡಿ ಡಿಗ್ಗಿಂಗ್ ಗಣಿಗಾರಿಕೆಗೆ ಮುಕ್ತ ಅವಕಾಶ ನೀಡಲಾಯಿತು. ಕೃಷಿಕ ಬೊಗಸೆಯಲ್ಲಿ ಹಣ ಪಡೆದರೆ, ಅಕ್ರಮ ಗಣಿಗಾರಿಕೆ ನಡೆಸಿದವರು ಕೋಟ್ಯಾಂತರ ರುಪಾಯಿಗಳನ್ನು ಬಾಚಿಕೊಂಡರು. ಸಂಡೂರು ತಾಲೂಕಿನ ಕುರೇಕುಪ್ಪ, ತೋರಣಗಲ್ಲು, ಭುಜಂಗನಗರ, ಚೋರನೂರು, ಸಂಡೂರು, ಇನ್ನಿತರೆ ಗ್ರಾಮಗಳಲ್ಲಿ ಈರುಳ್ಳಿ, ಶೇಂಗಾ ಭಿತ್ತನೆ ಸಾಧ್ಯವೇ ಇಲ್ಲ. ಕೃಷಿಯೋಗ್ಯ ಭೂಮಿ ಡಿಗ್ಗಿಂಗ್‌ಗೆ ಬಲಿಯಾಗಿ ಕೃಷಿ ಅಯೋಗ್ಯವಾಗಿದೆ. ಇನ್ನೂ ಕೆಲವೆಡೆ ಭೂಮಿಯ ಮೇಲ್ಪದರು ಕಬ್ಬಿಣದ ಅದಿರಿನ ಧೂಳು ಆವರಿಸಿ ಕೃಷಿಗೆ ಅಲಭ್ಯವಾಗಿದೆ.

ಕೃಷಿಯೋಗ್ಯ ಭೂಮಿಯನ್ನು ಡಿಗ್ಗಿಂಗ್‌ಗೆ ನೀಡಿದ್ದ ಕೃಷಿಕ ಸಿಕ್ಕ ಲೀಸ್ ಹಣವನ್ನು ಗಣಿಗಾರಿಕೆಗೆ ಪೂರಕವಾದ ಲಾರಿ, ಜೆಸಿಬಿ, ಕ್ರಷರ್ ಮತ್ತು ಇನ್ನಿತರೆ ಚಟುವಟಿಕೆಗಳಲ್ಲಿ ವಿನಿಯೋಗಿಸಿದ್ದಾನೆ. ಈತನ ಬಂಡವಾಳಕ್ಕೆ ಅನಿಶ್ಚಿತತೆ ಮೂಡಿದೆ. ಹೊಸಪೇಟೆ ತಾಲೂಕಿನಲ್ಲಿ ಕಂಪ್ಲಿ, ಕೊಟ್ಟಾಲ, ಕಮಲಾಪುರ, ಇನ್ನಿತರೆ ಭಾಗಗಳಲ್ಲಿ ಭತ್ತ ಕೃಷಿ ನಡೆದಿದೆ. ಹೊಸಪೇಟೆ ಪಟ್ಟಣ ಸೇರಿ ಕೊಪ್ಪಳ ತಾಲೂಕಿನತ್ತ ಕೃಷಿ ಕಾಣೆಯಾಗಿದ್ದು, ಗಣಿಗಾರಿಕೆಯ ಮೇಲೆ ಬಹುತೇಕರು ಅವಲಂಭಿಸಿದ್ದರು. ಬಳ್ಳಾರಿ ತಾಲೂಕಿನಲ್ಲಿ ಭತ್ತ, ಹತ್ತಿ, ಮೆಣಸಿಕಾಯಿ, ಮೆಕ್ಕೆಜೋಳ, ಕಾಯಿಪಲ್ಲೆ ಸೇರಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗಿತ್ತು. ಕಳೆದ ಒಂದು ದಶಕದಿಂದ ಜಿಲ್ಲೆಯ ಕೃಷಿ ನಿಧಾನವಾಗಿ ಕಾಣೆ ಆಗಿದೆ.

ಸುಪ್ರೀಂಕೋರ್ಟ್‌ನ ಗ್ರೀನ್‌ಬೆಂಚ್ ಶುಕ್ರವಾರ ನೀಡಿರುವ ಆದೇಶದಿಂದ ಇಡೀ ಜಿಲ್ಲೆ ಮೂಲ ಸ್ವರೂಪಕ್ಕೆ ಮರಳುವ ಚಿಂತನೆ ನಡೆಸಿದೆ. ಗಣಿ ಉದ್ಯಮದಲ್ಲಿ ತಲ್ಲಣ ಮನೆ ಮಾಡಿದೆ. ಉದ್ಯಮಕ್ಕಾಗಿ ಬಂಡವಾಳ ಹೂಡಿದ ಅನೇಕರಲ್ಲಿ ಗೊಂದಲ ಮೂಡಿದೆ. ಕಾರ್ಮಿಕರು, ಸಿಬ್ಬಂದಿಗಳಲ್ಲಿ ನಿರುದ್ಯೋಗದ ಭಯ - ಆತಂಕ ಮನೆ ಮಾಡಿದೆ. ಅನಿಶ್ಚಿತತೆಯೇ ಜಿಲ್ಲೆಯ ಮೂಲವಾಗಿದೆ.

ಕಾರ್ಮಿಕ ಮುಖಂಡ ಮುಂಡ್ರಗಿ ನಾಗರಾಜ್ ಮಾತನಾಡಿ 'ಗಣಿ ಉದ್ಯಮ ರಾಜಕೀಯ ಮತ್ತು ರಾಜಕಾರಣಿಗಳಿಗೆ ಬಲಿಯಾಗಿ ಬಡ ಮತ್ತು ಮಧ್ಯಮವರ್ಗದ ಕಾರ್ಮಿಕರ ಬದುಕು ಮತ್ತು ಭವಿಷ್ಯದ ಮೇಲೆ ಕರಾಳಛಾಯೆ ಮೂಡಿಸಿದೆ. ಸುಪ್ರೀಂಕೋರ್ಟ್‌ನ ಈ ಆದೇಶ ಆಘಾತಕಾರಿ, ಆತಂಕಕಾರಿ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಸುಧಿನ್ ಮಿಶ್ರಾ 'ಹೊಟ್ಟೆಪಾಡಿಗಾಗಿ ಉತ್ತರಪ್ರದೇಶದಿಂದ 8 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೇವೆ. ಆರ್ಥಿಕ ಮುಗ್ಗಟ್ಟು ಆವರಿಸಿದಾಗ ನಾವೆಲ್ಲಾ ಗಂಟುಮೂಟೆ ಕಟ್ಟಿದ್ದೆವು. ಈಗ ಸುಪ್ರೀಂಕೋರ್ಟ್ ಗಣಿಗಳನ್ನು ನಿಷೇಧಿಸಿರುವುದು ನಮಗೆಲ್ಲಾ ದಿಕ್ಕೆಂಟಾಗಿದೆ. ಯಾರದೋ ಮರ್ಜಿಗಾಗಿ ನಾವೆಲ್ಲಾ ಉಪವಾಸ ಬೀಳುವುದು ಸರಿಯೇ?" ಎನ್ನುತ್ತಾರೆ.

English summary
Supreme Court of India has suspended all mining activities in Bellary district with immediate effect. This order has pushed the life of mining workers to uncertainty. Mining has completely buried agriculture in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X