ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರೆಯಾಗುತ್ತಿರುವ ತುಳುನಾಡ ಆಚರಣೆ ಆಟಿಡೊಂಜಿ

By Chidambar Baikampady
|
Google Oneindia Kannada News

Aatidonji Dina in Pilikula
ಮಂಗಳೂರು, ಜು. 26 : ಆಧುನಿಕತೆಯ ಕಾಲಘಟ್ಟದಲ್ಲಿ ಕೆಲವೊಂದು ಆಚರಣೆಗಳು ತೆರೆಗೆ ಸರಿಯುತ್ತಿದ್ದು ಅವುಗಳ ಬಗ್ಗೆ ಎಳೆಯರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಸಚೇತಕ ಕೆ. ಅಭಯಚಂದ್ರ ಜೈನ್‌ ಅವರು ಹೇಳಿದರು.

ಅವರು ಪಿಲಿಕುಳ ನಿಸರ್ಗಧಾಮ ಸಂಸ್ಕೃತಿ ಗ್ರಾಮ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ತಾಲೂಕು ಮಹಿಳಾಮಂಡಲಗಳ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂಸ್ಕೃತಿ ಗ್ರಾಮದ ಗುತ್ತಿನ ಮನೆಯಲ್ಲಿ ಸೋಮವಾರ ಜರುಗಿದ ಆಟಿಡೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಯೋಜಿಸುವ ಮೂಲಕ ಗುತ್ತಿನ ಮನೆಯಲ್ಲಿ ತುಳುನಾಡಿನ ಆಚರಣೆಗಳನ್ನು ನೆನಪಿಸುವ ಕಾರ್ಯ ನಡೆದಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್‌ ಉದ್ಘಾಟಿಸಿದರು.

ಪ್ರಾಚ್ಯ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿದ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು, ಪಿಲಿಕುಳವನ್ನು ತುಳುವರ ಕಲಾಕೇಂದ್ರವಾಗಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ನುಡಿದರು. ಕರಕುಶಲ ವಸ್ತುಗಳ ಪ್ರದರ್ಶನವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಉದ್ಘಾಟಿಸಿದರು.

ಆಟಿ ಆಡುಗೆ ಸಡಗರವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ| ಎನ್‌.ಎಸ್‌. ಚನ್ನಪ್ಪ ಗೌಡ ಅವರು, ನಮ್ಮ ಪೂರ್ವಜರ ಅನೇಕ ಆಚರಣೆಗಳು, ವಿಚಾರಗಳ ಹಿಂದೆ ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತದೆ. ಆದರೆ ಅವುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಮೂಢನಂಬಿಕೆಗಳೆಂದು ಪ್ರತಿಬಿಂಬಿಸುವ ಪ್ರಯತ್ನಗಳಿಂದ ಹಿನ್ನೆಡೆಯುಂಟಾಗಿದೆ ಎಂದು ವಿವರಿಸಿದರು.

ಆಟಿಯ ಮಹತ್ವದ ಬಗ್ಗೆ ಮಂಗಳೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ| ಬಿ.ಶಿವರಾಮ ಶೆಟ್ಟಿ ಅವರು ಮಾತನಾಡಿ, ತುಳುನಾಡಿನ ಕೃಷಿ ಸಂಸ್ಕೃತಿ ನಿಸರ್ಗದೊಂದಿಗೆ ಬೆಸೆದುಕೊಂಡಿದೆ. ಆಟಿಯ ಆಚರಣೆಗಳು ಕೇವಲ ಪ್ರದರ್ಶನ ನೆಲೆಯಲ್ಲಿ ಆಗದೆ ಕೃಷಿ ಸಂಸ್ಕೃತಿ, ನಿಸರ್ಗವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರೇರಣೆ ನೀಡಬೇಕು ಎಂದರು.

ಮೇಯರ್‌ ಪ್ರವೀಣ್‌, ಜಿ.ಪಂ. ಸದಸ್ಯೆ ಯಶವಂತಿ ಆಳ್ವ, ತಾ.ಪಂ. ಸದಸ್ಯ ಹರೀಶ್‌, ಮೂಡುಶೆಡ್ಡೆ ಗ್ರಾ.ಪಂ. ಅಧ್ಯಕ್ಷ ಜೆ. ಉಮೇಶ್‌, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷಿ ಬಿ. ಶೆಟ್ಟಿ ಅವರು ಅತಿಥಿಗಳಾಗಿದ್ದರು. ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಜೆ. ಆರ್‌. ಲೋಬೋ ಸ್ವಾಗತಿಸಿದರು.

English summary
Fast vanishing Tulu culture was celebrated with Aatidonji Dina in Pilikula Nisargadhama in Mangalore district. The dignitaries participated in the event said, conservation of biodiversity, wild life, agriculture should be our priority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X