ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆಸರೆ' ಮನೆ ಕಟ್ಟಿಯಾಗಿದೆ, ಹಂಚುವುದು ಯಾವಾಗ?

By * ರೋಹಿಣಿ ಬಳ್ಳಾರಿ
|
Google Oneindia Kannada News

Aasare houses in Bellary
ಬಳ್ಳಾರಿ, ಜು. 1 : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2009ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ನಿರಾಶ್ರಿತರಾಗಿದ್ದ ಟಿ.ಎಸ್. ಕೂಡ್ಲೂರು ಮತ್ತು ಮಾಟೂರು ಗ್ರಾಮದ ನೂರಾರು ಕುಟುಂಬಗಳಿಗೆ ಬಳ್ಳಾರಿಯ ಬಿಎಂಎಂ ಕಂಪನಿ 700 ಮನೆಗಳನ್ನು ನಿರ್ಮಿಸಿದ್ದು ಫಲಾನುಭವಿಗಳಿಗೆ ವಿತರಣೆ ಆಗಬೇಕಿದೆ.

ಭಾರತ್ ಮೈನ್ಸ್ ಅಂಡ್ ಮಿನರಲ್ಸ್ ಕಂಪನಿಯು ಜಿಲ್ಲಾಡಳಿತದ ಜೊತೆ 2009ರ ಫೆಬ್ರವರಿಯಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರವೇ ಸಿರುಗುಪ್ಪ ತಾಲೂಕಿನ ಟಿ.ಎಸ್. ಕೂಡ್ಲೂರು ಮತ್ತು ಮಾಟೂರು ಗ್ರಾಮಗಳಲ್ಲಿ ಒಟ್ಟು 700 ಮನೆಗಳನ್ನು 30 ಅಡಿ ಅಗಲ, 50 ಅಡಿ ಉದ್ಧದ ನಿವೇಶನದಲ್ಲಿ ಅಂದಾಜು ಒಂದು ಮನೆಗೆ 2 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಪ್ರತಿ ಕೋಣೆಯಲ್ಲಿ 1 ಹಾಲ್, 1 ಬೆಡ್‌ರೂಂ, 1 ಅಡುಗೆ ಮನೆ, 1 ಸ್ನಾನಗೃಹ ಮತ್ತು ಮನೆಯ ಹೊರಭಾಗದಲ್ಲಿ ಶೌಚಾಲಯ ನಿರ್ಮಾಣ ಆಗಿದ್ದು, ಆಧುನಿಕ ಮನೆಗಳ ರೀತಿಯಲ್ಲೇ ಸಾಕಷ್ಟು ಗಾಳಿ - ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿಯ ಇಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಗಳು ಅಂತಿಮಗೊಳಿಸಿರುವ ನಕ್ಷೆಯ ಪ್ರಕಾರವೇ ಮನೆಗಳ ನಿರ್ಮಾಣ ಆಗಿದೆ. ಈ ಪ್ರದೇಶದಲ್ಲಿ ರಸ್ತೆ, ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್, ಶಾಲೆ, ಪಾರ್ಕ್ ನಿರ್ಮಾಣ ಆಗಿವೆ.

ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಿ.ಎಸ್. ಕೂಡ್ಲೂರು ಮತ್ತು ಮಾಟೂರು ಗ್ರಾಮಗಳು 2009ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಸುರಿದ ಭಾರೀ ಮಳೆಯಿಂದ ಜಲಾವೃತ್ತಗೊಂಡಿದ್ದವು. ಇಲ್ಲಿಯ ಜನ - ಜಾನುವಾರು ಪ್ರವಾಹಕ್ಕೆ ಸಿಲುಕಿ ತೀವ್ರ ಸಂಕಷ್ಟಕ್ಕೆ ಗುರಿ ಆಗಿದ್ದರು. ಪರಿಸ್ಥಿತಿ ಶೋಚನೀಯವಾಗಿತ್ತು. ಅನೇಕರು ಮನೆ ಕಳೆದುಕೊಂಡಿದ್ದರು. ನೀರಿನ ರಭಸಕ್ಕೆ ಮನೆಯಲ್ಲಿದ್ದ ಕಾಗದಪತ್ರಗಳು, ಧವಸಧಾನ್ಯಗಳು, ಬಟ್ಟೆಗಳು, ಇನ್ನಿತರೆ ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದರು.

ನಿರಾಶ್ರಿತರಾದ ಅನೇಕರು ಅನಾಥಪ್ರಜ್ಞೆಯಲ್ಲಿದ್ದರು. ಬಡ - ನಿರ್ಗತಿಕರ ಬದುಕುಗಳಿಗೆ ನೆರವಾಗಲು ನಿರ್ಧರಿಸಿದ ಅನೇಕರು ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ತೋರಿದರು. ಸರ್ಕಾರ ನಿರಾಶ್ರಿತರ ಬದುಕುಗಳಿಗೆ ಶಾಶ್ವತ ನೆಲೆ ಕಲ್ಪಿಸಲು ಮನೆಗಳನ್ನು ನಿರ್ಮಿಸಿಕೊಡಲು 'ಆಸರೆ" ಯೋಜನೆಯನ್ನು ಘೋಷಣೆ ಮಾಡಿತು.

ನಿರಾಶ್ರಿತೆ ಹುಲಿಗೆಮ್ಮ ಮಾತನಾಡಿ 'ಮೊದ್ಲು ಅಡಿಗೆ ಮನೆ ಸಣ್ಣದಾಗಿತ್ತು. ಈಗ ದೊಡ್ದದಾಗೈತೆ. ಗಾಳಿ - ಬೆಳಕು ಚೆನ್ನಾಗೆ ಒಳಗ ಬರ್ತಾವೆ. ಪಾಕೇನ ಹೊರಾಗ ಕಟ್ಸಿ ಒಳ್ಳೇದ್ ಮಾಡ್ಯಾರ. ಇಲ್ಲಾಂದ್ರೆ ಗಬ್ಬು ವಾಸನೆ ಮನೆ ತುಂಬಾ ತುಂಬಿರ‍್ತಿತ್ತು. ಮಕ್ಳು ಆಡಿಕೊಳ್ಳಾಕ, ದನ - ಕರ ಕಟ್ಟಾಗ ಒಂದಿಷ್ಟು ಅಂಗ್ಳ ಐತೆ. ಜಾಗ ಕೂಡ ಐತೆ. ಚೆನ್ನಾಗಿಯೇ ಐದಾವೆ" ಎಂದು ಹೇಳುತ್ತಾರೆ.

ಬಹುತೇಕ ನಿರಾಶ್ರಿತರು ಈಗಲೂ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿದ್ದಾರೆ. ಮಳೆ, ಗಾಳಿ, ಚಳಿ ಮತ್ತು ಬಿಸಿಲ ಬೇಗೆಗೆ ತತ್ತರಿಸುತ್ತಿದ್ದಾರೆ. ಟಿ.ಎಸ್. ಕೂಡ್ಲೂರು ಮತ್ತು ಮಾಟೂರು ಗ್ರಾಮಗಳಲ್ಲಿ ಪೂರ್ಣಗೊಂಡಿರುವ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರಬೇಕು ಎಂದು ಮನವಿ ಮಾಡಿದ್ದಾರೆ.

English summary
North Karnataka people, who were affected by flood in 2009 are yet to get shelter built by the govt. 700 houses have been constructed, but are not yet distributed to the needy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X