ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KIADBಗೆ ಹಿಗ್ಗಾಮುಗ್ಗಾ ಬೈದ ನ್ಯಾ.ಶೈಲೇಂದ್ರ ಕುಮಾರ್

By Srinath
|
Google Oneindia Kannada News

Justice DV Shylendra Kumar
ಬೆಂಗಳೂರು, ಜೂನ್ 30 : ದುಡ್ಡು ನುಂಗುತ್ತಿರುವ ಮಠಾಧೀಶರು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಾಲಿಗೆ ಕೆಐಎಡಿಬಿಯಂತಹ ನಿಗಮ ಮಂಡಳಿಗಳು ಸೇರಿಕೊಂಡು ಜನ ಸಾಮಾನ್ಯರನ್ನು ಬೀದಿ ಪಾಲು ಮಾಡಲು ಯತ್ನಿಸುತ್ತಿವೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ ಆತಂಕ ವ್ಯಕ್ತಪಡಿಸಿದ ಪ್ರಸಂಗ ಬುಧವಾರ ನಡೆಯಿತು.

ದೇವನಹಳ್ಳಿ ವಿಮಾನ ನಿಲ್ದಾಣ ಹಾಗೂ ಏರೋಸ್ಪೇಸ್‌ ಯೋಜನೆಗಳ ನೆಪದಲ್ಲಿ ಸಾವಿರಾರು ಎಕರೆ ಕೃಷಿ ಜಮೀನನ್ನು ರೈತರಿಂದ ಕಿತ್ತುಕೊಂಡು ರಿಯಲ್‌ ಎಸ್ಟೇಟ್‌ ದಲ್ಲಾಳಿ ಕೆಲಸ ಮಾಡುತ್ತಿದ್ದಾರೆ ಎಂದು ಕೆಐಎಡಿಬಿ ಅಧಿಕಾರಿಗಳನ್ನು ಶೈಲೇಂದ್ರಕುಮಾರ್ ನೇರವಾಗಿ ತರಾಟೆಗೆ ತೆಗೆದುಕೊಂಡರು.

ಜನರನ್ನು ವಂಚಿಸಿ ಸಾಧುಸಂತರು, ಮಠಾಧೀಶರು, ರಾಜಕಾರಣಿಗಳು ದುಡ್ಡು ನುಂಗಿರುವುದು ಸಾಕಾಗದೆ, ಈಗ ಕೆಐಎಡಿಬಿಯಂತಹ ನಿಗಮ ಮಂಡಳಿಗಳನ್ನು ಅಧಿಕಾರಿಗಳು ಹುಟ್ಟು ಹಾಕಿ, ಅದರ ಮೂಲಕ ಜನ ಜೀವನದ ಜತೆ ಆಟ ಆಡುತ್ತಿದ್ದಾರೆ. ಕೈಗಾರಿಕೆ ಅಭಿವೃದ್ಧಿ ನೆಪದಲ್ಲಿ ಕೃಷಿ ಜಮೀನು ವಶಪಡಿಸಿಕೊಂಡಿರುವ ಕೆಐಎಡಿಬಿ ಲ್ಯಾಂಡ್‌ ಬ್ಯಾಂಕ್‌ ರೀತಿ ಕೆಲಸ ಮಾಡುತ್ತಿದೆ.

ಈ ನಿಗಮದಿಂದ ಅಧಿಕಾರಿಗಳು, ರಾಜಕಾರಣಿಗಳನ್ನು ಹೊರತುಪಡಿಸಿ ಸಾಮಾನ್ಯ ಜನರಿಗೆ ನಯಾ ಪೈಸೆಯಷ್ಟು ಪ್ರಯೋಜನವಾಗಿಲ್ಲ. ಕೈಗಾರಿಕೆಗೆ ಜಮೀನು ಸ್ವಾಧೀನ ಮಾಡಿಕೊಂಡು ಕಲ್ಯಾಣ ಮಂಟಪಗಳ ನಿರ್ಮಾಣಕ್ಕೆ ಹಂಚಿಕೆ ಮಾಡುವ ಪ್ರವೃತ್ತಿ ಮುಂದುವರೆದಿದೆ. ಇದಕ್ಕೆ ರಾಜಾಜಿನಗರ ಕೈಗಾರಿಕಾ ಪ್ರದೇಶವೇ ಸ್ಪಷ್ಟ ನಿದರ್ಶನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಐಎಡಿಬಿ ಸುವರ್ಣ ಮಹೋತ್ಸವ ಆಚರಿಸುವ ದಿನ ಹತ್ತಿರ ಬರುತ್ತಿದೆ. ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಯೋಜನೆ ರೂಪುಗೊಂಡಿದೆ. ಯಾವ ಪುರುಷಾರ್ಥಕ್ಕಾಗಿ ಈ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಬೇಕು. ಈ ಸಂಸ್ಥೆಯಿಂದ ಯಾರಿಗೆ ಉಪಯೋಗವಾಗಿದೆ. ಉತ್ತಮ ಹಾಗೂ ಗುಣಮಟ್ಟ ಸಂಪೂರ್ಣ ಕೈಗಾರಿಕಾ ವಲಯ ಸ್ಥಾಪನೆ ಮಾಡಿರುವ ಉದಾಹರಣೆಯೇ ಇಲ್ಲ. ಜನರನ್ನು ಸಂಕಷ್ಟಕ್ಕೆ ತಳ್ಳುವುದಷ್ಟೇ ಕೆಐಎಡಿಬಿ ಕೆಲಸ ಎಂದು ವ್ಯಂಗ್ಯವಾಡಿದರು.

ದೇವನಹಳ್ಳಿ ವಿಮಾನ ನಿಲ್ದಾಣ ಹಾಗೂ ಏರೋಸ್ಪೇಸ್‌ ಯೋಜನೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ನೀಡಲು ಹಿಂದೇಟು ಹಾಕುವುದನ್ನು ನೋಡಿದರೆ ಭಾರಿ ಅವ್ಯವಹಾರ ನಡೆದಿರುವ ಶಂಕೆ ಕಾಡುತ್ತಿದೆ. ವಿಮಾನ ನಿಲ್ದಾಣಕ್ಕೆಂದು 2650 ಎಕರೆ ಜಮೀನು ಸ್ವಾಧೀನ ಮಾಡಿಕೊಂಡು, ಅದರಲ್ಲಿ 2469 ಎಕರೆಯನ್ನು ಮಾತ್ರ ಉಪಯೋಗಿಸಲಾಗಿದೆ. ಉಳಿದ ಜಮೀನು ಎಲ್ಲಿದೆ, ಯಾರಿಗೆ ಹಂಚಿಕೆ ಮಾಡಲಾಗಿದೆ ಎಂಬುದರ ಮಾಹಿತಿ ಇಲ್ಲ. ಜನರಿಗೆ ಉಪಯೋಗವಾಗುವ ಕೆಲಸ ಮಾಡದೆ ದಲ್ಲಾಳಿಗಳ ರೀತಿ ವರ್ತಿಸುವುದು ಸರಿಯಲ್ಲ ಎಂದು ಸಲಹೆ ನೀಡಿದರು.

ಭೂ ದಾಖಲೆಗಳನ್ನು ತಿರುಚುವಲ್ಲಿ ಕೆಐಎಡಿಬಿ ಅಧಿಕಾರಿಗಳು ತುಂಬಾ ಬುದ್ದಿವಂತರು. ಯೋಜನೆಗಳೇ ಇಲ್ಲದೆ ಭೂಮಿ ಸ್ವಾಧೀನ ಮಾಡಿಕೊಂಡು ಜನರನ್ನು ವಂಚಿಸುವುದರಲ್ಲಿ ಎತ್ತಿದ ಕೈ. ಸರ್ಕಾರವೇ ಜನರಿಗೆ ಈ ರೀತಿ ಮೋಸ ಮಾಡುತ್ತಿರುವುದು ದುರದೃಷ್ಟಕರ. ಭೂ ಸ್ವಾಧೀನ ಕಾಯ್ದೆಯ ಸೆಕ್ಷನ್‌ 28 ಅನ್ನು ದುರುಪಯೋಗ ಮಾಡಿಕೊಂಡು ಸಂವಿಧಾನದ ಕಲಂ 14ನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಪ್ರಕರಣ ಯಾವುದು?: ದೊಡ್ಡಜಾಲದ ಮುನಿಯಪ್ಪ ಎಂಬವರ 2 ಎಕರೆ ಜಮೀನನ್ನು ದೇವನಹಳ್ಳಿ ವಿಮಾನ ನಿಲ್ದಾಣ ಯೋಜನೆಗೆ ಕೆಐಎಡಿಬಿ ಸ್ವಾಧೀನ ಮಾಡಿಕೊಂಡಿತ್ತು. ಆದರೆ ಮಹಿಳೆಗೆ ಪರಿಹಾರ ನೀಡದೆ ಅಧಿಕಾರಿಗಳು ವಂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮುನಿಯಮ್ಮ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕೆಐಎಡಿಬಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ವಶಪಡಿಸಿಕೊಂಡಿದ್ದ 2650 ಎಕರೆ ಜಮೀನನ್ನು ಹೇಗೆ ಉಪಯೋಗಿಸಲಾಗಿದೆ. ಎಷ್ಟು ಪರಿಹಾರ ವಿತರಣೆಯಾಗಿದೆ ಎಂಬುದು ಸೇರಿದಂತೆ ಸಮಗ್ರ ವರದಿ ನೀಡುವಂತೆ ಕೆಐಎಡಿಬಿಗೆ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರಕುಮಾರ್ ಆದೇಶ ನೀಡಿದರು.

English summary
Karnataka High Court Justice D.V. Shylendra Kumar came down heavily on the KIADB, on June 29 and observed that the board is acting as a real estate agent. He observed that both state govt. and KIADB were not adhering to the law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X