ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖಪುಟ ಸುದ್ದಿಗಾಗಿ ರೆಡ್ಡಿ ಸಹೋದರರ ತಹತಹ

By * ರೋಹಿಣಿ ಬಳ್ಳಾರಿ
|
Google Oneindia Kannada News

Janardhana Reddy
ಬಳ್ಳಾರಿ, ಜೂ. 23 : 'ಬಳ್ಳಾರಿ ರೆಡ್ಡಿಗಳು 'ಸುದ್ದಿ"ಗಳಿಲ್ಲದೇ ತಣ್ಣಗಾಗುತ್ತಿದ್ದಾರೆ, ಏಕೆ?" - ಇಂಥಹ ಚರ್ಚೆ ಜಿಲ್ಲೆಯ ಅಥವಾ ರಾಜ್ಯದ ಜನರ ಮನಸ್ಸಿನ ಯಾವುದೋ ಮೂಲೆಯಲ್ಲಿ ಮೂಡಿದ್ದೇ ತಡ, ರೆಡ್ಡಿಗಳ ಗುಂಪು 'ಮುಖ್ಯಾಂಶ"ಗಳತ್ತ ಮುಖ ಮಾಡಿರುತ್ತದೆ.

ನಿಜ, ಬಳ್ಳಾರಿ ಜಿಲ್ಲೆಯನ್ನು ರಾಜ್ಯ - ರಾಷ್ಟ್ರ ರಾಜಕಾರಣದಲ್ಲಿ ತುದಿಗಾಲ ಮೇಲೆ ನಿಲ್ಲಿಸಿ ವಿವಾದಾತ್ಮಕ ಹೇಳಿಕೆಗಳು, ನಿರ್ಧಾರಗಳನ್ನು ಪ್ರಕಟಿಸುವ ಮೂಲಕ, ಜನ ಸೇವೆಯ ಮೂಲಕ, ಸುಷ್ಮಾ ಸ್ವರಾಜ್ ಅವರ ಆಪ್ತೇಷ್ಟರಲ್ಲಿ ಗುರುತಿಸಿಕೊಳ್ಳುವ ಮೂಲಕ ಮನೆ ಮಾತಾಗಿರುವ ಜಿಲ್ಲೆಯ ರೆಡ್ಡಿ ಸಹೋದರರಾದ ಜಿ. ಜನಾರ್ದನರೆಡ್ಡಿ, ಜಿ. ಕರುಣಾಕರರೆಡ್ಡಿ ಮತ್ತು ಜಿ. ಸೋಮಶೇಖರರೆಡ್ಡಿ, ಆಪ್ತರಾದ ಬಿ. ಶ್ರೀರಾಮುಲು, ಸಣ್ಣ ಪಕ್ಕೀರಪ್ಪ, ಜೆ. ಶಾಂತ ಎಲ್ಲರೂ ಸದಾ ಸುದ್ದಿಯಲ್ಲಿರಬೇಕು. ಇಲ್ಲವಾದಲ್ಲಿ ಜನರೇ ಇವರನ್ನು ಹುಡುಕುತ್ತಾರೆ.

ಸದಾ ಸುದ್ದಿಯಲ್ಲೇ ಇರಬೇಕು. ಅವರ ಹೇಳಿಕೆಗಳು, ಮುಖಗಳು ಸುದ್ದಿಯಲ್ಲಿ ಮೂಡುತ್ತಿರಲೇಬೇಕು ಎಂದು ಆಶಯದಿಂದ ಅವರು ತಮ್ಮ ರಾಜಕೀಯ ಜೀವನ ಆರಂಭದ ದಿನಗಳಲ್ಲಿ ಕನ್ನಡ ಸ್ಥಳೀಯ ದಿನಪತ್ರಿಕೆಯೊಂದನ್ನು ಪ್ರಾರಂಭಿಸಿದ್ದರು. ನಂತರ, ರಾಜ್ಯಮಟ್ಟದಲ್ಲಿ ಒಂದು ಟಿವಿ ಛಾನಲ್ ಅನ್ನೂ ಕೂಡ ಪ್ರಾರಂಭಿಸಿ, ಹೊಸ ಭಾಷ್ಯ ಬರೆದಿದ್ದಾರೆ. ಸುದ್ದಿ ಪತ್ರಿಕೆಯೂ ಸದ್ದು ಮಾಡುತ್ತಿಲ್ಲ ಮತ್ತು ಸದ್ದು ಮಾಡುವ ಸುದ್ದಿ ಚಾನಲ್ ಕೂಡ ಸುದ್ದಿ ಮಾಡುತ್ತಿಲ್ಲ.

ಮಿತಿ ಮೀರಿದ ಭದ್ರತಾ ವ್ಯವಸ್ಥೆ, ಜನಸಾಮಾನ್ಯರಿಂದ ಸದಾ ದೂರವೇ ಇರುವ ರೆಡ್ಡಿ ಸಹೋದರರು, ರೆಡ್ಡಿ ಸಹೋದರರ ಸುತ್ತಲೂ ಭದ್ರವಾಗಿ ಆವರಿಸಿಕೊಂಡಿರುವ ಕಾಕಸ್ ಅನ್ನು ಕಂಡ ಬಹುತೇಕ ಮತದಾರರು ರೆಡ್ಡಿಗಳ ಬಿಗಿ ಹಿಡಿತದಿಂದ ಕ್ರಮೇಣ ಹಿಂದಕ್ಕೆ ಸರಿಯುತ್ತಲೇ ಇದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನರೆಡ್ಡಿ ಅವರು 'ನಿಮ್ಮೊಂದಿಗೆ ನಾವು" ಎನ್ನುವ ಕಾರ್ಯಕ್ರಮದ ಮೂಲಕ ಜನಪರ ಕಾಳಜಿ, ಕಳಕಳಿ ತೋರುವ ಚುನಾವಣಾ ತಂತ್ರವನ್ನು ತೋರಿದ್ದರು.

'ನಿಮ್ಮೊಂದಿಗೆ ನಾವು" ಮೂಲಕ ಬಳ್ಳಾರಿ ಜಿಲ್ಲಾ ಮತ್ತು 5 ತಾಲೂಕು ಪಂಚಾಯಿತಿಗಳ ಅಧಿಕಾರವನ್ನು ಎರಡನೇ ಬಾರಿ ಪಡೆಯುವಲ್ಲಿ ಯಶಸ್ವಿ ಆಗಿದ್ದ ರೆಡ್ಡಿ, ಲೋಕಸಭೆಯ ವಿರೋಧ ಪಕ್ಷದ ನಾಯಕಿ, ಬಿಜೆಪಿಯ ಸುಷ್ಮಾ ಸ್ವರಾಜ್ ರೆಡ್ಡಿ ಸೋಹದರರ ಕುರಿತು ವಿಭಿನ್ನ ಹೇಳಿಕೆ ನೀಡಿದ ನಂತರ 'ಡ್ಯಾಮೇಜ್ ಕಂಟ್ರೋಲ್"ಗಾಗಿ ಈ ಯೋಜನೆಗೆ ಮತ್ತೊಮ್ಮೆ ಶರಣಾಗಿದ್ದಾರೆ.

ಕಳೆದ ಒಂದು ವಾರ ಹೂವಿನಹಡಗಲಿಯಿಂದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದವರೆಗೂ ಎಡಬಿಡದೇ ತಿರುಗಾಡಿದ ಜಿ. ಜನಾರ್ದನರೆಡ್ಡಿ, ಬಿ. ಶ್ರೀರಾಮುಲು ಮತ್ತು ಸಂಸದೆ ಜೆ. ಶಾಂತ, ಕೆಎಂಎಫ್ ಅಧ್ಯಕ್ಷ, ಶಾಸಕ ಜಿ. ಸೋಮಶೇಖರರೆಡ್ಡಿ ಅವರ ತಂಡ, 5,000ಕ್ಕೂ ಹೆಚ್ಚಿನ ಅಹವಾಲುಗಳನ್ನು ಸ್ವೀಕರಿಸಿದೆ. 'ನಿಮ್ಮೊಂದಿಗೆ ನಾವು" ಮೂಲಕ ಜನರ ಹೃದಯ - ಮನಸ್ಸುಗಳನ್ನು ಗೆಲ್ಲುವ ಚುನಾವಣಾ ಪೂರ್ವಭಾವಿ ಸಿದ್ಧತೆಗಳನ್ನು ನಡೆಸಿದೆ. ಜನರು ಕೂಡ ಉತ್ತಮವಾಗಿ ಸ್ಪಂದಿಸಿ, ರೆಡ್ಡಿಗಳ ಆಸೆಗೆ ನೀರೆರೆದಿದ್ದಾರೆ.

ಇಷ್ಟಕ್ಕೇ ಸಮಾಧಾನಿ ಆಗದ ರೆಡ್ಡಿಗಳ ಬಳಗ, ಮುಂದಿನ ಚುನಾವಣೆಗಳ ವೇಳೆಗೆಲ್ಲಾ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಬೇಕು ಎಂದು ನಿರ್ಧರಿಸಿ, ಬೆಂಗಳೂರು ಮೂಲದ ವೃತ್ತಿಪರ ಸಾರ್ವಜನಿಕ ಸಂಪರ್ಕ ಏಜೆನ್ಸಿಗಳನ್ನು ಸಂಪರ್ಕಿಸಿ ಪತ್ರಿಕೆಗಳಲ್ಲಿ ತಮ್ಮ ಪರ ಸದಾ ಸುದ್ದಿಗಳನ್ನು ಪ್ರಕಟಿಸುತ್ತಿರುವಂತೆ ಶ್ರಮಿಸಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ರಾಜಕೀಯದಲ್ಲಿ ದಿನೇ ದಿನೇ ಹಿನ್ನಡೆ ಸಾಧಿಸುತ್ತಿರುವ ರೆಡ್ಡಿ ಸಹೋದರರು ಮುಂದಿನ ಚುನಾವಣೆಗೆ ಈಗಿನಿಂದಲೇ ತಾಲೀಮು ಪ್ರಾರಂಭಿಸಿದೆ.

ಅಪಸ್ವರ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಚಿವರು ವಾರಕ್ಕೆ 3 ದಿನ ಬೆಂಗಳೂರಿನಲ್ಲಿ ಇರಬೇಕು. ಮೂರು ದಿನಗಳು ಕ್ಷೇತ್ರ ಸುತ್ತಾಡಬೇಕು. ಜನರ ಸಮಸ್ಯೆಗಳಿಗೆ ಜಿಲ್ಲಾ ಮಟ್ಟದಲ್ಲಿ 'ಜನಸ್ಪಂದನ" ಕಾರ್ಯಕ್ರಮ ನಡೆಸಬೇಕು ಎಂದು ಆದೇಶಿಸಿದ್ದಾರೆ. ಆದರೆ, ಜಿಲ್ಲೆಯ ಸಚಿವ ತ್ರಯರು ಮಾತ್ರ 'ನಿಮ್ಮೊಂದಿಗೆ ನಾವು" ಪ್ರತ್ಯೇಕ ಕಾರ್ಯಕ್ರಮ ನಡೆಸುವ ಮೂಲಕ ಸುದ್ದಿ ಆಗುತ್ತಲೇ ಇದ್ದಾರೆ. ಈ ಯೋಜನೆಯ ಯಶಸ್ವಿಯ ಮೂಲಕ ಮುಖ್ಯಮಂತ್ರಿ ಬಳಗಕ್ಕೇ ಸವಾಲು ಹಾಕುವ ಮೂಲಕ ಸಿಎಂ ಆಪ್ತರ ಬಳಗದಲ್ಲಿ ಅಪಸ್ವರ ಸೃಷ್ಠಿಗೆ ಕಾರಣರಾಗುತ್ತಿದ್ದಾರೆ ಎನ್ನುವುದು ಅವರ ಆಪ್ತರ ಸಾಮಾನ್ಯ ಅಭಿಪ್ರಾಯವಾಗಿದೆ.

English summary
Are Reddy brothers preparing for the election? Janardhana Reddy, Somashekar Reddy, J Shantha, Karunakara Reddy, B. Sriramulu, instead of staying in Bangalore meeting people as if the election is round the corner. Is it their stategy to be in news?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X