ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳದ 'ಆಜೆ-ಸೂಲ' ಎಂದರೆ ಏನು?

By * ಚಿದಂಬರ ಬೈಕಂಪಾಡಿ, ಮಂಗಳೂರು
|
Google Oneindia Kannada News

What is truth test in Dharmasthala?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ ಆಣೆ-ಪ್ರಮಾಣ ಬೀದಿ ರಂಪಾಟ ಆಗಿರುವುದಕ್ಕೆ ಸ್ವತ: ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಗೂ ಬೇಸರವಾದ್ದರೆ ಅಚ್ಚರಿಯಿಲ್ಲ. ಸಮಯ ಕಳೆಯಲು ಪುಟಾಣಿ ಮಕ್ಕಳು ಮದುವೆ ಆಟ, ಕಳ್ಳ ಪೊಲೀಸ್ ಆಟ ಆಡುವುದಕ್ಕಿಂತಲೂ ಕಡೆಯಾಗಿದೆ ದೊಡ್ಡಹುದ್ದೆಯಲ್ಲಿ ಕುಳಿತವರ ನಡವಳಿಕೆ ಎನ್ನುವುದು ಈ ನಾಡಿನ ಸಾಮಾನ್ಯ ಜನರ ಅನಿಸಿಕೆ.

ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡುವ ಇವರ ನಡೆಯ ಹಿನ್ನೆಲೆಯಲ್ಲಿ ಇಲ್ಲಿನ ಪದ್ಧತಿ, ಆಣೆ-ಪ್ರಮಾಣ (ತುಳುವಿನಲ್ಲಿ ಆಜೆ-ಸೂಲ)ದ ಕುರಿತು ಬೆಳಕು ಚೆಲ್ಲುವ ಅಗತ್ಯವಿದೆ. ಧರ್ಮಸ್ಥಳದಲ್ಲಿ ಅಭಯದಾನ, ಅನ್ನದಾನ, ನ್ಯಾಯದಾನ ಹೀಗೆ ಮೂರು ದಾನಗಳಿಗೆ ವಿಶೇಷ ಮನ್ನಣೆ ಮತ್ತು ಇತಿಹಾಸವಿದೆ. ನ್ಯಾಯದಾನದ ಅಡಿಯಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರ ಆಣೆಪ್ರಮಾಣ ಬರುತ್ತದೆ.

ಹಿಂದಿನ ಪದ್ಧತಿಯೆಂದರೆ ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯಿಂದ ತನಗೆ ಅನ್ಯಾಯವಾಗಿದೆ ಅಥವಾ ತೊಂದರೆ ಆಗಿದೆ ಎಂದಾದರೆ ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆಯಾಗಿ ಅವನಿಂದ ತೊಂದರೆ ಅಥವಾ ಅನ್ಯಾಯವಾಗಿದೆ ಎಂದು ತಾನು ಇದ್ದಲ್ಲಿಯೇ ಪ್ರಾರ್ಥನೆ ಮಾಡಿಕೊಂಡರೆ ಸಾಕು ಅದರಿಂದ ಎದುರಾಳಿ ತಪ್ಪು ಮಾಡಿದ್ದರೆ ಖಂಡಿತಾ ದೇವರು ತಕ್ಕ ಶಿಕ್ಷೆಕೊಡುತ್ತಾನೆ ಎನ್ನುವ ನಂಬಿಕೆ.

ಮತ್ತೊಂದು ವಿಧಾನವೆಂದರೆ ವಾದಿ ಮತ್ತು ಪ್ರತಿವಾದಿಗಳು ಧರ್ಮಸ್ಥಳಕ್ಕೆ ಬಂದು ದೇವರ ಮುಂದೆ ನಿಂತು ತಮ್ಮ ತಮ್ಮ ವಾದವನ್ನು ಅಥವಾ ನೋವನ್ನು ಹೇಳಿಕೊಂಡು ದೇವರು ತೀರ್ಮಾನಿಸಲಿ ಎಂದು ಖಾವಂದರ ಅಥವಾ ಅವರಿಂದ ನಿಯೋಜಿತರಾದವರ ಸಮ್ಮುಖದಲ್ಲಿ ಹೇಳುವುದು. ಅವನು ಹಾಗೆ ಹೇಳಿದ್ದಾನೆ(ರೆ), ಹಾಗೆ ಹೇಳಿಲ್ಲ ಎನ್ನುವ ವಾದವನ್ನು ಖಾವಂದರ ಸಮ್ಮುಖದಲ್ಲಿ ಹೇಳಿಕೊಂಡು ಖಾವಂದರು ಕೊಡುವ ತೀರ್ಮಾನದಂತೆ ನಡೆದುಕೊಳ್ಳುವುದು ಮತ್ತೊಂದು ನಡೆ.

ಎಂದೋ ಹಿರಿಯರು ಪರಸ್ಪರ ಜಗಳ ಮಾಡಿಕೊಳ್ಳುವ ಸಂದರ್ಭದಲ್ಲಿ ಸಿಟ್ಟಿನ ಭರದಲ್ಲಿ ಧರ್ಮಸ್ಥಳದ ದೇವರ ಮೇಲೆ ಆಣೆ-ಪ್ರಮಾಣ ಮಾಡಿದ್ದರೆ ಈಗಿನ ಪೀಳಿಗೆಯವರು ಅದರಿಂದ ಮುಕ್ತಿ ಪಡೆಯಲು ಎರಡೂ ಕುಟುಂಬದ ಹಿರಿಯರ ಜೊತೆ ಅಥವಾ ದೈವಗಳು ನುಡಿದಿದ್ದರೆ ಅವರು ಸೂಚಿಸಿದವರೊಂದಿಗೆ ಕ್ಷೇತ್ರಕ್ಕೆ ಖಾವಂದರ ಮುಂದೆ ಹಿಂದಿನವರು ಆಡಿಕೊಂಡಿದ್ದ ಮಾತನ್ನು (ಗೊತ್ತಿದ್ದರೆ) ಹೇಳಿಕೊಂಡು ಪರಿಹಾರ ಕೇಳಬೇಕು. ಆಗ ಖಾವಂದರು ತಪ್ಪು ಕಾಣಿಕೆಯನ್ನು ಎರಡೂ ಕಡೆಯವರು ಹಾಕುವಂತೆ ಹೇಳಿ ದೇವರಿಗೆ ಕೈಮುಗಿಯಲು ತಿಳಿಸುತ್ತಾರೆ. ಅವರು ನುಡಿದಂತೆ ನಡೆದುಕೊಂಡರೆ ಹಿಂದಿನವರು ಆಡಿದ್ದ ಮಾತಿಗಳಿಗೆ ಮುಕ್ತಿ ಅಥವಾ ಆ ಮಾತುಗಳ ದೋಷ ನಿವಾರಣೆ ಆಗುತ್ತದೆ ಎನ್ನುವುದು ನಂಬಿಕೆ.

ಖಾವಂದರ ಸಮ್ಮುಖದಲ್ಲಿಯೇ ಈ ಮಾತುಗಳಿಗೆ ಪರಿಹಾರ ಸಿಗಬೇಕೇ ಹೊರತು ಯಾರಿಗೋ ಗೊತಾಗದಂತೆ ಎರಡೂ ಕಡೆಯವರು ಕ್ಷೇತ್ರಕ್ಕೆ ಹೋಗಿ ದೇವರಿಗೆ ತಪ್ಪು ಕಾಣಿಕೆ ಹಾಕಿ ಪೂಜೆ ಮಾಡಿಸಿದರೆ ಪರಿಹಾರವಾಗುವುದಿಲ್ಲ ಎನ್ನುವುದು ನಂಬಿಕೆ. ಇದು ಇಲ್ಲಿನ ವಿಶೇಷ ಹಾಗೂ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.

ಧರ್ಮಸ್ಥಳದಲ್ಲಿ ಖಾವಂದರು ನೀಡುವ ನ್ಯಾಯದಾನದ ಹಿಂದೆ ದೇವರ ನುಡಿಯಿದೆ ಎನ್ನುವ ಬಲವಾದ ನಂಬಿಕೆಯಿಂದಾಗಿಯೇ ನ್ಯಾಯಾಲಯಗಳಲ್ಲಿ ತೀರ್ಮಾನವಾಗದ ಭೂವಿವಾದಗಳು ಇಲ್ಲಿ ರಾಜಿ-ಸಂಧಾನದ ಮೂಲಕ ಬಗೆಹರಿದಿರುವ ಉದಾಹರಣೆಗಳಿವೆ. ಇವಿಷ್ಟನ್ನು ಹೇಳಿದ ಮೇಲೆ ಯಡಿಯೂರಪ್ಪ, ಕುಮಾರಸ್ವಾಮಿಯವರ ಆಣೆ-ಪ್ರಮಾಣಗಳ ಗತಿಯೇನು ನೀವೇ ಯೋಚಿಸಿ.

English summary
What is truth test in Dharmasthala, Belthangadi taluk, South Canara district. This write up by Chidambar Baikampady throws light on the age old ritual followed by people to settle disputes and to bring out the truth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X