ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನದಲ್ಲಿ ಉರುಳಿಗೆ ಸಿಕ್ಕಿಬಿದ್ದ ಚಿರತೆ ಮರಳಿ ಕಾಡಿಗೆ

By * ಅರಕಲಗೂಡು ಜಯಕುಮಾರ್
|
Google Oneindia Kannada News

Leopard caught in Magodu Koppalu, Hassan
ಅರಕಲಗೂಡು, ಜೂ. 15 : ಹಾಸನ-ಕೊಡಗು ಭಾಗದ ಗಡಿ ಪ್ರದೇಶವಾದ ಮಾಗೋಡು ಕೊಪ್ಪಲು ಗ್ರಾಮದಲ್ಲಿ ಪ್ರಾಣಿಗಳನ್ನು ಹಿಡಿಯುವ ಉರುಳಿಗೆ ಸಿಕ್ಕಿಬಿದ್ದ ಚಿರತೆಯನ್ನು ಪ್ರಾಣಾಪಾಯವಿಲ್ಲದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸಂಜೆಯ ವೇಳೆಗೆ ಬಿಡುಗಡೆಗೊಳಿಸಿದರು.

ಮಲ್ಲಿಪಟ್ಟಣ ಸನಿಹದ ಮಾಗೋಡು ಕೊಪ್ಪಲು ಬಳಿಗೆ ಆಗಳಿ ಫಾರೆಸ್ಟ್ ನಿಂದ ಆಗಮಿಸಿದ ಚಿರತೆ ಗ್ರಾಮದ ಈರಪ್ಪ ಎಂಬುವವರಿಗೆ ಸೇರಿದೆಯೆನ್ನಲಾದ ತೋಟದಲ್ಲಿ ಕಾಡು ಹಂದಿಗಳನ್ನು ಹಿಡಿಯಲು ಹಾಕಲಾಗಿದ್ದ ತಂತಿಯ ಉರುಳಿಗೆ ಸಿಲುಕಿತ್ತು. ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಉರುಳಿಗೆ ಸಿಲುಕಿದ ಚಿರತೆ ಮಂಗಳವಾರ ಸಂಜೆ 6ರವರೆಗೂ ಯಮಯಾತನೆಯನ್ನು ಅನುಭವಿಸಿತು. ಚಿರತೆಯ ಕಾಲುಗಳು ಹಾಗೂ ಸೊಂಟದ ಭಾಗಕ್ಕೆ ಉರುಳು ಬಿಗಿದುಕೊಂಡಿದ್ದರಿಂದ ಎದ್ದು ನಿಲ್ಲಲೂ ಆಗದೆ, ತಪ್ಪಿಸಿಕೊಳ್ಳಲು ಆಗದೇ ಮಲಗಿದ್ದಲ್ಲಿಂದಲೇ ಘರ್ಜಿಸುತ್ತಾ ಮಲಗಿತ್ತು.

ಬೆಳಿಗ್ಗೆ 8 ಗಂಟೆ ಸುಮಾರಿಗೆ ವಿಷಯ ತಿಳಿದು ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿ ಚಿರತೆಗೆ ಕಿರಿಕಿರಿ ಉಂಟು ಮಾಡಿದರಲ್ಲದೇ ಕಲ್ಲುಗಳಿಂದ ಹೊಡೆದು ಹಿಂಸಿಸಿದರು. ಮದ್ಯಾಹ್ನದ ವೇಳೆಗೆ ಆಗಮಿಸಿದ ವಲಯ ಅರಣ್ಯಾಧಿಕಾರಿ ರಾಜಪ್ಪ ಮತ್ತು ಸಿಬ್ಬಂದಿ ಹುಲಿ ಹಿಡಿಯಲು ಬೋನಿಲ್ಲ ಎಂದು ಕೈಚೆಲ್ಲಿ ಕುಳಿತರು. ಇಡೀ ಜಿಲ್ಲೆಗೆ ಏಕೈಕ ಬೋನು ಇದ್ದು, ಅದನ್ನು ಅರಸೀಕೆರೆಯಿಂದ ತರಿಸುವವರೆಗೂ ಕಾಯಬೇಕಾಯಿತು.

ಅರಿವಳಿಕೆ ತಜ್ಞ ಡಾ|| ಶ್ರೀನಿವಾಸ್ ಟ್ರಾಂಕ್ವಿಲೈಸರ್ ನೊಂದಿಗೆ ಹುಣಸೂರು ವನ್ಯ ಜೀವಿ ಉಪವಿಭಾಗದಿಂದ ಸಂಜೆಯ ವೇಳೆಗೆ ಆಗಮಿಸಿ 6.30ಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿದರು. ತಕ್ಷಣ ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರ ಸಹಕಾರದೊಂದಿಗೆ ಬೋನಿಗೆ ಚಿರತೆಯನ್ನು ಸಾಗಹಾಕಲಾಯಿತು.

ನಂತರ ಪತ್ರಕರ‍್ತರೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ರಾಜಪ್ಪ, ಚಿರತೆ 1 ವರ್ಷದಿಂದಲೂ ಈ ಭಾಗದಲ್ಲಿ ಓಡಾಡುತ್ತಿರುವ ಮಾಹಿತಿ ಇತ್ತು ಆದರೆ ಯಾವುದೇ ಜೀವಹಾನಿ ಮಾಡಿರಲಿಲ್ಲ. ಸೆರೆ ಸಿಕ್ಕಿರುವ ಚಿರತೆ 10 ಅಡಿ ಉದ್ದ ಹಾಗೂ 3.5 ಅಡಿ ಎತ್ತರವಿದೆ. ಸುಮಾರು 6 ವರ್ಷ ವಯಸ್ಸಿನದ್ದಾಗಿದ್ದು ಆರೋಗ್ಯದಿಂದಿದೆ ಎಂದರು. ಕಾರ‍್ಯಾಚರಣೆ ನಡೆದ ಸ್ಥಳಕ್ಕೆ ಹಾಸನ ಡಿಎಫ್ ಓ, ಸಕಲೇಶಪುರ ಎಸಿಎಫ್, ಸರ್ಕಲ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಭೇಟಿ ನೀಡಿದ್ದರು.

ಕಳೆದ ಹತ್ತು ದಿನಗಳಲ್ಲಿ ಕಾಡುಪ್ರಾಣಿಗಳು ಅರಣ್ಯ ಬಿಟ್ಟು ಜನಜೀವನವಿದ್ದಲ್ಲಿ ಬರುತ್ತಿರುವುದು ಹೆಚ್ಚಾಗುತ್ತಿದೆ. ಜೂ.6ರಂದು ನಾಲ್ಕು ಕಾಡಾನೆಗಳು ಮೈಸೂರು ನಗರವನ್ನೇ ಪ್ರವೇಶಿಸಿ ಕೋಲಾಹಲವೆಬ್ಬಿಸಿದ್ದವು. ನಂತರ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಜನರನ್ನು ಭಯಭೀತಗೊಳಿಸಿತ್ತು. ಅದರ ಮರುದಿನವೇ ನಂಜನಗೂಡು ರಸ್ತೆಯಲ್ಲಿ ಚಿರತೆಯೊಂದು ಬಂದಿತ್ತು. ಅರಣ್ಯ ನಾಶವಾಗುತ್ತಿದ್ದು, ಪ್ರಾಣಿಗಳು ಆಹಾರಕ್ಕಾಗಿ ನಗರಗಳನ್ನೇ ಪ್ರವೇಶಿಸುತ್ತಿವೆ.

English summary
A leopard was caught in a trap in Magodu Koppalu village in Hassan district was safely released to the forest. Now-a-days wild animals have been entering villages and cities due to the destruction of forest and non availability of enough food in the forest in Karnataka. Recently leopards were spotted in Nanjangud and Vitla in Dakshin Kannada distrct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X