ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬಳಿ ಸಾಧ್ವಿ ರೀತಾಂಬರಾ 'ವಾತ್ಸಲ್ಯ ಗ್ರಾಮ'

By Prasad
|
Google Oneindia Kannada News

Sadhvi Rithambara (pic : vatsalyagram.org)
ಬೆಂಗಳೂರು, ಜೂ. 10 : ನಿರ್ಗತಿಕ ಮಕ್ಕಳು, ನಿರ್ಭಾಗ್ಯ ವಿಧವೆಯರು, ಪರಿತ್ಯಕ್ತ ಮಹಿಳೆಯರು, ದುಷ್ಟ ಮಕ್ಕಳಿಂದ ಹೊರದಬ್ಬಿಸಿಕೊಂಡ ವೃದ್ಧರು, ಅಯ್ಯೋ ಪಾಪ ಅನ್ನದವರೂ ಗತಿಯಿಲ್ಲದಂಥ ವ್ಯಕ್ತಿಗಳನ್ನು ಒಂದೇ ಸೂರಿನಡಿ ಪಾಲಿಸುವಂಥ 'ವಾತ್ಸಲ್ಯ ಗ್ರಾಮ'ವನ್ನು ಬೆಂಗಳೂರಿನ ಬಳಿ ಸ್ಥಾಪಿಸುವುದಾಗಿ ಸಾಧ್ವಿ ರೀತಾಂಬರಾ ಘೋಷಿಸಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ರೀತಾಂಬರಾ ಅವರು, 'ವಾತ್ಸಲ್ಯ ಗ್ರಾಮ' ಯೋಜನೆ ಅಡಿಯಲ್ಲಿ ಅನಾಥಾಶ್ರಮ, ಅಬಲಾಶ್ರಮ, ವೃದ್ಧಾಶ್ರಮಗಳೆಲ್ಲ ಒಂದೇ ಸ್ಥಳದಲ್ಲಿ ಸ್ಥಾಪನೆಯಾಗಲಿದೆ ಎಂದು ನುಡಿದರು. ರಾಮಲೀಲಾ ಮೈದಾನದಲ್ಲಿ ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ ಕೂತಿದ್ದಾಗ ಇದೇ ರೀತಾಂಬರಾ ಬೆಂಬಲ ನೀಡಿದ್ದು ಅನೇಕ ಆಕ್ರೋಶಕ್ಕೆ ಕಾರಣವಾಗಿತ್ತು.

ಮೊದಲ ವಾತ್ಸಲ್ಯ ಗ್ರಾಮವನ್ನು ದೆಹಲಿಯಲ್ಲಿ, ನಂತರ ಉತ್ತರ ಪ್ರದೇಶದ ವೃಂದಾವನ, ಮಧ್ಯ ಪ್ರದೇಶದ ಓಂಕಾರೇಶ್ವರ, ಹಿಮಾಚಲ ಪ್ರದೇಶದ ನಾಲಗಢದಲ್ಲಿ ಸ್ಥಾಪಿಸಲಾಗಿದೆ. ಗುಜರಾತ್ ಬಳಿಯ ಸಾನಂದದಲ್ಲಿಯೂ ಐದನೇ ವಾತ್ಸಲ್ಯ ಗ್ರಾಮ ಸ್ಥಾಪಿಸಲಾಗುತ್ತಿದೆ. ಆರನೆಯ ವಾತ್ಸಲ್ಯ ಗ್ರಾಮ ಬೆಂಗಳೂರು ಬಳಿ ಅನಾಥರಿಗೆ ಆಶ್ರಯ ತಾಣವಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಹೇಳಿದರು.

ವಾತ್ಸಲ್ಯ ಗ್ರಾಮದಲ್ಲಿರುವವರೆಲ್ಲ ಒಂದೇ ಕುಟುಂಬದ ಅಣ್ಣ ತಮ್ಮಂದಿರಂತೆ, ಅಕ್ಕ ತಂಗಿಯರಂತೆ ಮಾನವೀಯತೆಯ ಬಂಧವನ್ನು ಬೆಸೆಯಲಿದ್ದಾರೆ. ಭಾವನಾತ್ಮಕವಾಗಿ ಯಾವುದೇ ರೀತಿಯ ಕೊರತೆ ಆಗದಂತೆ ಅವರನ್ನು ಅಲ್ಲಿ ನೋಡಿಕೊಳ್ಳಲಾಗುವುದು. ಅಮೆರಿಕ, ಇಂಗ್ಲೆಂಡ್ ಮತ್ತಿತರ ರಾಷ್ಟ್ರಗಳಲ್ಲಿ ಇಂಥ ಪರಿಕಲ್ಪನೆ ಜನಪ್ರಿಯತೆ ಪಡೆದಿದೆ ಎಂದು ಸಾಧ್ವಿ ರೀತಾಂಬರಾ ವಿವರಿಸಿದರು.

ಅನಾಥರಿಗೆ ಬರೀ ಒಂದು ತುತ್ತಿನ ಅನ್ನ ಹಾಕಿದರೆ ಸಾಲದು. ವಿದ್ಯಾರ್ಥಿಗಳಿಗೆ ವಿದ್ಯೆ, ವೃತ್ತಿಪರ ತರಬೇತಿ, ದೊರೆಯಬೇಕು. ಅವರು ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವಂತೆ ಅವರ ವ್ಯಕ್ತಿತ್ವವನ್ನು ರೂಪಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿರುತ್ತದೆ ಎಂದು ಯೋಜನೆಯ ರೂಪುರೇಷೆಗಳನ್ನು ಅವರು ತಿಳಿಸಿದರು.

ವಾತ್ಸಲ್ಯ ಗ್ರಾಮ ಅನಾಥರಿಗೆ ಕಾಲ ಕಳೆಯುವ ತಾಣವಾಗಿರುವುದಿಲ್ಲ. ಬದಲಿಗೆ, ವಿದ್ಯಾರ್ಥಿಗಳಿಗೆ ಶಾಲೆ, ಮನೆಗಳು, ಮಕ್ಕಳಿಗೆ ಆಟವಾಡಲು ಮೈದಾನ, ದೇಗುಲಗಳು, ಗೋಶಾಲೆ, ವ್ಯಕ್ತಿತ್ವ ವಿಕಸನ ಕೇಂದ್ರ, ಆಸ್ಪತ್ರೆ, ವೃತ್ತಿಪರ ತರಬೇತಿ ಸಂಸ್ಥೆ, ಆಧ್ಯಾತ್ಮಿಕ ಕೇಂದ್ರಗಳು ತಲೆಯೆತ್ತಲಿವೆ. ಬಡವರ, ನಿರ್ಗತಿಕರ, ಪರಿತ್ಯಕ್ತರ ಬಾಳು ಬಂಗಾರ ಮಾಡುವುದೇ ವಾತ್ಸಲ್ಯ ಗ್ರಾಮ ಸ್ಥಾಪನೆಯ ಉದ್ದೇಶವಾಗಲಿದೆ ಎಂದು ಅವರು ಹೇಳಿದರು.

ಯಾರು ರೀತಾಂಬರಾ? : ಪಂಜಾಬ್ ನ ಬಡ ರೈತ ಕುಟುಂಬಕ್ಕೆ ಸೇರಿರುವ ಸಾಧ್ವಿ ರೀತಾಂಬರಾ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ ನ ಕ್ರಿಯಾಶೀಲ ಸದಸ್ಯೆ. ಹಿಂದೂ ಪರ ಮತ್ತು ಮುಸ್ಲಿಂ ವಿರೋಧಿ. ಸಿಡಿಲಿನ ಮಾತುಗಾರಿಕೆ ಅವರಿಗೆ ಒಲಿದು ಬಂದಿದೆ. ವಿಶ್ವ ಹಿಂದೂ ಪರಿಷತ್ ನ ಮಹಿಳಾ ಪಡೆ (ಆರ್ಮಿ ಆಫ್ ದುರ್ಗಾ) ಸ್ಥಾಪಿಸಿರುವ ರೀತಾಂಬರಾ 1992 ಡಿಸೆಂಬರ್ 6ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿ.

English summary
Hindu activist Sadhvi Rithambara announced that she will be establishing Vatsalya grama near Bangalore to shelter the orphans, desitutes, ill treated old age people. Education, vocational training, personality development will be imparted to the needy. Sadhvi is the main accused in Babri Masjid demolition case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X