ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರುಗುಪ್ಪ ಸರ್ಕಾರಿ ವೈದ್ಯನಿಗೆ ಬಿತ್ತು ಬೇಜಾನ್ ಗೂಸಾ

By * ರೋಹಿಣಿ, ಬಳ್ಳಾರಿ
|
Google Oneindia Kannada News

Siraguppa hospital rampage
ಬಳ್ಳಾರಿ, ಜೂ. 9: ಸಿರುಗುಪ್ಪದ ಓರ್ವ ಬಾಲಕಿ ಹಾವು ಕಚ್ಚಿ ಮೃತಪಟ್ಟ ಹಿನ್ನಲೆಯಲ್ಲಿ ನೂರು ಹಾಸಿಗೆಗಳ ಸರಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರು ವೈದ್ಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.ಹಾವು ಕಚ್ಚಿ ಆಸ್ಪತ್ರೆಗೆ ಬಂದಿದ್ದ ಕಸ್ತೂರಿ (15)ಗೆ ಸರಿಯಾಗಿ ಚಿಕಿತ್ಸೆ ನೀಡದೆ ಮೃತಪಟ್ಟಿದ್ದಾಳೆ ಎಂದು ಸಾರ್ವಜನಿಕರು ಶಂಕಿಸಿದ್ದೇ ಇಡೀ ಘಟನೆಗೆ ಕಾರಣವಾಗಿದೆ.

ಸಿರುಗುಪ್ಪದ 21ನೇ ವಾರ್ಡ್‌ನ ಕಸ್ತೂರಿಗೆ ಮಂಗಳವಾರ ಬೆಳಗ್ಗೆ ೯ಗಂಟೆಗೆ ಮನೆಯಲ್ಲಿ ನಾಗರಹಾವು ಕಚ್ಚಿದೆ. ತಕ್ಷಣವೇ ಬಾಲಕಿಯನ್ನು ಪಟ್ಟಣದ ನೂರು ಹಾಸಿಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಯಿತು. ವೈದ್ಯರು ಬಾಲಕಿಯ ಸಂಬಂಧಿಕರಿಗೆ ಹಾವು ಕಡಿದ ಔಷದಿಯನ್ನು ಹೊರಗಡೆ ತರುವಂತೆ ಸಣ್ಣದೊಂದು ಚೀಟಿಯಲ್ಲಿ ಬರೆದುಕೊಟ್ಟರು.

ಕಸ್ತೂರಿಯ ಪೋಷಕರು ಔಷದಿಯನ್ನು ೨ ಸಾವಿರ ರುಪಾಯಿ ಪಾವತಿಸಿ ತಂದರು. ವೈದ್ಯರು ಇಂಜೆಕ್ಷನ್ ನೀಡಿದರು. ಆದರೂ, ಬಾಲಕಿ ಮತ್ತಷ್ಟು ಅಸ್ವಸ್ತಳಾದಳು. ಗಾಭರಿಗೊಂಡ ವೈದ್ಯ ಆಂಬುಲೆನ್ಸ್‌ನಲ್ಲಿ ಕಸ್ತೂರಿಯನ್ನು ತರಾತುರಿಯಾಗಿ ಬಳ್ಳಾರಿಗೆ ಕಳುಹಿಸುವ ಏರ್ಪಾಟು ಮಾಡಿದರು. ಆದರೆ, ಕಸ್ತೂರಿ ಮಾರ್ಗ ಮಧ್ಯೆ ಮೃತಪಟ್ಟಳು.

ರೊಚ್ಚಿಗೆದ್ದ ಜನ: ವೈದ್ಯರ ಕರ್ತವ್ಯ ಮತ್ತು ಸೇವಾ ನಿರ್ಲಕ್ಷ್ಯದ ಕಾರಣ ಕಸ್ತೂರಿ ಮೃತಪಟ್ಟಿದ್ದಾಳೆ ಎಂದು ರೊಚ್ಚಿಗೆದ್ದ ಸುತ್ತಮುತ್ತಲಿನ ಮನೆಯವರು ಹಾಗೂ ಸಂಬಂಧಿಗಳು ಶವವನ್ನು ಮನೆಗೆ ಸೇರಿಸಿ, ಆಸ್ಪತ್ರೆಯ ಮುಂದೆ ಧರಣಿ ನಡೆಸಿದರು. ಧರಣಿ ನಿರತರನ್ನು ಮಾತನಾಡಿಸಲು ವೈದ್ಯರು ಆಗಮಿಸದ ಕಾರಣ ರೊಚ್ಚಿಗೆದ್ದ ಅವರು ಆಸ್ಪತ್ರೆಯ ಒಳಗೆ ನುಗ್ಗಿ ಸ್ಥಳದಲ್ಲಿಯೇ ಇದ್ದ ವೈದ್ಯಾಧಿಕಾರಿ ಸಂಪತ್‌ಕುಮಾರ್, ವೈದ್ಯರಾದ ಜಗನ್ನಾಥ, ರವೀಂದ್ರನಾಥರನ್ನು ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮುಖ್ಯ ವೈದ್ಯಾಧಿಕಾರಿ ಸಂಪತ್ ಕುಮಾರ್ ಮಾತನಾಡಿ ಹಾವು ಕಚ್ಚಿದ ಬಾಲಕಿಯನ್ನು ಆಸ್ಪತ್ರೆಗೆ ಕರೆತಂದ ಕೂಡಲೇ ಸೇವೆಯಲ್ಲಿದ್ದ ವೈದ್ಯ ಡಾ. ಈರಣ್ಣ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ನಂತರ ಬಾಲಕಿಯ ಪರಿಸ್ಥಿತಿಯನ್ನು ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಕಳುಹಿಸಿದ್ದಾರೆ. ಆದರೆ ಬಾಲಕಿಯು ಮೃತಪಟ್ಟಿದ್ದಾಳೆ. ಆದರೆ ಜನರು ನನ್ನ ಬಳಿ ಯಾವುದೇ ಮಾಹಿತಿಯನ್ನು ಕೇಳದೆ ಏಕಾಏಕಿ ಕಚೇರಿಗೆ ನುಗ್ಗಿ ನನ್ನನು ಸೇರಿ ಇತರೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯ ಉಪಕರಣಗಳನ್ನು ಧ್ವಂಸ ಮಾಡಿದ್ದಾರೆ ಎಂದರು.

English summary
A 15 year girl allegedly died due to snake bite in Siruguppa government hospital. Public go on rampage and damaged hospital furnitures and thrashed doctors
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X