ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧ ಕೆಳಗೆ 'ಎರೆಹುಳ'ದಿಂದ ಸುರಂಗ ಕೊರೆತ

By Srinath
|
Google Oneindia Kannada News

metro underground work
ಬೆಂಗಳೂರು, ಮೇ 22: ವಿಧಾನಸೌಧದ ಒಳಗೂ, ಕೆಳಗೂ ಸ್ಫೋಟಕ ವಾತಾವರಣ ನಿರ್ಮಾಣವಾಗಿದೆ. ನಗರ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಿದ್ಧಗೊಳುತ್ತಿರುವ 'ನಮ್ಮ ಮೆಟ್ರೊ' ರೈಲಿಗಾಗಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಈ ಮಾರ್ಗ ಕೊರೆಯಲು ಜಪಾನಿನ ರಾಕ್ಷಸ ಶಕ್ತಿಯ ಅರ್ಥ್ ವರ್ಮ್ ಎಂಬ ಟನೆಲ್ ಬೋರಿಂಗ್ ಮೆಷಿನ್ ಸಾಥ್ ನೀಡಲಿದೆ.

ಸದ್ಯಕ್ಕೆ ಮೆಜಿಸ್ಟಿಕ್ ಬಳಿ ನಿಲುಗಡೆಯಾಗಿರುವ ಈ ಜೋಡಿ ಯಂತ್ರಗಳನ್ನು ನೋಡಬೇಕೆಂಬ ಕುತೂಹಲ ನಿಮಗಿದ್ದರೆ ಇಂದು, ನಾಳೆಯೊಳಗಾಗಿ ನೋಡಿ ಬನ್ನಿ. ಇಲ್ಲವಾದಲ್ಲಿ, ಭೂಮಿಯೊಳಕ್ಕೆ ಇಳಿದುಬಿಟ್ಟರೆ 4.5 ಕಿ.ಮೀ. ಜೋಡಿ ಮಾರ್ಗ ಕೊರೆದು 2012ರ ಆಗಸ್ಟ್ ವೇಳೆಗೆ ಇವು ಭೂಮಿಯ ಮೇಲಕ್ಕೆ ಬರುತ್ತವೆ.

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ವರೆಗೆ ಈ ಬೃಹತ್ ಯಂತ್ರ ಯಾವುದೇ ಸದ್ದುಗದ್ದಲವಿಲ್ಲದೆ ನಮ್ಮ ಮೆಟ್ರೋಗಾಗಿ ರಾಜ ಮಾರ್ಗ ಕಲ್ಪಿಸಲಿದೆ. ಈ ಮಾರ್ಗದುದ್ದಕ್ಕೂ ಮೆಜಿಸ್ಟಿಕ್ ನಿಲ್ದಾಣವನ್ನು ಹೊರತುಪಡಿಸಿ, ನಾಲ್ಕು ಕಡೆ ನೆಲದಡಿಯೇ ಮೆಟ್ರೊ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ.

ಟನೆಲ್ ಬೋರಿಂಗ್ ಮೆಷಿನ್ (ಟಿಬಿಎಂ) ಸುತ್ತಮುತ್ತ: ಈ ಯಂತ್ರದ ಸುತ್ತಮುತ್ತ ಸುಳಿದಾಡುವುದೇ ಚೆಂದ. ಕುತೂಹಲ ತಣಿಸಲು ಇದರ ಬಗ್ಗೆ ಹೇಳಬೇಕೆಂದರೆ... ಹಿಟಾಚಿ ಕಂಪನಿ ತಯಾರಿಸಿರುವ ಎರಡು ಟಿಬಿಎಂ ಯಂತ್ರಗಳು ಜಪಾನಿನಿಂದ ಕಳೆದ ಮಾರ್ಚ್ ನಲ್ಲಿ ಚೆನ್ನೈ ಬಂದರಿಗೆ ಬಂದಿಳಿದವು. ಅಲ್ಲಿಂದ ಬೆಂಗಳೂರಿಗೆ 28 ಟ್ರಕ್ ಗಳಲ್ಲಿ ಸಾಗಿಸಲಾಯಿತು. ಈ ಯಂತ್ರಗಳ ಜೋಡಣೆಗೆ ಸರಿಯಾಗಿ ಒಂದೂವರೆ ತಿಂಗಳ ಕಾಲಾವಕಾಶ ಹಿಡಿಸಿದೆ.

ಮೆಜೆಸ್ಟಿಕ್‌ನ ಸಂಗಮ್‌ ಕಾಂಪ್ಲೆಕ್ಸ್‌ ವೃತ್ತದಿಂದ ಈ ದೈತ್ಯ ಯಂತ್ರ ಕಾರ್ಯಾಚರಣೆ ನಡೆಸಲಿದ್ದು, ದಿನಕ್ಕೆ ಕನಿಷ್ಠ 6 ಮೀಟರ್ ಹಾಗೂ ಗರಿಷ್ಠ 15 ಮೀಟರ್ ಉದ್ದದ ಸುರಂಗ ಕೊರೆಯಲಿದೆ. ಮೆಜೆಸ್ಟಿಕ್‌ನಿಂದ ಮಿನ್ಸ್ಕ್ ವೃತ್ತದವರೆಗೆ ಶೇ. 20 ರಿಂದ 30 ರಷ್ಟು ಪ್ರಮಾಣ ಕಲ್ಲು ಬಂಡೆಗಳು ಸಿಗುವುದರಿಂದ ಪ್ರತಿ ದಿನ ಸರಾಸರಿ 10 ಮೀಟರ್ ಸುರಂಗ ಕೊರೆಯಬಹುದಾಗಿದೆ ಎಂದು ಬಿಎಂಆರ್ ಸಿಎಲ್‌ ತಂತ್ರಜ್ಞರು ಅಂದಾಜಿಸಿದ್ದಾರೆ.

ಮೆಜೆಸ್ಟಿಕ್‌ನಿಂದ ಮಿನ್ಸ್ಕ್ ವೃತ್ತದವರೆಗಿನ ಸುರಂಗ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷ ಅವಧಿ ಹಿಡಿಯುತ್ತದೆ. ಜೋಡಿ ಮಾರ್ಗಕ್ಕಾಗಿ ಸುಮಾರು 30 ಅಡಿಗಳ ಸಮಾನ ಅಂತರದಲ್ಲಿ ಎರಡು ಸುರಂಗಗಳನ್ನು ಕೊರೆಯಬೇಕಾಗುತ್ತದೆ. ಈಗಾಗಲೇ ಜೋಡಿಸಲಾಗಿರುವ ಒಂದು ಟಿಬಿಎಂ ಸೋಮವಾರದಿಂದ ಕಾರ್ಯಾರಂಭ ಮಾಡಲಿದ್ದು, ಮತ್ತೂಂದು ಮುಂದಿನ ತಿಂಗಳಾಂತ್ಯಕ್ಕೆ ಕೆಲಸ ಆರಂಭಿಸಲಿದೆ.

ಒಂದು ಬಾರಿ ಯಂತ್ರ ಕಾರ್ಯಾರಂಭ ಮಾಡಿದರೆ 26 ದಿನ ಬಿಡುವಿಲ್ಲದೆ ಸುರಂಗ ಕೊರೆಯುತ್ತದೆ. ಉಳಿದ ನಾಲ್ಕು ದಿನಗಳು ಯಂತ್ರದ ನಿರ್ವಹಣೆಗೆ ಮೀಸಲಿಡಲಾಗಿದೆ. ಪೂರ್ವ -ಪಶ್ಚಿಮ ಕಾರಿಡಾರ್ ಸುರಂಗ ಮಾರ್ಗದ ಉದ್ದ 4.8 ಕಿಮೀ ಇದೆ. ಇದರಲ್ಲಿ ಬರುವ ನೆಲದಡಿ ನಿಲ್ದಾಣಗಳ ಕಾಮಗಾರಿ ಭರದಿಂದ ಸಾಗಿದೆ.

ಸುರಂಗ ಮಾರ್ಗ ಕೊರೆಯುವ ಕಾಮಗಾರಿ ವಿದೇಶಿ ತಜ್ಞರ ಉಸ್ತುವಾರಿಯಲ್ಲಿ ನಡೆಯಲಿದೆ. ಜಪಾನ್‌, ತೈವಾನ್‌, ಕೆನಡಾ, ಬ್ರಿಟನ್‌, ಫಿಲಿಪ್ಪೀನ್ಸ್‌ ದೇಶಗಳ ತಂತ್ರಜ್ಞರು ಸೇರಿದಂತೆ 520 ಮಂದಿ ನೌಕರರು ಸುರಂಗ ಕೊರೆಯುವ ಕಾರ್ಯಾಚರಣೆಯಲ್ಲಿ ದುಡಿಯಲಿದ್ದಾರೆ. ಪ್ರತಿ ಪಾಳಿಯಲ್ಲೂ 25 ಮಂದಿ ತಂತ್ರಜ್ಞರು ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಟಿಬಿಎಂಗಳ ಕಾರ್ಯನಿರ್ವಹಣೆಗೆ ಮೆಜೆಸ್ಟಿಕ್‌ ಕಾಮಗಾರಿ ಸ್ಥಳದಲ್ಲಿ ಎಂಟು ಡೀಸೆಲ್‌ ಜನರೇಟರ್ ಗಳ ವ್ಯವಸ್ಥೆ ಮಾಡಲಾಗಿದೆ. ಇವುಗಳಿಂದ 3 ಸಾವಿರ ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಲಿದೆ. ಟಿಬಿಎಂ ಯಂತ್ರದ ತೂಕ 330 ಟನ್‌. ಒಂದು ಯಂತ್ರಕ್ಕೆ 100 ಕೋಟಿ ರೂ. ಬೆಲೆ ಬಾಳುತ್ತದೆ. ಯಂತ್ರದ ಮುಖ್ಯ ಭಾಗ 15 ಮೀಟರ್ ಉದ್ದವಿದೆ. ಯಂತ್ರದ ಹಿಂದೆ ಕಂಪ್ರೆಸರ್‌, ನಿಯಂತ್ರಣ ಕೊಠಡಿ ಮತ್ತಿತರ ವ್ಯವಸ್ಥೆ ಇರುತ್ತದೆ.

ಈ ಯಂತ್ರದ ಒಟ್ಟು ಉದ್ದ 100 ಮೀಟರ್ ಇದೆ. ಯಂತ್ರವು ಮಣ್ಣನ್ನು ಕೊರೆಯುತ್ತಾ ಅದನ್ನು ಹೊರಗೆ ಹಾಕುತ್ತಾ ಸಾಗುತ್ತದೆ. ಹೊರ ಹಾಕಿದ ಬಣ್ಣನ್ನು ಸಣ್ಣ ಟ್ರಕ್‌ಗಳು ಹೊರಗೆ ಸಾಗಿಸುತ್ತವೆ. ಟಿಬಿಎಂ ಯಂತ್ರ ಸುರಂಗ ಕೊರೆಯುತ್ತಿದ್ದಂತೆ ಹಿಂದಿನಿಂದ ಕಾಂಕ್ರಿಟ್‌ ಬ್ಲಾಕ್‌ಗಳಿಂದ ನಿರ್ಮಾಣ ಕಾರ್ಯವೂ ನಡೆಯುತ್ತಿರುತ್ತದೆ.

ಸುರಂಗ ಕೊರೆಯುವಾಗ ನೆಲದ ಮೇಲ್ಭಾಗದ ಕಟ್ಟಡಗಳಿಗೆ ಯಾವುದೇ ಹಾನಿ ಆಗಬಾರದೆಂದು ಈಗಾಲೇ ಪೂರ್ವ ಭಾವಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಸೂಕ್ಷ್ಮಸ್ಥಿತಿಯಲ್ಲಿರುವ ಕಟ್ಟಡಗಳ ಬಳಿ ವಿಶೇಷ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತದೆ.

English summary
The Japan made boring machines create tunnels with a circular cross section through soil and rock, causing minimum disturbance and effecting a smooth tunnel wall. Its all for namma metro ala Bangaloreans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X