ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ನಾಯಕತ್ವಕ್ಕೆ ಜೈ ಎಂದ ಭಿನ್ನರು?

By Prasad
|
Google Oneindia Kannada News

BS Yeddyurappa
ನವದೆಹಲಿ, ಮೇ 14 : ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ 16 ಭಿನ್ನಮತೀಯ ಶಾಸಕರು ಮತ್ತೊಂದು ಜೀವದಾನ ನೀಡಿದ್ದಾರೆಯೆ? ಬಿಜೆಪಿ ಹೈಕಮಾಂಡ್ ಮತ್ತು ಭಿನ್ನರ ನಡುವೆ ಇಂದು ನಡೆದ ಸಂಧಾನ ಪ್ರಕ್ರಿಯೆ ಇಂಥ ಊಹಾಪೋಹಕ್ಕೆ ಪುಷ್ಟಿ ನೀಡಿದೆ. ನಾಯಕತ್ವದಿಂದ ಮುನಿಸಿಕೊಂಡು ಮನೆಬಿಟ್ಟಿದ್ದ ಭಿನ್ನಮತೀಯರು ನಾಯಕತ್ವ ಬದಲಾವಣೆಯ ಬೇಡಿಕೆ ಕೈಬಿಟ್ಟು ಮನೆಗೆ ಮರಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ದೇಶದ ರಾಜಧಾನಿಯಲ್ಲಿ ಇಂದು ನಡೆದ ನಾಟಕೀಯ ಬೆಳವಣಿಗೆಗಳಲ್ಲಿ, ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಶಾಸಕರಾಗಿ ಅರ್ಹತೆ ಪಡೆದಿರುವ ಶಾಸಕರೆಲ್ಲ ಯಡಿಯೂರಪ್ಪನವರ ನಾಯಕತ್ವಕ್ಕೆ ಬೆಂಬಲ ನೀಡಿದ್ದು, ಭಾನುವಾರ ಸಂಜೆ ಬೆಂಗಳೂರಿಗೆ ಮರಳಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಈ ಕುರಿತು ಅಂತಿಮ ನಿರ್ಧಾರವನ್ನು ರಾಜ್ಯಪಾಲರಿಗೆ ಭಾನುವಾರ ತಿಳಿಸಲಿದ್ದಾರೆ.

ಭಿನ್ನಮತೀಯರ ಮನವೊಲಿಸಲು ರೇಣುಕಾಚಾರ್ಯ, ಗೋವಿಂದ ಕಾರಜೋಳ ಮತ್ತು ಉಮೇಶ್ ಕತ್ತಿ ನವದೆಹಲಿಗೆ ತೆರಳಿದ್ದರು. ಭಿನ್ನರ ಪರವಾಗಿ ಬಾಲಚಂದ್ರ ಜಾರಕಿಹೊಳಿ ಅವರು ಹಿರಿಯ ನಾಯಕ ಅರುಣ್ ಜೇಟ್ಲಿ ಮತ್ತು ರಾಜ್ಯದ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂಧಾನಕ್ಕೆ ಎಲ್ಲ ಭಿನ್ನರ ಬೆಂಬಲವಿದೆಯೆ ಎಂಬುದು ಮಾತ್ರ ತಿಳಿಯಬೇಕಿದೆ.

ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಕುಮಾರಸ್ವಾಮಿ ಅವರದು, ಮಳೆ ನಿಂತು ಹೋದ ಮೇಲೆ ಹನಿಯೊಂದು ಜಾರಿದೆ ಎಂಬಂತಹ ಸ್ಥಿತಿಯಾಗಿದೆ. ಬಿಜೆಪಿ ಜೊತೆ ಸಂಧಾನ ಪ್ರಕ್ರಿಯೆ ನಡೆದಿರುವುದು ಗೊತ್ತಾದಾಗ, ಅವರನ್ನು ಭೇಟಿಯಾಗಲು ಬಂದೇ ಇಲ್ಲ, ಸ್ವಂತ ಕಾರ್ಯಕ್ಕಾಗಿ ಬಂದಿದ್ದೆ. ಏನೇ ನಿರ್ಧಾರ ತೆಗೆದುಕೊಳ್ಳಲು ಅವರು ಸ್ವತಂತ್ರರು ಎಂಬ ಹಾರಿಕೆಯ ಜಾಣ ಉತ್ತರ ನೀಡಿದ್ದರು. ಮೇಲ್ನೋಟಕ್ಕೆ ಈ ಮಾತನಾಡಿದ್ದರೂ ಶಿವರಾಜ್ ತಂಗಡಗಿ ಸೇರಿದಂತೆ ಕೆಲ ಭಿನ್ನರನ್ನು ಅವರು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪನವರು ಕೂಡ ತಮ್ಮ ಹಮ್ಮುಬಿಮ್ಮುಗಳನ್ನೆಲ್ಲ ಬದಿಗಿಟ್ಟು, 11 ಬಿಜೆಪಿ ಶಾಸಕರು ಮತ್ತು 5 ಪಕ್ಷೇತರ ಶಾಸಕರೊಡನೆ ಖುದ್ದಾಗಿ ಒಬ್ಬೊಬ್ಬರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಮಂತ್ರಿ ಪದವಿ, ನಿಗಮ ಮಂಡಳಿಯ ಅಧ್ಯಕ್ಷತೆ, ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಸಹಾಯಧನ ಮುಂತಾದ ಬೇಡಿಕೆಗಳನ್ನು ಶಿರಸಾವಹಿಸಿ ಈಡೇರಿಸುವ ಭರವಸೆ ನೀಡಿದ್ದಾರೆ. ನಾಯಕತ್ವ ಬದಲಾವಣೆ ನೆವ ಮಾಡಿಕೊಂಡಿದ್ದ ಭಿನ್ನಮತೀಯರಿಗೂ ಬೇಕಾದದ್ದು ಇದೇ ಅಲ್ಲವೆ?

ಇಲ್ಲಿ ಬೆಂಗಳೂರಿನಲ್ಲಿ, ಬಿಜೆಪಿ ಸರಕಾರ ಬಿದ್ದೇಬಿಡುತ್ತದೆಂದು ಹಗಲುಗನಸು ಕಾಣುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕಾಂಗ್ರೆಸ್ ಪಾಳಯದಲ್ಲಿ ನಿರಾಶೆಯ ವಾತಾವರಣ ಮೂಡಿದೆ. ಈ ಅನಿರೀಕ್ಷಿತ ಬೆಳವಣಿಗೆಗಳಿಂದ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ ಪಾಳಯದಲ್ಲೂ ಆತಂಕ ಸೃಷ್ಟಿಯಾಗುವ ಸಾಧ್ಯತೆಯಿದೆ. ಹಿಂದೆ ಇವರನ್ನು ವಾಚಾಮಗೋಚರವಾಗಿ ಬೈದಿದ್ದವರೇ ಮತ್ತೆ ಆಲಂಗಿಸಿಕೊಳ್ಳಲು ಒಪ್ಪುತ್ತಾರಾ? ಮಂತ್ರಿಗಿರಿಗಾಗಿಯೇ ಚಾತಕ ಪಕ್ಷಿಗಳಂತೆ ಕಾದಿರುವವರು ಭಿನ್ನರಿಗೆ ಅವಕಾಶ ಬಿಟ್ಟುಕೊಡಲು ತಯಾರಾಗುತ್ತಾರಾ? ಯಾರ ತಲೆ ಉರುಳಲಿದೆ, ಯಾರು ಅವಕಾಶ ಗಿಟ್ಟಿಸಲಿದ್ದಾರೆ... ಕಾಲವೇ ಉತ್ತರ ನೀಡಲಿದೆ.

English summary
It is learnt that the dissident MLAs have agreed to the leadership of BS Yeddyurappa. BJP national leader Arun Jaitley and president Dharmendra Pradhan spoke to Balachandra Jarkiholi to pacify them and meet most of their demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X