ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಧಣಿಗಳಿಗೂ ಹಿಡಿದ ಹೆಲಿಕಾಪ್ಟರ್ ಫೋಬಿಯಾ!

By * ರೋಹಿಣಿ ಬಳ್ಳಾರಿ
|
Google Oneindia Kannada News

Janardhana Reddy and Sriramulu
ಬಳ್ಳಾರಿ, ಮೇ. 7 : ಬಳ್ಳಾರಿಯ ಗಣಿಧಣಿಗಳಿಗೂ ಕೂಡ ಹೆಲಿಕಾಪ್ಟರ್ ಭಯ ಕಾಡುತ್ತಿದೆಯೇ? ಇಂಥಹದ್ದೊಂದು ಪ್ರಶ್ನೆ ಅವರ ಬೆಂಬಲಿಗರನ್ನು, ಬಿಜೆಪಿ ಕಾರ್ಯಕರ್ತರನ್ನು, ಆಪ್ತವರ್ಗವನ್ನು ಮತ್ತು ಜನರನ್ನು ತೀವ್ರವಾಗಿ ಕಾಡುತ್ತಿರುವುದು ಸುಳ್ಳಲ್ಲ. ಯಡಿಯೂರಪ್ಪನವರ ದರ್ಪ, ಭಿನ್ನಮತೀಯರ ಬಂಡಾಯ, ಸಿಇಸಿಯ ತನಿಖೆ... ಯಾವುದಕ್ಕೂ ಬೆದರದ ಗಣಿಧಣಿಗಳು ಯಕಃಶ್ಚಿತ್ ಹೆಲಿಕಾಪ್ಟರ್ ಹತ್ತಲು ಭಯಪಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನೇತೃತ್ವವದಲ್ಲಿ ಸಚಿವ ಸಂಪುಟ ಸಭೆ ಗುರುವಾರ ಬೆಳಗ್ಗೆ ಏರ್ಪಟ್ಟಿತ್ತು. ಈ ಸಭೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳ ಸಭೆ ನಡೆಯಲಿತ್ತು. ಅಲ್ಲದೇ, ಸ್ಕೌಟ್ಸ್ ಅಂಡ್ ಗೈಡ್ಸ್‌ನ ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್. ಭಾರಧ್ವಜ್ ಅವರ ಜೊತೆ ಸಚಿವ ಜಿ. ಜನಾರ್ದನರೆಡ್ಡಿ ವೇದಿಕೆ ಹಂಚಿಕೊಳ್ಳಬೇಕಿತ್ತು. ಬುಧವಾರ ಇಡೀ ದಿನ ಬಳ್ಳಾರಿಯಲ್ಲೇ ಇದ್ದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ಗುರುವಾರ ಬೆಂಗಳೂರು ಸೇರಲು ಬಳಸಿದ್ದು ಐಷಾರಾಮಿ ಕಾರು, ಹೆಲಿಕಾಪ್ಟರ್ ಅಲ್ಲ.

ಜನಾರ್ದನರೆಡ್ಡಿ, ಸಚಿವರಾದ ಜಿ. ಕರುಣಾಕರರೆಡ್ಡಿ, ಬಿ. ಶ್ರೀರಾಮುಲು ಮತ್ತು ಕೆಎಂಎಫ್ ಅಧ್ಯಕ್ಷ, ಶಾಸಕ ಜಿ. ಸೋಮಶೇಖರರೆಡ್ಡಿ, ಸಂಸದೆ ಜೆ. ಶಾಂತ ಸೇರಿ ಅನೇಕರು ಹೆಲಿಕಾಪ್ಟರ್‌ಗಳಲ್ಲೇ ಹೆಚ್ಚಾಗಿ ಪ್ರಯಾಣಿಸುವುದು ಸಹಜ. ಪ್ರಾರಂಭದಲ್ಲಿ ಇವರ ಹೆಲಿಕಾಪ್ಟರ್ ರುಕ್ಮುಣಿ' ಹಾರಾಟ ಪ್ರಾರಂಭಿಸುತ್ತಿದ್ದಂತೆ ಕುತೂಹಲದಿಂದ ರಸ್ತೆಗೆ ಓಡಿ ಬರುತ್ತಿದ್ದ ಹುಡುಗರು, ಈಗ ಆ ಕುತೂಹಲವನ್ನು ಕಳೆದುಕೊಂಡಿದ್ದಾರೆ. ಬೆಂಗಳೂರು - ಬಳ್ಳಾರಿ, ಬಳ್ಳಾರಿ - ರಾಯಚೂರು, ಬಳ್ಳಾರಿ - ಗದಗ ಹೀಗೇ ನಾನಾ ಸ್ಥಳಗಳಿಗೆ ನಿತ್ಯ 5 - 6 ಸಲ ಹೆಲಿಕಾಪ್ಟರ್ ಬಳ್ಳಾರಿಯಲ್ಲಿ ಟೇಕಾಫ್ ಆಗಿ, ಲ್ಯಾಂಡ್ ಆಗುತ್ತಿತ್ತು. ಅಷ್ಟೇ ಅಲ್ಲ, ಸಮೀಪದ ತೋರಣಗಲ್ಲು ಏರ್‌ಸ್ಟ್ರಿಪ್‌ನಲ್ಲಿ ತಂಗುತ್ತಿತ್ತು.

ಬಳ್ಳಾರಿಯ ಬಿಜೆಪಿ ರೆಡ್ಡಿಗಳ ರಾಜಕೀಯ ಗುರು' ವೈ.ಎಸ್. ರಾಜಶೇಖರರೆಡ್ಡಿ ಅವರ ಹೆಲಿಕಾಪ್ಟರ್ ದುರಂತ ಸಂಭವಿಸಿದ ನಂತರ ಜನಾರ್ದನರೆಡ್ಡಿ ಮತ್ತು ಸಹೋದರರು ಒಂದಷ್ಟು ದಿನಗಳು ಹೆಲಿಕಾಪ್ಟರ್ ಬಳಕೆಯನ್ನು ಸಂಪೂರ್ಣ ಕೈಬಿಟ್ಟಿದ್ದರು. ನಂತರ ಯಥಾರೀತಿ ಬಳಸಲು ಪ್ರಾರಂಭಿಸಿದ್ದರು. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಅವರ ಹೆಲಿಕಾಪ್ಟರ್ ದುರಂತದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಬಳಕೆಗೆ ರೆಡ್ಡಿಗಳ ಪಾಳಯದಲ್ಲಿ ಕೂಡ ಸಣ್ಣ ಪ್ರಮಾಣದ ನಡುಕ ಉಂಟಾಗಿದೆ. ಗುರುವಾರ ಇವರು ರಸ್ತೆಯ ಮೂಲಕವೇ ಬೆಂಗಳೂರು ತಲುಪಿ, ರಸ್ತೆ ಮೂಲಕವೇ ಬಳ್ಳಾರಿಗೆ ಹಿಂದಿರುಗಿದ್ದಾರೆ.

ರುಕ್ಮುಣಿ ಹೆಸರ್ಯಾಕೆ? : ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಅವರ ತಾಯಿಯ ಹೆಸರು ರುಕ್ಮುಣಮ್ಮ. ಹೀಗಾಗಿ ತಮ್ಮ ಹಾರುಹಕ್ಕಿಗೆ ಅವರು ಹೆಸರಿಸಿದ್ದು ತಾಯಿ ರುಕ್ಮುಣಿ' ಹೆಸರನ್ನು. ತಂದೆ ಪೊಲೀಸ್ ಪೇದೆ ಜಿ. ಚಂಗಾ ರೆಡ್ಡಿ ಅವರನ್ನು ಕಳೆದುಕೊಂಡಿದ್ದ ರೆಡ್ಡಿ ಸಹೋದರರಿಗೆ ತಾಯಿ ಜಿ. ರುಕ್ಮುಣಮ್ಮ ಅವರೇ ದೇವರು, ತಂದೆ, ಮಾರ್ಗದರ್ಶಿ, ಪ್ರೇರಕ ಶಕ್ತಿ ಎಲ್ಲವೂ ಆಗಿದ್ದರು.

ತಾಯಿ ರುಕ್ಮಣಮ್ಮರ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದ ಈ ಸಹೋದರರು, ತಮ್ಮ ಶ್ರೀಮಂತಿಕೆ, ವೈಭವ, ಗೌರವಗನ್ನು ಸೂಚಿಸುವ ಹಾರು ಹಕ್ಕಿಯನ್ನು ಖರೀದಿಸಿದಾಗ ತಾಯಿ ಹೆಸರಲ್ಲೇ ಪೂಜಿಸಿ ಪ್ರಯಾಣಿಸಿ, ಮಾತೆಗೆ ಗೌರವ, ಪ್ರೀತಿ ತೋರಿದ್ದರು.

English summary
hopper phobia has gripped our politicians, including CM Yeddyurappa, after the helicopter of YSR and Khandu. Reddy brothers of Bellery are not exception to it. Reddy brothers have been travelling in cars instead of their chopper Rukmuni, named after her mother Rukmuni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X