ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಹೊನ್ನಾರು ಉತ್ಸವ ನೋಡಲು ಆನಂದ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Honnaru Utsava, Kodagu
ಉತ್ತರ ಕೊಡಗಿನ ಬಯಲುಸೀಮೆ ಪ್ರದೇಶವಾದ ತೊರೆನೂರು ಮತ್ತು ಶಿರಂಗಾಲ ಗ್ರಾಮದಲ್ಲಿ ಇತ್ತೀಚೆಗೆ ನೂತನ ಸಂವತ್ಸರ ಅಂಗವಾಗಿ ರೈತರು ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವ (ಚಿನ್ನದ ಉಳುಮೆ)ವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿದರು.

ಯುಗಾದಿ ಹಬ್ಬವು ಗ್ರಾಮೀಣ ಪ್ರದೇಶದ ರೈತರ ಪಾಲಿಗೆ ಹೊಸ ಸಂವತ್ಸರ ಹೀಗಾಗಿ ಹಬ್ಬದ ಮೂರನೇ ದಿನಕ್ಕೆ ಹೊನ್ನಾರು ಉತ್ಸವವನ್ನು ಆಚರಿಸಲಾಗುತ್ತದೆ. ಈ ಸಂದರ್ಭ ರೈತಾಪಿ ವರ್ಗವು ಹೊಸ ಪಂಚಾಂಗದ ಪ್ರಕಾರ ಹೊನ್ನಾರು ಉತ್ಸವವನ್ನು ಸಾಂಪ್ರಾದಾಯಿಕವಾಗಿ ಆಚರಿಸುವುದು ರೂಢಿ.

ಉತ್ಸವದ ದಿನ ಮುಂಜಾನೆ ರೈತರು ತಮಗೆ ಸೇರಿದ ಎತ್ತು ಹಾಗೂ ದನಕರುಗಳಿಗೆ ನದಿಯ ನೀರಿನಿಂದ ತೊಳೆದು ಅವುಗಳ ಗವುಸು ಹಾಗೂ ಕೊಂಬಿಗೆ ಹಣಸು ವಸ್ತ್ರಾಂಲಕಾರದಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ರೈತರು ಹೊಸ ಉಡುಗೆ-ತೊಡಿಗೆ ತೊಟ್ಟು ತಮ್ಮ ಕೃಷಿ ಪರಿಕರಗಳಾದ ನೇಗಿಲು, ನೊಗ, ಎತ್ತಿನಗಾಡಿಯೊಂದಿಗೆ ಹತ್ಯಾರುಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸಿದರು. ಉತ್ಸವದ ಅಂಗವಾಗಿ ಹೋಳಿಗೆ, ಪಾಯಿಸ ಮತ್ತಿತರ ಭಕ್ಷ್ಯ ಭೋಜನವನ್ನು ತಯಾರಿಸಿ ತಮ್ಮ ಜಾನುವಾರುಗಳಿಗೆ ತಿನ್ನಿಸಿ, ತಾವು ಸೇವಿಸಿ ಸಂಭ್ರಮಿಸಿದರು.

ಹೊನ್ನಾರು ಉಳುಮೆ:
ತೊರೆನೂರು ಗ್ರಾಮದ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರೆಲ್ಲ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಸೇರಿ, ಜಾನುವಾರುಗಳಿಗೆ ಸಾಮೂಹಿಕ ಪೂಜೆ ಸಲ್ಲಿಸುವ ಮೂಲಕ ಈಡುಗಾಯಿ ಹಾಕಿ ಹೊನ್ನಾರು ಉಳುಮೆಗೆ ಸಿದ್ಧತೆ ನಡೆಸಿದರು. ಹೊಸ ಪಂಚಾಂಗದಂತೆ ಗ್ರಾಮದ ರೈತ ಟಿ.ಜಿ.ನಟರಾಜ್ ಅವರು ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಹೊನ್ನಾರು (ಚಿನ್ನದ ಉಳುಮೆ) ಹೂಡಿ ವರ್ಷಧಾರೆ ಉಳುಮೆಗೆ ಚಾಲನೆ ನೀಡಿದರು.

ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಹೊರಟ ಹೊನ್ನಾರುಗಳು ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಬಸವೇಶ್ವರ ದೇವಸ್ಥಾನಕ್ಕೆ ಪ್ರಾದಕ್ಷಿಣೆ ಹಾಕಿ ನಂತರ ನಟರಾಜ್‌ನನ್ನು ಹಿಂಬಾಲಿಸುವ ಮೂಲಕ ಉಳುಮೆ ಆರಂಭಿಸಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಿ ಸಂಭ್ರಮಿಸಿದರು. ನಂತರ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಉಳುಮೆ ಆರಂಭಿಸಿದರು.

ಉತ್ತರ ಕೊಡಗಿನ ಶಿರಂಗಾಲ, ತೊರೆನೂರು, ಮಣಜೂರು, ಕೂಡಿಗೆ, ಮದಾಲಪುರ, ಹುಲುಸೆ, ಭುವನಗಿರಿ, ಮೊದಲಾದ ಗ್ರಾಮಗಳಲ್ಲಿ ಜನಪದ ಸಂಸ್ಕೃತಿಯ ಹೊನ್ನಾರು ಉತ್ಸವವನ್ನು ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಎತ್ತುಗಳ ಬದಲಿಗೆ ಯಂತ್ರವನ್ನು ಬಳಸುವ ಇಂದಿನ ಆಧುನಿಕ ಯುಗದಲ್ಲಿಯೂ ರೈತರು ಹಬ್ಬವನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿ ಸಂಪ್ರದಾಯದ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ.

English summary
Kodava comunity in North Kodagu dressed in traditional wear celebrated ‘Honnaru’ (golden ploughing) festival. It is a festival of farmers, where in all the farmers of the community get together along with their cattles and offer prayer to the rain god.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X