ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನವಮಿ ಕೊಡುಗೆ ಕಾವೇರಿ ನದಿಗೆ ತೂಗುಸೇತುವೆ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Cauvery Bridge, North Kodagu
ಮಡಿಕೇರಿ, ಏ.12: ಉತ್ತರ ಕೊಡಗಿನ ಪ್ರವಾಸಿ ಕೇಂದ್ರವಾದ ರಾಮಸ್ವಾಮಿ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಕಾವೇರಿ ನದಿಗೆ ಅಡ್ಡಲಾಗಿ ತೂಗುಸೇತುವೆ ನಿರ್ಮಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶ್ರೀರಾಮನವಮಿಗೆ ಸರ್ಕಾರದಿಂದ ಸಿಕ್ಕಿರುವ ಕೊಡುಗೆ ಜನಸಾಮಾನ್ಯರ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.

ಇದರಿಂದಾಗಿ ಕೊಡಗು ಮತ್ತು ಮೈಸೂರು ಜಿಲ್ಲೆಗಳ ಗಡಿ ಗ್ರಾಮಗಳ ನಡುವೆ ಸಂಪರ್ಕ ದೊರೆಯಲಿದ್ದು, ದೋಣಿ ಮೂಲಕ, ನದಿಯನ್ನು ಈಜಿ ದಾಟಬೇಕಾದ ಹಾಗೂ ಹತ್ತಾರು ಕಿ.ಮೀ. ದೂರವನ್ನು ಕ್ರಮಿಸಿ ಹೋಗಬೇಕಾದ ತೊಂದರೆ ತಪ್ಪಲಿದೆ.

ತೂಗುಸೇತುವೆ ನಿರ್ಮಿಸಿ ಕೊಡಿ ಎಂಬುವುದು ಕಣಿವೆ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡಕಮರವಳ್ಳಿ, ಶ್ಯಾನುಭೋಗನಹಳ್ಳಿ, ಮಂಟಿಕೊಪ್ಪಲು ಮತ್ತಿತರ ಹಳ್ಳಿಗಳ ಜನತೆಯ ಬಹುದಿನದ ಬೇಡಿಕೆಯಾಗಿತ್ತು.

ಈ ಹಳ್ಳಿಗಳ ಜನತೆ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗಾಗಿ ಕೊಡಗು ಜಿಲ್ಲೆಯನ್ನು ಅವಲಂಭಿಸಿದ್ದು, ಆ ಭಾಗದ ವಿದ್ಯಾರ್ಥಿಗಳು ಕುಶಾಲನಗರ, ಹೆಬ್ಬಾಲೆ, ಶಿರಂಗಾಲ ಶಾಲಾ - ಕಾಲೇಜಿಗೆ ಬರುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಉಕ್ಕಿ ಹರಿದಾಗ ಜನತೆ ನದಿದಾಟಲು ತೊಂದರೆಯುಂಟಾಗಿ ಬಳಸು ದಾರಿಯಲ್ಲಿ ಕುಶಾಲನಗರದಿಂದ ಕೊಪ್ಪ, ಆವರ್ತಿ ಕಡೆಯಿಂದ 15 ರಿಂದ 16 ಕಿ.ಮೀ.ದೂರ ಕ್ರಮಿಸಬೇಕಾಗಿತ್ತು.

ಈ ಮಧ್ಯೆ ನದಿ ದಾಟಲು ಒದಗಿಸಿದ್ದ ನಾಡಾ ದೋಣಿಯೂ ದುಸ್ಥಿತಿಗೀಡಾಗಿದ್ದರಿಂದಾಗಿ ಪರದಾಡುವಂತಾಗಿತ್ತು. ಈ ಸಂದರ್ಭ ಕಣಿವೆ ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ಕೋರಿಕೆ ಮೇರೆಗೆ ಕಳೆದ ವರ್ಷ ಇದೇ ವೇಳೆಗೆ ಅಂದಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದ ವಿ.ಎಂ.ವಿಜಯ ಅವರು ಜಿ.ಪಂ.ವತಿಯಿಂದ ದೋಣಿ ವ್ಯವಸ್ಥೆ ಕಲ್ಪಿಸಿಕೊಟ್ಟರು. ಆದರೆ ಈ ದೋಣಿ ಕೂಡ ನದಿಯಲ್ಲಿ ಸರಾಗವಾಗಿ ಸಾಗದೆ ನದಿದಂಡೆ ಸೇರಿತು.

ಕಣಿವೆಗೆ ದೋಣಿ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಬಗ್ಗೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಜಿ.ಪಂ.ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್ ಅವರು ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿಕೊಂಡ ಮೇರೆಗೆ ಇದೀಗ ತೂಗು ಸೇತುವೆಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.

English summary
North Kodagu public is celebrating Sri Rama Navami very happily since Karnataka government sanctioned hanging bridge(Ramaswamy bridge) across Cauvery river near Sri Ramalingeshwara Temple. This bridge connect many remote hamlets and is the main transport way in Mysore and Kodagu border area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X