ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾದಂಬರಿ ಓದಿ ಚಿನ್ನದಂಗಡಿಗೆ ಕನ್ನ ಹಾಕಿದರು!

By Srinath
|
Google Oneindia Kannada News

Jewellery Shop Theft
ಬೆಂಗಳೂರು, ಏ. 8: ಹೋಟೆಲಿನಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಖದೀಮರಿಗೆ ದಿಢೀರನೆ ಶ್ರೀಮಂತರಾಗುವ ಕನಸಿತ್ತು. ಅದನ್ನು ಸಾಕಾರಗೊಳಿಸಿಕೊಳ್ಳಲು ಅವರು ಪತ್ತೆದಾರಿ ಕಾದಂಬರಿಗಳನ್ನು ಕೈಗೆತ್ತಿಕೊಂಡರು. ಒಂದಷ್ಟು ಬುದ್ಧಿ ಚುರುಕಾಗುತ್ತಿದ್ದಂತೆ ಅಲ್ಲಿ ಇಲ್ಲಿ ಕೈಚಳಕ ತೋರಲಾರಂಭಿಸಿದರು. ಕೊನೆಗೆ ಸಣ್ಣಪುಟ್ಟದ್ದು ಬೇಡ ಎಂದು ನೇರವಾಗಿ ಚಿನ್ನದ ಅಂಗಡಿಗೇ ಸುರಂಗ ಕೊರೆದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿದ್ದರು. ಆದರೆ ನಮ್ಮ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಇದ್ದಾರಲ್ಲ ಅವರದು ಚಾಣಾಕ್ಷ ಬುದ್ಧಿ. ಹತ್ತೇ ದಿನದಲ್ಲಿ ಖದೀಮರನ್ನು ಸೆರೆಹಿಡಿದಿದ್ದಾರೆ.

ಏನಾಗಿತ್ತೆಂದರೆ ಮಾರ್ಚ್ 27ರಂದು ಮಹದೇವಪುರದ ಗರುಡಾಚಾರ್ ಪಾಳ್ಯದಲ್ಲಿರುವ ಭವಾನಿ ಚಿನ್ನಾಭರಣ ಅಂಗಡಿಯನ್ನು ಸುರಂಗ ಮೂಲಕ ತಲುಪಿದ ಈ ಜೋಡಿ ಚೋರರು ಇಡೀ ಅಂಗಡಿಯನ್ನು ಗುಡಿಸಿ ಗುಂಡಾಂತರ ಮಾಡಿದ್ದರು. ರಾಮನಗರ ಜಿಲ್ಲೆ ಕನಕಪುರ ತಾಲೂಕು ಅರಳಿಮರದ ದೊಡ್ಡಿ ನಿವಾಸಿ ಬೈರಾಜು ಅಲಿಯಾಸ್ ರಾಜೇಶ್ (28) ಮತ್ತು ಹಾಸನ ಜಿಲ್ಲೆ ಡಣನಾಯಕನಹಳ್ಳಿಯ ರವಿಕುಮಾರ್ ಅಲಿಯಾಸ್ ಕುಮಾರ (23) ಎಂಬ ಯವಕರೇ ಇಂತಹ ಕುಕೃತ್ಯಕ್ಕೆ ಕೈಹಾಕಿ, ಸೆರೆ ಸಿಕ್ಕವರು. ಅಂದಹಾಗೆ, ಕಳವು ಮಾಡಿದ ಮಾಲನ್ನು ಆರೋಪಿಗಳು ಹನುಮಂತನಗರದಲ್ಲಿ ವಿಲೇವಾರಿ ಮಾಡಲು ಯತ್ನಿಸುತ್ತಿದ್ದಾಗ ಸಿಸಿಬಿ ಪೊಲೀಸ್ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 8 ಲಕ್ಷ ರುಪಾಯಿ ಮೌಲ್ಯದ 238 ಗ್ರಾಂ ಚಿನ್ನ ಮತ್ತು 4.5 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.

ಪ್ರಮುಖ ಆರೋಪಿ ಬೈರಾಜು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಜೈಲು ಸುಖ ಕಂಡವ. ಇಂತಿಪ್ಪ ಬೈರಾಜು ಇತ್ತೀಚೆಗೆ ಜೈಲಿನಿಂದ ಹೊರಬಂದವನೆ ದಿಢೀರ್ ಶ್ರೀಮಂತನಾಗುವ ಕನಸು ಕಾಣತೊಡಗಿದ. ಇದಕ್ಕೆ ಕುಮಾರನೂ ಸಾಥ್ ನೀಡಿದ. ಹಾಗಾಗಿ ಚಿನ್ನದ ಅಂಗಡಿಗೆ ಕನ್ನ ಹಾಕಲು ನಿರ್ಧರಿಸಿದರು. ಅಂಗಡಿಯೆದುರೇ ಬಾಡಿಗೆ ಮನೆ ಹಿಡಿದರು. ನಿತ್ಯ ಅಂಗಡಿಗೆ ಹೋಗಿ ಚಿನ್ನಾಭರಣ ವ್ಯಾಪಾರ ಮತ್ತು ಅವುಗಳ ಮೌಲ್ಯದ ಬಗ್ಗೆ ಮಾಹಿತಿ ಕಲೆಹಾಕಿ, ಚಿನ್ನದ ಕನಸು ಕಂಡರು. ಖದೀಮ ಬೈರಾಜು ಅಪರಾಧ ಸಂಬಂಧ ವಿಷಯಗಳನ್ನು ಹೆಚ್ಚು ಓದುತ್ತಿದ್ದ. ಜೈಲಿಗೆ ಹೋಗಿದ್ದಾಗಲೂ ಅಲ್ಲಿ ಇತರೆ ಅಪರಾಧಿಗಳ ಪರಿಚಯ ಮಾಡಿಕೊಂಡು ಕಳ್ಳತನದ ಮಾರ್ಗದರ್ಶನ ಪಡೆದಿದ್ದ. ಪತ್ರಿಕೆಗಳಲ್ಲಿ ಬರುತ್ತಿದ್ದ ಪತ್ತೆದಾರಿ ಕಥೆ, ಅಪರಾಧ ಸುದ್ದಿಗಳನ್ನು ಓದಿ ತನ್ನಲ್ಲಿದ್ದ ಅಪರಾಧಿ ಬುದ್ಧಿಯನ್ನು ಜಾಗೃತಗೊಳಿಸಿದ್ದ.

ಸರಿ ಅಲ್ಲಿಂದ ಮುಂದೆ ಕಾರ್ಯಾಚರಣೆಗೆ ಕೈಹಾಕಿಯೇ ಬಿಟ್ಟರು. ಮೊದಲು ಸುರಂಗ ಕೊರೆಯುವುದಕ್ಕೆ ಪಕ್ಕಾ ಪ್ಲಾನ್ ಮಾಡಿದರು. ಚರಂಡಿಯಿಂದ ಅಂಗಡಿ ಬಾಗಿಲಿಗೆ ಇರುವ ಅಂತರವನ್ನು ಹೆಜ್ಜೆಗಳಲ್ಲಿ ಅಳೆದರು. ಅಂಗಡಿಗೆ ಸಮೀಪದಿಂದಲೇ ಪೊಲೀಸರಿಗೆ ತಮ್ಮನ್ನು ಹಿಡಿಯುವ ಕೆಲಸ ಸಲೀಸಾದೀತು ಎಂದು ಅಂಗಡಿಯಿಂದ ಬಳಿಯಿದ್ದ ಚರಂಡಿ ಮಾರ್ಗದಲ್ಲಿ ಒಂದು ಫರ್ಲಾಂಗ್ ದೂರದಿಂದ ಸುರಂಗ ಕೊರೆದು ಪೊಲೀಸರನ್ನು ದಿಕ್ಕು ತಪ್ಪಿಸಿದ್ದರು. ಅದಕ್ಕಾಗಿ 2 ತಿಂಗಳಲ್ಲಿ 10 ರಾತ್ರಿಗಳಲ್ಲಿ ಚರಂಡಿಯಲ್ಲಿಳಿದು ಸುರಂಗ ಕೊರೆದಿದ್ದರು ಈ ಖದೀಮರು.

English summary
The Central Crime Branch police arrested two men in connection with the theft at a jewellery shop in Mahadevapura recently and recovered 4.5 kg silver ornaments and 238 gm gold ornaments worth Rs eight lakh. The suspects have said they were inspired by crime literature!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X