ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೃಶ್ಯವಾದ ಮಡಿಕೇರಿಯ ನೆಹರು ಮಂಟಪ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Nehru Mantapa, Kodagu
ನಿಸರ್ಗ ಸೌಂದರ್ಯವು ಕೊಡಗಿಗೆ ದೇವರು ನೀಡಿದ ವರದಾನವೆಂದರೆ ತಪ್ಪಾಗಲಾರದು. ಇಂತಹದನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದ್ದೇ ಆದರೆ ಕೊಡಗಿನ ನಿಸರ್ಗ ಸೌಂದರ್ಯಕ್ಕೊಂದು ಹೊಸ ರೂಪ ದೊರೆತಂತಾಗುತ್ತದೆ. ಪ್ರವಾಸೋದ್ಯಮದ ಅಭಿವೃದ್ಧಿ ಹಾಗಿರಲಿ, ಇಲ್ಲಿರುವ ಪ್ರವಾಸಿ ತಾಣಗಳನ್ನು ರಕ್ಷಿಸಿಕೊಳ್ಳುವುದೇ ಸಂಬಂಧಿಸಿದ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿರುವ ಹತ್ತಾರು ಪ್ರವಾಸಿ ತಾಣಗಳು ಸಂಬಂಧಿಸಿದವರ ದಿವ್ಯ ನಿರ್ಲಕ್ಷ್ಯದಿಂದಾಗಿ ಸಂಪೂರ್ಣವಾಗಿ ದುಸ್ಥಿತಿಗೆ ಒಳಗಾಗುತ್ತಿದೆ. ಮನಸ್ಸು ತುಂಬಾ ಕನಸು ಹೊತ್ತುಕೊಂಡು ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಬರುವ ಪ್ರವಾಸಿಗರು ಇಲ್ಲಿನ ವ್ಯವಸ್ಥೆ ಕಂಡು ಹಿಡಿಶಾಪ ಹಾಕುತ್ತಾರೆ.

ಜಿಲ್ಲೆಯ ಕಾಡಂಚಿನಲ್ಲಿರುವ ತಾಣಗಳ ದುಸ್ಥಿತಿಯ ಮಾತು ಹಾಗಿರಲಿ, ಮುಖ್ಯ ಪಟ್ಟಣ ಮಡಿಕೇರಿಯ ಹೃದಯ ಭಾಗದಲ್ಲಿರುವ ಸ್ಮಾರಕವೊಂದರ ದುಸ್ಥಿತಿಯನ್ನು ಹತ್ತಿರದಿಂದ ನೋಡಿದರೆ ಖೇದವುಂಟಾಗುತ್ತದೆ. ತುಕ್ಕುಹಿಡಿದಿರುವ ನಮ್ಮ ಆಡಳಿತ ವ್ಯವಸ್ಥೆಗೆ ಇದು ಮೂಕ ಸಾಕ್ಷಿಯಾಗಿದೆ. ಇದ್ಯಾವ ಸ್ಮಾರಕ ಎಂಬ ಕುತೂಹಲ ನಿಮ್ಮಲ್ಲಿ ಉಂಟಾಗಿರಬಹುದಲ್ಲವೆ? ಇಲ್ಲಿ ಪ್ರಸ್ತಾಪಿಸುತ್ತಿರುವುದು ನೆಹರು ಮಂಟಪದ ಬಗ್ಗೆ.

ಒಂದು ಕಾಲದಲ್ಲಿ ಈ ಮಂಟಪ ಕೂಡ ನೂರಾರು ಮಂದಿಯನ್ನು ದಿನನಿತ್ಯ ತನ್ನೆಡೆಗೆ ಸೆಳೆದು ನಿಸರ್ಗದ ಸವಿಯನ್ನುಣಿಸುತ್ತಿತ್ತು. ಇವತ್ತು ಪ್ರವಾಸಿಗರಿಂದ ದೂರವಾಗಿ ಅನಾಥವಾಗಿ ನಿಂತಿದೆ. ಆ ದಿನಗಳಲ್ಲಿ ನೆಹರು ಮಂಟಪವಿರುವ ಗುಡ್ಡ ಪ್ರಕೃತಿಯ ಚೆಲುವಿನ ಆಕರ್ಷಕ ತಾಣವಾಗಿತ್ತು.

ಈ ಗುಡ್ಡದಿಂದ ನಿಂತು ನೋಡಿದ್ದೇ ಆದರೆ ಮಡಿಕೇರಿ ಪಟ್ಟಣದ ವಿಹಂಗಮ ನೋಟ ಕಣ್ಣಿಗೆ ರಾಚುತ್ತಿತ್ತು. ದೂರದಲ್ಲಿ ಸಾಲು ಸಾಲಾಗಿ ನಿಂತು ಬಾನಿಗೆ ಮುತ್ತಿಕ್ಕುತ್ತಿವೆಯೇನೋ ಎಂಬಂತೆ ಭಾಸವಾಗುವ ಪರ್ವತ ಶ್ರೇಣಿಗಳು... ಅವುಗಳ ಇಳಿಜಾರು ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ವೃಕ್ಷ ರಾಶಿಗಳು... ಕಾಫಿ, ಏಲಕ್ಕಿ ತೋಟಗಳ ನಡುವಿನ ಗದ್ದೆ ಬಯಲುಗಳು... ಮರ ಕಾಡುಗಳ ಮಧ್ಯೆ ತಲೆ ಎತ್ತಿ ನಿಂತ ಮನೆಗಳು... ಅಂಕುಡೊಂಕಾಗಿ ಹಾದು ಹೋದ ರಸ್ತೆಗಳು ಕಣ್ಣಿಗೆ ಹಬ್ಬ ನೀಡುತ್ತಿತ್ತು. ತಮ್ಮೆಲ್ಲಾ ಜಂಜಾಟಗಳನ್ನು ಬದಿಗೊತ್ತಿ ಸಂಜೆಯ ಕ್ಷಣಗಳನ್ನು ಈ ಗುಡ್ಡದಲ್ಲಿ ಕುಳಿತು ಕಳೆಯಲೆಂದು ನಗರದ ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದರು.

ಮಂಟಪದ ಚರಿತ್ರೆ: ಅದು 1957ರ ದಿನಗಳು. ಕೊಡಗಿಗೆ ಭೇಟಿ ನೀಡಿದ ಪ್ರಧಾನಿ ಜವಾಹರಲಾಲ್ ನೆಹರುರವರು ಕಾಫಿಗೆ ಹೆಸರಾದ ಭೂಮಿ, ಸುಂದರ ಸ್ತ್ರೀಯರ ನೆಲೆವೀಡು ಎಂದು ಇದೇ ಗುಡ್ಡದಲ್ಲಿ ಕುಳಿತು ಬಣ್ಣಿಸಿದ್ದರು ಎಂದು ಹೇಳಲಾಗುತ್ತಿದೆ. ಅವರ ಭೇಟಿಯ ಸವಿನೆನಪಿಗಾಗಿ ಆಗಿನ ರಾಜ್ಯಪಾಲ ಧರ್ಮವೀರ ಎಂಬುವರು ಮಂಟಪವೊಂದನ್ನು ನಿರ್ಮಿಸಿ ನೆಹರು ಮಂಟಪ ಎಂದು ಹೆಸರಿಟ್ಟಿದ್ದರು.

ನೆಹರು ಮಂಟಪ ನಿರ್ಮಾಣವಾದ ಮೊದಲ ದಿನಗಳಲ್ಲಿ ರಾಜಾಸೀಟಿನಷ್ಟೇ ವೈಭವವನ್ನು ಇದು ಸಂಪಾದಿಸಿತ್ತು. ವೀಕ್ಷಕರ ದಂಡು ಇಲ್ಲಿಗೆ ಸದಾ ಸುಳಿಯುತ್ತಿತ್ತು. ಪಟ್ಟಣದ ಗುಡ್ಡದ ಮೇಲಿದ್ದ ಕಾರಣ ಮಂಟಪ ಎಲ್ಲರ ಕಣ್ಣಿಗೆ ನಿಲುಕುವ ಮೂಲಕ ಅತ್ತಕಡೆ ಸೆಳೆಯುತ್ತಿತ್ತು. ಆದರೆ ನೆಹರು ಮಂಟಪದ ವೈಭವಕ್ಕೆ ಸದ್ದಿಲ್ಲದೆ ತುಕ್ಕುಹಿಡಿಯಲಾರಂಭಿಸಿತು.

ನಾಗರಿಕತೆಯ ಪ್ರಭಾವ, ಜನಸಂಖ್ಯೆ ಹೆಚ್ಚಳ, ಹೀಗಾಗಿ ಪ್ರಶಾಂತವಾಗಿದ್ದ ಗುಡ್ಡಗಳ ಮೇಲೆ ಮನೆಗಳು ತಲೆ ಎತ್ತಲಾರಂಭಿಸಿದವು. ಸಾಲದೆಂಬಂತೆ ಅರಣ್ಯ ಇಲಾಖೆ ಮಂಟಪದ ಸುತ್ತಲೂ ಗಿಡಗಳನ್ನು ನೆಟ್ಟಿತು. ಅವು ಬೆಳೆದು ಹೆಮ್ಮರವಾಗುತ್ತಿದ್ದಂತೆಯೇ ಆಕಾಶವಾಣಿ ಕಟ್ಟಡ ಇಲ್ಲಿ ನಿರ್ಮಾಣವಾಯಿತು. ಪರಿಣಾಮ ನೆಹರು ಮಂಟಪ ಅದೃಶ್ಯವಾಯಿತು. ಇಂದು ನಗರದ ಮಂದಿಯನ್ನು ನೆಹರು ಮಂಟಪದ ಬಗ್ಗೆ ಕೇಳಿದರೆ ಬೇಸರದಿಂದ ದಾರಿ ತೋರಿಸುತ್ತಾರೆ.

ಒಂದು ವೇಳೆ ಪ್ರಯಾಸಪಟ್ಟು ಪ್ರವಾಸಿಗರು ನೆಹರು ಮಂಟಪದತ್ತ ಧಾವಿಸಿದ್ದೇ ಆದರೆ ಸ್ಮಾರಕಕ್ಕೆ ಒದಗಿ ಬಂದ ದುಸ್ಥಿತಿಯನ್ನು ಕಂಡು ಮಮ್ಮಲ ಮರುಗದೆ ಇರಲಾರರು. ಸುಣ್ಣಬಣ್ಣ ಕಾಣದ ಗೋಡೆಗಳು, ಕಿತ್ತು ಹೋದ ಕಲ್ಲಿನ ಮೆಟ್ಟಿಲುಗಳು, ಅಲ್ಲದೆ ಸುತ್ತಲೂ ಕಾಡು ಬೆಳೆದು ಪಾಳು ಮಂಟಪವಾಗುವುದರೊಂದಿಗೆ ಅನೈತಿಕ ಚಟುವಟಿಕೆಗೆ ಆಶ್ರಯ ತಾಣವಾಗುತ್ತಿದೆ.

ನೆಹರು ಮಂಟಪವನ್ನು ನೋಡಿದರೆ ಐತಿಹಾಸಿಕ ಸ್ಮಾರಕವೊಂದನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಗೋಚರಿಸುತ್ತದೆ. ಇನ್ನೂ ಕಾಲ ಮಿಂಚಿಲ್ಲ ಸಂಬಂಧಿಸಿದವರು ಗಮನಹರಿಸಿದ್ದೇ ಆದರೆ ನೆಹರು ಮಂಟಪಕ್ಕೆ ಜೀವಕಳೆ ತುಂಬುವುದು ಅಸಾಧ್ಯವೇನಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಷ್ಟೆ. ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಸಾಧ್ಯವಾಗಬಹುದೇನೋ?....

;
English summary
Historical Monuments and buildings of Kodagu district are not properly maintained. Nehru Mantap is one such spot which is covered by lash green nature.Tourist Department is not at all protecting the tourist attractive places in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X