ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿತಾಯಿಯ ಚೊಚ್ಚಲ ಮಗ ರೇವಣಸಿದ್ಧಯ್ಯ ಇನ್ನಿಲ್ಲ

By * ರೋಹಿಣಿ ಬಳ್ಳಾರಿ
|
Google Oneindia Kannada News

CM Revanasiddaiah
ಬಳ್ಳಾರಿ, ಮಾ. 23 : ರೈತ ಚಳವಳಿಯ ಪ್ರಮುಖ ಕೊಂಡಿ, ಕಾಯಕಯೋಗಿ, ಜನಪ್ರಿಯ ಜನನಾಯಕ, ಹೆಗಡೆ - ದೇವೇಗೌಡರ ಸಮಕಾಲೀನ ಮಾಜಿ ಶಾಸಕ ಸಿ.ಎಂ. ರೇವಣಸಿದ್ಧಯ್ಯ (93) ಅವರು ಸ್ವಗೃಹದಲ್ಲೇ ಬುಧವಾರ ನಿಧನರಾದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ 11 ಗಂಟೆಗೆ ಸಿರಿಗೇರಿ ಗ್ರಾಮದಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ನೆರವೇರಲಿದೆ.

ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ, ಸ್ವತಂತ್ರ ಪಕ್ಷದ ನಕ್ಷತ್ರ' ಚಿಹ್ನೆಯ ಮೂಲಕ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ವಿಧಾನಸಭೆಯನ್ನು 1962ರಲ್ಲಿ ಪ್ರವೇಶಿಸಿದ್ದರು. ವಿಧಾನಸಭೆಯಲ್ಲಿ ರೈತರ ಧ್ವನಿಯಾಗಿ, ರೈತರ ಪ್ರತಿನಿಧಿಯಾಗಿ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

ಈ ಕಾರಣಕ್ಕಾಗಿಯೇ ರಾಮಕೃಷ್ಣ ಹೆಗಡೆ ಮತ್ತು ಎಚ್.ಡಿ. ದೇವೇಗೌಡರ ಗಮನ ಸೆಳೆದು 1985ರಲ್ಲಿ ಜನತಾದಳದ ಚಕ್ರ' ಚಿಹ್ನೆಯಿಂದ ಮತ್ತೊಮ್ಮೆ ಸ್ಪರ್ಧಿಸಿ, ಆಗಲೂ ಕೂಡ ವಿಧಾನಸಭೆಯನ್ನು ಪ್ರವೇಶಿಸಿದ್ದರು. ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡ ಅವರ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯ ಮೂಡಿ ಜನತಾದಳ ಇಬ್ಬಾಗವಾದಾಗ ಸಕ್ರಿಯ ರಾಜಕೀಯದಿಂದ ದೂರ ಸರಿದರು. ಆದರೆ, ತಮ್ಮ ನೆಚ್ಚಿನ ರೈತಪರ ಹೋರಾಟಗಳು, ಸಿಂಗಟಾಲೂರು ಏತ ನೀರಾವರಿ ಯೋಜನೆ, ತುಂಗಭದ್ರಾ ಉಳಿಸಿ ಹೋರಾಟ, ಕೃಷಿಪರ ಹೋರಾಟ, ಬತ್ತಕ್ಕೆ ಬೆಂಬಲ ಬೆಲೆ ಘೋಷಣೆ, ಹತ್ತಿ - ತೊಗರಿಗಾಗಿ ಪ್ರತ್ಯೇಕ ನಿಗಮಗಳ ಪ್ರಾರಂಭಕ್ಕೆ ಹೋರಾಟ, ಹೈದರಾಬಾದ್ - ಕರ್ನಾಟಕ ಅಭಿವೃದ್ಧಿ ಮಂಡಲಿಗಳ ಪ್ರಾರಂಭಕ್ಕೆ, ಬಳ್ಳಾರಿಯಲ್ಲಿ ಪಿಜಿ ಸೆಂಟರ್ ಪ್ರಾರಂಭವಾಗಲು ಅಹರ್ನಿಷಿ ಹೋರಾಟ ಮಾಡಿದ್ದರು.

ಸರಳ, ಸಜ್ಜನಿಕೆಯ ಮನುಷ್ಯ : ಸಿರಿಗೇರಿ ಗ್ರಾಮ ಪಂಚಾಯಿತಿಯನ್ನು 31 ವರ್ಷಗಳ ಕಾಲ ಏಕಮೇವಾಧಿಪತಿಯಂತೆ ಅಧ್ಯಕ್ಷರಾಗಿ ಆಳ್ವಿಕೆ ನಡೆಸಿ, ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಜಾತಿ, ವರ್ಗ ಮತ್ತು ಲಿಂಗವಾರು ಮೀಸಲಾತಿ ನೀತಿ ಜಾರಿ ಮಾಡುವಂತೆ ಪ್ರೇರಣೆ ನೀಡಿದ್ದ ರೇವಣಸಿದ್ಧಯ್ಯ ಅವರು, ಹಾಸಿಗೆ ಹಿಡಿಯುವ ದಿನಗಳವರೆಗೂ ಕಾಯಕದಲ್ಲೇ ನಿರತರಾಗಿದ್ದರು. ದನಕರುಗಳಿಗೆ ಹುಲ್ಲು ಹಾಕುವುದು, ನೀರುಣಿಸುವುದು, ಮೈ ತೊಳೆಯುವುದು, ಸೆಗಣಿ ಎತ್ತಿಹಾಕುವುದು, ಗದ್ದೆಗಳಲ್ಲಿ ಭತ್ತ ನಾಟಿ ಮಾಡಿ, ಕಳೆ ಕೀಳುವುದು, ಸ್ವತಂತ್ರವಾಗಿಯೇ ದೈನಂದಿನ ಎಲ್ಲಾ ಚಟುವಟಿಕೆಗಳನ್ನು ಮಾಡಿಕೊಳ್ಳುತ್ತಿದ್ದರು.

1924ರಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿಯಲ್ಲಿ ಜನಿಸಿದ್ದ ಸಿ.ಎಂ. ರೇವಣಸಿದ್ದಯ್ಯ ಅವರು, ಕರ್ನಾಟಕ ಏಕೀಕರ ಹೋರಾಟದಲ್ಲಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ. ಕರ್ನಾಟಕದ ಅತಿದೊಡ್ಡ ರೈತ ಹೋರಾಟ ಎನೆಸಿಕೊಂಡಿರುವ ನರಗುಂದ - ನವಲಗುಂದ ರೈತ ಬಂಡಾಯದ ಚಳವಳಿಯ ಪ್ರೇರಕ ಶಕ್ತಿ ಇವರಾಗಿದ್ದರು. ಅಲ್ಲದೇ, ತೀವ್ರ ಅನಾರೋಗ್ಯದ ನಡುವೆಯೂ ಈ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೊಡ್ಡ ಶಕ್ತಿಯನ್ನು ನೀಡಿದ್ದರು.

1980ರಲ್ಲಿ ಕರ್ನಾಟಕ ಪ್ರಾಂತ ರೈತ - ರೈತ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿದ್ದರು. ರಾಜ್ಯ ಜನತಾದಳದ ಉಪಾಧ್ಯಕ್ಷರಾಗಿ, ರಾಜ್ಯ ಕಿಸಾನ್ ಘಟಕದ ಅಧ್ಯಕ್ಷರಾಗಿ, ರಾಜ್ಯದ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ, ವಿವಿಧ ಸಂಘ ಸಂಸ್ಥೆಗಳು, ಪದವಿಗಳನ್ನು ಅಲಂಕರಿಸಿದ್ದ ರೇವಣಸಿದ್ಧಯ್ಯ ಅವರು, ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿ. ಎಂ.ಪಿ. ಪ್ರಕಾಶ್ ಅವರ ಮಾರ್ಗದರ್ಶಿಯೂ ಆಗಿದ್ದರು.

ಕರ್ನಾಟಕ ಸರ್ಕಾರ 2006ರಲ್ಲಿ ಇವರಿಗೆ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿದೆ. ಹಂಪೆ ಹೇಮಕೂಟ ಜಗದ್ಗುರು ಸಂಗನಬಸವ ಸ್ವಾಮಿಗಳು ಇವರನ್ನು ಭೂಮಿತಾಯಿ ಚೊಚ್ಚಲ ಮಗ' ಎಂದೇ ಪದವಿ ನೀಡಿ, ಗೌರವಿಸಿ ಅಭಿನಂದಿಸಿದ್ದರು. ಸರ್ಕಾರಿ ಬಸ್, ಕಾಲ್ನಡಿಗೆ, ಸರಳವಾದ ಬದುಕು, ತಾಳ್ಮೆಯ ಮಾತು, ನಿಖರವಾದ - ಸ್ಪಷ್ಟವಾದ ವಿಚಾರಲಹರಿ, ಉಚ್ಛಾರಣೆಗಳಿಂದಲೇ ಅವರು ರೈತ ಚಳವಳಿಯಲ್ಲಿ ಮೇರುಪಂಕ್ತಿಯನ್ನು ತಲುಪಿದ್ದರು.

English summary
Farmer's leader CM Revanasiddaiah from Bellary passes away. Revanasiddaiah was known for his simplicity, and followed work is worship policy through out his life. He was true Son of the soil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X