ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಮೊಬೈಲ್ ಕಳೆದುಕೊಂಡವರ ಕಥೆ ವ್ಯಥೆ

By Prasad
|
Google Oneindia Kannada News

Mobile theft in India
ಇದು ಒಬ್ಬರಿಬ್ಬರ ಕಥೆಯಲ್ಲ. ದೂರಸಂಪರ್ಕ ಕ್ರಾಂತಿಗೆ ತೆರೆದುಕೊಂಡಿರುವ ಶೇ.50ಕ್ಕೂ ಹೆಚ್ಚಿನ ಭಾರತೀಯರ ಕಥೆ. ಬಡವ, ಬಲ್ಲಿದ ಎಂಬ ಭೇದವೆಣಿಸದೆ ಎಲ್ಲರ ಕೈಯಲ್ಲಿ ನಲಿದಾಡುವ ಮೊಬೈಲ್ ಎಂಬ ಜೀವನಶೈಲಿ, ಇಡೀ ಜಗತ್ತನ್ನು ಮುಷ್ಟಿಯಲ್ಲಿಡುತ್ತಲೇ ಇದ್ದಕ್ಕಿದ್ದಂತೆ ಕಳೆದುಹೋಗಿ ಅದರ ಮಾಲಿಕರಿಗೆ ತರುವ ವ್ಯಥೆ.

ಹೌದು, ಸಿಮ್ಯಾಂಟೆಕ್ ಎಂಬ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ, ಶೇ. 53ರಷ್ಟು ಭಾರತೀಯರು ಒಂದಿಲ್ಲೊಂದು ಕಾರಣದಿಂದ, ಒಂದಿಲ್ಲೊಂದು ಹಂತದಲ್ಲಿ ಜೀವನದ ಅವಿಭಾಜ್ಯ ಅಂಗವೇ ಆಗಿರುವ ಮೊಬೈಲನ್ನು ಕಳೆದುಕೊಂಡಿರುತ್ತಾರೆ. ಇನ್ನೊಂದು ಕಳವಳಕಾರಿ ಸಂಗತಿಯೆಂದರೆ, ಇವರಲ್ಲಿ ಮೊಬೈಲ್ ಸೆಕ್ಯುರಿಟಿ ಬಗ್ಗೆ ತಲೆಕೆಡಿಸಿಕೊಳ್ಳುವವರು ಮತ್ತು ಕಳಕೊಂಡಿದ್ದನ್ನು ಹುಡುಕುವವರು ಶೇ.2ಕ್ಕಿಂತ ಕಡಿಮೆ!

ಕೆಲ ಮಾತುಗಳನ್ನು ಗಮನಿಸಿ

* ನಿನ್ ನಂಬರ್ ಕೊಡ್ತೀಯಾ, ಮೊಬೈಲ್ ಮೊನ್ನೆ ತಾನೆ ಕಳ್ಕೊಂಡೆ.
* 201 ರೂಟ್ ಬಸ್ಸಲ್ಲಿ ಹೋಗ್ತಿದ್ದೆ, ಯಾವ್ನೋ ಮೊಬೈಲ್ ಹೊಡ್ದಬಿಟ್ಟಾ.
* ಬಸ್ಸಲ್ಲಿ ಜೇಬಿಂದ ಹ್ಯಾಗೆ ಎತ್ತಿದ್ರೋ ಗೊತ್ತೇ ಆಗಲಿಲ್ಲ.
* ಆಟೋದಲ್ಲಿ ಹೋಗ್ತಿದ್ದೆ ಅಲ್ಲೆ ಬಿಟ್ಟುಬಿಟ್ಟೆ ಅಂತ ಕಾಣತ್ತೆ, ಕಾಲ್ ಮಾಡಿದ್ರೆ ಸ್ವಿಚ್ ಆಫ್ ಆಗಿದೆ.
* ಮಗು ಕೈಯಲ್ಲಿ ಕೊಟ್ಟಿದ್ದೆ, ಎಲ್ಲೋ ಕಳೆದುಹಾಕಿಬಿಟ್ಟ.
* ಹೆಂಡ್ತೀನ್ ಕಳ್ಕೊಂಡ್ರೂ ಇಷ್ಟು ಬೇಜಾರಾಗ್ತಾ ಇರಲಿಲ್ಲ ಕಣ್ಲಾ!

ಇಂಥ ಮಾತುಗಳನ್ನು ಸಂಬಂಧಿಕರೊಂದಿಗೆ ಮಾತಾಡುವಾಗ, ಸ್ನೇಹಿತರೊಂದಿಗೆ ಹರಟುವಾಗ ಕೇಳಿಯೇ ಇರುತ್ತೀರಿ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ಮೊಬೈಲ್ ಕಳಕೊಂಡ ಶೇ. 75ರಷ್ಟು ಜನ ಮೊಬೈಲ್ ಹುಡುಕುವುದನ್ನು ನಿಂತಲ್ಲಿಯೇ ಬಿಟ್ಟುಬಿಟ್ಟಿರುತ್ತಾರೆ. ಮೊಬೈಲ್ ಹೋಯ್ತೆಂದು ಚೀರಾಡುವುದು, ಬಾಯಿಗೆ ಬಂದಂತೆ ಬೈಯುವುದು ಬಿಟ್ಟು ಮೊಬೈಲ್ ಹುಡುಕುವುದಕ್ಕೆ, ನಂಬರ್ ಲಾಕ್ ಮಾಡಿಸುವುದಕ್ಕೆ ಪ್ರಯತ್ನ ಮಾಡುವುದೇ ಇಲ್ಲ. ಅಸಲಿಗೆ, ಇದನ್ನು ಹೇಗೆ ಮಾಡಿಸಬೇಕೆಂದು ಅನೇಕರಿಗೆ ಗೊತ್ತಿರುವುದಿಲ್ಲ. ಅಂಗಡಿಯವರೇ ಇನ್ಶೂರೆನ್ಸ್ ಮಾಡಿಸಿಕೊಟ್ಟಿದ್ದರೆ ಸರಿ, ಇಲ್ಲದಿದ್ದರೆ ಮೊಬೈಲ್ ಇನ್ಶೂರೆನ್ಸ್ ಮಾಡಿಸುವ ಬಗ್ಗೆ ತಲೆಯನ್ನೂ ಕೆಡಿಸಿಕೊಂಡಿರುವುದಿಲ್ಲ.

ಎದ್ದ ಕೂಡಲೆ ದೇವರ ಫೋಟೋ ನೋಡುವ ಮುನ್ನ ಗರ್ಲ್ ಫ್ರೆಂಡ್ ಳಿಂದ ಎಸ್ಎಮ್ಎಸ್ ಏನು ಬಂದಿದೆ ಎಂದು ನೋಡುವವರಿದ್ದಾರೆ. ಮೊಬೈಲಲ್ಲಿ ಮಾತಾಡುತ್ತ ತಿಂಡಿ ತಿನ್ನುವುದನ್ನೇ ಮರೆತವರಿರುತ್ತಾರೆ. ರಸ್ತೆಯಲ್ಲಿ ಹೋಗುವಾಗಲೇ ಇಂಟರ್ ವ್ಯೂ ಅಟೆಂಡ್ ಆಗಿ ಕೆಲಸ ಗಿಟ್ಟಿಸಿಕೊಂಡವರಿದ್ದಾರೆ. ಮಾತಾಡ್ ಮಾತಾಡುತ್ತಲೇ ಪಕ್ಕದಲ್ಲೇ ಬಡಪಾಯಿ ಗಂಡ ಇದ್ದಾನೆ ಎನ್ನುವುದನ್ನೂ ಮರೆತವರಿರುತ್ತಾರೆ. ಇನ್ನು ಟಾಯ್ಲೆಟ್ಟಿಗೂ ಸಂಗಾತಿಯಾಗಿ ಬರುವ ಮೊಬೈಲ್ ಫೋನನ್ನು ಕಳೆದುಕೊಂಡರೆ ಹೇಗಾಗಿರಬೇಡ?

ಅಧ್ಯಯನದ ಪ್ರಕಾರ

* ಶೇ.77ರಷ್ಟು ಜನ ಅಮೂಲ್ಯವಾದ ಮಾಹಿತಿ ಕಳೆದುಹೋಗಿದ್ದು ಜೀವನದ ಅತ್ಯಂತ ಕೆಟ್ಟ ಸಂಗತಿ ಅಂತ ಮರುಗುತ್ತಾರೆ.
* ಖಾಸಗಿ ಸಂಗತಿಗಳು ಅನ್ಯರ ಪಾಲಾಗಿದ್ದಕ್ಕೆ ಇಬ್ಬರಲ್ಲಿ ಒಬ್ಬರು ಪೇಚಾಡುತ್ತಾರೆ.
* ಶೇ.82ರಷ್ಟು ಮಂದಿ ಕಳಕೊಂಡಿದ್ದನ್ನು ಹುಡುಕುವುದು ಭಾರೀ ಕಷ್ಟದ ಕೆಲಸ ಅಂತ ನಂಬಿರ್ತಾರೆ.
* ಶೇ.50ಕ್ಕಿಂತ ಹೆಚ್ಚು ಜನ ಕಂಪ್ಲೆಂಟ್ ನೀಡಲು ಹಿಂಜರಿಯುತ್ತಾರೆ.
* ಐವರಲ್ಲಿ ಮೂವರು ಮಾತ್ರ ಪಾಸ್ ವರ್ಡ್ ಇಟ್ಟುಕೊಂಡು ಮೊಬೈಲನ್ನು ಸುರಕ್ಷಿತವಾಗಿರಿಸಿರುತ್ತಾರೆ.
* ಕಳೆದುಹೋದ ಮೊಬೈಲು ವಾಪಸ್ ಸಿಗುವುದು ಶೇ.1ಕ್ಕಿಂತ ಕಡಿಮೆ.

ಮಾತಾಡುವ ಮತ್ತು ಮಾತು ಕೇಳಿಸಿಕೊಳ್ಳುವಷ್ಟೇ ಸಾಧನವಾಗಿ ಮೊಬೈಲ್ ಉಳಿದಿಲ್ಲ. ಮೊಬೈಲ್ ಇಂದು ಅನೇಕರ ಜೀವನಶೈಲಿಯೇ ಆಗಿದೆ. ಇಂಟರ್ನೆಟ್ ಬ್ರೌಸಿಂಗ್, ಆನ್ ಲೈನ್ ಬ್ಯಾಂಕಿಂಗ್ ನಿಂದ ಹಿಡಿದುಕೊಂಡು ಅನೇಕ ಕಾರ್ಯಗಳನ್ನು ಮೊಬೈಲ್ ಮುಖಾಂತರವೇ ಮಾಡಬಹುದಾಗಿದೆ. ಟ್ವಿಟ್ಟರ್, ಫೇಸ್ ಬುಕ್, ಯುಟ್ಯೂಬ್ ಗಳಂತೂ ಇಂದಿನ ಯುವ ಪೀಳಿಗೆಗೆ ಇಡೀ ಜಗತ್ತಿನ ಆಗುಹೋಗುಗಳನ್ನು ಕಣ್ಣ ಮುಂದೆ ತೆರೆದಿಟ್ಟಿರುತ್ತವೆ.

ಆದರೂ, ಮೊಬೈಲ್ ಸುರಕ್ಷತೆಯ ಬಗ್ಗೆ ಭಾರತೀಯರಿಗೆ ಇಷ್ಟೊಂದು ಅಸಡ್ಡೆಯೇಕೆ? ಸದ್ಯಕ್ಕೆ ಇದೊಂದು ಬಗೆಹರಿಯದ ಪ್ರಶ್ನೆಯಾಗಿ ಉಳಿದಿದೆ. ಮೊಬೈಲ್ ದುರುಪಯೋಗವಾಗದಂತೆ ಏನು ಮಾಡಬಹುದು ಎಂಬ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ. ಸ್ಮಾರ್ಟ್ ಫೋನುಗಳನ್ನು ಕೈಯಲ್ಲಿ ಹಿಡಿದುಕೊಂಡ ಮೇಲೆ ನಾವೂ ಸುರಕ್ಷತೆಯ ಬಗ್ಗೆ ಸ್ಮಾರ್ಟ್ ಆಗದಿದ್ದರೆ ಹೇಗೆ? ಈ ಸುದ್ದಿಯನ್ನು ಬರೆದಿರುವ ಉಪಸಂಪಾದಕ ಕೂಡ ಮೂರು ಬಾರಿ ಮೊಬೈಲ್ ಕಳೆದುಕೊಂಡಿದ್ದಾರೆ. ಏಕೆ, ಹೇಗೆ ಎಂದು ಮಾತ್ರ ಕೇಳಬೇಡಿ. ಅಂದ ಹಾಗೆ, ಮೊಬೈಲ್ ಕಳೆದುಕೊಂಡವರ ಪಟ್ಟಿಯಲ್ಲಿ ನಿಮ್ಮ ಹೆಸರನ್ನೂ ಸೇರಿಸಬಹುದಾ?

English summary
Mobile theft has become a big issue in India. It is the story of 53 percent of Indians, who have lost their mobile in some or the other way. A survey by Symantec says that only one or two percent of the people worry about getting it back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X