ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನತ್ತ ಪ್ರವಾಸಿಗರು, ಅಭಿವೃದ್ಧಿ ಮಾತ್ರ ಸೊನ್ನೆ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

A homestay in Coorg
ಮಡಿಕೇರಿ, ಮಾ. 22 : ಕರಾವಳಿಯಲ್ಲಿ ಸುನಾಮಿ ಭಯ ಮೂಡಿಸಿರುವ ಹಿನ್ನೆಲೆಯಲ್ಲಿ 'ಕರ್ನಾಟಕದ ಕಾಶ್ಮೀರ' ಎಂದೇ ಖ್ಯಾತವಾಗಿರುವ ಕೊಡಗಿನತ್ತ ಪ್ರವಾಸಿಗರು ಮುಖ ಮಾಡಿದ್ದಾರೆ. ಹೀಗಾಗಿ ಇಲ್ಲಿನ ಹೆಚ್ಚಿನ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.

ಈಗ ಪರೀಕ್ಷೆಯ ಸಮಯವಾಗಿರುವುದರಿಂದ ಮಕ್ಕಳಾದಿಯಾಗಿ ಕುಟುಂಬ ಸಮೇತವಾಗಿ ಪ್ರವಾಸಿಗರು ಬಾರದಿದ್ದರೂ ಜನ ತಂಡೋಪ ತಂಡವಾಗಿ ಆಗಮಿಸುತ್ತಿರುವುದು ಕಂಡು ಬರುತ್ತಿದೆ. ಸಾಮಾನ್ಯವಾಗಿ ದೂರದ ತಮಿಳುನಾಡು, ಕೇರಳ, ಆಂಧ್ರಪ್ರದೇಶವಲ್ಲದೆ, ಉತ್ತರ ಭಾರತದ ಕಡೆಯಿಂದಲೂ ಪ್ರವಾಸಿಗರು ಬರುತ್ತಿದ್ದಾರೆ.

ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್, ಕುಶಾಲನಗರದ ಕಾವೇರಿ ನಿಸರ್ಗಧಾಮ, ದುಬಾರೆಗೆ ಭೇಟಿ ನೀಡುತ್ತಿದ್ದು ಈ ಪ್ರವಾಸಿ ತಾಣಗಳ ಬಳಿಯಿರುವ ಕೆಲವು ಹೋಂಸ್ಟೇಗಳಲ್ಲಿ ಬೀಡು ಬಿಡುತ್ತಿದ್ದಾರೆ. ಮಡಿಕೇರಿ ಹಾಗೂ ಭಾಗಮಂಡಲ, ತಲಕಾವೇರಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ವಿದೇಶಿ ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ.

ಅಭಿವೃದ್ಧಿ ನೆನೆಗುದಿಗೆ : ಕೊಡಗಿನ ವಾತಾವರಣ ಬೇಸಿಗೆಯಲ್ಲಿ ತಂಪಾಗಿರುವುದರಿಂದ ಪ್ರವಾಸಿಗರು ಇಲ್ಲಿ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುತ್ತಾರೆ. ಜೊತೆಗೆ ಇಲ್ಲಿ ಪ್ರವಾಸಿಗರಿಗೆ ಮುದನೀಡುವಂತಹ ಹತ್ತಾರು ಪ್ರವಾಸಿ ತಾಣಗಳಿವೆ. ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಕೊಡಗು ಕರ್ನಾಟಕದಲ್ಲಿಯೇ ಪ್ರಮುಖ ಪ್ರವಾಸಿತಾಣವಾಗುವುದರಲ್ಲಿ ಸಂಶಯವಿಲ್ಲ. ಆದರೆ ಪ್ರವಾಸೋದ್ಯಮ ಇಲಾಖೆಗೆ ಮಾತ್ರ ಕೊಡಗೆಂದರೆ ಏಕೋ ಅಲರ್ಜಿ. ಹಾಗಾಗಿ ಪ್ರವಾಸೋದ್ಯಮಕ್ಕೆ ಪೂರಕವಾದ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದಿದೆ.

ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಬೇಕು ಎಂಬಂತಹ ಭರವಸೆಯ ಮಾತುಗಳು ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತವೆಯಾದರೂ ಅವು ಕೇವಲ ಭರವಸೆಯಾಗಿಯೇ ಉಳಿದಿವೆ. ಕೊಡಗಿನಲ್ಲಿ ಸುಮಾರು 145 ಲಕ್ಷ ರೂಪಾಯಿ ವೆಚ್ಚದಲ್ಲಿ ಕೊಡವ ಪಾರಂಪರಿಕ ಕೇಂದ್ರ ನಿರ್ಮಾಣಕ್ಕೆ ಸರ್ಕಾರ ಕಳೆದ ಆಗಸ್ಟ್‌ನಲ್ಲಿ ಆಡಳಿತಾತ್ಮಕವಾಗಿ ಮಂಜೂರಾತಿ ನೀಡಿದ್ದಲ್ಲದೆ, ಪ್ರಾರಂಭಿಕ 50.54 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿ ಕಾಮಗಾರಿ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿತ್ತು. ಆದರೆ ಕಾಮಗಾರಿ ಇನ್ನೂ ಪ್ರಾರಂಭವಾಗದಿರುವುದು ಹಾಗೂ ಈ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳಾಗಲೀ, ಜಿಲ್ಲಾಡಳಿತವಾಗಲೀ ಸೊಲ್ಲೆತ್ತದಿರುವುದು ವಿಷಾದಕರ.

ಇನ್ನು ಜಿಲ್ಲೆಯಲ್ಲಿರುವ ಹಲವಾರು ಪ್ರವಾಸಿತಾಣಗಳ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆಯಾದರೂ ಅಭಿವೃದ್ಧಿ ಕಾರ್ಯಗಳು ಮಾತ್ರ ನಡೆದಿಲ್ಲ. ಇದನ್ನು ನಿರ್ವಹಿಸಬೇಕಾದ ಪ್ರವಾಸೋದ್ಯಮ ಇಲಾಖೆ ಜಿಲ್ಲೆಯಲ್ಲಿದೆಯಾ ಎಂಬ ಸಂಶಯ ಕಾಡುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಕಛೇರಿ ಮಡಿಕೇರಿಯಲ್ಲಿದೆಯಾದರೂ ಅಲ್ಲಿ ಅಧಿಕಾರಿ ಸೇರಿದಂತೆ ಸಿಬ್ಬಂದಿಯ ಕೊರತೆಯಿದ್ದು ಕೊಡಗಿನ ಪಾಲಿಗೆ ಈ ಕಚೇರಿ ಇದ್ದು ಇಲ್ಲದಂತಾಗಿದೆ. ಹೀಗಿರುವಾಗ ಈ ಕಛೇರಿಯಿಂದ ಪ್ರವಾಸಿಗರಿಗೆ ಅದೆಂತಹ ಮಾಹಿತಿ ಸಿಗಬಹುದು? ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ತಾನೆ ಹೇಗಾಗಲು ಸಾಧ್ಯ? ನೀವೇ ಊಹಿಸಿ.

English summary
As the summer vacations are set to start in Karnataka, Coorg which is called as Kashmir of Karnataka is abuzz with tourists all over India. Though it could fetch lots of revenue through tourism, development is at the least and neglected completely by govt of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X