• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು : ಹೆರಿಟೇಜ್ ಅಥವ ಹೋರ್ಡಿಂಗ್ ಸಿಟಿ ?

By * ಇ ಆರ್ ರಾಮಚಂದ್ರನ್, ಮೈಸೂರು
|

ಶಿವರಾತ್ರಿ ದಿನ ಆಜ್ಜಿನ ಕರಕೊಂಡು ಮೈಸೂರಿನ ರಾಮಾನುಜಾ ರಸ್ತೆಯಲ್ಲಿರುವ ಶಿವನ ದೇವಸ್ಥಾನಕ್ಕೆ ಹೋದೆ.

"ಈ ವರ್ಷ ಶಿವರಾತ್ರಿ ಇಲ್ವೇನೋ...ದೇವಸ್ಥಾನದ ಸುತ್ತಲೂ ದೊಡ್ಡ ಬೋರ್ಡ್ ಹಾಕಿ ಅದರ ತುಂಬ ದೊಡ್ಡ ಕುಳಗಳ ಫೋಟೋ ಹಾಕಿದ್ದಾರಲ್ಲಾ.. ಬೇರೆ ವಿಶೇಷ ಇದೆಯೋ ಏನೋ .."

"ಅಜ್ಜಿ! ಆ ಫೋಟೋಲಿ ಇರೋವ್ರೆಲ್ಲಾ ರಾಜಕಾರಿಣಿಗಳು, ಕಾರ್ಪೊರೇಟರ‍್ಗಳು ಮತ್ತು ಅವರ ಶಿಷ್ಯವೃಂದದವರು... ನಿನಗೆ ಮಹಾಶಿವರಾತ್ರಿಯ ಶುಭಾಶಯ ಕೋರುವುದಕ್ಕೆ ಬೋರ್ಡುಗಳ ಮೂಲಕ ನಿನಗೆ ಮತ್ತು ನಿನ್ನಂತಹ ಭಕ್ತರಿಗೆ "ಹ್ಯಾಪ್ಪೀ ಶಿವರಾತ್ರಿ" ಹೇಳುವುದಕ್ಕೆ ಬಂದಿದ್ದಾರೆ".

"ಅಯ್ಯೋ ಶಿವನೇ! ಶಿವನಿಗೂ ಈ ದುರ್ಗತಿ ಬಂತೇ! ದೇವಸ್ಥಾನವೇ ಕಾಣದ ಹಾಗೆ ಬೋರ್ಡಿನಿಂದ ಮುಚ್ಚುಬಿಟ್ಟಿದ್ದಾರೇ..... "

"ಮುಂದೇನೂ ಹೀಗೇ ಆಗುತ್ತೆ ಅಜ್ಜಿ. ರಾಮನವಮಿ, ಗಣೇಶ ಚತುರ್ಥಿ ಹಬ್ಬಕ್ಕೂ ಇವರೆಲ್ಲಾ ಬಂದು ಬೋರ್ಡಿನ ಫೋಟೋದ ಮೂಲಕ ನಿನಗೆ ಶುಭಾಶಯ ಕೋರಲು ಬಂದೇ ಬರುತ್ತಾರೆ!"

"ರಾಮ ರಾಮ! ಹೀಗಾದರೆ ದೇವರುಗಳೆಲ್ಲಾ ದೇವಸ್ಥಾನಗಳಿಂದ ಪರಾರಿಯಾಗುವುದರಲ್ಲಿ ಸಂದೇಹವೇ ಇಲ್ಲ. ನೋಡು, ಯಾವ ಗತಿ ಬಂತು ದೇವರಿಗೆಲ್ಲಾ? ಮುಂದಿನ ವರ್ಷ "ಫ್ಲೆಕ್ಸ್ ಬೋರ್ಡು" ಶಿವಲಿಂಗಕ್ಕೂ ಹಾಕುತ್ತಾರೋ ಏನೋ?"

"ಅದು ಫ್ಲೆಕ್ಸ್ ಬೋರ್ಡು ಅಜ್ಜಿ! ನೀನು ಒಳ್ಳೇ ಐಡಿಯ ಕೊಟ್ಟಿದೀಯ.. ಬರೋ ವರ್ಷ ಶಿವಲಿಂಗಾನೂ ಬಿಡೋದಿಲ್ಲ.. ಅದನ್ನೂ ಫೋಟೋದಿಂದ ಮುಚ್ಚಿ ಬಿಡ್ತಾರೆ".

"ಅಲ್ವೋ! ದೇವರ ದರ್ಶನ ಮಾಡಿ, ಪೂಜೆ ಮಾಡೋಣ ಅಂತ ಬಂದರೆ, ಪೂಜಾರಿಗಳ ಮಧ್ಯೆ ಪುಢಾರಿಗಳು ಬಂದ್ರಲ್ಲೋ! "ಶಿವ ಪೂಜೆ ಮಧ್ಯದಲ್ಲಿ ಕರಡಿ ಬಿಟ್ಟ ಹಾಗೆ ಆಯ್ತು" ಅದಿರಿಲಿ.. ಫ್ಲಾಕ್ಷಿನೊ, ಫ್ಲೆಕ್ಷಿನೊ... ಈ ಬೋರ್ಡು ಹಾಕೋದಕ್ಕೆ ಪರ್ಮಿಷನ್ ಬೇಡ್ವೆನೋ... ಯಾರು ಬೇಕಾದ್ರೂ ಎಲ್ಬೇಕಾದ್ರೂ ಹಾಕ್ಬಹುದಾ?"

"ಅಜ್ಜಿ, ವಿವಿಐಪಿಗಳಿಗೆ, ರಾಜಕಾರಿಣಿಗಳಿಗೆ ಯಾರ ಪರ್ಮಿಷನ್ನು ಬೇಕಾಗಿಲ್ಲ. ಅವರು ಇಷ್ಟ ಬಂದ ಕಡೆ ಏನು ಬೇಕಾದರೂ ಹಾಕ್ಬಹುದು, ಇಷ್ಟ ಬಂದ ಹಾಗೆ ಇರಬಹುದು. ಈ ರೂಲ್ಸೂ, ಮಣ್ಣು ಮಸಿ ಎಲ್ಲಾ ಬರೀ ನಮ್ಮಂತವರಿಗೆ ಅಷ್ಟೆ!"

"ಏನೋಪ್ಪ..ಈಗ ಕಿರ‍್ಕೆಟ್ ಮ್ಯಾಚ್‌ನಲ್ಲಿ ಗೆಲ್ಲೀಂತ ಒಬ್ಬ ಪಾಲ್ಟಿಷನ್ ಫ್ಲಾಕ್ಸಿ ಹಾಕ್ಸೀದಾನೆ.. ಅಲ್ಲಲ್ಲಿ ಹೋಮ ಕೂಡ ಮಾಡ್ತಾ ಇದಾರೆ...ಈ ತರಹ ಊರ ಪೂರ್ತಿ ಬೋರ್ಡ್ ಗಳೇ ಹಾಕ್ತಾಹೋದ್ರೇ ಎಷ್ಟು ಅಸಹ್ಯ ಕಾಣಿಸುತ್ತೋ ಊರು.."

" ನಿನ್ನ ಮಾತು ನಿಜ ಅಜ್ಜಿ. ಆದ್ರೆ ಇವರಿಗೆ ಹೇಳೋವ್ರು ಯಾರು?"

"ಆಂದ ಹಾಗೇ... ಮೈಸೂರು ಹೆರ‍್ಟೆಜ್ ಊರು ಅಲ್ವೇನೋ? ಅಂದ್ರೆ ಇಲ್ಲಿರೋ ಅರಮನೆ, ಪಾರ್ಕುಗಳು, ದೇವಸ್ಥಾನ, ಚರ್ಚುಗಳು, ಮುಸ್ಲಿಮ್ಮರ ಮಸೀದಿ ಇದೆಲ್ಲಾನೂ ಚೆನ್ನಾಗಿ ನೋಡ್ಕೋಬೇಕು ಅಲ್ವಾ... ಇವೆಲ್ಲಾ ನಮ್ಮ ರಾಜರುಗಳು ನೂರಾರು ವರ್ಷಗಳ ಹಿಂದೆ ಕಟ್ಸಿದ್ದು...ಇವೆಲ್ಲಾ ನಾವು ಉಳಿಸ್ಕೊಂಡು ಬರಬೇಕಲ್ವಾ?"

"ಖಂಡಿತ ಅಜ್ಜಿ! ಆದ್ರೆ ಹೆರ‍್ಟೆಜ್ ಅಲ್ಲ... ಹೆರಿಟೇಜ್ ಅಜ್ಜಿ!"

" ಏನೋ ಸುಡುಗಾಡು ! ಆದ್ರೆ ಊರಲ್ಲೆಲ್ಲಾ ಹಬ್ಬ ಹರಿದಿನ ಬಂತೂಂದ್ರೆ ಎಲ್ಲೆಲ್ಲೂ ಫ್ಲಾಕ್ಸೀ! ನಮ್ಮ ಮೈಸೂರಿನಲ್ಲಿ ಎಲ್ಲಿ ನೋಡಿದ್ರೂ ರೈಲ್ವೆ ಅವರದೇ ಬೋರ್ಡುಗಳು. ರೈಲ್ವೇ ಬೋರ್ಡ್ ಅಂದರೆ ಟ್ರೈನ್ ಓಡಿಸೋ ಆಫೀಸು ಅಂತ ಅನ್ಕೊಂಡಿದ್ದೆ, ಈಗ ಗೊತ್ತಾಯ್ತು ನೋಡು ಅವ್ರು ಬರೀ ಬೋರ್ಡು ಬರೀತಾರೆ ಅಂತ! ವೆಂಕಟರಮಣ ಸ್ವಾಮಿ ದೇವಸ್ಥಾನನೂ ಬಿಟ್ಟಿಲ್ಲ ಪುಣ್ಯಾತ್ಮರು! ರೈಲ್ವೆನವರೂ ಅಂದ್ರೆ ಟ್ರೈನ್ಗಳು ಟೈಮ್ಗೆ ಸರಿಯಾಗಿ ಓಡ್ಬೇಕು, ಕಕ್ಕಸ್ಸೆಲ್ಲಾ ಕ್ಲೀನಾಗಿ ಇಡ್ಬೇಕು, ಫ್ಲಾಟ್‌ಫಾರ್ಮ ಗಲೀಜಿಲ್ಲದೆ ನೋಡ್ಕೋಬೇಕು, ಪ್ರಯಾಣ ಸುರಕ್ಷಿತವಾಗಿರಬೇಕು... ಇದೆಲ್ಲಾ ಬಿಟ್ಟು ದೊಡ್ಡ ದೊಡ್ಡ ಬೋರ್ಡ್ ಗಳಲ್ಲಿ ಅಡ್ವರ್ಟೈಸ್ಮೆಂಟ್ ಹಾಕ್ತಾರಲ್ಲಾ... ಊರು ಗಬ್ಬೆದ್ದು ಹೋಗಿದಿಯಲ್ಲೋ..."

"ನಿಜ ಅಜ್ಜಿ ! ಮಮ್ತಾ ದೀದಿ ರೈಲ್ವೆ ಬೋಗಿ ತರಹ ಕೊಲ್ಕೊತಾದಲ್ಲಿ ಖಾಯಂ ಆಗಿ ಕೂತ್ಕೊಂಟ್ಬಿಟ್ಟಿದಾರೆ.. ಎಲೆಕ್ಷನ್ ಮುಗಿಯೋತನಕ ಜಪ್ಪೈಯ್ಯ ಅಂದ್ರು ಅಲ್ಲಿಂದ ಕದಲಲ್ಲ. ಅವರಿಗೆ ಎಲೆಕ್ಷನ್ನೇ ಮುಖ್ಯ ಟ್ರೈನ್ ಗಿಂತಲೂ... ನೀನು ಹೇಳಿದ್ದು ನಿಜ. ಮೈಸೂರು ಹೆರಿಟೇಜ್ ಸಿಟಿ ಗಿಂತ, ಈಗ "ಹೋರ್ಡಿಂಗ್" ಸಿಟಿ ಆಗಿದೆ.. ಕೊಲ್ಕೊತಾದಲ್ಲಿ ಕೂತಿರುವ ದೀದಿ ನೋ ಅಥವ ಮೈಸೂರಿನಲ್ಲಿ ಇರುವ ಯಾವ ದಾದಾನೋ ಇದಕ್ಕೆ ಕಾರಣ ಅಂತ ಅನಿಸುತ್ತೆ."

"ನಮ್ಮ ಡೆಪ್ತಿ ಕಮೀಷನ್ರೋ ಇಲ್ಲ ಮಿನಿಸ್ಟ್ರೋ ಇವರೆನ್ನೆಲ್ಲಾ ತರಾಟೆಗೆ ತೊಗೊಳಕ್ಕೆ ಆಗಲ್ವಾ?ನಮ್ಮ ಸಂಪ್ರದಾಯ, ಸಂಸ್ಕೃತಿ ಉಳಿಸೋದಕ್ಕೇ ಅವರು ಇದಾರಲ್ವೇನೋ?"

"ಅವರಿಗೆ ಇದೆಲ್ಲಾ ನೋಡ್ಕೋಲ್ಲೋದಕ್ಕೆ ಪುರುಸೊತ್ತೆಲ್ಲಿದೆ ಅಜ್ಜಿ! ಅವರು ಹೊಸ ಹೊಸ ರಾಜ ಮಾರ್ಗ ಮಾಡೋದ್ರಲ್ಲಿ, ಸಬ್ವೆಕಟ್ಟೋದ್ರಲ್ಲಿ ಬಿಜಿಯಾಗಿದ್ದಾರೆ. ಎರಡು ವರ್ಷದ ಹಿಂದೆ ಕಟ್ಟಿದ ಸಬ್ವೆ ಮಳೆಗಾಲ ಬಂದ್ರೆ ನೀರಲ್ಲಿ ಮುಳುಗಿರುತ್ತೆ!"

"ಯಾಕೋ ನಮ್ಮ ಆಡಳಿತ ಸರಿಯಿಲ್ಲಪ್ಪ... ಬೀದಿ ಬೀದಿಗೂ ಬೋರ್ಡಗಳು, ಜೋರ್ ಜೋರಾಗಿ ಲೌಡ್ ಸ್ಪೀಕರ‍್ಗಳಲ್ಲಿ ರಾತ್ರಿಯೆಲ್ಲಾ ಹಾಡುಗಳು, ಅದೂ ಪರೀಕ್ಷೆ ಹೊತ್ತಿನಲ್ಲಿ; ನೀನು ಹೇಳ್ದಂಗೆ, ಇಷ್ಟ ಬಂದಂಗೆ ಮಾಡೋ ರಾಜಕಾರಿಣಿ... ಹೀಗೇ ಆದರೆ.."

"ಹೀಗೇ ಆದರೆ, ಏನಜ್ಜಿ..?"

ಕೈಲಿ ಹಿಡಿದಿರುವ ಬಾಳೇಹಣ್ಣನ್ನು ತೋರಿಸುತ್ತಾ,

"ಅದು ಏನೋ ಅಂತಾರಲ್ಲೋ... ನಮ್ಮ ದೇಶ ಬನಾನ ರಿಪಬ್ಲಿಕ್ ಡೇ" ಅಂತ... ಅಲ್ಲಿಗೆ ಹೋಗ್ತಾ ಇದೆ ಅನ್ಸುತ್ತೆ".

"ಹ ಹ ಅಜ್ಜಿ! ಸರಿಯಾಗಿ ಹೇಳಿದೆ. ಬನಾನ ರಿಪಬ್ಲಿಕ್ ಡೇ ಅಲ್ಲ.. ಅದು "ಬನಾನ ರಿಪಬ್ಲಿಕ್" ಅಜ್ಜಿ !

"ಏನೋ ಒಂದು ಸುಡುಗಾಡು" ಎಂದರು ಅಜ್ಜಿ.

English summary
Heritage City Mysore is slowly becoming hoarding city. Politicians are extensively using flex banners, vinyl print hoardings in the city to promote their schemes and wish public. which is threat to beauty of the palace city Mysore. Here is report on scenes witnessed on Shivaratri day night roaming. when Mysore city corporation was sleeping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X