ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಯಲ್ಲಿ ಮಣ್ಣಿನ ಫ್ರಿಜ್ ಭರ್ಜರಿ ಮಾರಾಟ

By * ರೋಹಿಣಿ ಬಳ್ಳಾರಿ
|
Google Oneindia Kannada News

Clay pot refrigerators
ಬಳ್ಳಾರಿ, ಮಾ. 7 : ಶಿವರಾತ್ರಿ ಆಚರಣೆ ಮುಗಿಯಿತು. ಬಿಸಿಲ ತಾಪ ಕ್ರಮೇಣ ಹೆಚ್ಚುತ್ತಿದೆ. ಮಧ್ಯಾಹ್ನ 12 ಗಂಟೆಯ ನಂತರ ರಸ್ತೆಗಳಲ್ಲಿ ತಿರುಗಾಡುವವರ ಸಂಖ್ಯೆ ಕೂಡ ಇಳಿಮುಖ ಆಗತೊಡಗಿದೆ. ಆದರೂ ವ್ಯಾಪಾರಕ್ಕೆಂದು ಮನೆಯಿಂದ ಹೊರಗೆ ಕಾಲಿಡಲೇಬೇಕಲ್ಲ? ಕಚೇರಿ ತಲುಪಿದ ನಂತರವೋ, ಮನೆಗೆ ವಾಪಸ್ ಆದ ನಂತರವೋ ಕುಡಿಯಲು ತಣ್ಣಗಿನ ನೀರಿದ್ದರೆ ಅಮೃತ ದಕ್ಕಿದಂತೆ.

ಉತ್ತರ ಕರ್ನಾಟಕದ ಉರಿ ಬಿಸಿಲ ನಾಡಿನ ಜನರ ದಾಹವನ್ನು ತಣಿಸಲೆಂಬಂತೆ ಹೊರ ರಾಜ್ಯಗಳ ತಣ್ಣೀರ ಹೂಜಿಗಳು ಬೀದಿಬದಿಯಲ್ಲಿ ಬಂದು ಕುಳಿತಿವೆ. ನಮ್ಮ ಕುಂಬಾರಣ್ಣ ಮಾಡುವ ಗಡಿಗೆಗಳಿಗೆ ಈ ಆಕರ್ಷಕ ಹೂಜಿಗಳು ಭಾರೀ ಪೈಪೋಟಿ ಒಡ್ಡುತ್ತಿವೆ. ಈ ಹೂಜಿಗಳು ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಮನೆ ಮನೆಗಳಲ್ಲೂ ಕಾಣಸಿಗುತ್ತಿದ್ದು, ನೀರು ತ್ವರಿತವಾಗಿ ತಣ್ಣಗಾಗುವುದು ಇವುಗಳ ವೈಶಿಷ್ಟ್ಯ.

ಸ್ಥಳೀಯವಾಗಿ ಕುಂಬಾರಣ್ಣ ತಯಾರುಮಾಡುವ ಗಡಿಗೆ (ಮಡಕೆ)ಗಳಿಗೆ ಕೇವಲ ಜೇಡಿ ಮಣ್ಣನ್ನು ಮಾತ್ರ ಬಳಕೆ ಮಾಡಲಾಗುತ್ತದೆ. ಆದರೆ, ಈ ಹೊರ ರಾಜ್ಯಗಳ ಹೂಜಿಗಳ ತಯಾರಿಕೆಗೆ ಜೇಡಿ ಮಣ್ಣು ಸೇರಿ ಮೂರು ರೀತಿಯ ಮಣ್ಣುಗಳನ್ನು ಬಳಕೆ ಮಾಡಲಾಗುತ್ತದೆ. ಈ ಮೂರು ಮಣ್ಣುಗಳಲ್ಲಿ ಒಂದು ರೀತಿಯ ಮಣ್ಣು ನೀರನ್ನು ತ್ವರಿತವಾಗಿ ತಣ್ಣಗಾಗಿಸುತ್ತದೆ.

ಅಷ್ಟೇ ಅಲ್ಲ, ನಮ್ಮ ಕುಂಬಾರಣ್ಣನ ಗಡಿಗೆಗಳಲ್ಲಿ ಆಕರ್ಷಣೆ ಕಡಿಮೆ. ಕೌಶಲ್ಯವೂ ಅಪರೂಪ. ಜೇಡಿ ಮಣ್ಣು ಸುಟ್ಟಾಗ ಕಪ್ಪಾಗಿ, ಕೆಲವೊಮ್ಮೆ ಕಚ್ಚು ಕಚ್ಚಾಗಿ ಇರುತ್ತವೆ. ಕುಂಬಾರಣ್ಣನ ಗಡಿಗೆ, ಹೂಜಿ, ಮಡಕೆಗಳು ಎಷ್ಟೇ ಉತ್ತಮವಾಗಿದ್ದರೂ ಕೂಡ ಬಡತನವನ್ನೇ ಸೂಚಿಸುತ್ತವೆ. ಆದರೆ, ಹೊರ ರಾಜ್ಯಗಳ ಈ ಹೂಜಿ, ಗಡಿಕೆ ಮತ್ತು ಮಡಕೆಗಳು ಶ್ರೀಮಂತಿಕೆಯನ್ನು ಸಂಕೇತಿಸುತ್ತಿವೆ.

ಇವುಗಳ ಮೇಲಿನ ಚಿತ್ತಾರಗಳು ಕುಸರಿ ಕಲೆಯನ್ನು, ನೈಪುಣ್ಯವನ್ನು ತೋರಿ, ಸಾಮಾನ್ಯ ಗಡಿಗೆಗಳಿಗಿಂತಲೂ ಹೆಚ್ಚಿನ ಬೆಲೆ ಪಡೆಯುತ್ತವೆ. ಕಾರಣ ನಮ್ಮ ರಸ್ತೆಗಳಲ್ಲಿ ದಾರಿಹೋಕರೆಲ್ಲರ ಗಮನ ಸೆಳೆಯುತ್ತವೆ. ನೀರು ಸರಾಗವಾಗಿ ಇಳಿಯಲಿಕ್ಕಾಗಿ ಟ್ಯಾಪ್ (ಕೊಳಾಯಿ) ಅಳವಡಿಸಿರುವ ಹೊರ ರಾಜ್ಯದ ತಯಾರಕ, ನೀರು ಪಡೆದು ಕುಡಿಯುವಲ್ಲಿ ನೈರ್ಮಲ್ಯತೆ, ಸ್ವಚ್ಛತೆ ಕಾಪಾಡಲು ಪ್ರಯತ್ನಿಸಿದ್ದಾರೆ. ನಮ್ಮೂರ ಕುಂಬಾರಣ್ಣನ ತಯಾರಿಕೆಯಲ್ಲಿ ಪ್ರಸ್ತುತ ಇವುಗಳ ಅಂಶ ಕಾಣುತ್ತಿಲ್ಲ.

ಹೊರ ರಾಜ್ಯಗಳ ಗಡಿಗೆ, ಹೂಜಿ, ಮಡಕೆಗಳನ್ನು ತಯಾರಿಸುವ ಕುಟುಂಬಗಳ ಸದಸ್ಯರಾದ ರಾಮ್‌ಲಾಲ್ ಜೀ (45) "ಬೇಸಿಕೆ ಹತ್ತಿರಕ್ಕೆ ಬರುತ್ತಿದ್ದಂತೆಯೇ ನಮ್ಮ ಕುಟುಂಬಗಳು ವಿವಿಧ ರಾಜ್ಯಗಳಿಗೆ ವಲಸೆ ಬಂದು ರಸ್ತೆಗಳ ಬದಿಯಲ್ಲಿ, ದಾರಿಹೋಕರ ಕಣ್ಣಿಗೆ ಸುಲಭವಾಗಿ ಬೀಳುವಂತೆ ಇರಿಸಿ ಮಾರಾಟ ಮಾಡುತ್ತೇವೆ. ಒಳ್ಳೆಯ ದುಡಿಮೆ. ನಮ್ಮ ಆದಾಯ ಬಿಸಿಲನ್ನೇ ಅವಲಂಬಿಸಿರುತ್ತದೆ. ಆದರೆ, ಇವುಗಳನ್ನು ಸಾಗಿಸುವುದು, ಸಂರಕ್ಷಿಸುವುದೇ ನಮ್ಮ ದೊಡ್ಡ ಸವಾಲು" ಎನ್ನುತ್ತಾರೆ.

ನಮ್ಮಲ್ಲಿ ಇವುಗಳನ್ನು ಕೆಲವೆಡೆ ಯಂತ್ರಗಳು ಸಿದ್ಧಪಡಿಸುತ್ತವೆ. ಇನ್ನೂ ಕೆಲವೆಡೆ ದೊಡ್ಡ ಪ್ರಮಾಣದಲ್ಲಿ ಕೂಲಿಗಳು, ಯಂತ್ರಗಳು ಒಟ್ಟಾಗಿ ಸೇರಿ ತಯಾರಿಸುತ್ತೇವೆ. ವರ್ಷದ 6 - 7 ತಿಂಗಳು ಉತ್ಪಾದನೆಯಲ್ಲಿ ತೊಡಗುತ್ತೇವೆ. ಬೇಸಿಗೆಯಲ್ಲಿ ಮಾರಾಟ ಮಾಡುತ್ತೇವೆ. ಸಾಮಾನ್ಯ ಸಂದರ್ಭಗಳಲ್ಲಿ ಶ್ರೀಮಂತಿಕೆಯನ್ನು ಸೂಚಿಸುವ ಮಣ್ಣಿನ ಅಲಂಕಾರಿಕ ವಸ್ತು, ಆಟಿಕೆ, ಇನ್ನಿತರೆಗಳನ್ನು ಸಿದ್ಧಪಡಿಸುತ್ತೇವೆ. ಆ ಮಾರುಕಟ್ಟೆಯೇ ಪ್ರತ್ಯೇಕ, ಈ ನೀರಿನ ಮಾರುಕಟ್ಟೆಯೇ ಪ್ರತ್ಯೇಕ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಗ್ರಾಹಕ ಜಿ. ಸುರೇಶ್, ಎಲ್ಲಿಂದಲೋ ಬಂದು ಹೂಜಿಗಳನ್ನು ಮಾರಿ ಬದುಕುತ್ತಾರೆ. ನಮ್ಮ ಕುಂಬಾರರೂ ಕೂಡ ವೃತ್ತಿಯಲ್ಲಿ ನೈಪುಣ್ಯತೆ, ಕೌಶಲ್ಯತೆ ಸಾಧಿಸಿದಲ್ಲಿ ಅವರ ಬದುಕು ಸುಧಾರಣೆ ಆಗಲಿದೆ. ಇಲ್ಲಿ ಹಣ ಮುಖ್ಯ ಅಲ್ಲ. ಪ್ರತಿಯೊಬ್ಬರ ಬದುಕು, ಆರ್ಥಿಕ ಸ್ಥಿತಿ ಸುಧಾರಣೆ ಆಗಬೇಕು ಎನ್ನುವುದು ಗುರಿ ಆಗಬೇಕು' ಎಂದು ವಾದ ಮಂಡಿಸುತ್ತಾರೆ.

ಒಟ್ಟಾರೆ 40 - 44 ಡಿಗ್ರಿ ಸೆಲ್ಸಿಯಸ್ ತಾಪ ತಲುಪುವ ಉತ್ತರ ಕರ್ನಾಟಕದ ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಕೊಪ್ಪಳ, ಬೀದರ್ ಸೇರಿ ಇನ್ನಿತರೆ ಜಿಲ್ಲೆಗಳಲ್ಲಿ ಈ ಹೊರನಾಡ ತಣ್ಣೀರ ಹೂಜಿಗಳು ಜನರ ತಾಪವನ್ನು ಕಡಿಮೆ ಮಾಡುತ್ತಿವೆ.

English summary
Attractive clay water pots to quench the thirst of people have hit the streets in Bellary. These pots prepared by potters outside Karnataka posing huge threat to local potters, as they are not only attractive but also cool the water very fast. Here is a write up about clay pot refrigerators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X