ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿವೇಣಿ ಸಂಗಮ ಕುಂಭಮೇಳಕ್ಕೆ ರೂ. 2 ಕೋಟಿ: ಬಿಎಸ್‌ವೈ

By Srinath
|
Google Oneindia Kannada News

Yeddyurappa
ಬೆಂಗಳೂರು, ಮಾ.1: ಕರ್ನಾಟಕದ ತ್ರಿವೇಣಿ ಸಂಗಮದಲ್ಲಿ ನಡೆಯುವ ಕುಂಭಮೇಳವನ್ನು ಸರ್ಕಾರದ ವತಿಯಿಂದಲೇ ನಡೆಸಲಾಗುವುದು. ಅದಕ್ಕಾಗಿ ಸರ್ಕಾರದ ವತಿಯಿಂದ 2 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಲ್ಲಿ ಹೇಳಿದರು. ಅವರು, ಸುತ್ತೂರು ಶಿರಾತ್ರೀಶ್ವರ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಬೆಂಗಳೂರಿನ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭೆಯ 22ನೇ ಮಹಾ ಅಧಿವೇಶನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದ ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯುತ್ತದೆ. ಅದನ್ನು ಇನ್ನು ಮುಂದೆ ಸರ್ಕಾರವೇ ನಡೆಸುತ್ತದೆ. ಅದಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಸರ್ಕಾರದಿಂದ ಮಾಡಲಾಗುತ್ತದೆ ಎಂದು ಅವರು ಹೇಳಿದರು. ನಮ್ಮ ಸರ್ಕಾರ ಅಧಿಕಾರಕ್ಕೇರಿದ ನಂತರ 30 ತಿಂಗಳಲ್ಲಿ ನನ್ನ ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿಯ ಕೆಲಸ ಮಾಡಿದ್ದೇನೆ. ಎಲ್ಲ ಸಮಾಜದವರ ಅಭಿವೃದ್ಧಿಗಾಗಿ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಯಾವುದೇ ಸಮಾಜದ ಅಭಿವೃದ್ಧಿಗೆ ಏನೆಲ್ಲ ಅಗತ್ಯವಿದೆಯೋ ಅದನ್ನೆಲ್ಲ ನಾನು ಶಿರಸಾವಹಿಸಿ ಮಾಡುತ್ತಿದ್ದೇನೆ. ಯಾವುದೇ ಕೋಮಿಗಾದರೂ ಸಾಧ್ಯವಿದ್ದ ಮಟ್ಟಿಗೆ ಧಾರಾಳವಾಗಿ ಹಣ ಕೊಟ್ಟಿದ್ದೇನೆ ಎಂದರು.

ಗುಬ್ಬಿ ತೋಟದಪ್ಪನವರು ಮಹಾನ್ ದಾನಿಗಳು. ಅವರ ಹೆಸರಿನಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಬೇಕಾದ ನೆರವನ್ನು ಸರ್ಕಾರದ ವತಿಯಿಂದ ನೀಡುತ್ತೇನೆ. ನೀವು ಬೆಂಗಳೂರಿನಲ್ಲಿ ಸ್ಥಳ ಗುರುತಿಸಿ. ಉನ್ನತ ಶಿಕ್ಷಣಕ್ಕೆ ಬೇಕಾದ ಎಲ್ಲಾ ಅವಕಾಶಗಳನ್ನು ಮಾಡಿಕೊಡಬೇಕಾದದ್ದು ಸರ್ಕಾರದ ಕರ್ತವ್ಯ ಎಂದರು. ಈ ಸಲದ ಬಜೆಟ್‌ನಲ್ಲಿ ನಾನು ಥೇಮ್ಸ್ ನದಿ ದಡದಲ್ಲಿ ಬಸವ ಪುತ್ಥಳಿ ನಿರ್ಮಾಣಕ್ಕೆ 3 ಕೋಟಿ, ನಿಜಲಿಂಗಪ್ಪ ಸ್ಮಾರಕಕ್ಕೆ 5 ಕೋಟಿ, ರಾಜಶೇಖರ ಮೂರ್ತಿ ಅವರು ಅರ್ಧಕ್ಕೆ ಬಿಟ್ಟ ಶೈಕ್ಷಣಿಕ ಸಂಸ್ಥೆಯ ಅಭಿವೃದ್ಧಿಗೆ 2 ಕೋಟಿ ಮತ್ತು ಎಂ.ಪಿ. ಪ್ರಕಾಶ್ ಅವರ ರಂಗಭಾರತಿ ರಂಗಮಂದಿರ ನಿರ್ಮಾಣಕ್ಕೆ 1 ಕೋಟಿ ರು. ನೀಡಿದ್ದೇನೆ ಎಂದರು. ವೀರಶೈವ ಮಹಾಸಭೆಯ 22ನೇ ಅಧಿವೇಶನವು ಅತ್ಯಂತ ಸುಂದರವಾಗಿ ಮೂಡಿಬರಬೇಕು. ಸಾವಿರಾರು ಜನರು ಇದರಲ್ಲಿ ಭಾಗವಹಿಸುವಂತೆ ಆಗಬೇಕು. ವೀರಶೈವರ ಒಳಪಂಗಡಗಳನ್ನೆಲ್ಲ ಮರೆತು ಎಲ್ಲರೂ ಇದರಲ್ಲಿ ಭಾಗವಹಿಸಿ ಇದನ್ನು ಅಭೂತಪೂರ್ವ ಯಶಸ್ಸು ತಂದುಕೊಡಬೇಕು ಎಂದರು.

ಹೊರಟ್ಟಿ ಶ್ಲಾಘನೆ: ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ತಿನ ಸದಸ್ಯ ಬಸವರಾಜ್ ಹೊರಟ್ಟಿ ಅವರು, ನಮ್ಮವರ ಕಾಲು ಜಗ್ಗುವ ಕೆಲಸವನ್ನು ನಾವೇ ಮಾಡಬಾರದು; ನಾನಂತೂ ಎಂದು ಮಾಡುವುದಿಲ್ಲ ಎಂದು ಹೇಳಿದರು. ಧಾರ್ಮಿಕ ವಿಚಾರ ಬಂದಾಗ ನಾವು ಪಕ್ಷಭೇದ ಮರೆತು ಕೆಲಸ ಮಾಡುತ್ತೇವೆ. ರಾಜಕೀಯ ಬಂದಾಗ ನಾವು ನಮ್ಮ ನಮ್ಮ ಪಕ್ಷದ ಸಿದ್ಧಾಂತದಂತೆ ಕೆಲಸ ಮಾಡುತ್ತೇವೆ. ನಮ್ಮವರು ಒಂದು ಉನ್ನತ ಸ್ಥಾನದಲ್ಲಿ ಇದ್ದಾರೆ ಎಂದರೆ ನಾವೇ ಅಲ್ಲಿ ಇದ್ದಂತೆ. ಹಾಗಂತ ನಾವು ಹೆಮ್ಮೆ ಪಡಬೇಕು. ನಾವು ಒಗ್ಗಟ್ಟಾಗಬೇಕು ಎಂದು ಅವರು ಮಾರ್ಮಿಕವಾಗಿ ಹೇಳಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ್ ಮಾತನಾಡಿ, 22ನೇ ಮಹಾ ಅಧಿವೇಶನಕ್ಕೆ ನಾವೆಲ್ಲವೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧಿವೇಶನಕ್ಕೆ 5 ಲಕ್ಷ ರೂ.ಗಳ ಕೊಡುಗೆ ನೀಡುವುದಾಗಿ ಘೋಷಿಸಿದರು.

ಶ್ರೀ ಸುತ್ತೂರು ಸ್ವಾಮೀಜಿ ಮತ್ತು ಬೇಲಿ ಮಠಾಧೀಶರಾದ ಶ್ರೀ ಶಿವರುದ್ರ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಸಭೆಯಲ್ಲಿ ಸಚಿವರಾದ ಜಗದೀಶ್ ಶೆಟ್ಟರ, ರೇಣುಕಾಚಾರ್ಯ, ಶಾಸಕರಾದ ಚಂದ್ರಕಾಂತ್ ಬೆಲ್ಲದ, ಎಸ್.ಆರ್. ಪಾಟೀಲ್, ಮಹದೇವಪ್ರಸಾದ್, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮುಂತಾದವರು ಮಾತನಾಡಿದರು. ಮಹಾಸಭೆಯ ಹಣಕಾಸು ಸಮಿತಿ ಅಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರು ಮಾತನಾಡಿ, ಇದೊಂದು ಮಹಾ ಅಧಿವೇಶನ. 10 ಸಾವಿರ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ವಿದೇಶದಿಂದ ಸುಮಾರು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದರು.

English summary
Bangalore: Chief Minister B.S. Yeddyurappa has announced that the State Government will sanction Rs. 2 crore forKumbha Mela that is held once in three years at T. Narsipur. The Chief Minister said all arrangements for the conduct of the event would be made by the Karnataka Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X