ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರಕಾಶ'ವಿಲ್ಲದ ಹಡಗಲಿಯಲ್ಲಿ ಬರೀ ಕತ್ತಲು

By Rohini Bellary
|
Google Oneindia Kannada News

MP Prakash (1941-2011)
ಬಳ್ಳಾರಿ, ಫೆ. 9 : ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ ಪ್ರಕಾಶ್ (1941-2011) ಅವರು ಚಿರನಿದ್ರೆಗೆ ಜಾರಿದ ಸುದ್ದಿ ಬೆಳಿಗ್ಗೆ ತಿಳಿಯುತ್ತಲೇ ಪ್ರಕಾಶ್ ಅಭಿಮಾನಿ ಬಳಗ ನೋವಿನ ಮಡುವಿನಲ್ಲಿ ಮುಳುಗಿದೆ. ಪ್ರಕಾಶ್ ಅವರ ತವರೂರು ಹೂವಿನಹಡಗಲಿಯಲ್ಲಿ ಅಕ್ಷರಶಃ ಕತ್ತಲಾವರಿಸಿದಂತಾಗಿದೆ.

ಪ್ರಕಾಶ್ ಒಬ್ಬ ಸಜ್ಜನ ರಾಜಕಾರಣಿಯಾಗಿ ರಾಜಕೀಯ ಕ್ಷೇತ್ರದಲ್ಲಿಯೇ ಮೇರು ಪರ್ವತವಾಗಿದ್ದರು ಎಂದರೆ ತಪ್ಪಾಗಲಾರದು. ಅವರು ಮೂಲತಃ ವಕೀಲರಾಗಿ 1964ರಲ್ಲಿ ನಾರಾಯಣ ದೇವರ ಕೆರೆಯಿಂದ ಹಡಗಲಿಗೆ ಆಗಮಿಸಿದರು. ಅಂದಿನಿಂದಲೇ ಹಡಗಲಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಿದವು ಎಂದರೆ ತಪ್ಪಾಗಲಾರದು.

ರಾಜಕೀಯ ಜೀವನ : 1973ರಲ್ಲಿ ಪದವೀಧರ ಕ್ಷೇತ್ರದಿಂದ ಎಂಎಲ್‌ಸಿ ಸ್ಥಾನಕ್ಕೆ ಸ್ಪರ್ಧಿಸಿ ಪರಾಜಯಗೊಳ್ಳುವ ಮೂಲಕವಾಗಿ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. ನಂತರದಲ್ಲಿ 1979ರಲ್ಲಿ ಹಡಗಲಿ ವಿಧಾನಸಭಾ ಕ್ಷೇತ್ರದಿಂದ ಕೊಗಳಿ ಕರಿಬಸವನಗೌಡ್‌ರವರ ವಿರುದ್ದವಾಗಿ ಸ್ಪರ್ಧಿಸಿ ಪುನಃ ಪರಾಭವಗೊಂಡರು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮುಂದೆ 1983ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಜಯದ ರುಚಿ ಕಂಡರು. ಅಂದಿನಿಂದ ರಾಜಕೀಯ ಕ್ಷೇತ್ರದಲ್ಲಿ ಒಮ್ಮೆ ಗೆಲವು ಸಾಧಿಸುತ್ತಾ ಮತ್ತೊಮ್ಮೆ ಸೋಲನ್ನು ಅನುಭವಿಸುತ್ತಾ ಸೋಲು ಗೆಲುವನ್ನು ಸಮನಾಗಿ ಹಂಚಿಕೊಂಡಿದ್ದಾರೆ. ಸೋತಾಗ ಎದೆಗುಂದದೆ, ಗೆದ್ದಾಗ ಬೀಗದೆ ಜನರ ಸೇವೆಯನ್ನು ಮಾಡುತ್ತಾ ಉನ್ನತ ಸ್ಥಾನ ಮಾನಕ್ಕೇರಿದವರು.

1985ರಲ್ಲಿ ಸಿ.ಅಂದಾನಪ್ಪನವರ ವಿರುದ್ದ ಜಯಶೀಲರಾಗಿ ಕೃಷಿ, ಕನ್ನಡ ಮತ್ತು ಸಂಸ್ಕೃತಿ, ಬಿಡಿಎ, ಹೀಗೆ ಹತ್ತು ಹಲವಾರು ಖಾತೆಯನ್ನು ನಿಭಾಯಿಸುವ ಮೂಲಕವಾಗಿ ಸಂಸತ್ತಿನಲ್ಲಿ ಒಬ್ಬ ಉತ್ತಮ ಸಂಸದೀಯ ಪಟು ಎನ್ನುವ ಕೀರ್ತಿಗೆ ಪಾತ್ರರಾದರು. ನಂತರ 1994ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ವಿಜಯಮಾಲೆ ಧರಿಸಿ ಗ್ರಾಮೀಣಾಭಿವೃದ್ದಿ ಹಾಗೂ ಪಂಜಾಯತ್ ರಾಜ್ ಸಚಿವರಾಗಿ ನಾಡಿನ ಪ್ರಗತಿಗಾಗಿ ಶ್ರಮಿಸಿ ನಂತರ 2006ರಲ್ಲಿ ಉಪಮುಖ್ಯಮಂತ್ರಿ ಸ್ಥಾನ ಪಡೆದು ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು.

ನಂತರದಲ್ಲಿ ಆದ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಮೀಸಲಾತಿಯ ಪ್ರಕಾರ ಪ್ರಕಾಶ್‌ರವರು ತಮ್ಮ ತವರು ಕ್ಷೇತ್ರ ಹಡಗಲಿಯನ್ನು ಕಳೆದುಕೊಂಡರು. 2008ರಲ್ಲಿ ಪಕ್ಕದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಪ್ರಕಾಶ್‌ರವರು ಮೀಸಲಾತಿಯ ಹಿನ್ನೆಲೆಯಲ್ಲಿ ಹಡಗಲಿ ಕ್ಷೇತ್ರ ಅವರ ಕೈತಪ್ಪಿ ಹೋದರೂ ಹಡಗಲಿ ಮತದಾರರ ಜೊತೆ ಭಾವನಾತ್ಮಕ ಸಂಬಂಧ ಮಾತ್ರ ಹಾಗೇ ಹಚ್ಚ ಹಸಿರಾಗಿ ಉಳಿದಿದೆ.

ಅಭಿವೃದ್ದಿಯ ಹರಿಕಾರ : ಹಡಗಲಿ ಎಂದ ತಕ್ಷಣ ದೂರದ ಬೆಂಗಳೂರಿನವರು ಸಹ 'ಓ ಪ್ರಕಾಶ್‌ರವರ ಕ್ಷೇತ್ರ' ಎನ್ನುತ್ತಿದ್ದರು. ಹಡಗಲಿಗೆ ಪ್ರಕಾಶ್‌ರವ ರಾಜಕಾರಣದಿಂದಾಗಿಯೇ ಒಂದು ಮಹತ್ವ ಬಂದಿತ್ತು. ಅವರು ಗೆದ್ದಾಗಲೆಲ್ಲಾ ಮಂತ್ರಿಯಾಗುತ್ತಿದ್ದರು. ತಮ್ಮ ರಾಜಕೀಯ ಇಚ್ಛಾಶಕ್ತಿಯಿಂದಾಗಿ ಒಂದಲ್ಲ ಒಂದು ರೀತಿಯಲ್ಲಿ ಹಡಗಲಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದರು. ಅವರ ಕನಸಿನ ಕೂಸಾದ ಸಿಂಗಟಾಲೂರು ಏತ ನೀರಾವರಿ ಯೋಜನೆ, ಹಡಗಲಿಯಲ್ಲಿ ಬಸ್ ನಿಲ್ದಾಣ, ಸಾರಿಗೆ ಘಟಕ, ಸಬ್‌ಜೈಲ್ ಲೋಕೋಪಯೋಗಿ ಇಲಾಖೆಯ ವಿಭಾಗ ಕಛೇರಿ, ಪೊಲೀಸ್ ಇಲಾಖೆಯ ಡಿವೈಎಸ್‌ಪಿ ಕಛೇರಿ, ಮಿನಿ ವಿಧಾನಸೌಧ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಗದಗ-ಹಾಗೂ ಹಡಗಲಿ ಜಿಲ್ಲೆಯ ಜನತೆಗೆ ಸಂಪರ್ಕ ಕಲ್ಪಿಸಲು ತುಂಗಭದ್ರಾ ನದಿಗೆ ಮೊದಲಗಟ್ಟೆ ಮುಂದೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯೊಳಗೊಂಡಂತೆ ಇನ್ನೂ ಅನೇಕ ಅಭಿವೃದ್ದಿ ಕೆಲಸಗಳನ್ನು ಹಡಗಲಿಯಲ್ಲಿ ಕೈಗೊಂಡಿದ್ದರು.

ತವರೂರಲ್ಲಿ ಶ್ರದ್ಧಾಂಜಲಿ : ಮಾಜಿ ಉಪಮುಖ್ಯ ಮಂತ್ರಿ ಎಂ.ಪಿ ಪ್ರಕಾಶ್ ನಿಧನದಿಂದ ಅವರ ಪಟ್ಟಣದಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಸಂದರ್ಭದಲ್ಲಿ ಮಾಜಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾಜಿ ಸಚಿವ ಈಟಿ ಶಂಭುನಾಥ, ಶಾಸಕ ಚಂದ್ರನಾಯ್ಕ, ಮಾಚಿ ಶಾಸಕ ಟಿ ಸೋಮಪ್ಪ, ಅಲ್ಲದೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಗುರುವಿನ ಕೋಟ್ರಯ್ಯ, ಇಟಗಿ ಬ್ಲಾಕ್ ಅಧ್ಯಕ್ಷ ಐಗೋಳ್ ಚಿದಾನಂದ್ ಪುರಸಭೆ ಮಾಜಿ ಅಧ್ಯಕ್ಷ ಹಣ್ಣಿ ಕುರುಗೊಡಪ್ಪ, ರಂಘಭಾರತಿ ಉಪಾಧ್ಯಕ್ಷ ಬೆಲ್ಲದ ಕೊಟ್ರಪ್ಪ, ಎಂ ಪರಮೇಶ್ವರಪ್ಪ, ಗೌಸು, ದೂದ್ಯಾನಾಯ್ಕ ಕೋಮ್ಯಾನಾಯ್ಕ, ಲಾಲ್ಯಯ್ಕ, ಕೇಶಪ್ಪ, ಮುಂತಾದವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಅಂತಿಮ ಪಯಣ : ಎಂ.ಪಿ. ಪ್ರಕಾಶ್ ಅವರ ಪಾರ್ಥಿವ ಶರೀರ ಬೆಂಗಳೂರಿನಿಂದ ಹೊರಟಿದ್ದು, ಸಂಜೆ ವೇಳೆಗೆ ತುಮಕೂರು ತಲುಪಲಿದೆ. ಅಲ್ಲಿನ ಸಿದ್ದಗಂಗಾ ಮಠದಲ್ಲಿ ಪಾರ್ಥಿವ ಶರೀರವನ್ನು ಇಡೀ ರಾತ್ರಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುವುದು. ಗುರುವಾರ ಬೆಳಗ್ಗೆ ತುಮಕೂರಿನಿಂದ ಹೊರಟು ಚಿತ್ರದುರ್ಗ, ದಾವಣಗೆರೆ ಮತ್ತು ಹರಿಹರ ಟೌನ್‌ಹಾಲ್‌ನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ಮಧ್ಯೆ, ಮಾರ್ಗದಲ್ಲಿ ಅಲ್ಲಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುವುದು. ಅಂತಿಮ ಚರಣದಲ್ಲಿ, ಹರಪನಹಳ್ಳಿಯಲ್ಲಿ ಮೆರವಣಿಗೆ ನಡೆಯಲಿದೆ. ಗುರುವಾರ ಸಂಜೆ ವೇಳೆಗೆ ಹೂವಿನ ಹಡಗಲಿಯಲ್ಲಿ ಅಂತ್ರಕ್ರಿಯೆ ನೆರವೇರಲಿದೆ.

English summary
Hoovina Hadagali, in Bellary district, is in total dark as son of the soil MP Prakash passes away in Bangalore. MP Prakash will be cremated in Hoovina Hadagali on February 10, after taking out a procession in Harapanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X