ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕ್ರೆಬೈಲು ಹೆಣ್ಣಾನೆಯ ಮೇಲೆ ಕಾಡಾನೆಗಳ ದಾಳಿ

By Prasad
|
Google Oneindia Kannada News

Elephant Kaveri getting treatment
ಶಿವಮೊಗ್ಗ, ಫೆ. 5 : ಇಲ್ಲಿನ ಸಕ್ರೆಬೈಲು ಆನೆ ಬಿಡಾರದ ಸಾಕಾನೆಯ ಮೇಲೆ ಮೂರು ಕಾಡಾನೆಗಳು ದಾಳಿ ಮಾಡಿ, ಮಾರಣಾಂತಿಕವಾಗಿ ಗಾಯಗೊಳಿಸಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡಿರುವ ಆನೆಗೆ ಅರಣ್ಯ ಇಲಾಖೆ ವೈದ್ಯರು ಸಕ್ರೆಬೈಲು ಅರಣ್ಯದಲ್ಲಿಯೇ ಸೂಕ್ತ ವೈದ್ಯೋಪಚಾರ ಮಾಡುತ್ತಿದ್ದಾರೆ.

ಬಿಡಾರದ 75 ವರ್ಷದ ಹಿರಿಯ ಹೆಣ್ಣಾನೆ ಕಾವೇರಿಯನ್ನು ಎಂದಿನಂತೆ ಕಾಡಿನೊಳಗೆ ಮೇಯಲು ಬಿಡಲಾಗಿತ್ತು. ನಿನ್ನೆ ಬೆಳಿಗ್ಗೆ ಆನೆಯನ್ನು ಬಿಡಾರಕ್ಕೆ ಕರೆತರಲು ಮಾವುತರು ಸಕ್ರೆಬೈಲು ಅರಣ್ಯಕ್ಕೆ ಹೋಗಿದ್ದಾರೆ. ಆದರೆ ಅಲ್ಲಿ ಕಾವೇರಿ ಆನೆಯ ದೇಹದ ಮೇಲೆ ರಕ್ತದ ಗಾಯಗಳಾಗಿ, ತೀವ್ರ ನಿತ್ರಾಣಗೊಂಡಿತ್ತು. ಕಾಡಿನಲ್ಲಿಯೇ ಬಿದ್ದು ನರಳಾಡ ತೊಡಗಿತ್ತು.

ತಕ್ಷಣವೇ ಮಾವುತರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ವೈದ್ಯರೊಂದಿಗೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಕಾವೇರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಪರಿಶೀಲಿಸಿದಾಗ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಸೇರಿದ ಸುಮಾರು 3ಕ್ಕೂ ಅಧಿಕ ಗಂಡು ಕಾಡಾನೆಗಳು ಕಾವೇರಿಯನ್ನು ದಂತದಿಂದ ತಿವಿದಿರುವುದು ಪತ್ತೆಯಾಗಿತ್ತು. ಸುಮಾರು 15ಕ್ಕೂ ಹೆಚ್ಚು ತಿವಿತದ ಗಾಯಗಳು ಕಾವೇರಿಯ ದೇಹದ ಮೇಲೆ ಪತ್ತೆಯಾಗಿದ್ದವು.

ಕಾಡಾನೆಗಳ ತಿವಿತದಿಂದ ಕಾವೇರಿಯ ಕುತ್ತಿಗೆ ಭಾಗದಲ್ಲಿ ತೀವ್ರ ಸ್ವರೂಪದ ಗಾಯವಾಗಿದೆ. ಇದರಿಂದ ಕಾವೇರಿಯ ಉಸಿರಾಟಕ್ಕೆ ತೊಂದರೆಯಾಗಿದೆ. ನಿನ್ನೆ ಹೊರಗಿನಿಂದ ಉಸಿರಾಡುವ ವ್ಯವಸ್ಥೆಯನ್ನು ಅರಣ್ಯ ಇಲಾಖೆ ವೈದ್ಯರು ಮಾಡಿದ್ದರು. ಇಂದು ಪಶುವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರಾದ ಡಾ.ಸುರೇಶ್ ನೇತೃತ್ವದ ವೈದ್ಯರ ತಂಡ ಕಾವೇರಿಯ ವೈದ್ಯೋಪಚಾರ ಮಾಡುತ್ತಿದ್ದಾರೆ. ಪ್ರಸ್ತುತ ಕಾವೇರಿಯ ಸ್ಥಿತಿ ಚಿಂತಾಜನಕವಾಗಿದೆ.

ವಲಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‌ಕುಮಾರ್ ಹಾಗೂ ಡಿಎಫ್‌ಓ ರವಿಕುಮಾರ್‌ರವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಆನೆಗಳಿಗೆ ಚಿಕಿತ್ಸೆ ನೀಡುವ ಯಾವುದೇ ವ್ಯವಸ್ಥೆಯಿಲ್ಲ. ಈ ಹಿಂದೆಯೂ ಅನೇಕ ಹೆಣ್ಣಾನೆಗಳ ಮೇಲೆ ಕಾಡಾನೆಗಳು ದಾಳಿ ಮಾಡಿದ ಊದಾಹರಣೆಗಳಿವೆ. ಸಕ್ರೆಬೈಲು ಆನೆ ಬಿಡಾರದಲ್ಲಿನ ಆನೆಯೊಂದರ ಮೇಲೆ ಕಾಡಾನೆಗಳು ಈ ರೀತಿ ದಾಳಿ ಮಾಡಿರುವುದು ಇದೇ ಪ್ರಥಮ ಬಾರಿಯಾಗಿದೆ ಎಂದರು. ಇಂದಿನಿಂದ ಕಾವೇರಿ ಆನೆ ಅಲ್ಪ ಆಹಾರ ಸೇವಿಸಿದೆ. ಜೊತೆಗೆ ನೀರು ಕೂಡ ಕುಡಿದಿದೆ. ಕ್ರಮೇಣ ಚೇತರಿಸಿಕೊಳ್ಳುತ್ತಿದ್ದು, ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

English summary
3 rogue wild elephants attack a female elephant, named Kaveri, in Sakrebailu elephant training camp in Shimoga district. Elephant Kaveri is seriously injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X