ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿ ತೋಟದ ಉದ್ಯಾನವನದಲ್ಲಿ ಪುಷ್ಪ ಪ್ರೇಮಿಗಳು

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

MF Khan, Madikeri
ಮಡಿಕೇರಿ, ಫೆ. 5 : ಇಲ್ಲಿಗೆ ಸಮೀಪದ ಬೊಯಿಕೇರಿಯ ಬಲ್ಯಾಟ್ರಿ ತೋಟದ ನಡುವೆ ಇರುವ ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋನಲ್ಲಿ ಬಗೆಬಗೆಯ ಹೂಗಳು ಅರಳಿ ಕಂಗೊಳಿಸತೊಡಗಿದ್ದು, ಫೆ.5 ಮತ್ತು 6ರಂದು ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದ್ದು, ಪುಷ್ಪ ಪ್ರೇಮಿಗಳ ದಂಡು ಉದ್ಯಾನವನಕ್ಕೆ ಲಗ್ಗೆಯಿಟ್ಟಿದೆ.

ತಮ್ಮ 75ನೇ ವಯಸ್ಸಿನಲ್ಲಿಯೂ ಪುಷ್ಪಗಳ ಬಗ್ಗೆ ಒಲವು ತೋರುತ್ತಾ ಈಗಿರುವ ಪುಷ್ಪಗಿಡಗಳೊಂದಿಗೆ ಹೊಸದಾದ ದೇಶ ಹಾಗೂ ವಿದೇಶಗಳ ಪುಷ್ಪಗಳನ್ನು ಸೇರಿಸುತ್ತಾ ಬರುತ್ತಿದ್ದಾರೆ ಮಾಲೀಕರಾದ ಎಫ್.ಎಂ.ಖಾನ್. ತಮ್ಮ ಮನೆಯ ಮುಂದೆ ನಿರ್ಮಾಣ ಮಾಡಿರುವ ಪುಷ್ಪೋದ್ಯಾನವನದ ಸೌಂದರ್ಯವನ್ನು ಪುಷ್ಪ ಪ್ರೇಮಿಗಳು ಸವಿಯಲೆಂದೇ 1985ರಿಂದ ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಪುಷ್ಪಪ್ರದರ್ಶನ ಏರ್ಪಡಿಸುವ ಮೂಲಕ ಅವಕಾಶ ಮಾಡಿಕೊಟ್ಟಿದ್ದಾರೆ.

ವಿಶಿಷ್ಟ ಪುಷ್ಪೋದ್ಯಾನವನ : ಹಾಗೆನೋಡಿದರೆ ಈ ಪುಷ್ಪೋದ್ಯಾನವನಕ್ಕೆ ತನ್ನದೇ ಆದ ವೈಶಿಷ್ಟ್ಯತೆಯಿದೆ. ಜೊತೆಗೆ ಸುಮಾರು ಅರ್ಧ ಶತಮಾನಗಳ ಇತಿಹಾಸವೂ ಇದೆ. ಎಫ್.ಎಂ.ಖಾನ್‌ರವರ ತಂದೆ ಯೂಸೂಫ್ ಆಲಿಖಾನ್‌ರವರು ನಿರ್ಮಿಸಿದ ಪುಷ್ಪೋದ್ಯಾನವನ ಇದಾಗಿದ್ದು, ಇಂದು ಮಗ ಎಫ್.ಎಂ.ಖಾನ್ ಅವರು ಅದಕ್ಕೆ ಹೊಸ ರೂಪ ನೀಡಿ ಮುಂದುವರೆಸಿಕೊಂಡು ಬಂದಿದ್ದಾರೆ. ಈ ಉದ್ಯಾನವನದಲ್ಲಿ ವಿವಿಧ ಬಗೆಯ ಪುಷ್ಪಗಿಡಗಳು ಅರಳಿ ಕಂಗೊಳಿಸುತ್ತಿದ್ದು, ಕಣ್ಣು ಹಾಯಿಸಿದುದ್ದಕ್ಕೂ ವಿವಿಧ ನಮೂನೆಯ ಬೇಲಿಗಿಡಗಳು, ಮೇಲೆ ಚಪ್ಪರದಲ್ಲಿ, ಕೆಳಗೆ ನೆಲದಲ್ಲಿ ಅರಳಿ ನಗುತಿವೆ. ವಿವಿಧ ಬಗೆಯ ಪುಷ್ಪಗಿಡಗಳು, ಹಲವು ದಶಕಗಳನ್ನು ಸವೆಸಿದ ಕುಬ್ಜ ಬೋನ್ಸಾಯ್‌ಗಳು, ಮುಳ್ಳಿನ ಹೊದಿಕೆಯ ಕ್ಯಾಕ್ಟಸ್‌ಗಳು, ಮರಗಳಲ್ಲಿ, ಕುಂಡಗಳಲ್ಲಿ ನೇತಾಡುವ ಆರ್ಕಿಡಾಗಳು, ವಿವಿಧ ನಮೂನೆಯ ಎಲೆಗಿಡಗಳು, ಮನತಣಿಸುವ ಗುಲಾಬಿ, ಆಂಥೋರಿಯಂ ಹೀಗೆ ಒಂದೇ ಎರಡೇ ಲೆಕ್ಕಕ್ಕೆ ಸಿಗದಷ್ಟು ಹಲವು ವೈಶಿಷ್ಟ್ಯತೆಯಿಂದ ಕೂಡಿದ ರಾಷ್ಟ್ರೀಯ, ಅಂತರರಾಷ್ಟ್ರೀಯ ಉದ್ಯಾನವನಗಳಲ್ಲಷ್ಟೇ ಕಾಣಬಹುದಾದಂತಹ ಪುಷ್ಪಗಳು ಇಲ್ಲಿ ಅರಳಿ ಕಂಗೊಳಿಸುತ್ತಿವೆ.

ಪುಷ್ಪೋದಾನವನದಲ್ಲಿ ಬಹುವಾರ್ಷಿಕ ಪುಷ್ಪಗಿಡಗಳಿಗೆ ಸೇರುವ ಪಿಂಕ್ಸ್, ಪ್ಲೋಕ್ಸ್, ಜೀನಿಯ, ಸಾಲ್ವಿಯಾ, ಜರ್ಬೆರಾ, ಪಿಟೋನಿಯಾ, ಕರ್ಣಕುಂಡಲ, ಕಾರ್ನೇಸನ್, ಜಿರಾನಿಯಂ... ಇವುಗಳ ಜೊತೆಗೆ ಚಂದದ ಅಲೋಕೇಶಿಯಾ, ಫರ್ನ್, ಫಾಮ್ಸ್, ಕ್ಯಾಕ್ಟಸ್, ಸೆಕ್ಯುಲೆಂಟ್ಸ್, ಡ್ರಸೀನ, ಮರಾಂಟ ಮುಂತಾದ ಎಲೆಗಿಡಗಳೂ ಇಲ್ಲಿ ಸ್ಥಾನ ಪಡೆದಿವೆ. ಮನೆಯ ಜಗುಲಿ, ಮೆಟ್ಟಿಲುಗಳಲ್ಲಿ ಹೂಕುಂಡವನ್ನಿರಿಸಲಾಗಿದ್ದು, ಈ ಹೂಕುಂಡಗಳಲ್ಲಿ ಬಗೆಬಗೆಯ ಪುಷ್ಪಗಿಡಗಳು, ಎಲೆಗಿಡಗಳನ್ನು ನೆಡಲಾಗಿದೆ.

ಮರದಲ್ಲಿ ನೇತಾಡುವ ಡಬ್ಬಗಳಲ್ಲಿ ಹಲವು ಬಗೆಯ ಹೂಗಳು ಅರಳಿ ಕಂಗೊಳಿಸುತ್ತವೆ. ಪುಷ್ಪೋದ್ಯಾನವನದಲ್ಲಿ ಕೆಂಪು ಹಳದಿ ಮಿಶ್ರಿತ ಲೇಡಿಸ್ ಶೂ, ಆನೆ ಕಿವಿಯಾಕಾರದ ಆಂಥೋರಿಯಂ, ಸುವಾಸನೆ ರಹಿತ ಕಾಕ್ಸ್ ಕೂಂಬ್, ಸಿಲೋಸಿಯಾ, ಪಿಜೂನಿಯ, ಸ್ಟಾಕ್, ಸಾಲ್ವಿಯಗಳು, ಮುಂಜಾನೆ ಅರಳಿ ಸಂಜೆ ಮುದುಡುವ ಸ್ಕಾರ್ಚಿಯ, ಚೆಂಡು ಹೂ, ನಾನಾ ಬಗೆಯ, ನಾನಾ ಬಣ್ಣದ ಗುಲಾಬಿಗಳು, ಕಳೆದ ಹಲವು ವರ್ಷಗಳಿಂದ ಬೆಳೆಯಲಾಗದೆ ಕುಬ್ಜವಾಗಿಯೇ ಉಳಿದಿರುವ ಬೋನ್ಸಾಯ್‌ಗಳು. ಸೈಕಾಸ್ ಪಾಮ್‌ಗಳು, ಮನಸ್ಸೆಳೆಯುತ್ತವೆ.

ಪುಷ್ಪೋದ್ಯಾನವನದ ನಡುವೆ ಕಾರಂಜಿಯಿದ್ದು, ಇದರ ಸುತ್ತಲೂ ಬಗ್ಗಿ ಕಾರಂಜಿಯನ್ನೇ ನೋಡುತ್ತಿರುವ ಶಿಲಾ ಬಾಲಕರು ಕಂಡು ಬರುತ್ತಾರೆ. ಈ ಕಾರಂಜಿಯ ಸುತ್ತಲೂ ಬಗೆಬಗೆಯ ಹೂವುಗಳು ಅರಳಿ ಕಂಗೊಳಿಸುತ್ತವೆ. ಹೂತೋಟವನ್ನು ನಿರ್ಮಾಣ ಮಾಡಲು ಹೂಬೀಜಗಳು ತೋಟಗಾರಿಕೆಯಲ್ಲಾಗಲೀ ಇತರೆ ಯಾವುದೇ ಸ್ಥಳದಲ್ಲಿ ಸಿಗುವುದಿಲ್ಲ. ಆದ್ದರಿಂದ ನಾನೇ ಖುದ್ದು ಆಸಕ್ತಿಯಿಂದ ಬೀಜಗಳನ್ನು ಸಂಗ್ರಹಿಸಿ ಪುಷ್ಪಪ್ರದರ್ಶನಕ್ಕೆ ಉದ್ಯಾನವನವನ್ನು ಸಜ್ಜುಗೊಳಿಸಿರುವುದಾಗಿ ಎಫ್.ಎಂ.ಖಾನ್ ಹೇಳುತ್ತಾರೆ.

English summary
Beautiful flower garden developed by MF Khan in Boyikeri near Madikeri is opened for public on February 5-6. Report by BM Lavakumar, citizen journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X